'ಕೋಲುಮಂಡೆ' ಹಾಡು ಅಶ್ಲೀಲ; ಚಂದನ್ ಶೆಟ್ಟಿ ವಿರುದ್ಧ ಮತ್ತೊಂದು ಆರೋಪ!

By Suvarna NewsFirst Published Aug 25, 2020, 1:01 PM IST
Highlights

ಕನ್ನಡ rapper ಚಂದನ್ ಶೆಟ್ಟಿ 'ಕೋಲುಮಂಡೆ ಜಂಗಮ ದೇವ' ಹಾಡನ್ನು ತಿರುಚಿದ್ದು, ಹಳೆ ಮೈಸೂರು ಭಾಗದ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಕನ್ನಡ ಚಿತ್ರರಂಗ ಕಂಡಂತ ಅದ್ಭುತ rapper ಅಂದ್ರೆ ಚಂದನ್ ಶೆಟ್ಟಿ. ಕೂತಲ್ಲಿಯೇ ತಾಳ ಹಾಕುತ್ತಾ, ಪದಗಳನ್ನು ಜೋಡಿಸಿ ಕವನ ಕಟ್ಟುತ್ತಾರೆ. ಕಟ್ಟಿದ ಕವನಕ್ಕೆ ಟ್ಯೂನ್ ರೆಡಿ ಮಾಡಿ, ಹಾಡುತ್ತಾರೆ. ಅದು ಎಲ್ಲರ ಮನಸೂರೆಗೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಇದಕ್ಕೆ ಬಿಗ್ ಬಾಸ್‌ ಸೀಸನ್‌ 5 ಸಾಕ್ಷಿ. ಆದರೀಗ ಕೆಲವು ದಿನಗಳ ಹಿಂದೆ ರಿಲೀಸ್ ಮಾಡಲಾಗಿದ್ದ 'ಕೋಲುಮಂಡೆ' ಹಾಡನ್ನು ಜನರು ವಿರೋಧಿಸುತ್ತಿದ್ದಾರೆ.

ಹೌದು! ಶಿವರಾಜ್‌ಕುಮಾರ್‌ ಅಭಿನಯಿಸಿದ 'ಜನುಮದ ಜೋಡಿ' ಚಿತ್ರದ 'ಕೋಲುಮಂಡೆ ಜಂಗಮ ದೇವ' ಹಾಡು ಸೂಪರ್ ಹಿಟ್ ಆಗಿತ್ತು. ಶಿವನ ಅವತಾರವಾದ, ಜನಪದ ದೈವ ಜಂಗಮನನ್ನು ಈ ಹಾಡಿನಲ್ಲಿ ಗುಣಗಾನ ಮಾಡಲಾಗಿದೆ. ಅದು ಜಂಗಮನ ಭಕ್ತರಿಗೆ ಅಚ್ಚುಮೆಚ್ಚನ ಗೀತೆಯಾಗಿತ್ತು. ಈಗ ಅದೇ ಹಾಡಿಗೆ ಮಾರ್ಡನ್ ಟಚ್‌ ಕೊಟ್ಟು ಚಂದನ್ ಶೆಟ್ಟಿ ಹೆಜ್ಜೆ ಹಾಕಿದ್ದಾರೆ. ಹಾಡು ಬಿಡುಗಡೆಯಾದ ಮೂರು ದಿನಕ್ಕೇ ಯೂಟ್ಯೂಬಿನಲ್ಲಿ 3 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಆದರೆ ಹಾಡನ್ನು ಅಶ್ಲೀಲವಾಗಿ ಚಿತ್ರೀಕರಿಸಿದ್ದು, ಜಂಗಮನನ್ನು ಅವಮಾನಿಸಲಾಗಿದೆ ಎಂದು ಹಳೇ ಮೈಸೂರು ಭಾಗದ ಜಂಗಮ ಭಕ್ತರು ಆರೋಪಿಸಿದ್ದಾರೆ. ತಮ್ಮ ಭಾವನೆಗೆ ಚಂದನ್ ಧಕ್ಕೆ ತಂದಿದ್ದಾರೆ ಎಂದು ಹೇಳುತ್ತಿದ್ದಾರೆ.

ಮಲೇಮಹಾದೇಶ್ವರ ಸ್ವಾಮಿ ಇತಿಹಾಸವನ್ನು ಹೇಳುವ ಈ ಹಾಡಿನಲ್ಲಿ ಸಂಕವ್ವ ಪಾತ್ರವನ್ನು ಅಶ್ಲೀಲವಾಗಿ ತೋರಿಸಲಾಗಿದೆ. ಇತಿಹಾಸವನ್ನು ತಿರುಚಲಾಗಿದೆ. ಶರಣೆ ಸಂಕವ್ವ ಅವರನ್ನು ಅಶ್ಲೀಲವಾಗಿ ಪ್ರದರ್ಶಿಸಿರುವ ಕಾರಣ ಹಾಡನ್ನು ಯುಟ್ಯೂಬ್‌ನಿಂದ ತೆಗೆಯಬೇಕೆಂದು ಆಗ್ರಹಿಸಿದ್ದಾರೆ. ಸೊಗಸಾದ ಜಾನಪದ ಹಾಡನ್ನು ತಮ್ಮ ಲಾಭಕ್ಕೆ ಬಳಸಿಕೊಂಡಿರುವುದು ತಪ್ಪು. ಇದರಿಂದ ಚಂದನ್ ಶೆಟ್ಟಿಯ ವಿಕೃತಿ ಮನಸ್ಸು ಅನಾವರಣಗೊಂಡಿದೆ, ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಜೋಗಿ ಮಂಜು ಅವರು ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.

