ಅಪ್ಪು ಚಿತ್ರದ ತಾಲಿಬಾನ್​ ಅಲ್ಲಾ ಅಲ್ಲಾ... ಹಾಡು ಹುಟ್ಟಿದ್ದು ಹೇಗೆ? ಆ ರೋಚಕ ಘಟನೆ ನೆನಪಿಸಿಕೊಂಡ ಗುರುಕಿರಣ್​

Published : Mar 16, 2025, 01:25 PM ISTUpdated : Mar 16, 2025, 02:55 PM IST
ಅಪ್ಪು ಚಿತ್ರದ ತಾಲಿಬಾನ್​ ಅಲ್ಲಾ ಅಲ್ಲಾ... ಹಾಡು ಹುಟ್ಟಿದ್ದು ಹೇಗೆ? ಆ ರೋಚಕ ಘಟನೆ ನೆನಪಿಸಿಕೊಂಡ ಗುರುಕಿರಣ್​

ಸಾರಾಂಶ

ಮಾರ್ಚ್ 17ಕ್ಕೆ ಪುನೀತ್ ರಾಜ್‌ಕುಮಾರ್ ಅವರ 50ನೇ ಹುಟ್ಟುಹಬ್ಬ. ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಅಪ್ಪು ಚಿತ್ರದ 'ತಾಲಿಬಾನ್ ಅಲ್ಲಾ ಅಲ್ಲಾ' ಹಾಡಿನ ಬಗ್ಗೆ ಸಂಗೀತ ನಿರ್ದೇಶಕ ಗುರುಕಿರಣ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಉಪೇಂದ್ರ ಅವರು ಮಧ್ಯಾಹ್ನ ಊಟದ ಸಮಯದಲ್ಲಿ ಪಲ್ಲವಿ ಬರೆದರು. ಹಾಡಿನ ಲಿರಿಕ್ಸ್ ಮತ್ತು ಕಂಪೋಸಿಂಗ್‌ನಲ್ಲಿ ತಮಗಾದ ಖುಷಿಯನ್ನು ಗುರುಕಿರಣ್ ವಿವರಿಸಿದ್ದಾರೆ.

ನಾಳೆ ಅಂದರೆ ಮಾರ್ಚ್​ 17 ಪುನೀತ್​ ರಾಜ್​ಕುಮಾರ್​ ಅವರ 50ನೇ ಹುಟ್ಟುಹಬ್ಬದ ಸಂಭ್ರಮ. ಅವರ ಅಗಲಿಕೆಯ ನಡುವೆಯೂ, ಅವರು ಬಿಟ್ಟುಹೋದ ಹಲವು ಹೆಗ್ಗುರುತುಗಳನ್ನು ಸ್ಮರಿಸುತ್ತಾ, ಅವರ ಅಭಿಮಾನಿಗಳು ಹುಟ್ಟುಹಬ್ಬವನ್ನು ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದರ ಮಧ್ಯೆಯೇ, ಅಪ್ಪು ಕುರಿತಾದ ತಮ್ಮ ಅನುಭವಗಳನ್ನು, ಅವರ ಜೊತೆಗಿನ ಒಡನಾಟಗಳನ್ನು ಕೆಲವರು ಹಂಚಿಕೊಳ್ಳುತ್ತಿದ್ದಾರೆ. ಅದೇ ರೀತಿ ಇದೀಗ ಪುನೀತ್​ ರಾಜ್​ಕುಮಾರ್​ ಅವರ ಅಪ್ಪು ಚಿತ್ರದ ತಾಲಿಬಾನ್​ ಅಲ್ಲಾ ಅಲ್ಲಾ ಹಾಡಿನ ಅನುಭವವನ್ನು ಸಂಗೀತ ನಿರ್ದೇಶಕ ಗುರುಕಿರಣ್​ ಅವರು ತೆರೆದಿಟ್ಟಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಆ ಹಾಡು ಹುಟ್ಟಿಕೊಂಡಿದ್ದು ಹೇಗೆ ಎನ್ನುವ ಕುರಿತು ಮಾತನಾಡಿದ್ದಾರೆ.

