ಚಿತ್ರದ ಫಸ್ಟ್‌ಲುಕ್, ಪೋಸ್ಟರ್ ಮತ್ತು ಹಾಡುಗಳಿಂದಲೇ ಸದ್ದು ಮಾಡಿದ 'ಲವ್ ಮಾಕ್ಟೇಲ್ 2' ಚಿತ್ರದ ರಿಲೀಸ್ ದಿನಾಂಕವನ್ನು ಸಾಮಾಜಿಕ ಜಾಲತಾಣದಲ್ಲಿ ನಟ ಡಾರ್ಲಿಂಗ್ ಕೃಷ್ಣ ಹಂಚಿಕೊಂಡಿದ್ದಾರೆ.
'ಮದರಂಗಿ' (Madarangi) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಟ ಡಾರ್ಲಿಂಗ್ ಕೃಷ್ಣ (Darling Krishna) 'ಲವ್ ಮಾಕ್ಟೇಲ್' (Love Mocktail) ಚಿತ್ರದ ಯಶಸ್ಸಿನ ನಂತರ ಮತ್ತೊಂದು ಭಾಗ 'ಲವ್ ಮಾಕ್ಟೇಲ್ 2'(Love Mocktail 2) ಚಿತ್ರ ಮಾಡುವುದಾಗಿ ಘೋಷಣೆ ಮಾಡಿ, ಚಿತ್ರದ ಫಸ್ಟ್‌ಲುಕ್, ಪೋಸ್ಟರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿದ್ದರು. ಇದರಿಂದ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಮೂಡಿದ್ದು, ಚಿತ್ರ ಯಾವಾಗ ತೆರೆಗೆ ಬರುತ್ತದೆ ಎಂದು ಕಾಯುತ್ತಿದ್ದರು. ಇದೀಗ ಚಿತ್ರದ ನಾಯಕ ಡಾರ್ಲಿಂಗ್ ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ (Social Media) ಚಿತ್ರದ ಬಗ್ಗೆ ಖುಷಿಯ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.
ಹೌದು! 'ಲವ್ ಮಾಕ್ಟೇಲ್ 2' ಚಿತ್ರದ ಬಿಡುಗಡೆ ದಿನಾಂಕವನ್ನು ಡಾರ್ಲಿಂಗ್ ಕೃಷ್ಣ ಘೋಷಿಸಿದ್ದಾರೆ. ಇತ್ತೀಚೆಗೆ ಕೃಷ್ಣ ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ 'ಲವ್ ಮಾಕ್ಟೇಲ್ 2'ಚಿತ್ರದ ಬಿಡುಗಡೆ ದಿನಾಂಕವನ್ನು ಡಿಸೆಂಬರ್ 18ರಂದು ಸಂಜೆ 5 ಗಂಟೆಗೆ ಪ್ರಕಟಿಸಲಾಗುವುದು. ನಿಮಗೇನಾದರೂ ಚಿತ್ರದ ರಿಲೀಸ್ ದಿನಾಂಕ ಗೊತ್ತಿದ್ದರೆ ಊಹಿಸಿ ಎಂದು ನೇರವಾಗಿ ಸಿನಿಪ್ರಿಯರಿಗೆ ಹೇಳಿದ್ದರು. ಇದೀಗ ಡಾರ್ಲಿಂಗ್ ಕೃಷ್ಣ 'ನೀವೆಲ್ಲರೂ ಊಹಿಸಿರುವ ಪ್ರಕಾರ 'ಲವ್ ಮಾಕ್ಟೇಲ್ 2' ಚಿತ್ರವು ಮುಂದಿನ ವರ್ಷ ಫೆಬ್ರವರಿ 11ರಂದು ರಾಜ್ಯಾದ್ಯಂತ ಚಿತ್ರಮಂದಿರಗಳ ಬೆಳ್ಳಿ ಪರದೆ ಮೇಲೆ ರಾರಾಜಿಸಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
