ಕುಂಭಮೇಳದಲ್ಲಿ ಸ್ನಾನ ಮಾಡಿರುವ ಎಐ ಫೋಟೋ ಶೇರ್ ಮಾಡಿಕೊಂಡಿರುವುದಕ್ಕೆ ಸಿಟ್ಟಾಗಿರುವ ನಟ ಪ್ರಕಾಶ್ ರಾಜ್ ಕೇಸ್ ಹಾಕಿದ್ದಾರೆ. ಆದರೆ ಇದರಲ್ಲಿಯೂ ಬೇರೆಯದ್ದೇ ಹುಡುಕಿದ್ದಾರೆ ನೆಟ್ಟಿಗರು!
ಪ್ರಕಾಶ್ ರಾಜ್ ಭಾರತೀಯ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರು ಮತ್ತು ಅವರು ಪ್ರತಿ ಚಿತ್ರದಲ್ಲೂ ತಮ್ಮ ಬಹುಮುಖತೆಯನ್ನು ಸಾಬೀತುಪಡಿಸಿದ್ದಾರೆ. ಆದರೆ ವರ್ಷಗಳಲ್ಲಿ ಅವರು ವಿವಾದಾತ್ಮಕ ದಕ್ಷಿಣ ಕಲಾವಿದರಲ್ಲಿ ಒಬ್ಬರೆಂದೇ ಕುಖ್ಯಾತಿಯನ್ನೂ ಗಳಿಸಿದ್ದಾರೆ. ಸಾಮಾನ್ಯವಾಗಿ ದಕ್ಷಿಣ ಭಾರತದ ಕಲಾವಿದರು ಯಾವುದೇ ವಿವಾದಕ್ಕೆ ಒಳಗಾಗದೇ ಸಾಮಾಜಿಕ ಜಾಲತಾಣದಿಂದ ದೂರವೇ ಉಳಿಯುತ್ತಾರೆ. ಆದರೆ ನಟ ಪ್ರಕಾಶ್ ರಾಜ್ ಈ ಎಲ್ಲಾ ನಟರಿಗಿಂತಲೂ ಭಿನ್ನ ವ್ಯಕ್ತಿತ್ವ ಉಳ್ಳವರು. ಅವರು ಪ್ರಸ್ತುತ ಸನ್ನಿವೇಶದ ಕುರಿತು ಅದರಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಸದಾ ಪ್ರತ್ಯಕ್ಷ ಮತ್ತು ಪರೋಕ್ಷ ಟೀಕೆಗಳನ್ನು ಮಾಡುತ್ತಲೇ ಇರುತ್ತಾರೆ. ಸ್ವಲ್ಪ ಜನಪ್ರಿಯತೆ ಕುಗ್ಗಿತು ಎಂದಾಕ್ಷಣ, ಯಾವುದೋ ಕೆಟ್ಟ ಪೋಸ್ಟ್ ಹಾಕಿ, ಟ್ರೋಲ್ಗೆ ಒಳಗಾದರೂ ಸರಿ, ಒಟ್ಟಿನಲ್ಲಿ ಸುದ್ದಿಯಲ್ಲಿ ಇರುವುದು ಇವರಿಗೆ ಇಷ್ಟ ಎಂದು ಹಲವರು ನಟನ ಕಾಲೆಳೆಯುವುದೂ ಇದೆ. ಇಂಥ ಪೋಸ್ಟ್ಗಳಿಗಾಗಿ ಒಂದಷ್ಟು ಮಂದಿಯಿಂದ ಹೊಗಳಿಸಿಕೊಳ್ಳುತ್ತಾರೆ. ಆದರೆ ಇದೇ ವೇಳೆ, ಇದೇ ಕಾರಣಕ್ಕೆ ಇವರಷ್ಟು ಕೆಟ್ಟ ಕಮೆಂಟ್ಗಳನ್ನು ಹಾಗೂ ಟೀಕೆಗಳನ್ನು ಎದುರಿಸುವ ದಕ್ಷಿಣದ ನಟರೂ ಬೇರಾರೂ ಇಲ್ಲ ಎಂದೇ ಹೇಳಬಹುದು. ಕೆಲವು ವೇಳೆ ಕಾನೂನು ಕುಣಿಕೆಯೂ ಇವರ ಮೇಲೆ ಸುತ್ತುತ್ತಿದ್ದುದು ಉಂಟು.
