
ನಟ ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದೆ. ಈ ಚಿತ್ರದ ನಿರ್ದೇಶಕ ಗುರುದತ್ ಗಾಣಿಗ್ ಹಾಗೂ ಪ್ರಜ್ವಲ ದೇವರಾಜ್ ಮಧ್ಯೆ ಸಿನಿಮಾ ವಿಚಾರವಾಗಿ ಮನಸ್ತಾಪ ಆಗಿದೆ. ಈಗ ಪ್ರಜ್ವಲ್ ಅಧಿಕೃತ ಪ್ರಕಟಣೆ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ "ಕರಾವಳಿ" ಚಿತ್ರದ ನಿರ್ಮಾಣ ಸಂಸ್ಥೆ ಗುರುದತ್ ಗಾಣಿಗ ಫಿಲ್ಡ್ ಹಾಗೂ ನಿರ್ದೇಶಕ ಗುರುದತ್ ಗಾಣಿಗ ಅವರಿಂದ ಸಾರ್ವಜನಿಕವಾಗಿ ನೀಡಲಾಗುತ್ತಿರುವ ಹೇಳಿಕೆಗಳ ಹಿನ್ನೆಲೆಯಲ್ಲಿ, ನನ್ನ ಅಭಿಮಾನಿಗಳು, ಮಾಧ್ಯಮ ಮಿತ್ರರು ಹಾಗೂ ಕನ್ನಡ ಚಿತ್ರರಂಗದ ಬಂಧುಗಳ ಮುಂದೆ ಕೆಲವು ವಾಸ್ತವಾಂಶಗಳನ್ನು ಸ್ಪಷ್ಟಪಡಿಸುವುದು ಅಗತ್ಯವೆಂದು ನಾನು ಭಾವಿಸುತ್ತೇನೆ
"ಕರಾವಳಿ" ಚಿತ್ರದ ಟ್ರೈಲರ್ ಬಿಡುಗಡೆಯಾದ ಸಂದರ್ಭದಲ್ಲಿ, ನನ್ನ ಯಾವುದೇ ಪೂರ್ವ ಮಾಹಿತಿ, ಅನುಮತಿ ಅಥವಾ ಒಪ್ಪಿಗೆಯಿಲ್ಲದೆ ನನ್ನ ಪಾತ್ರಕ್ಕೆ ಮತ್ತೊಬ್ಬರಿಂದ ಡಬ್ಬಿಂಗ್ ಮಾಡಿಸಿರುವ ವಿಚಾರ ನನಗೆ ತಿಳಿಯಿತು. ಅದೇ ಸಮಯದಲ್ಲಿ, ನನಗೆ ಒಪ್ಪಿಗೆಯಾದ ಸಂಭಾವನೆಯೂ ಸಂಪೂರ್ಣವಾಗಿ ಪಾವತಿಯಾಗಿರಲಿಲ್ಲ. ಈ ಎರಡೂ ಕಾರಣಗಳಿಂದಲೇ ನಾನು ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.
ಇದರ ನಂತರ, ಗುರುದತ್ ಗಣಿಗ ಫಿಲ್ಮ ಹಾಗೂ ನಿರ್ದೇಶಕ ಗುರುದತ್ ಗಣಿಗ ಅವರು ಈ ವಿವಾದಕ್ಕೆ ನನ್ನ ದೈಹಿಕ ರೂಪಾಂತರ ಅಥವಾ ಸೆಕ್ಸ್-ಪ್ಯಾಕ್ ಲುಕ್ ಕಾರಣ ಎಂಬ ರೀತಿಯಲ್ಲಿ ಸಾರ್ವಜನಿಕವಾಗಿ ನೀಡಿರುವ ಹೇಳಿಕೆಗಳು ನನ್ನ ಗಮನಕ್ಕೆ ಬಂದಿವೆ. ಈ ಕುರಿತು ನಾನು ಸ್ಪಷ್ಟಪಡಿಸಲು ಬಯಸುವುದು ಏನೆಂದರೆ, ಈ ವಿಷಯಕ್ಕೆ ನನ್ನ ದೈಹಿಕ ರೂಪಾಂತರದೊಂದಿಗೆ ಯಾವುದೇ ಸಂಬಂಧವಿಲ್ಲ. ನನ್ನ ಯಾವುದೇ ಅನುಮತಿಯಿಲ್ಲದ ನನ್ನ ಪಾತ್ರಕ್ಕೆ ಮತ್ತೊಬ್ಬರಿಂದ ಡಬ್ಬಿಂಗ್ ಮಾಡಿರುವುದು ಹಾಗೂ ಆ ಸಂದರ್ಭದಲ್ಲಿ ನನ್ನ ಸಂಭಾವನೆ ಸಂಪೂರ್ಣವಾಗಿ ಪಾವತಿಯಾಗಿರದಿರುವುದೇ ಈ ವಿಷಯದ ಮೂಲ ಕಾರಣಗಳಾಗಿವೆ.