Love Mocktail 2: ಡಾರ್ಲಿಂಗ್ ಕೃಷ್ಣ ಮೆಚ್ಚಿನ 'ದೂರ ಹೋದರೂ ನನ್ನೊಳವೇ' ಹಾಡು ರಿಲೀಸ್
ಇತ್ತೀಚೆಗೆ ಚಿತ್ರದ 'ಸಂಚಾರಿಯಾಗು ನೀ' (Sanchariyagu Nee) ಲಿರಿಕಲ್ ವಿಡಿಯೋ ಸಾಂಗ್ ಜೆಂಕಾರ್ ಮ್ಯೂಸಿಕ್ (Jhankar Music) ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಸಂಗೀತಪ್ರಿಯರಿಂದ ಮೆಚ್ಚುಗೆಯನ್ನು ಪಡೆದಿತ್ತು. ರಾಘವೇಂದ್ರ ಕಾಮತ್ (Raghavendra Kamath) ಈ ಹಾಡಿಗೆ ಸಾಹಿತ್ಯ ರಚಿಸಿದ್ದು, ನಕುಲ್ ಅಭಯಂಕರ್ (Nakul Abhyankar) ಸಂಗೀತ ಸಂಯೋಜನೆ ಮಾಡಿದ್ದಾರೆ. 'ದೂರ ಹೋದರೂ ನನ್ನೊಳವೇ, ನೂರು ಜನ್ಮಕೂ ಕಾಯುವೆ' ಎಂಬ ಹಾಡಿನ ಸಾಲಿಗೆ ರಕ್ಷಿತಾ ಸುರೇಶ್ (Rakshita Suresh) ಹಾಗೂ ವಿಜಯ್ ಪ್ರಕಾಶ್ (Vijay Prakash) ದನಿ ನೀಡಿದ್ದಾರೆ.
ದುರಂತ ಅಂತ್ಯದ 'ಲವ್ ಮಾಕ್ಟೇಲ್' ಚಿತ್ರವನ್ನು ಪ್ರೇಕ್ಷಕರು ಚಿತ್ರಮಂದಿರದಲ್ಲಿ ನೋಡದೇ ಇದ್ದರೂ, ಒಟಿಟಿಯಲ್ಲಿ ನೋಡಿ ಮೆಚ್ಚಿದ್ದರು. ಅದರಲ್ಲಿಯೂ ಕೊರೋನಾ ವೈರಸ್ (Corona Virus) ಹಾವಳಿಯಿಂದಾಗಿ ಲಾಕ್‌ಡೌನ್ ಆದ ಬಳಿಕವೂ ಈ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹಾಗೂ 'ಲವ್ ಮಾಕ್ಟೇಲ್' ಮೊದಲ ಭಾಗದಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡ ನಿಧಿಮಾ ಪಾತ್ರ ಅಂತ್ಯವಾಗಿತ್ತು. ಆದರೆ 'ಹೆಂಗೆ ನಾವು' ಎಂದು ಹೇಳುತ್ತಿದ್ದ ರಚನಾ ಪಾತ್ರ ಹಾಗೂ ಫಸ್ಟ್ ಲವ್ ಬ್ರೇಕಪ್ ಮಾಡಿಕೊಂಡ ಜೋ ಎರಡನೇ ಭಾಗದಲ್ಲಿ ಇರುತ್ತರಾ ಎಂದು ಕಾದು ನೋಡಬೇಕಿದೆ.
DilPasand: ಬೋಲ್ಡ್ ಲುಕ್‌ನಲ್ಲಿ ಡಾರ್ಲಿಂಗ್ ಕೃಷ್ಣ-ನಿಶ್ವಿಕಾ ಜೋಡಿ
ಇನ್ನು ಲವ್ ಮಾಕ್ಟೇಲ್ 2' ಸೆನ್ಸಾರ್ (Censor) ಪರೀಕ್ಷೆಯಲ್ಲಿ ಪಾಸ್ ