ಕೃಷ್ಣಂ ಪ್ರಣಯ ಸಖಿ ಚಿತ್ರ ಇದೇ 15ರಂದು ಬಿಡುಗಡೆಯಾಗುತ್ತಿದ್ದು, ಸದ್ಯ ಟ್ರೆಂಡಿಂಗ್ನಲ್ಲಿದೆ ದ್ವಾಪರ ಹಾಡು. ಇದರ ಗಾಯಕ ಯಾರು? ಇಲ್ಲಿದೆ ಇಂಟರೆಸ್ಟಿಂಗ್ ವಿಷ್ಯ...
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಮಾಳವಿಕಾ ನಾಯರ್ ಅಭಿನಯದ ಶ್ರೀನಿವಾಸ್ ರಾಜು ನಿರ್ದೇಶನದ ಕನ್ನಡ ರೋಮ್ಯಾಂಟಿಕ್ ಚಿತ್ರದ ಕೃಷ್ಣಂ ಪ್ರಣಯ ಸಖಿ ಸಿನಿಮಾ ಇದೇ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ. ಆದರೆ ಈ ಚಿತ್ರದ ದ್ವಾಪರ ಹಾಡಿನ ಜೇನ ದನಿಯೋಳೆ, ಮೀನ ಕಣ್ಣೋಳೆ ಎನ್ನುವ ಚರಣ ಸೋಷಿಯಲ್ ಮೀಡಿಯಾದಲ್ಲಿ ಇದಾಗಲೇ ಹಂಗಾಮ ಸೃಷ್ಟಿಸಿದೆ. ಈ ಹಾಡಿಗೆ ವಿವಿಧ ಕ್ಷೇತ್ರಗಳ ಸೆಲೆಬ್ರೆಟಿಗಳಿಂದ ಹಿಡಿದು ಬಹುತೇಕ ಮಂದಿ ರೀಲ್ಸ್ ಮಾಡಿದ್ದಾರೆ. ಇದರ ಲಿರಿಕ್ಸ್ ಸೇರಿದಂತೆ ಹಿನ್ನೆಲೆ ಗಾಯನ, ಗಾಯಕನ ದನಿ ಎಲ್ಲವೂ ಮೋಡಿ ಮಾಡುತ್ತಿದೆ. ಇಷ್ಟು ಸುಂದರವಾಗಿ ಹಾಡಿದ ಗಾಯಕ ಯಾರು ಗೊತ್ತಾ? ಕನ್ನಡವೇ ಬರದ ಗಾಯಕ ಇವರು! ಹೌದು. ಸಾಮಾನ್ಯವಾಗಿ ಗಾಯಕರು ತಮಗೆ ಮಾತನಾಡಲು ಬಾರದ ಭಾಷೆಗಳ ಹಾಡುಗಳನ್ನೂ ಹಾಡುತ್ತಾರೆ ಎನ್ನುವುದು ಹೊಸ ವಿಷಯವೇನಲ್ಲ. ಅದರಂತೆಯೇ ದ್ವಾಪರ ಹಾಡಿನ ಮೋಡಿ ಮಾಡಿದ ಗಾಯಕ ಪಂಜಾಬ್ ಮೂಲದ ಜಸ್ಕರಣ್ ಸಿಂಗ್.
ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರವನ್ನು ತ್ರಿಶೂಲ್ ಎಂಟರ್‌ಟೇನ್‌ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ. ರುದ್ರಪ್ಪ ನಿರ್ಮಿಸಿದ್ದಾರೆ. ಭಾರತ ಮಾತ್ರವಲ್ಲದೇ ವಿಯಾಟ್ನಂನಲ್ಲಿಯೂ ಹಲವು ಕಡೆಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಈಗಾಗಲೇ ಈ ಹಾಡು 1.2 ಕೋಟಿ ವೀಕ್ಷಣೆ ಪಡೆದಿರುವುದು ಈ ಹಾಡು ಮೋಡಿ ಮಾಡಿರುವುದನ್ನು ನೋಡಬಹುದು. ಅಷ್ಟೇ ಅಲ್ಲದೇ, ಇನ್ಸ್ಟಾಗ್ರಾಮ್ನಲ್ಲಿ ಈ ಹಾಡನ್ನು ಒಂದು ಬಾರಿಗಿಂತ ಹೆಚ್ಚು ಬಾರಿ ನೋಡಿದವರು ಲೈಕ್ ಮಾಡಿ ಎನ್ನುವ ಕಮೆಂಟ್ಗೂ 600ಕ್ಕೂ ಅಧಿಕ ಜನರು ಲೈಕ್ ಮಾಡಿರುವುದನ್ನು ನೋಡಿದರೆ, ಈ ಹಾಡಿನ ಮಹತ್ವ ತಿಳಿಯುತ್ತದೆ.