ಮೊದಲ ದಿನದಿಂದಲೂ ನನ್ನ ನಿಲುವು ಒಂದೇ ಆಗಿತ್ತು. ನನಗೆ ಬಾಕಿ ಇದ್ದ ಸಂಭಾವನೆಯನ್ನು ಸಂಪೂರ್ಣವಾಗಿ ಪಾವತಿಸಿದ ತಕ್ಷಣ, ಚಿತ್ರದ ಡಬ್ಬಿಂಗ್ ಪೂರ್ಣಗೊಳಿಸಲು ಹಾಗೂ ಚಿತ್ರದ ಪಚಾರ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ಭಾಗವಹಿಸಲು ನಾನು ಸಿದ್ಧನಿದ್ದೇನೆ ಎಂದು ಸಂಬಂಧಪಟ್ಟವರಿಗೆ ಸ್ಪಷ್ಟವಾಗಿ ತಿಳಿಸಿದ್ದ. - ಟ್ರೈಲರ್ ಬಿಡುಗಡೆಯಾದ ಮರುದಿನ, ಜಿಎಸ್‌ಟಿ ಮೊತ್ತವನ್ನು ಹೊರತುಪಡಿಸಿ ನನ್ನ ಬಾಕಿ ಸಂಭಾವನೆಯನ್ನು ಪಾವತಿಸಲಾಯಿತು. ಅದರ ನಂತರ, ಗುರುದತ್ ಗಣಿಗ ಫಿಲ್ಡ್ ವತಿಯಿಂದ ನನ್ನ ವ್ಯವಸ್ಥಾಪಕರಿಗೆ ನನ್ನ ಡಬ್ಬಿಂಗ್ ಸೇವೆ ಹಾಗೂ ಚಿತ್ರದ ಪುಚಾರದಲ್ಲಿ ನನ್ನ ಭಾಗವಹಿಸುವಿಕೆ ಇನ್ನು ಮುಂದೆ ಅಗತ್ಯವಿಲ್ಲ ಎಂದು ತಿಳಿಸಲಾಯಿತು. ಹೀಗಾಗಿ, ಚಿತ್ರದ ಡಬ್ಬಿಂಗ್ ಹಾಗೂ ಪ್ರಚಾರದಲ್ಲಿ ನಾನು ಭಾಗವಹಿಸದಿರುವುದು ನನ್ನ ನಿರ್ಧಾರವಲ್ಲ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ.
ಇದರ ಜೊತೆಗೆ, ನನ್ನ ಧ್ವನಿ ಈ ಪಾತ್ರಕ್ಕೆ ಸೂಕ್ತವಲ್ಲ ಎಂಬ ರೀತಿಯ ಸಾರ್ವಜನಿಕ ಹೇಳಿಕೆಗಳೂ ನನ್ನ ಗಮನಕ್ಕೆ ಬಂದಿವೆ. ಆದರೆ, ನನ್ನ ಪಾತ್ರಕ್ಕೆ ಡಬ್ಬಿಂಗ್ ಮಾಡುವ ಅವಕಾಶವನ್ನು ನನಗೆ ನೀಡದೇ, ಅಂತಹ ಅಭಿಪ್ರಾಯವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿರುವುದು ನನಗೆ ಸಹಜವಾಗಿಯೇ ನೋವುಂಟು ಮಾಡಿದೆ. ಎರಡು ದಶಕಗಳಿಗೂ ಹೆಚ್ಚು ಕಾಲ ಕನ್ನಡ ಚಿತ್ರರಂಗದಲ್ಲಿ ನಾನು ಗಳಿಸಿರುವ ವೃತ್ತಿಪರ ಗೌರವ, ವಿಶ್ವಾಸ ಮತ್ತು ಪ್ರೇಕ್ಷಕರ ಪ್ರೀತಿಯನ್ನು ನಾನು ಅತ್ಯಂತ ಅಮೂಲ್ಯವಾಗಿ ಪರಿಗಣಿಸುತ್ತೇನೆ. ಆದ್ದರಿಂದ ಈ ಬೆಳವಣಿಗೆಗಳು ನನಗೆ ವೈಯಕ್ತಿಕವಾಗಿಯೂ ಹಾಗೂ ವೃತ್ತಿಪರವಾಗಿಯೂ ಬೇಸರವನ್ನುಂಟು ಮಾಡಿವೆ.
ಈ ಹೇಳಿಕೆಯ ಮೂಲಕ ನನ್ನ ನಿಲುವನ್ನು ಸಾರ್ವಜನಿಕರ ಮುಂದೆ ಸ್ಪಷ್ಟಪಡಿಸುವ ಉದ್ದೇಶ ಮಾತ್ರ ನನ್ನದು. ಈ ವಿಚಾರಕ್ಕೆ ಸಂಬಂಧಿಸಿದಂತೆ ನನ್ನಿಂದ ಸಾರ್ವಜನಿಕವಾಗಿ ನಡೆಯುವ ಯಾವುದೇ ಚರ್ಚೆ, ಪ್ರತಿಕ್ರಿಯೆ ಅಥವಾ ವಾಗ್ವಾದಕ್ಕೆ ಇಲ್ಲಿಯೇ ಪೂರ್ಣ ವಿರಾಮ ಹಾಕುತ್ತಿದ್ದೇನೆ. ಇನ್ನು ಮುಂದೆ ಈ ವಿಷಯದ ಕುರಿತು ನಾನು ಯಾವುದೇ ಸಾರ್ವಜನಿಕ ಪ್ರತಿಕ್ರಿಯೆ ನೀಡುವುದಿಲ್ಲ.
ಒಬ್ಬ ಕಲಾವಿದನಾಗಿ ನನ್ನ ಮೊದಲ ಆದ್ಯತೆ ಯಾವಾಗಲೂ ಕನ್ನಡ ಸಿನಿಮಾ, ವೈಯಕ್ತಿಕ ಭಿನ್ನಾಭಿಪ್ರಾಯಗಳು ಇಡೀ ಚಿತ್ರತಂಡದ ಪರಿಶ್ರಮವನ್ನು ಮರೆಮಾಚಬಾರದು ಎಂಬುದು ನನ್ನ ದೃಢ ನಂಬಿಕೆ. ಆದ್ದರಿಂದ, "ಕರಾವಳಿ” ಚಿತ್ರದ ಸಂಪೂರ್ಣ ತಂಡಕ್ಕೆ ನನ್ನ ಹೃತ್ತೂರ್ವಕ ಶುಭಹಾರೈಕೆಗಳನ್ನು ತಿಳಿಸುತ್ತೇನೆ. ನನ್ನ ಅಭಿಮಾನಿಗಳು ಹಾಗೂ ಕನ್ನಡ ಸಿನಿಪ್ರೇಕ್ಷಕರು ಚಿತ್ರಮಂದಿರಗಳಿಗೆ ತೆರಳಿ ಚಿತ್ರವನ್ನು ವೀಕ್ಷಿಸಿ, ಈ ಚಿತ್ರಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬ ಕಲಾವಿದ, ತಂತ್ರಜ್ಞ ಹಾಗೂ ಸಿಬ್ಬಂದಿಯನ್ನು ಪ್ರೋತ್ಸಾಹಿಸುವಂತೆ ಹತ್ತೂರ್ವಕವಾಗಿ ವಿನಂತಿಸುತ್ತೇನೆ.
ಈ ಕಷ್ಟದ ಸಮಯದಲ್ಲೂ ನನ್ನೊಂದಿಗೆ ನಿಂತು ಪ್ರೀತಿ, ವಿಶ್ವಾಸ ಮತ್ತು ಬೆಂಬಲ ವ್ಯಕ್ತಪಡಿಸಿದ ನನ್ನ ಅಭಿಮಾನಿಗಳು, ಮಾಧ್ಯಮ ಮಿತ್ರರು ಹಾಗೂ ಕನ್ನಡ ಚಿತ್ರರಂಗದ ಬಂಧುಗಳಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು. ನಿಮ್ಮ ಪ್ರೀತಿ ಮತ್ತು ಆಶೀರ್ವಾದವೇ ನನ್ನ ದೊಡ್ಡ ಶಕ್ತಿ. - ಪ್ರಜ್ವಲ್ ದೇವರಾಜ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.