ನ.12ರಂದು ಬಿಡುಗಡೆಯಾಗುತ್ತಿರುವ ‘ಪ್ರೇಮಂ ಪೂಜ್ಯಂ’ ಸಿನಿಮಾವನ್ನು ಚಿತ್ರತಂಡ ಪುನೀತ್ ರಾಜ್‌ಕುಮಾರ್ ಅವರಿಗೆ ಸಮರ್ಪಿಸಿದೆ. ಚಿತ್ರದ ನಾಯಕ ನಟ ಲವ್ಲೀ ಸ್ಟಾರ್ ನೆನಪಿರಲಿ ಪ್ರೇಮ್ ಈ ವಿಚಾರ ತಿಳಿಸಿದ್ದಾರೆ.
‘ಪುನೀತ್ ನನ್ನ ಫ್ಯಾಮಿಲಿ ಫ್ರೆಂಡ್ ಥರ ಇದ್ದರು. ಪ್ರತೀ ವರ್ಷ ಜೊತೆಯಾಗಿ ಶಬರಿಮಲೆ ಹೋಗುತ್ತಿದ್ದೆವು. ಎಲ್ಲಾ ಕಡೆ ಅವರ ಅಗಲಿಕೆಯ ನೋವು ತುಂಬಿಕೊಂಡಿದೆ. ಅವರಿಲ್ಲ ಅನ್ನುವುದನ್ನು ಅರಗಿಸಿಕೊಳ್ಳುವುದೇ ಕಷ್ಟವಾಗಿದೆ’ ಎಂದು ಅವರು ಹೇಳಿದರು.
ಸಿನಿಮಾ ಬಿಡುಗಡೆ ಕುರಿತಾಗಿ ಮಾತನಾಡಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಪುನೀತ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ‘ಪ್ರೇಮಂ ಪೂಜ್ಯಂ’ ಚಿತ್ರದ ಮೇಲೆ ಪ್ರೇಮ್ ಮತ್ತು ಚಿತ್ರತಂಡಕ್ಕೆ ಅಪಾರವಾದ ನಂಬಿಕೆ, ಭರವಸೆ ಇದೆ. ಆ ವಿಶ್ವಾಸ ಎಲ್ಲರ ಮಾತಿನಲ್ಲೂ ಇತ್ತು.
ಪ್ರೇಮ್ 25ನೇ ಚಿತ್ರಕ್ಕೆ U/A ಸರ್ಟಿಫಿಕೇಟ್; ಪ್ರಶಂಸೆ ವ್ಯಕ್ತ ಪಡಿಸಿದ ಸೆನ್ಸರ್ ಮಂಡಳಿ!
ಪ್ರೇಮ್, ‘ಬೇರೆ ಬೇರೆ ರೀತಿಯಲ್ಲಿ ಕಾಣಿಸಿಕೊಳ್ಳುವ ಪಾತ್ರ ಮಾಡಿದ್ದೇನೆ. ವಿಭಿನ್ನ ಕಥಾ ಹಂದರವಿರುವ ಸಿನಿಮಾ ಇದು’ ಎಂದರು. ಅವರ ಸ್ನೇಹಿತನಾಗಿ ನಟಿಸಿರುವ ಮಾಸ್ಟರ್ ಆನಂದ್, ‘ಈ ಸಿನಿಮಾ ಸ್ನೇಹಂ ಪೂಜ್ಯಂ ಕೂಡ ಹೌದು. ಗೆಳೆಯನಾಗಿ ಸಿನಿಮಾ ಪೂರ್ತಿ ಇರುತ್ತೇನೆ. ಇಷ್ಟಪಟ್ಟು, ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ಪ್ರತೀ ಫ್ರೇಮ್‌ನಲ್ಲೂ ಕತೆ ಹೇಳುವ ಪ್ರಯತ್ನ ಇದು’ ಎಂದರು.