ಇದೀಗ ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳದ ಸಂದರ್ಭದಲ್ಲಿ, ದೇಶ-ವಿದೇಶಗಳ ಕೋಟ್ಯಂತರ ಭಕ್ತರು ಪುಣ್ಯ ಸ್ನಾನ ಮಾಡಿದ್ದಾರೆ. ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳೂ ಗಂಗೆಯಲ್ಲಿ ಮಿಂದು ಎದ್ದಿದ್ದಾರೆ. ಇದೇ ವೇಳೆ ಹಲವು ಖ್ಯಾತನಾಮರ ಕೃತಕ ಬುದ್ಧಿಮತ್ತೆ (AI) ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅವರು ಪುಣ್ಯಸ್ನಾನ ಮಾಡಿರುವುದಾಗಿ ಶೀರ್ಷಿಕೆ ಕೊಡಲಾಗುತ್ತಿದೆ. ಅದರಲ್ಲಿ ಒಬ್ಬರು ಪ್ರಕಾಶ್ ರಾಜ್. ಕಳೆದೆರಡು ದಿನಗಳಿಂದ ಪ್ರಕಾಶ್ ರಾಜ್ ಅವರ, ಎಐ ಫೋಟೋ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ಸಾಮಾಜಿಕ ಕಾರ್ಯಕರ್ತ ಹಾಗೂ ನಟ ಪ್ರಶಾಂತ್ ಸಂಬರಗಿ ಅವರೂ ಶೇರ್ ಮಾಡಿದ್ದರು. ಕುಂಭಮೇಳದಲ್ಲಿ ಪ್ರಕಾಶ್ ರಾಜ್ ಮಿಂದೆದ್ದರು. ಅವರ ಎಲ್ಲಾ ಪಾಪಗಳು ತೊಳೆದು ಹೋಗುತ್ತವೆ ಎನ್ನುವ ನಂಬಿಕೆ ಇದೆ ಎನ್ನುವ ಕ್ಯಾಪ್ಷನ್ ನೀಡಿದ್ದರು.
ಮಕ್ಕಳ ಉಸಿರುಗಡ್ತಾ ಇದೆ, ಮಾತನಾಡ್ತಾ ಇಲ್ಲ, 10 ವರ್ಷದಲ್ಲಿ ಏನಾಗತ್ತೆ? ಪ್ರಕಾಶ್ ರಾಜ್ ನೋವಿನ ನುಡಿ...
ಇದರಿಂದ ಪ್ರಕಾಶ್ ರಾಜ್ ಕೆಂಡಾಮಂಡಲ ಆಗಿದ್ದಾರೆ. ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮೂಲಕ ರಚನೆ ಮಾಡಿರುವ ಫೋಟೋ ಹಾಕಿರುವುದು ಅವರ ಕೆಂಗಣ್ಣಿಗೆ ಗುರಿಯಾಗಿದೆ. ಕುಂಭಮೇಳ, ಪುಣ್ಯಸ್ನಾನ, ಭಕ್ತಿ, ಪೂಜೆ ಇವೆಲ್ಲವನ್ನೂ ಒಂದು ಪಕ್ಷಕ್ಕೆ ಸೀಮಿತ ಮಾಡಿರುವ ವರ್ಗವಿರುವ ಹಿನ್ನೆಲೆಯಲ್ಲಿ, ಇದು ಪ್ರಕಾಶ್ ರಾಜ್ ಅವರಿಗೆ ಸಹಜವಾಗಿ ಸಿಟ್ಟು ತರಿಸಿದೆ. ಇದೇ ಕಾರಣಕ್ಕೆ ಅವರು ಪ್ರಶಾಂತ್ ಸಂಬರಗಿ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಕುರಿತು ಎಕ್ಸ್ ಖಾತೆಯಲ್ಲಿ ತಿಳಿಸಿರುವ ಅವರು, ಇದು ಸುಳ್ಳು ಸುದ್ದಿ. “ಸುಳ್ಳ ರಾಜ” ನ ಹೇಡಿಗಳ ಸೈನ್ಯಕ್ಕೆ .. ಅವರ ಪವಿತ್ರ ಪೂಜೆಯಲ್ಲೂ ಸುಳ್ಳು ಸುದ್ದಿ ಹಬ್ಬಿಸಿ ಹೊಲಸು ಮಾಡುವುದೇ ಕೆಲಸ .. police complaint ದಾಖಲಾಗಿದೆ .. ಕೋರ್ಟಿನ ಕಟಕಟೆಯಲ್ಲಿ ಏನು ಮಾಡುತ್ತಾರೋ ನೋಡೋಣ ಎಂದು ಕ್ಯಾಪ್ಷನ್ ನೀಡಿದ್ದಾರೆ.
