ಪ್ಲಸೆಂಟಾ ಜಾರಿದೆ ಹೆರಿಗೆ ಮಾಡಿದ್ರೆ ಅಪಾಯ; ಖಾಸಗಿ ಆಸ್ಪತ್ರೆಗಿಂತ ಸರ್ಕಾರಿ ಆಸ್ಪತ್ರೆನೇ ಬೆಸ್ಟ್‌ ಎಂದ ನಟಿ!

By Kannadaprabha NewsFirst Published Jun 26, 2022, 10:31 AM IST
Highlights
  • ಬೆಂಗಳೂರಿನ ಖಾಸಗಿ ಆಸ್ಪತ್ರೆಗಳು ಅಪಾಯಕಾರಿ ಎಂದಿದ್ದ ಹೆರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಸರಾಗ
  • ‘ಪ್ಲಸೆಂಟಾ’ ಜಾರಿದೆ, ಹೆರಿಗೆ ಮಾಡಿದ್ರೆ ತಾಯಿ, ಮಗು ಇಬ್ಬರಿಗೂ ಅಪಾಯ ಎಂದಿದ್ದ ಆಸ್ಪತ್ರೆಗಳು

ಮಂಡ್ಯ ಮಂಜುನಾಥ್

ಪ್ಯಾಟೇ ಹುಡ್ಗಿ ಹಳ್ಳಿಗೆ ಬಂದು ಹೆರಿಗೆ ಮಾಡಿಸಿಕೊಂಡ್ರು

ಇದೇನೆಂದು ಆಚ್ಚರಿಪಡುತ್ತಿದ್ದೀರಾ? ಬೆಂಗಳೂರಿನ ಖಾಸಗಿ ಆಸ್ಪತ್ರೆಯ ವೈದ್ಯ ಸಿಬ್ಬಂದಿ ಮಾಡಲಾಗದೆ ಕೈಚೆಲ್ಲಿದ ಹೆರಿಗೆಯನ್ನು ಮಂಡ್ಯ ಜಿಲ್ಲೆಯ ಕೀಲಾರವೆಂಬ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಸಿಬ್ಬಂದಿ ಮಾಡಿ ತೋರಿಸಿದ್ದಾರೆ.

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಲಕ್ಷಗಟ್ಟಲೆ ಹಣ ಸುರಿದು ತಮಗೆ ಬೇಕಾದ ರೀತಿಯಲ್ಲಿ ಚಿಕಿತ್ಸೆ ಪಡೆಯುವುದು ಸಾಮಾನ್ಯ ಸಂಗತಿ. ಆದರೆ ಮದ್ದೂರು ಮೂಲದ ಕಿರುತೆರೆ ನಟಿ ಪೂರ್ಣಿಮಾ ಹಳ್ಳಿಗೇ ಬಂದು ಹೆರಿಗೆ ಮಾಡಿಸಿಕೊಂಡಿದ್ದಾರೆ.

1 ರು. ಖರ್ಚಿಲ್ಲದೆ ಸರ್ಜರಿ. ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಸಿಗದ ಚಿಕಿತ್ಸೆ ಹಳ್ಳಿಯಲ್ಲಿ ಸಿಗುತ್ತಿದೆ. ಅದು ನನಗೆ ಈಗ ಅರಿವಾಗಿದೆ. ಕೀಲಾರ ಪ್ರಾಥಮಿಕ ಆರೋಗ್ಯ ಕೇಂದ್ರವೂ ತುಂಬಾ ಚೆನ್ನಾಗಿದೆ ಮತ್ತು ಸ್ವಚ್ಛವಾಗಿದೆ. ಸರ್ಜರಿಗೆ ಇಲ್ಲಿ ಒಳ್ಳೆಯ ವ್ಯವಸ್ಥೆ ಇದೆ. ಹಳ್ಳಿ ಆಸ್ಪತ್ರೆ ಎಂದಾಗ ಮೊದಲು ನನಗೆ ಭಯವಾಯಿತು. ಸಂಬಂಧಿಕರ ಮಾತಿನ ಮೇಲೆ ವಿಶ್ವಾಸವಿಟ್ಟು ಇಲ್ಲಿ ಬಂದೆ. ಒಂದು ರುಪಾಯಿ ಖರ್ಚಿಲ್ಲದೇ ಸರ್ಜರಿ ಆಗಿದೆ. ಆರೋಗ್ಯವಂತ ಮಗು ಹುಟ್ಟಿದ್ದು ನನಗೆ ತುಂಬಾ ಸಂತೋಷವನ್ನುಂಟು ಮಾಡಿದೆ.

