
ನೆಲ, ಜಲ, ಭಾಷೆ ಅಂತ ಬಂದಾಗ ಕನ್ನಡ ಸಿನಿಮಾರಂಗ ಒಂದು ಹೆಜ್ಜೆ ಮುಂದೆ ಇರುತ್ತೆ, ಸದಾ ಬೆಂಬಲವಾಗಿ ನಿಂತಿದೆ. ನಮ್ಮ ಭಾಷೆ, ನೆಲಕ್ಕೆ ಅವಮಾನ ಆದರೆ ಬಹು ಬೇಗ ಧ್ವನಿ ಎತ್ತುತ್ತಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೂ ಕನ್ನಡ, ಕನ್ನಡ ಸಿನಿಮಾರಂಗದ ಮೇಲೆ ಅಪಾರ ಪ್ರೀತಿ, ವಿಶ್ವಾಸ. ಬೇರೆ ಬೇರೆ ವೇದಿಕೆಗಳಲ್ಲಿ ಕಿಚ್ಚ ಕನ್ನಡತನ ಮೆರೆದಿದ್ದಾರೆ. ಕನ್ನಡದಲ್ಲೇ ಮಾತು ಪ್ರಾರಂಭಿಸುವ ಕಿಚ್ಚ ಇದೀಗ ಮುಂಬೈನಲ್ಲಿ ನಿಂತು ಹಿಂದಿ ಮಂದಿಗೆ ಕನ್ನಡ ಕಲಿಯಿರಿ ಎಂದು ನೇರವಾಗಿ ಹೇಳಿದ್ದಾರೆ. ಕನ್ನಡದ ವಿಚಾರಕ್ಕೆ ಕಳೆದ ವರ್ಷ ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಮತ್ತು ಕಿಚ್ಚ ಸುದೀಪ್ ನಡುವೆ ನಡೆದ ಮಾತಿನ ವಾದ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. 'ಹಿಂದಿ ರಾಷ್ಟ್ರ ಭಾಷೆ’ ಎಂದು ಹೇಳಿದ್ದ ಅಜಯ್ ದೇವಗನ್‌ಗೆ ಸುದೀಪ್ ಟ್ವಿಟರ್ನಲ್ಲೇ ಸರಿಯಾಗಿ ತಿರುಗೇಟು ಕೊಟ್ಟಿದ್ದರು. ಕಿಚ್ಚನ ಟ್ವೀಟ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಅಷ್ಟೆಯಲ್ಲ ಸುದೀಪ್ ಅನೇಕ ಬಾರಿ ಕನ್ನಡ್, ಕನ್ನಡ್ ಎಂದು ಮಾತನಾಡುವ ಹಿಂದಿ ಮಂದಿಯನ್ನು ತಿದ್ದಿದ್ದಾರೆ. ಕನ್ನಡ್ ಅಲ್ಲ, ಕನ್ನಡ ಎಂದು ಹೇಳಿಕೊಟ್ಟಿದ್ದಾರೆ. ಇದೀಗ ಮತ್ತೆ ಮುಂಬೈನಲ್ಲಿ ಕನ್ನಡದ ಬಗ್ಗೆ ಮಾತನಾಡಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.
