'ಆ ಘಟನೆ ನಡೆದಾಗ ಬ್ಲಾಂಕ್‌ ಆಗಿದ್ದು ಮಾತ್ರ ನಿಜ';ಮೇಘನಾ ರಾಜ್‌ ಮಾತುಗಳು

By Kannadaprabha NewsFirst Published Nov 13, 2020, 8:34 AM IST
Highlights

ಪತಿ ಚಿರಂಜೀವಿ ಸರ್ಜಾ ಅಗಲಿದ ಮೇಲೆ ಮೊದಲ ಬಾರಿಗೆ ನಟಿ ಮೇಘನಾ ರಾಜ್‌ ಮಾತನಾಡಿದ್ದಾರೆ. ತಡೆ ಹಿಡಿದ ದುಃಖ, ಕಾಡುವ ನೆನಪುಗಳು, ಭವಿಷ್ಯದ ಕನಸುಗಳು, ಬದುಕಿಗೆ ಬಂದ ಮಗುವಿನ ಒಡನಾಟ, ಅಚ್ಚರಿ, ಸಂಭ್ರಮ, ಕುಟುಂಬ, ಸಿನಿಮಾ ಹೀಗೆ ಮೇಘನಾ ಮಾತುಗಳು ಹರಿದ ರೀತಿ ಇಲ್ಲಿದೆ.

* ಆ ದುಃಖದ ಘಟನೆ ನಡೆದ ಮೇಲೆ ನಾನು ಯಾರ ಜೊತೆಗೂ ಮಾತನಾಡುವುದಕ್ಕೆ ಧೈರ್ಯ ಸಾಕಾಗದೆ ಅಂತರ್ಮುಖಿ ಆಗಿದ್ದೆ. ಆದರೆ, ಒಂದಲ್ಲಾ ಒಂದು ದಿನ ಈ ನೋವನ್ನು ಎದುರಿಸಬೇಕು, ನನ್ನ ದುಃಖ ಎಲ್ಲರ ಮುಂದೆ ತೋಡಿಕೊಳ್ಳಬೇಕು. ಅಲ್ಲದೆ ಮಾತನಾಡದೆ ಎಷ್ಟುದಿನ ಅಂತ ಸುಮ್ಮನೆ ಇರಲು ಸಾಧ್ಯ?

* ಈಗ ನನ್ನ ಶಕ್ತಿ ನನ್ನ ಮಗ ಹಾಗೂ ಚಿರು ನೆನಪುಗಳು. ನನ್ನ ಸ್ಫೂರ್ತಿ ಕೂಡ ಇವರೇ. ಯಾಕೆಂದರೆ ಚಿರು ನಮ್ಮನ್ನು ಬಿಟ್ಟು ಎಲ್ಲೂ ಹೋಗಿಲ್ಲ. ಮಗು ರೂಪದಲ್ಲಿ ಮತ್ತೆ ಬಂದಿದ್ದಾನೆ. ದೊಡ್ಡ ವಯಸ್ಸಿನ ಚಿರು, ಈಗ ಮಗುವಿನಂತೆ ನನ್ನ ಮಡಿಲಲ್ಲಿ ಆಟವಾಡುತ್ತಿದ್ದಾನೆ. ಸದ್ಯದಲ್ಲೇ ಅವನಿಗೆ ಒಂದು ಒಳ್ಳೆಯ ಹೆಸರು ಇಡಲಿದ್ದೇವೆ.