ಕನ್ನಡ ಚಿತ್ರಪ್ರಿಯರು ಅಪ್ಪು ಚಿತ್ರವನ್ನಂತೂ ಮರೆಯಲು ಸಾಧ್ಯವೇ ಇಲ್ಲ. ಈ ಚಿತ್ರದ ಮೂಲಕ ಪುನೀತ್​ ರಾಜ್​ಕುಮಾರ್​ ಅವರು ಸಿನಿಮಾಗೆ ರೀ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದಲೇ ಅವರು ಶಾಶ್ವತವಾಗಿ ಅಪ್ಪು ಆಗಿಯೇ ಎಲ್ಲರ ಮನದಲ್ಲಿಯೂ ಉಳಿದುಕೊಂಡಿದ್ದಾರೆ. ಆ ಸಿನಿಮಾ ಯಶಸ್ವಿಯಾಗಿ 100 ದಿನಗಳ ಪ್ರದರ್ಶನ ಕಂಡಿತ್ತು. 2002 ರಲ್ಲಿ  ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಮತ್ತು ಪೂರ್ಣಿಮಾ ಎಂಟರ್‌ಪ್ರೈಸಸ್ ಅಡಿಯಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಿಸಿರೋ ಈ ಚಿತ್ರ ಬಿಡುಗಡೆಯಾಗಿತ್ತು. ಇಂದಿಗೂ ಈ ಚಿತ್ರ ಕ್ರೇಜ್​ ಉಳಿಸಿಕೊಂಡಿದೆ, ಅದರಲ್ಲಿಯೂ ಈ ಚಿತ್ರದ ತಾಲಿಬಾನ್​ ಅಲ್ಲಾ ಅಲ್ಲಾ ಹಾಡು ಹಲವರ ಬಾಯಲ್ಲಿ ನಲಿದಾಡುತ್ತಲೇ ಇದೆ. ಇದೇ ಕಾರಣಕ್ಕೆ ಮೊನ್ನೆ ಮಾರ್ಚ್​ 14ರಂದು ಈ ಚಿತ್ರದ ರೀ ರಿಲೀಸ್​ ಕೂಡ ಮಾಡಲಾಗಿದೆ. ಈಗಲೂ ಚಿತ್ರವನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. 

ಅಪ್ಪು ಎಂದು ಗೊತ್ತಾಗ್ದೇ ರಪರಪ ಅಂತ ಲಾಠಿ ಏಟು ಕೊಟ್ರಂತ ಪೊಲೀಸ್ರು! ಆ ಘಟನೆ ವಿವರಿಸಿದ್ದ ಪುನೀತ್​ ರಾಜ್​...

 ತಾಲಿಬಾನ್​ ಹಾಡಿನ  ಬಗ್ಗೆ ಮಾತನಾಡಿದ ಗುರುಕಿರಣ್​ ಅವರು, ಆ ಹಾಡಿನ ನಿರ್ದೇಶನಕ್ಕೆ ನನ್ನನ್ನು ಹೇಗೆ ಆಯ್ಕೆ ಮಾಡಿದರು ಎನ್ನುವುದು ಈಗಲೂ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಆದರೆ ಪುನೀತ್​ ಅವರೇ ನನ್ನ ಹೆಸರನ್ನು ರೆಫರ್​ ಮಾಡಿದ್ರು. ಹಾಡು ಕಂಪೋಸ್​ ಆಗಿತ್ತು. ಅದಾಗಲೇ ಮೂರು ಜನ ಲಿರಿಕ್ಸ್​ ರೈಟರ್ಸ್​ ಹಾಡನ್ನು ಬರೆದಿದ್ದರು. ಸುಮಾರು ಏಳೆಂಟು ವರ್ಷನ್​ಗಳೂ ಬಂದಿದ್ದವು. ಆದರೆ ನನಗೆ ಯಾಕೋ ಯಾವ ಹಾಡುಗಳೂ ಇಷ್ಟವಾಗಲಿಲ್ಲ. ಆ ವಿಷ್ಯದಲ್ಲಿ ನಾನು ಸ್ವಲ್ಪ ಸ್ಟ್ರಿಕ್ಟ್​. ನನಗೆ ನಾನು ಅಂದುಕೊಂಡ ಹಾಡು ಬೇಕಿತ್ತು. ಆಗಲೇ ಉಪೇಂದ್ರ ಅವರ ಎಂಟ್ರಿ ಆಯಿತು.  ಅಷ್ಟಕ್ಕೂ ಒಂದು ಹಾಡು ಬರೆಯುವುದು ಎಂದರೆ ಅದೇನೂ ಅಷ್ಟು ಸುಲಭದ ಮಾತಲ್ಲ. ಎಲ್ಲವೂ ಲಯಬದ್ಧವಾಗಿರಬೇಕು. ಸಂಗೀತ ನಿರ್ದೇಶಕರಿಗೂ ಅದು ಹಿಡಿಸಬೇಕು ಎಂದಿದ್ದಾರೆ. 

