Weekend Curfew ಬಗ್ಗೆ ಆಕ್ಷೇಪ: ಸುದೀರ್ಘ ಬರಹ ಹಂಚಿಕೊಂಡ ಕವಿರಾಜ್

By Suvarna News  |  First Published Jan 6, 2022, 4:05 PM IST

ಚಿತ್ರ ಸಾಹಿತಿ, ನಿರ್ದೇಶಕ ಕವಿರಾಜ್ ಸರ್ಕಾರ ಹೊರಡಿಸಿರುವ ವೀಕೆಂಡ್ ಲಾಕ್‌ಡೌನ್ ಮತ್ತು 50% ನಿಯಮದ ಬಗ್ಗೆ ತಮ್ಮ ಅಸಹಮತ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಸುದೀರ್ಘವಾದ ಬರಹವೊಂದನ್ನು ಫೇಸ್‌ಬುಕ್‌ ಖಾತೆಯಲ್ಲಿ ನಿರ್ದೇಶಕ ಕವಿರಾಜ್ ಬರೆದುಕೊಂಡಿದ್ದಾರೆ.


ದೇಶದಲ್ಲಿ ಕೋವಿಡ್ (Covid) ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಾಗುತ್ತಿದ್ದು, ಒಮಿಕ್ರಾನ್ (Omicron) ಪ್ರಕರಣಗಳು ದಿನದಿಂದ ದಿನಕ್ಕೆ ಅಧಿಕವಾಗತೊಡಗಿವೆ. ಹೀಗಾಗಿ ಕೊರೊನಾ ವೈರಸ್ (CoronaVirus) ಸೋಂಕು ವ್ಯಾಪಕವಾಗಿ ಹರಡುವುದನ್ನು ತಪ್ಪಿಸಲು ಕರ್ನಾಟಕ ರಾಜ್ಯ ಸರ್ಕಾರ ಈಗಾಗಲೇ ನೈಟ್ ಕರ್ಫ್ಯೂ (Night Curfew) ಹಾಗೂ ವೀಕೆಂಡ್ ಕರ್ಫ್ಯೂ (Weekend Curfew) ಜಾರಿ ಮಾಡಿದೆ. ಹಲವು ಚಟುವಟಿಕೆಗಳಿಗೆ ನಿರ್ಬಂಧವನ್ನೂ ಹೇರಿದೆ. ಕೋವಿಡ್ ಪ್ರಕರಣಗಳು ಇನ್ನಷ್ಟು ಹೆಚ್ಚಳವಾದರೆ ಲಾಕ್‌ಡೌನ್ (Lockdown) ಹೇರುವ ಸಾಧ್ಯತೆಯೂ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಿರುವಾಗಲೇ ವೀಕೆಂಡ್ ಲಾಕ್‌ಡೌನ್ ಬಗ್ಗೆ ಚಿತ್ರರಂಗದವರಿಂದ (Sandalwood) ಬಹುತೇಕ ವಿರೋಧವೇ ವ್ಯಕ್ತವಾಗಿದೆ. 

ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber) ಈಗಾಗಲೇ ಸರ್ಕಾರದ ಆದೇಶಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ನಟ ದುನಿಯಾ ವಿಜಯ್ (Duniya Vijay) ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ಚಿತ್ರ ಸಾಹಿತಿ, ನಿರ್ದೇಶಕ ಕವಿರಾಜ್ (Kaviraj) ಸಹ ಸರ್ಕಾರದ ಈ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿದ್ದು, ಸರ್ಕಾರ ಹೊರಡಿಸಿರುವ ವೀಕೆಂಡ್ ಲಾಕ್‌ಡೌನ್ ಮತ್ತು 50% ನಿಯಮದ ಬಗ್ಗೆ ಕವಿರಾಜ್ ತಮ್ಮ ಅಸಹಮತ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಸುದೀರ್ಘವಾದ ಬರಹವೊಂದನ್ನು ಫೇಸ್‌ಬುಕ್‌ (FaceBook) ಖಾತೆಯಲ್ಲಿ ನಿರ್ದೇಶಕ ಕವಿರಾಜ್ ಬರೆದುಕೊಂಡಿದ್ದಾರೆ.

Latest Videos

undefined

ಒಮಿಕ್ರಾನ್ ವೇಗವಾಗಿ ಹರಡುವುದಾದರೂ ಅದು ಪ್ರಾಣಾಪಾಯ ತರುವುದಿಲ್ಲ ಎಂದು ಸ್ವತಃ ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ. ಅದೇ ಪ್ರಕಾರ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರು ಆಸ್ಪತ್ರೆ ಸೇರುತ್ತಿರುವವರ ಅನುಪಾತ  ಬಹಳ ಕಡಿಮೆಯೇ ಇದೆ‌. ಸಾಮರ್ಥ್ಯದ ಮಾಪನದಲ್ಲಿ ಒಮಿಕ್ರಾನ್ ಈಗಾಗಲೇ ಶಕ್ತಿಗುಂದಿರುವ ಕೊರೊನಾ ವೈರಾಣು. ಒಮಿಕ್ರಾನ್ ಒಂದು ಸಾಮಾನ್ಯ ಶೀತ, ಕೆಮ್ಮಿನಂತೆ ಕಾಡುವುದು. ಅದು ಒಮ್ಮೆ ಎಲ್ಲರಿಗೂ ಬಂದು ಹೋದರೆ ಒಂದು ಲೆಕ್ಕಾಚಾರದಲ್ಲಿ ಒಳ್ಳೆಯದೆ . ಅದರಿಂದ ಹರ್ಡ್ ಇಮ್ಯೂನಿಟಿ ಬೆಳೆಯುತ್ತದೆ. 

Non Veg; ನೀವು ತಿನ್ನೋ ಆಹಾರವನ್ನೇ ಹೊಲಸು ಅಂತೀರಲ್ರೀ, ಮತ್ತ್ಯಾಕೆ ತಿಂತೀರಿ: ಕವಿರಾಜ್

ಆ ಮೂಲಕ ಪ್ಯಾಂಡೆಮಿಕ್ ಎಂಡೆಮಿಕ್ ಹಂತ ತಲುಪಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಸೇರಿದಂತೆ ಹಲವು ತಜ್ಞ ವೈದ್ಯರು ಹೇಳುತ್ತಿದ್ದಾರೆ. ಆದರೂ ಸರ್ಕಾರಗಳು ಈ ಬೆದರು ಬೊಂಬೆಯಂತ ಲಾಕ್ ಡೌನ್ ಬಗ್ಗೆ ಯಾಕೆ ಚಿಂತಿಸುತ್ತಿವೆಯೋ? ಈಗಾಗಲೇ ಸುಮಾರು 20 ತಿಂಗಳಿಂದ ಈ ಕೊರೋನಾ, ಲಾಕ್‌ಡೌನ್ ಹೊಡೆತಕ್ಕೆ ಸಿಲುಕಿ ಬಡ ಮತ್ತು ಮದ್ಯಮ ವರ್ಗದ ಆರ್ಥಿಕ ಪರಿಸ್ಥಿತಿ ಜರ್ಝರಿತವಾಗಿದೆ. ಹೇಗೊ ಒದ್ದಾಡಿ ಚಿಗುರುತ್ತಿರುವ ಹೊತ್ತಿಗೆ ಮತ್ತೆ ಲಾಕ್‌ಡೌನ್ ಹೇರಿದರೆ ಅವರ ಬದುಕು ಇನ್ನಷ್ಟು ದುಸ್ತರವಾಗಲಿದೆ. 

ಆಗ ಕೊರೋನಾದಿಂದ ಸಾಯುವವರ ಸಂಖ್ಯೆಗಿಂತ ಹಸಿವು, ಹತಾಶೆ, ನಿರುದ್ಯೋಗ, ಆರ್ಥಿಕ ಜಂಜಾಟ, ಸಾಲಗಾರರ ಕಿರುಕುಳ, ಅವಮಾನದಿಂದ ಸಾಯುವವರ ಸಂಖ್ಯೆಯೇ ಜಾಸ್ತಿಯಾಗಲಿದೆ. ಈ ನಡುವೆ ಲಕ್ಷಾಂತರ ಜನರನ್ನು ಸೇರಿಸಿ ಬೃಹತ್ ಸಮಾವೇಶಗಳನ್ನು ನಡೆಸಿ ಬೀಗುತ್ತಿರುವ ರಾಜಕಾರಣಿಗಳು ಜನರು ಸಹಕರಿಸದಿರುವುದೇ ಕೊರೋನಾ ಹೆಚ್ಚಾಗಲು ಕಾರಣ ಎಂದು ತಪ್ಪನ್ನು ಜನರ ಮೇಲೆ ಹೇರಲು ಪ್ರಯತ್ನಿಸುತ್ತಿರುವುದು ಅತ್ಯಂತ ಅನೈತಿಕವಾಗಿದೆ. ನಿಮ್ಮ ಅವಾಂತರ, ಅವಿವೇಕತನ, ಅಸಮರ್ಥತೆಗಳಿಗೆ ಜನರನ್ನು ಹೊಣೆಗಾರರಾಗಿಸಿ ಇನ್ನಷ್ಟು ಸಂಕಷ್ಟಕ್ಕೆ ದೂಡಬೇಡಿ. 

Lyricist Kaviraj: ಎಂಇಎಸ್ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ

ಪರಿಣಾಮಕಾರಿ ಮುನ್ನೆಚ್ಚರಿಕೆ, ನಿಯಂತ್ರಣ ಕ್ರಮಗಳನ್ನು ಬಿಗಿಯಾಗಿ ಜಾರಿಗೊಳಿಸಿ ಸಾಧ್ಯವಾದಷ್ಟು ಸಹಜ ಜನಜೀವನಕ್ಕೆ ಅನುವು ಮಾಡಿಕೊಡಿ. ತೀರಾ ಕಡಿಮೆ ಜನ ಓಡಾಡುವ ನೈಟ್ ಹೊತ್ತಲ್ಲಿ ಕರ್ಫ್ಯೂ, ಒಂದು ಸೀಟ್ ಗ್ಯಾಪ್ ಬಿಟ್ಟು ಕುಳಿತ ಕೂಡಲೇ ಕೊರೋನಾ ಬರುವುದಿಲ್ಲವೇನೋ ಎನ್ನುವಂತಿರುವ 50:50 ರೂಲ್ಸ್‌ಗಳೆಲ್ಲ ಒಂದು ರೀತಿ ಹಾಸ್ಯಾಸ್ಪದ ರೂಲ್ಸ್‌ಗಳೇ. ಅದರ ಬದಲು ಎಲ್ಲರೂ ವ್ಯಾಕ್ಸಿನ್ ಹಾಕಿಸುವ ವ್ಯವಸ್ಥೆ ಆಗಲಿ. ಜೊತೆಗೆ ಮಾಸ್ಕ್ , ಸಾಮಾಜಿಕ ಅಂತರ, ಎಲ್ಲಿಗೆ ಆಗಲಿ ಪ್ರವೇಶಕ್ಕೆ ಮುನ್ನ ಸ್ಯಾನಿಟೈಸೇಷನ್ ಕಡ್ಡಾಯವಾಗಲಿ ಹಾಗೂ 'ಲಾಕ್‌ಡೌನ್ ಕೊನೆಯ ಆಯ್ಕೆಯಾಗಿರಲಿ' ಎಂದು ಕವಿರಾಜ್ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.
 

click me!