* ನನ್ನ ಮಗನಿಗೆ ಹೊರಗಿನ ಕುಟುಂಬದಿಂದ ಬಂದ ಮೊದಲ ಮುದ್ದಾದ ಗಿಫ್ಟ್‌ ತೊಟ್ಟಿಲು. ಸ್ವತಃ ವನಿತಾ ಅವರೇ ಫೋನ್‌ ಮಾಡಿ, ‘ನಿಮಗೆ ನಾನು ತೊಟ್ಟಿಲು ಕೊಡಬೇಕು’ ಎಂದು ಹೇಳಿ ವಿಶೇಷವಾಗಿ ಮಾಡಿಸಿರುವ ತೊಟ್ಟಿಲು ಕೊಟ್ಟರು. ಕ್ಯೂಟ್‌ ಆಗಿ, ಯೂನಿಕ್‌ ತೊಟ್ಟಿಲು ಮಾಡಿಸಿಕೊಂಡು ಬಂದು ಕೊಟ್ಟಿದ್ದಾರೆ. ಮತ್ತೊಂದು ಕುಟುಂಬದಿಂದ ನನ್ನ ಮಗನಿಗೆ ಬಂದ ಮೊದಲ ಗಿಫ್ಟ್‌ ಇದು. ನಾವು ತೊಟ್ಟಿಲು ಶಾಸ್ತ್ರ ಕ್ಕೆ ಇದನ್ನೇ ಬಳಸಿದ್ದೇವೆ.

* ನಾನು ಮತ್ತು ಚಿರು ಯಾವಾಗಲೂ ಜಗಳ ಮಾಡ್ತಿದ್ವಿ. ಅವನು ‘ನೋಡು ಗಂಡು ಮಗುವೇ ಆಗೋದು’ ಅಂತಿದ್ದ. ನಾನು ‘ಇಲ್ಲ ಹೆಣ್ಣು ಮಗು ಆಗುತ್ತದೆ’ ಎನ್ನುತ್ತಿದ್ದೆ. ಕೊನೆಗೆ ಚಿರು ಹೇಳಿದಂತೆ ಗಂಡು ಮಗು ಆಗಿದೆ. ‘ನಾನು ಫೀನಿಕ್ಸ್‌ ಇದ್ದಂತೆ, ಬೂದಿಮುಂಚಿದ ಕೆಂಡದಂತೆ’ ಎಂದು ಚಿರು ಯಾವಾಗಲೂ ಹೇಳುತ್ತಿದ್ದ. ಯಾಕೆ ಹೀಗೆ ಹೇಳುತ್ತಿದ್ದ ಅಂತ ಗೊತ್ತಿಲ್ಲ. ಈಗ ಮಗು ರೂಪದಲ್ಲಿ ಮತ್ತೆ ಬಂದಿದ್ದಾನೆ. ಅವನು ನಿಜಕ್ಕೂ ಫೀನಿಕ್ಸ್‌ ಬರ್ಡ್‌.

"

* ನನಗೆ ಮಗು ಆಗುವ ಮೊದಲೇ ಎರಡು ಮಕ್ಕಳನ್ನು ಎತ್ತಿಕೊಂಡಿರುವ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದವು. ಅದನ್ನು ನೋಡಿ ನಗು ಬರುತ್ತಿತ್ತು. ಹಾಗೆ ನೋಡಿದರೆ ಆ ಸುಳ್ಳು ಫೋಟೋಗಳಲ್ಲಿ ಹರಿದಾಡುತ್ತಿರುವಂತೆ ನನಗೂ ಟ್ವಿನ್ಸ್‌ ಆಗಲಿ ಎಂದು ಕನಸು ಕಾಣುತ್ತಿದ್ದೆ. ಕೊನೆ ಗಳಿಗೆಯಲ್ಲಿ ಮಿರಾಕಲ್‌ ಆಗಿ ಅವಳಿ ಮಕ್ಕಳು ಹುಟ್ಟಿದರೆ ಎಷ್ಟುಚೆಂದ ಎಂದುಕೊಳ್ಳುತ್ತಿದ್ದೆ.

* ಚಿರು ಈಸ್‌ ಸೆಲೆಬ್ರೇಷನ್‌. ಏನೇ ಸಮಸ್ಯೆ ಬಂದರೂ ಎದುರಿಸೋಣ ಅಂತಿದ್ದ. ನೀವು ಯಾವುದೇ ಪತ್ರಿಕಾಗೋಷ್ಟಿಯಲ್ಲಿ ನೋಡಿದರೂ ಚಿರು ನಗುತ್ತಲೇ ಇರ್ತಿದ್ದ. ಹೀಗಾಗಿ ಚಿರು ಕುಟುಂಬಕ್ಕೆ ಸಂಬಂಧಿಸಿದಂತೆ ಏನೇ ನಡೆದರೂ ಸೆಲೆಬ್ರೇಷನ್‌. ಚಿರು ಅಂದರೆ ಯಾವಾಗಲೂ ಹ್ಯಾಪಿನೆಸ್‌. ಅವರ ಸೆಲೆಬ್ರೆಷನ್‌ ನನ್ನ ಮಗನ ಮೂಲಕ ಮುಂದುವರಿಯುತ್ತದೆ.