ವಿಶೇಷ ಎಂದರೆ ಈ ಸಿನಿಮಾ ನಿರ್ಮಾಣ ಮಾಡಿದ್ದು ಡಾಕ್ಟರ್‌ಗಳ ತಂಡ. ಡಾಕ್ಟರ್‌ಗಳಾದ ರಕ್ಷಿತ್ ಕೆದಂಬಾಡಿ, ಅಂಜನ್, ರಾಜ್‌ಕುಮಾರ್ ಜಾನಕಿರಾಮನ್, ಅರ್ಚಿತ್ ಬೋಳೂರು ಮುಂತಾದ ವೈದ್ಯರ ತಂಡ ಗೆಳೆಯ ಡಾ.ರಾಘವೇಂದ್ರ ಬರೆದ ಸ್ಕಿ್ರಪ್ಟ್ ನಂಬಿ ಬಂಡವಾಳ ಹೂಡಿದ್ದಾರೆ. ಆ ಎಲ್ಲಾ ನಿರ್ಮಾಪಕರ ಪರವಾಗಿ ಅಂಜನ್, ‘ಯಾವುದಕ್ಕೂ ಕಡಿಮೆಯಾಗದಂತೆ ಸಿನಿಮಾ ಮಾಡಿದ್ದೇವೆ. ನಾವು ಅಂದುಕೊಂಡಿದ್ದಕ್ಕಿಂತ ಸಿನಿಮಾ ಚೆನ್ನಾಗಿ ಬಂದಿದೆ’ ಎಂದರು.
ನನ್ನ ಪ್ರೇಮ್ ಜೋಡಿ ಕ್ಲಿಕ್ ಆಗುತ್ತದೆ, ಹಿಂದಿಯಲ್ಲೂ ಅದ್ಭುತ ಸಿನಿಮಾ ಸಿಕ್ಕಿದೆ: ನಟಿ ಐಂದ್ರಿತಾ ರೈ
ಚಿತ್ರದ ನಿರ್ದೇಶಕ ಡಾ.ರಾಘವೇಂದ್ರ ತಮ್ಮ ಡ್ರೀಮ್ ಪ್ರೊಜೆಕ್ಟ್ ಕುರಿತಾಗಿ ಬಹಳ ಪ್ರೀತಿ ಹೊಂದಿದ್ದಾರೆ. ಅವರ ಸಿನಿಮಾ ಪ್ರೀತಿ ಅವರ ಮಾತಲ್ಲೇ ತಿಳಿಯುವಂತಿತ್ತು. ‘ಅಂಬರೀಶ್ ಸರ್‌ಗೆ ಈ ಚಿತ್ರದ ನರೇಷನ್ ಕೊಟ್ಟಿದ್ದೆ. ಇದೇ ಥರ ಸಿನಿಮಾ ಮಾಡು ಎಂದು ಪ್ರೋತ್ಸಾಹಿಸಿದ್ದರು. ನನ್ನ ಸ್ಕಿ್ರಪ್ಟ್ ನಂಬಿ 28 ಮಂದಿ ಡಾಕ್ಟರ್‌ಗಳು ನಿರ್ಮಾಣಕ್ಕೆ ಮುಂದೆ ಬಂದು ಕೈ ಹಿಡಿದಿದ್ದು ವಿಶ್ವಾಸ ಹೆಚ್ಚಿಸಿತು. ಪ್ರೀತಿಯನ್ನು ಪೂಜ್ಯಭಾವದಿಂದ ನೋಡಬೇಕು ಅನ್ನುವುದೇ ಈ ಚಿತ್ರದ ಮುಖ್ಯ ಅಂಶ. ಸಂಗೀತವನ್ನು ಬಳಸಿಕೊಂಡು ಕತೆ ಹೇಳಿದ್ದೇವೆ. ಸಂಗೀತ ಮತ್ತು ದೃಶ್ಯ ಎರಡೂ ಅಪೂರ್ವವಾಗಿ ಮೂಡಿ ಬಂದಿದೆ’ ಎಂದು ಹೇಳಿದರು.
ಒಬ್ಬ ಡಾಕ್ಟರ್ ರೂಪಿಸಿದ, ಹತ್ತಾರು ಡಾಕ್ಟರ್‌ಗಳ ನಂಬಿಕೆ ಗಳಿಸಿದ ಈ ಸಿನಿಮಾದ ಮೇಲೆ ಕುತೂಹಲ ಹುಟ್ಟಿದರೆ ನ.12ರವರೆಗೆ ಪ್ರೇಕ್ಷಕರು ಕಾಯಬೇಕಾಗಿದೆ.