ಉಪೇಂದ್ರ ಅವರು ಸಾಂಗ್​ ಬರೆಯೋಕೆ ಬಂದಿದ್ದಾರೆ ಎನ್ನುವ ವಿಷಯ ತಿಳಿಯಿತು. ಆಗ ಮಂಗಳೂರಿನಲ್ಲಿ ಇದ್ದೆ. ಹಾಡಿನ ಪಲ್ಲವಿಯನ್ನು ಫೋನ್​ನಲ್ಲಿಯೇ ಕೊಟ್ಟರು. ಆ ಹಾಡನ್ನು ಅವರು ಮಧ್ಯಾಹ್ನ ಊಟದ ಸಮಯದಲ್ಲಿ ಬರೆದಿದ್ದರು. ಆ ಹಾಡು ನನಗೆ ಸಕತ್​ ಖುಷಿಕೊಟ್ಟಿತು. ಆ ಸಮಮಯದಲ್ಲಿ ತಾಲಿಬಾನ್​ನ ವಿಷಯ ಸ್ವಲ್ಪ ಟ್ರೆಂಡ್​ನಲ್ಲಿ ಇತ್ತು. ಆದರೆ ಈ ಶಬ್ದವನ್ನು ಬಳಸಿ ಯಾರೂ ಹಾಡು ಬರೆದಿರಲಿಲ್ಲ. ಅದ್ಹೇಗೋ ಒಂದೊಂದು ಸಲ ಲಿರಿಕ್ಸ್ ರೈಟರ್​ ಮತ್ತು ಮ್ಯೂಸಿಕ್​ ಡೈರೆಕ್ಟರ್​ ನಡುವೆ ಅಚಾನಕ್​ ಆಗಿ ಕೆಮೆಸ್ಟ್ರಿ ವರ್ಕ್​ ಆಗಿಬಿಡುತ್ತದೆ. ಅದು ನಮಗೂ ಹೇಗೆ ಎನ್ನುವುದು ಗೊತ್ತಾಗಲ್ಲ. ಈ ಹಾಡಿನ ವಿಷಯದಲ್ಲಿಯೂ ಹಾಗೆ ಆಯಿತು. ನನ್ನ ಮತ್ತು ಉಪೇಂದ್ರ ಅವರ ಹಾಡು ಹಿಟ್​ ಆಯಿತು. ತಾಲಿಬಾನ್​ ಅಲ್ಲಾ... ಅಲ್ಲಾ... ಅಲ್ವೇ ಅಲ್ಲಾ... ಎನ್ನುವ ಲಿರಿಕ್ಸ್​ ಕಂಪೋಸ್​  ಮಾಡುವಲ್ಲಿ ತುಂಬಾ ಖುಷಿ ಕೊಟ್ಟಿತು ಎಂದಿದ್ದಾರೆ. ಜೊತೆಗೆ ಸಿನಿಮಾದ ಹಾಡುಗಳನ್ನು ರಾಜ್​ಕುಮಾರ್​ ಅವರ ಮನೆಯಲ್ಲಿ ಅವರ ಎದುರೇ ಕಾಂಪೋಸ್​ ಮಾಡಲಾಯಿತು ಎಂದು ಗುರುಕಿರಣ್​ ಅಂದು ನಡೆದ ಘಟನೆಯನ್ನು ವಿವರಿಸಿದ್ದಾರೆ. 

ನೋಡಲು ಚೆನ್ನಾಗಿಲ್ಲ, ಕಲರ್​ ಇಲ್ಲ ಎಂದು ತುಂಬಾ ಫೀಲಿಂಗ್​ ಇತ್ತು: ಮನದ ಮಾತು ಹೇಳಿದ್ದ ಅಪ್ಪು ವಿಡಿಯೋ ವೈರಲ್​!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?