* ನಾನು ಸೀಮಂತ ಬೇಡ ಅಂದುಕೊಂಡಿದ್ದೆ. ಆದರೆ, ಸೀಮಂತ ಮಾಡಿಕೊಂಡೆ. ಒಂದಲ್ಲ, ನಾಲ್ಕು ಸೀಮಂತ. ಇದೆಲ್ಲ ಹೇಗೆ ಎಂದರೆ ಚಿರು ಇದ್ದು ಮಾಡಿಸುತ್ತಿದ್ದಾನೆ. ಜೀವನದ ಬಗ್ಗೆ ಅವನು ಏನೆಲ್ಲ ಕನಸುಗಳು ಕಂಡಿದ್ದನೋ ಅದು ನಡೆಯುತ್ತಿದೆ. ಅದಕ್ಕೆ ನಾನು ಹೇಳಿದ್ದು, ಚಿರು ಈಸ್‌ ಎ ಸೆಲೆಬ್ರೇಷನ್‌.

* ನಾಮಕರಣ ಆದಷ್ಟುಬೇಗ ಮಾಡುತ್ತೇವೆ. ಹೆಸರು ಇನ್ನೂ ಇಟ್ಟಿಲ್ಲ. ಹೆಸರಿನ ಮೊದಲ ಅಕ್ಷರ ಹೇಳಿದ್ದಾರೆ. ಚಿರು ಮಗ ಅಲ್ವಾ, ಏನಾದರೂ ವಿಶೇಷ ಇರಬೇಕು. ಮಗು ನೋಡಿದವರು ಚಿರು ಜೆರಾಕ್ಸ್‌ ಅಂತಿದ್ದಾರೆ. ಅವನೇ ಅಂತಾರೆ. ಚಿರುನಾ ಈಗ ಎಲ್ಲರು ಮಗು ಥರಾ ನೋಡುತ್ತಿದ್ದಾರೆ. ತನ್ನ ಮಗನನ್ನ ಚಿರು ಹೇಗೆಲ್ಲ ನೋಡಿಕೊಳ್ಳಬೇಕು ಅಂದುಕೊಂಡಿದ್ದನೋ ಹಾಗೆ ಬೆಳೆಸುತ್ತೇನೆ.

* ಚಿರು ನೋಡಲು ಸಾವಿರಾರು ಮಂದಿ ಬಂದಿದ್ದರು. ಚಿರು ನಟ, ಸ್ಟಾರ್‌, ನೂರಾರು ಸಿನಿಮಾ ಮಾಡಿದ್ದಾರೆ ಅಂತ ಬಂದಿದ್ದಲ್ಲ. ಚಿರು ಒಳ್ಳೆಯ ವ್ಯಕ್ತಿ ಎಂದುಕೊಂಡು ಬಂದಿದ್ದರು. ಫ್ಯಾನ್‌ ಕ್ರೇಜ್‌ನಿಂದ ಬಂದಿಲ್ಲ, ವ್ಯಕ್ತಿತ್ವ ನೋಡಿ ಬಂದಿದ್ದು. ನನ್ನ ಮಗನೂ ಹೀಗೆ ಒಳ್ಳೆಯ ವ್ಯಕ್ತಿಯಾಗಬೇಕು. ಅವನು ಸಿನಿಮಾ ಹೀರೋ ಆಗಲಿ, ಬ್ಯುಸಿನೆಸ್‌ಮ್ಯಾನ್‌ ಆಗಲಿ. ಚಿರು ರೀತಿ ಒಳ್ಳೆಯ ವ್ಯಕ್ತಿಯಾಗಿ ಬೆಳೆಯಲಿ.