'ಹಿಂದು ಸಂಸ್ಕೃತಿ ಮತ್ತು ಭಾವನೆಗೆ ಧಕ್ಕೆ ಮಾಡಿ ಮಲೈ ಮಹದೇಶ್ವರ ಇತಿಹಾಸವನ್ನು ತಿರುಚುವುದು ಸರಿ ಅಲ್ಲ. ಇಂಥ ವಿಕೃತಿಯ ಮನಸ್ಸಿನ ವ್ಯಕ್ತಿಯ ಆಟಕ್ಕೆ ಆನಂದ್ ಆಡಿಯೋ ಕಂಪನಿ ಉತ್ತೇಜನ ಕೊಟ್ಟಿರುವುದೂ ಸರಿಯಲ್ಲ. ಇವರು ವಿಕೃತಿ ಚಾಳಿ ಮುಂದುವರಿದರೆ ಇವರ ಮನೆ ಮುಂದೆ ಧರಣಿ ಕೂರಲಾಗುತ್ತದೆ. ರಾಜ್ಯದಲ್ಲಿ ಇವರ ಕಾರ್ಯಕ್ರಮಗಳನ್ನು ಸಾರ್ವಜನಿಕರು ಧಿಕ್ಕರಿಸಬೇಕಾಗುತ್ತದೆ, ಎಚ್ಚರ,' ಎಂದು ಜೋಗಿ ಮಂಜು ಬರೆದುಕೊಂಡಿದ್ದಾರೆ.

ಕ್ಷಮೆ ಕೋರಿದ ಚಂದನ್:
ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಚಂದನ್ ಈ ಬಗ್ಗೆ ಕ್ಷಮೆಯಾಚಿಸಿದ್ದಾರೆ. ಚಂದನ್ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿರುವುದು ಇದೇ ಮೊದಲೇನಲ್ಲ. ಕೆಲವು ತಿಂಗಳ ಹಿಂದೆ ರಿಲೀಸ್ ಆದ 'ಪೊಗರು' ಚಿತ್ರದ ಕರಾಬು ಹಾಡಿನ ಬಗ್ಗೆಯೂ ಆರೋಪ ಕೇಳಿ ಬಂದಿತ್ತು. ತಮಿಳು ಭಾಷೆಯ ಹಳೆ ಹಾಡನ್ನು ಕನ್ನಡದಲ್ಲಿ ಬಳಸಿಕೊಂಡಿದ್ದಾರೆ. ಇದು ಅವರ ಹಾಡಲ್ಲ ಎಂದು ಹೇಳಲಾಗಿತ್ತು. ಆಗಲೂ ಚಂದನ್ ಶೆಟ್ಟಿ ಹಾಡಿಗೆ ಟ್ಯೂನ್ ಹಾಕಿರುವ ಬಗ್ಗೆ ನೆಟ್ಟಿಗರಿಗೆ ಸ್ಪಷ್ಟನೆ ನೀಡಬೇಕಾಯ್ತು. 

ನೆಟ್ಟಿಗರ ಗಮನ ಸೆಳೆದ ಗೃಹಿಣಿ ಬಿಗ್ ಬಾಸ್‌ ನಿವೇದಿತಾ ಗೌಡ ಪೋಟೋ! 

ಅಷ್ಟೇ ಅಲ್ಲದೇ ಯುವ ದಸರಾ ವೇದಿಕೆ ಮೇಲೆಯೇ ನಿವೇದಿತಾ ಗೌಡ ಅವರಿಗೆ ಪ್ರಪೋಸ್ ಮಾಡಿದ ಕಾರಣದಿಂದ, ಚಂದನ್ ನಡೆಗೆ ವಿಪರೀತ ಆಕ್ರೋಶ ವ್ಯಕ್ತವಾಗಿತ್ತು. ದಸರಾದಂಥ ವೇದಿಕೆಯನ್ನು ಇಂಥ ಕೆಲಸಗಳಿಗೆ ಬಳಸಿದ್ದಕ್ಕೆ ವೀರೋಧ ವ್ಯಕ್ತವಾಗಿದ್ದು, ಕ್ಷಮೆ ಕೋರಬೇಕೆಂದು ಪ್ರತಿಭಟನೆಗಳೂ ನಡೆದಿದ್ದವು. ನಂತರ ಚಂದನ್ ಮಾಧ್ಯಮದ ಮುಂದೆ ಬಂದು, ಜನರಿಗೆ ಮನೋರಂಜಿಸಲು ಇಂಥದ್ದೊಂದು ಕಾರ್ಯಕ್ಕೆ ಮುಂದಾಗಿದ್ದು, ಇದು ಅಕ್ಷಮ್ಯ ಅಪರಾಧವಾಗುತ್ತದೆ ಎಂದು ಭಾವಿಸಿರಲಿಲ್ಲ. ಇದಕ್ಕಾಗಿ ಸಾರ್ವಜನಿಕರಲ್ಲಿ ಕ್ಷಮೆಯಾಚಿಸುತ್ತೇದನೆಂದು, ಹೇಳಿದ್ದರು.

 

click me!