-ಪೂರ್ಣಿಮಾ, ನಟಿ

‘ಪ್ಯಾಟೇ ಹುಡ್ಗಿ ಹಳ್ಳಿ ಲೈಫು’ ಎಂಬ ರಿಯಾಲಿಟಿ ಶೋನಲ್ಲಿ ಮಿಂಚಿದ್ದ ಪೂರ್ಣಿಮಾ ನಂತರ ತಂಗಾಳಿ, ಬದುಕು, ಅಕ್ಕ, ಟಿ.ಎನ್‌.ಸೀತಾರಾಂ ನಿರ್ದೇಶನದ ಮಗಳು ಜಾನಕಿ ಧಾರಾವಾಹಿ ಮತ್ತು ಕೆಲವು ಸಿನಿಮಾಗಳಲ್ಲೂ ನಟಿಸಿದ್ದರು. ಕೆಲ ವರ್ಷಗಳ ಹಿಂದೆ ವಿವಾಹವಾದ ಅವರು ಈಗ ತಾಯಿಯಾದ ಸಂಭ್ರಮದಲ್ಲಿದ್ದಾರೆ.

ಬೆಂಗಳೂರಿನಲ್ಲೇ ನೆಲೆಸಿದ್ದ ಪೂರ್ಣಿಮಾ ಗರ್ಭಿಣಿಯಾದಾಗ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದರಲ್ಲಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದರು. ಹೆರಿಗೆ ದಿನ ಹತ್ತಿರವಾಗುತ್ತಿದ್ದಂತೆ ವೈದ್ಯರು ‘ಪ್ಲಸೆಂಟಾ’ ಕೆಳಗೆ ಬಂದಿದ್ದು ಹೆರಿಗೆ ಮಾಡಿದರೆ ತಾಯಿ ಮತ್ತು ಮಗುವಿಗೆ ತೊಂದರೆಯಾಗಬಹುದು ಎಂದು ಎಚ್ಚರಿಕೆ ನೀಡಿದ್ದರು. ಗಾಬರಿಗೊಂಡ ಪೂರ್ಣಿಮಾ ಬೆಂಗಳೂರಿನ ಬೇರೆ ಪ್ರಸೂತಿ ತಜ್ಞರ ಬಳಿ ತಪಾಸಣೆ ಮಾಡಿಸಿಕೊಂಡಾಗಲೂ ‘ಪ್ಲಸೆಂಟಾ’ ಕೆಳಗೆ ಬಂದಿರುವುದರಿಂದ ಹೆರಿಗೆ ವೇಳೆ ಸಮಸ್ಯೆಯಾಗಲಿದೆ ಎಂದೇ ತಿಳಿಸಿದ್ದರು.

ಸರ್ಕಾರಿ ಆಸ್ಪತ್ರೆಯಲ್ಲೇ ಡೆಲಿವರಿ: ಮಾದರಿಯಾದ ಬಿಗ್‌ಬಾಸ್ ಹುಡುಗಿ ಅಕ್ಷತಾ

ಈ ಬಗ್ಗೆ ಕೀಲಾರ ಗ್ರಾಮದ ತಮ್ಮ ಹತ್ತಿರದ ಸಂಬಂಧಿಯೊಬ್ಬರ ಬಳಿ ಪೂರ್ಣಿಮಾ ಅಳಲು ತೋಡಿಕೊಂಡಾಗ ಕೀಲಾರ ಗ್ರಾಮದಲ್ಲೇ ಆಸ್ಪತ್ರೆಯಿದ್ದು ವೈದ್ಯರು ಚೆನ್ನಾಗಿ ನೋಡುತ್ತಾರೆ. ಎಲ್ಲ ರೀತಿಯ ಸೌಕರ‍್ಯಗಳೂ ಇದ್ದು ಇಲ್ಲಿಗೇ ಬಂದುಬಿಡು ಎಂದು ಸಂಬಂಧಿಕರು ಪೂರ್ಣಿಮಾಗೆ ಸಲಹೆ ನೀಡಿದರು.

ಬೇರೆ ಜಿಲ್ಲೆಗಳಿಂದಲೂ ಬರ್ತಾರೆ .ಮಂಡ್ಯ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಒಳ್ಳೆಯ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದಾಗಿ ರಾಮನಗರ, ಚಾಮರಾಜನಗರ, ತುಮಕೂರು ಹಾಗೂ ಹಾಸನ ಜಿಲ್ಲೆಗಳಿಂದಲೂ ಹೆರಿಗೆಗಾಗಿ ಮಂಡ್ಯ ಜಿಲ್ಲೆಗೆ ಆಗಮಿಸುತ್ತಾರೆ.

- ಡಾ. ಟಿ.ಎನ್‌.ಧನಂಜಯ, ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿ

ಅವರ ಮಾತಿನಂತೆ ಪೂರ್ಣಿಮಾ ಕೀಲಾರ ಗ್ರಾಮಕ್ಕೆ ಆಗಮಿಸಿ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡರು. ವೈದ್ಯರು ನಟಿ ಪೂರ್ಣಿಮಾಗೆ ಧೈರ‍್ಯ ಹೇಳಿ, ಸಿಸೇರಿಯನ್‌ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿದ್ದಾರೆ. ಸದ್ಯ ನಟಿ ಪೂರ್ಣಿಮಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

click me!