ಚಿರು- ಮೇಘನಾ ಪುತ್ರನಿಗೆ ಇಂದು ತೊಟ್ಟಿಲು ಶಾಸ್ತ್ರ ; ಸರ್ಜಾ ಕುಟುಂಬದಲ್ಲಿ ಸಂಭ್ರಮ! 

* ನಾನು ಸ್ಟ್ರಾಂಗ್‌ ಇದ್ದಿನೋ, ಇಲ್ಲವೋ ಗೊತ್ತಿಲ್ಲ. ಆ ಘಟನೆ ನಡೆದಾಗ ಬ್ಲಾಂಕ್‌ ಆಗಿದ್ದು ಮಾತ್ರ ನಿಜ. ಈಗಲೂ ಬ್ಲಾಂಕ್‌ ಆಗಿದ್ದೇನೆ. ನನ್ನ ಶಕ್ತಿ ಏನು ಅಂತ ನನಗೆ ಗೊತ್ತಿಲ್ಲ. ಚಿರು ಏನ್ಮಾಡ್ತಾನೋ ನೋಡಬೇಕು. ಅವನು ಹೇಳಿದಂತೆ ನಡೆಯುತ್ತೇನೆ. ನನ್ನ ಮಗ, ಚಿರುಗಾಗಿ ನಾನು ಗಟ್ಟಿಯಾಗಿದ್ದೇನೆ.

* ಸಿನಿಮಾ ನನ್ನ ರಕ್ತದಲ್ಲೇ ಇದೆ. ಹೀಗಾಗಿ ನಾನು ಮತ್ತೆ ನಟಿಸುತ್ತೇನೆ. ಸಾಯೋವರೆಗೂ ಸಿನಿಮಾದಲ್ಲಿ ನಟಿಸುತ್ತೇನೆ. ಸಿನಿಮಾ ಬಿಟ್ಟು ಬೇರೆ ಯೋಚನೆ ಇಲ್ಲ. ಅಲ್ಲದೆ ನನ್ನ ಇಡೀ ಕುಟುಂಬ ಸಿನಿಮಾದಲ್ಲೇ ಇದೆ. ನನಗೆ ನಟನೆ ಪ್ಯಾಷನ್‌ ಬಿಟ್ಟು ಮತ್ತೊಂದು ಗೊತ್ತಿಲ್ಲ.

* ಇಷ್ಟೆಲ್ಲ ನಾನು ಏನೇ ವಾಸ್ತವಾಗಿ, ಪ್ರಾಕ್ಟಿಕಲ್ಲಾಗಿ ಮಾತನಾಡಿದರೂ ಚಿರು ಬದುಕಿರಬೇಕು ಅಂತ ತುಂಬಾ ಅನಿಸುತ್ತದೆ. ಅವನು ಇದ್ದು ಈ ಸಂಭ್ರಮ ನೋಡಿದ್ದರೆ ಖಂಡಿತ ಕುಣಿದುಬಿಡುತ್ತಿದ್ದೆ. ಈಗ ನನ್ನ ಬೆನ್ನೆಲುಬು ನನ್ನ ಅಪ್ಪ- ಅಮ್ಮ. ಹೆತ್ತವರ ಪ್ರೀತಿ, ಮಗನ ಸ್ಫೂರ್ತಿ, ಚಿರು ನೆನಪುಗಳು, ಸಿನಿಮಾ ನಟನೆ ಎಂಬ ಭವಿಷ್ಯದ ದಾರಿಯೇ ನನ್ನ ಮುಂದೆ ನಡೆಸಲಿದೆ.

* ಇಲ್ಲಿಂದ ನನ್ನ ಜೀವನದಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ಈ ಅಧ್ಯಾಯದಲ್ಲಿ ನಾನು, ನನ್ನ ಮಗು, ಚಿರು ಮತ್ತು ಸಿನಿಮಾ ಇರುತ್ತದೆ. ಮಗು ನೋಡಿದಾಗಲೆಲ್ಲ ಚಿರು ನೆನಪಾಗುತ್ತಾನೆ. ಚಿರು ಕಂಡ ಕನಸು ನಾನು ನನ್ನ ಮಗನ ಮೂಲಕ ನನಸು ಮಾಡುತ್ತೇನೆ.

click me!