ದರ್ಶನ್ ನೆನೆದು ಕಣ್ಣೀರಾದ ತರುಣ್ ಸುಧೀರ್: ಜೈಲಿಗೆ ಹೋಗ್ತೇವೆ ಎಂದ ಸೋನಲ್ ಹೇಳಿದ್ದೇನು?
ಈ ಸಿನಿಮಾದ ಪ್ರಚಾರಕ್ಕೆ ಯಾವುದೇ ಟೀಸರ್, ಟ್ರೇಲರ್ ಬಿಡುಗಡೆಯಾಗುತ್ತಿಲ್ಲ. ದ್ವಾಪರ ದಾಟುತ ಸೇರಿದಂತೆ ಸಿನಿಮಾದ ಹಾಡುಗಳೇ ಪ್ರೇಕ್ಷಕರಿಗೆ ಆಹ್ವಾನ ಪತ್ರಿಕೆಯ ಹಾಗಿದೆ. ಅಷ್ಟು ಫೇಮಸ್ ಆಗಿದೆ ಈ ಹಾಡು. ಇನ್ನು ಜಸ್ಕರಣ್ ಸಿಂಗ್ ಕುರಿತು ಹೇಳುವುದಾದರೆ, ಇವರು ಇದಾಗಲೇ ಸರಿಗಮಪ ರಿಯಾಲಿಟಿ ಷೋನಲ್ಲಿ ಮೋಡಿ ಮಾಡಿದವರು. 'ನೀ ಸಿಗೋವರೆಗೂ..', 'ಸರಿಯಾಗಿ ನೆನಪಿದೆ..' ಮುಂತಾದ ಹಾಡುಗಳನ್ನು 'ಸರಿಗಮಪ' ವೇದಿಕೆ ಮೇಲೆ ಅವರು ಹಾಡಿದ್ದರು. ಇವರ ಗಾಯನಕ್ಕೆ ಈ ಷೋನಲ್ಲಿ ತೀರ್ಪುಗಾರರಾಗಿದ್ದ ಅರ್ಜುನ್ ಜನ್ಯ, ವಿಜಯ್ ಪ್ರಕಾಶ್, ಹಂಸಲೇಖ ಅವರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಇದೇ ಷೋನಿಂದಲೇ ಪ್ರೇರೇಪಿತರಾಗಿದ್ದ ಅರ್ಜುನ್ ಜನ್ಯ ಈಗ ಇವರಿಗೆ ಹಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ವಿ.ನಾಗೇಂದ್ರಪ್ರಸಾದ್ ಅವರು ಈ ಹಾಡನ್ನು ಬರೆದಿದ್ದಾರೆ. ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಒಟ್ಟು 'ಕೃಷ್ಣಂ ಪ್ರಣಯ ಸಖಿ' ಸಿನಿಮಾದಲ್ಲಿ 6 ಹಾಡುಗಳಿದ್ದು, ಇದಾಗಲೇ 3 ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ನಡೆದ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದ ಪ್ರೀ ರಿಲೀಸ್ ಈವೆಂಟ್ನಲ್ಲಿ ಈ ಹಾಡು ಇಷ್ಟೊಂದು ಟ್ರೆಂಡ್ ಆಗಿರುವ ಕುರಿತು ಜಸ್ಕರಣ್ ಸಿಂಗ್ ಹರ್ಷ ವ್ಯಕ್ತಪಡಿಸಿದ್ದರು. ಈ ಹಾಡು ಇಷ್ಟೆಲ್ಲಾ ಟ್ರೆಂಡಿಂಗ್ ಆಗುತ್ತದೆ ಎಂದು ಅಂದುಕೊಂಡಿರಲಿಲ್ಲ. ನನಗೆ ಖುಷಿ ಇದೆ. ನನಗೆ ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದ ಎಂದಿರೋ ಜಸ್ಕರಣ್ ಅವರು, ಕನ್ನಡತಿಯನ್ನೇ ಮದುವೆಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಜಸ್ಕರಣ್ ಸಿಂಗ್ ಕನ್ನಡ ಮಾತ್ರವಲ್ಲದೆ ತಮಿಳು, ಹಿಂದಿ, ಪಂಜಾಬಿ ಭಾಷೆಗಳಲ್ಲಿ ಹಲವು ಹಾಡುಗಳಿಗೆ ಧ್ವನಿಯಾಗಿದ್ದಾರೆ.
ಸದ್ಯ ಸೋನಲ್ ಎಂಬ ಗೊಂಬೆ ನಮ್ ಕೈಯಲ್ಲಿದ್ದಾಳಷ್ಟೇ... ಸೊಸೆ ಕುರಿತು ತರುಣ್ ಅಮ್ಮ ಹೇಳಿದ್ದೇನು?