Bhajarangi 2: ಅಪ್ಪು ಸಾವಿನ ನೋವಿನಿಂದ ಹೊರಬರಲು ಮತ್ತೆ ಥಿಯೇಟರ್‌ನತ್ತ ಬಂದ ಜನ

By Kannadaprabha NewsFirst Published Nov 3, 2021, 10:26 AM IST
Highlights
  • ಶಿವಣ್ಣ(Shivaraj kumar) ನಟನೆಯ ಭಜರಂಗಿ 2(Bhajarangi 2) ಚಿತ್ರಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ
  • ನೋವು ಮರೆಯಲು ಚಿತ್ರಮಂದಿರಕ್ಕೆ ಮರಳುತ್ತಿರುವ ಸಿನಿಮಾ ಪ್ರೇಮಿಗಳು

ಶಿವರಾಜ್‌ಕುಮಾರ್‌(Shivaraj kumar) ನಟನೆಯ ‘ಭಜರಂಗಿ 2’ (Bhajarangi 2)ಚಿತ್ರ ಮರು ಪ್ರದರ್ಶನ ಆರಂಭಿಸಿದ್ದು, ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿವೆ. ಪುನೀತ್‌ ರಾಜ್‌ಕುಮಾರ್‌(Pneeth Rajkumar) ಅಗಲಿಕೆಯಿಂದ ಆಘಾತಗೊಂಡಿದ್ದ ಸಿನಿಪ್ರೇಕ್ಷಕರು ಈಗ ಶಿವರಾಜ್‌ ಕುಮಾರ್‌ ಮೇಲಿನ ಪ್ರೀತಿಯಿಂದ ಚಿತ್ರಮಂದಿರಕ್ಕೆ ಮರಳಿ ಬರುತ್ತಿದ್ದಾರೆ. ಬೆಂಗಳೂರು,(bengaluru) ಮೈಸೂರು,(Mysuru) ಶಿವಮೊಗ್ಗ, ಹುಬ್ಬಳ್ಳಿ, ಧಾರವಾಡ ಮುಂತಾದ ಕೇಂದ್ರಗಳಲ್ಲಿ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರು ಬಂದಿದ್ದಾರೆ. ಪ್ರತಿ ಶೋಗೂ ಶೇ.80ರಷ್ಟುಪ್ರೇಕ್ಷಕರ ಹಾಜರಾತಿ ಇದೆ ಎನ್ನಲಾಗಿದೆ.

ಶುಕ್ರವಾರ ಪುನೀತ್‌ ರಾಜ್‌ಕುಮಾರ್‌ ನಿಧನರಾದ ಕಾರಣ ಅಭಿಮಾನಿಗಳೆಲ್ಲಾ ಅರ್ಧದಲ್ಲೇ ಸಿನಿಮಾ ಮಂದಿರದಿಂದ ಹೊರಬಂದಿದ್ದರು. ಪುನೀತ್‌ಗೆ ಗೌರವ ವಿದಾಯ ಸಲ್ಲಿಸುವ ಸಲುವಾಗಿ ಭಜರಂಗಿ 2 ನಿರ್ಮಾಪಕರು ಸಿನಿಮಾ ಪ್ರದರ್ಶನವನ್ನು ತಾತ್ಕಾಲಿಕವಾಗಿ ರದ್ದು ಗೊಳಿಸಿದ್ದರು. ನಿರ್ಮಾಪಕ ಜಯಣ್ಣ ಭೋಗೇಂದ್ರ ಲಾಭ ನಷ್ಟದ ಲೆಕ್ಕಾಚಾರ ಹಾಕದೆ ಕೋಟಿಗಟ್ಟಲೆ ವೆಚ್ಚ ಮಾಡಿ ನಿರ್ಮಿಸಿದ ಚಿತ್ರದ ಪ್ರದರ್ಶನವನ್ನು ಸ್ಥಗಿತಗೊಳಿಸಿ ಪುನೀತ್‌ ಅಗಲಿಕೆಯ ದುಃಖದಲ್ಲಿ ಭಾಗಿ ಆಗಿದ್ದರು.

ಶಿವಣ್ಣ ಹೇಳಿದ ನಂತರವೇ ಸಿನಿಮಾ ಪ್ರದರ್ಶನ

ಆದರೆ, ತಮ್ಮಿಂದ ನಿರ್ಮಾಪಕರಿಗೆ ನಷ್ಟಆಗಬಾರದು. ಕೊರೋನಾ ಸಂಕಷ್ಟದಲ್ಲಿ ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಹೀಗಾಗಿ ಸಿನಿಮಾ ಪ್ರದರ್ಶನ ಮತ್ತೆ ಶುರು ಮಾಡಿ ಎಂದು ಶಿವಣ್ಣ ಅವರು ಹೇಳಿದ ನಂತರವೇ ರಾಜ್ಯದಲ್ಲಿ 375ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಭಜರಂಗಿ 2’ ಚಿತ್ರ ಮರು ಪ್ರದರ್ಶನ ಆರಂಭವಾಗಿದೆ.