ಇದೇನೋ ಸರಿ. ಆದರೆ ಇದೀಗ ಒಂದಷ್ಟು ನೆಟ್ಟಿಗರು ಈ ಪೋಸ್ಟ್ ಅನ್ನೇ ಹಿಡಿದು ಟ್ರೋಲ್ ಮಾಡುತ್ತಿದ್ದಾರೆ. ಅದಕ್ಕೆ ಕಾರಣ, 'ಪವಿತ್ರ ಪೂಜೆಯಲ್ಲೂ' ಎಂಬ ಶಬ್ದ ಬಳಸಿರುವುದಕ್ಕೆ. ಕೊನೆಗೂ ಕುಂಭಮೇಳದ ಸ್ನಾನ ಪವಿತ್ರ ಪೂಜೆ ಎಂದು ಒಪ್ಪಿಕೊಂಡರಲ್ಲ, ಅಷ್ಟೇ ಸಾಕು. ಕೊನೆಗೂ ಸತ್ಯ ಬಹಿರಂಗಗೊಂಡಿತು ಎಂದಿರುವ ಕೆಲವರು ನೆಟ್ಟಿಗರು, ಇಂಥದ್ದೊಂದು ಸತ್ಯ ಹೊರತಂದಿರುವ ಎಐಗೆ ಧನ್ಯವಾದ ಎಂದೂ ಹೇಳುತ್ತಿದ್ದಾರೆ. ಇದೇ ವೇಳೆ ಪ್ರಕಾಶ್ ರಾಜ್ ಬೆಂಬಲಿಗರು ಮಾತ್ರ, ಇಂಥ ಫೇಕ್ ಫೋಟೋ ಹಾಕಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದು ಧರ್ಮ ರಕ್ಷಣೆ ವಿಷ್ಯ... ತನಿಖೆ ನಡೀತಿದೆ... ಮಧ್ಯೆ ನೀವು... ಪ್ರಕಾಶ್ ರಾಜ್ಗೆ ನಟ ವಿಷ್ಣು ಮಂಚು ಕ್ಲಾಸ್!
ಸುಳ್ಳು ಸುದ್ದಿ
“ಸುಳ್ಳ ರಾಜ” ನ ಹೇಡಿಗಳ ಸೈನ್ಯಕ್ಕೆ .. ಅವರ ಪವಿತ್ರ ಪೂಜೆಯಲ್ಲೂ ಸುಳ್ಳು ಸುದ್ದಿ ಹಬ್ಬಿಸಿ ಹೊಲಸು ಮಾಡುವುದೇ ಕೆಲಸ .. police complaint ದಾಖಲಾಗಿದೆ .. ಕೋರ್ಟಿನ ಕಟಕಟೆಯಲ್ಲಿ ಏನು ಮಾಡುತ್ತಾರೋ ನೋಡೋಣ 😊 pic.twitter.com/S6ySeyFKmh