ಸುದೀಪ್ ಸದ್ಯ ಕೆಸಿಸಿ ಮತ್ತು ಸಿಸಿಎಲ್ ಮುಗಿಸಿ ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಕಿಚ್ಚ ಸದ್ಯ ಬಹುನಿರೀಕ್ಷೆಯ ಕಬ್ಜ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಮತ್ತು ಆರ್ ಚಂದ್ರು ಕಾಂಬಿನೇಷನ್ ನಲ್ಲಿ ಬಂದ ಕಬ್ಜ ಸಿನಿಮಾದಲ್ಲಿ ಸುದೀಪ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ ಸಿನಿಮಾತಂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರಚಾರ ಮಾಡುತ್ತಿದ್ದೆ. ಇತ್ತೀಚಿಗಷ್ಟೆ ಸಿನಿಮಾತಂಡ ಮುಂಬೈಗೆ ಎಂಟ್ರಿ ಕೊಟ್ಟಿತ್ತು. ಮುಂಬೈ ಈವೆಂಟ್‌ನಲ್ಲಿ ಸುದೀಪ್ ಆಡಿದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಿವಣ್ಣ ಜೊತೆ ಸಿನಿಮಾ ಮಾಡುತ್ತೇನೆ: ಉಪೇಂದ್ರ
ಕಬ್ಜ ಈವೆಂಟ್ ನಲ್ಲಿ ಸುದೀಪ್, ಶ್ರೀಯಾ ಶರಣ್, ಉಪೇಂದ್ರ, ಆರ್. ಚಂದ್ರು ಇದ್ದರು. ಆಗ ಆರ್. ಚಂದ್ರು ಅವರಿಗೆ ಸಿನಿಮಾದ ಬಗ್ಗೆ ಹೇಳುವಂತೆ ನಿರೂಪಕರು ಹಳಿದರು. ಆರ್ ಚಂದ್ರು ಕನ್ನಡದಲ್ಲಿ ಮಾತನಾಡಿದರು. ‘ಕಬ್ಜ ನನ್ನ ಸಿನಿಮಾ ಮಾತ್ರವಲ್ಲ, ಟೀಂವರ್ಕ್. ಇದು ಒಳ್ಳೆಯ ತಾಂತ್ರಿಕವರ್ಗದಿಂದ ಆಗಿರೋ ಸಿನಿಮಾ’ ಎಂದು ಸಿನಿಮಾ ಬಗ್ಗೆ ಮತ್ತು ತಂಡದ ಬಗ್ಗೆ ಮಾತನಾಡಿದರು. ಮುಂಬೈ ಮಂದಿಗೆ ಆರ್. ಚಂದ್ರು ಹೇಳಿದ್ದೇನು ಎಂಬುದು ಅರ್ಥವಾಗಿಲ್ಲ. ಹಾಗಾಗಿ ಸುದೀಪ್, ಚಂದ್ರು ಹೇಳಿದ್ದನ್ನು ಭಾಷಾಂತರ ಮಾಡ್ತೀನಿ ಎಂದು ಮೈಕ್ ತೆಗೆದುಕೊಂಡರು. ‘ಅವರು ಹೇಳಿದ್ದು ಇಷ್ಟೇ. ಬೇಗ ಕನ್ನಡ ಕಲಿಯಿರಿ ಎಂದು’ ಎಂದು ಕಿಚ್ಚ ಹೇಳಿದರು. ಇದನ್ನು ಕೇಳಿ ಅಲ್ಲಿದ್ದವರೆಲ್ಲ ದೊಡ್ಡದಾಗಿ ನಕ್ಕರು. ಸುದೀಪ್ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರದಾಡುತ್ತಿದೆ. ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
'ಬಿಲ್ಲಾ ರಂಗ ಬಾಷಾ' ಆಗಿ ಬರ್ತಿದ್ದಾರೆ ಕಿಚ್ಚ; ಯಾವಾಗ ಚಿತ್ರೀಕರಣ?
ಕಬ್ಜ ಸಿನಿಮಾ ಬಗ್ಗೆ
ಸ್ಯಾಂಡಲ್ ವುಡ್ ಮಾತ್ರವಲ್ಲದೇ ಭಾರತೀಯ ಸಿನಿಮಾರಂಗದಲ್ಲಿ ನಿರೀಕ್ಷೆ ಮತ್ತು ಕತೂಹಲ ಮೂಡಿಸಿರುವ ಕಬ್ಜ ಸಿನಿಮಾ ಇದೇ ಮಾರ್ಚ್ 17ರಂದು ತೆರೆಗೆ ಬರುತ್ತಿದೆ. ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ಕಬ್ಜ ಹೇಗಿದೆ ಎಂದು ನೋಡಲು ಅಭಿಮಾನಿಗಳು ತುಂದಿಗಾಲಿನಲ್ಲಿ ನಿಂತಿದ್ದಾರೆ. ಎಲ್ಲಾ ಕುತೂಹಲ ಮತ್ತು ನಿರೀಕ್ಷೆಗಳಿಗೆ ಮಾರ್ಚ್ 17ರಂದು ತೆರೆ ಬೀಳಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.