‘ಪುನೀತ್‌ ರಾಜ್‌ಕುಮಾರ್‌ ಅವರನ್ನು ಕಳೆದುಕೊಂಡ ನೋವು ಇನ್ನೂ ದೂರವಾಗಿಲ್ಲ. ಆ ನೋವು ಇದ್ದೇ ಇರುತ್ತದೆ. ಈ ಮಧ್ಯೆ ನಮ್ಮ ಚಿತ್ರ ನೋಡಲು ಜನ ಮರಳಿ ಬಂದಿದ್ದಾರೆ. ಬರುತ್ತಿದ್ದಾರೆ. ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲೂ ಶೇ.80ರಷ್ಟುಪ್ರೇಕ್ಷಕರ ಹಾಜರಾತಿ ಇದೆ. ದೀಪಾವಳಿ ಹಬ್ಬದ ಅಂಗವಾಗಿ ರಜೆ ದಿನಗಳು ಸಿಗಲಿವೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಸಿನಿಮಾ ನೋಡಲು ಬರಲಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಚಿತ್ರಮಂದಿರಗಳಲ್ಲೂ ಶೇ.100ರಷ್ಟುಪ್ರೇಕ್ಷಕರು ತುಂಬಿಕೊಳ್ಳುವ ನಿರೀಕ್ಷೆ ಇದೆ. ಸಿನಿಮಾ ನೋಡಿದ ಎಲ್ಲರೂ ಸಿನಿಮಾ ಮೆಚ್ಚಿಕೊಳ್ಳುತ್ತಿದ್ದಾರೆ’ ಎಂದು ನಿರ್ದೇಶಕ ಎ ಹರ್ಷ ಹೇಳಿದ್ದಾರೆ.

ಪುನೀತ್‌ ಸ್ಮರಣೆ; ವಿಶಾಲ್ ನಂತರ ಪ್ರಣೀತಾ ಮಾದರಿ ಹೆಜ್ಜೆ

ನಿರ್ಮಾಪಕ ಜಯಣ್ಣ, ‘ನಮ್ಮ ಚಿತ್ರದ ಯಶಸ್ಸಿನ ಕುರಿತು ಈಗ ಮಾತನಾಡುವುದು ಸೂಕ್ತವಲ್ಲ. ನಮ್ಮೆಲ್ಲರ ಪ್ರೀತಿಯ ನಟ ಪುನೀತ್‌ ರಾಜ್‌ಕುಮಾರ್‌ ಅವರನ್ನು ನಾವು ಕಳೆದುಕೊಂಡಿದ್ದೇವೆ. ಆ ನೋವಿನಿಂದ ಯಾರೂ ಆಚೆ ಬಂದಿಲ್ಲ. ಆದರೂ ಶಿವಣ್ಣ ಅವರ ಮಾತಿನಂತೆ ಚಿತ್ರವನ್ನು ಮರು ಪ್ರದರ್ಶನ ಮಾಡುತ್ತಿದ್ದೇವೆ. ಸಿನಿಮಾ ಬಿಡುಗಡೆಯಾದ ಎಲ್ಲಾ ಕಡೆ ಪ್ರೇಕ್ಷಕರು ಬರುತ್ತಿದ್ದಾರೆ’ ಎನ್ನುತ್ತಾರೆ.

ಸಲಗ, ಕೋಟಿಗೊಬ್ಬ 3 ಚಿತ್ರಕ್ಕೂ ಆಗಮಿಸಿದ ಪ್ರೇಕ್ಷಕರು

ಪುನೀತ್‌ ಅಗಲಿಕೆಯಿಂದ ಚಿತ್ರರಂಗವೇ ಸ್ಥಗಿತವಾಗಿತ್ತು. ‘ಸಲಗ’, ‘ಕೋಟಿಗೊಬ್ಬ 3’ ಚಿತ್ರಗಳ ಪ್ರದರ್ಶನವೂ ನಿಂತಿತ್ತು. ಇದೀಗ ಮತ್ತೆ ಚಿತ್ರ ಪ್ರದರ್ಶನ ಆರಂಭಗೊಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಟ ದುನಿಯಾ ವಿಜಯ್‌ ನಿರ್ದೇಶಿಸಿ, ನಟಿಸಿರುವ ‘ಸಲಗ’ ಸಿನಿಮಾ ರಾಜ್ಯದ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.

"

ಈ ಕುರಿತು ಸಲಗ ಚಿತ್ರದ ನಿರ್ಮಾಪಕ ಕೆ ಪಿ ಶ್ರೀಕಾಂತ್‌, ‘ಪುನೀತ್‌ ನಿಧನ ಸುದ್ದಿ ಕೇಳಿ ನಾವೇ ಸ್ವಯಂ ಪ್ರೇರಣೆಯಿಂದ ಸಿನಿಮಾ ಪ್ರದರ್ಶನ ರದ್ದು ಮಾಡಿದ್ದೆವು. ಈಗ ಮತ್ತೆ ಸಿನಿಮಾ ಶೋ ಆರಂಭವಾಗಿದೆ. ಪ್ರೇಕ್ಷಕರ ಹಾಜರಾತಿ ಸಂಖ್ಯೆ, ಗಳಿಕೆ ಎಲ್ಲವೂ ಎರಡು ದಿನಗಳ ನಂತರ ಗೊತ್ತಾಗಲಿದೆ’ ಎನ್ನುತ್ತಾರೆ.

ಅ.29ರಂದು ಪುನೀತ್ ರಾಜ್‌ಕುಮಾರ್ ನಿಧನರಾದ ಸುದ್ದಿ ಕೇಳಿ ಜನ ಅರ್ಧದಲ್ಲಿಯೇ ಸಿನಿಮಾ ನೋಡುವುದನ್ನು ಬಿಟ್ಟು ನೆಚ್ಚಿನ ನಟನ ಕೊನೆಯಬಾರಿ ನೋಡಲು ಓಡಿ ಬಂದಿದ್ದರು.

click me!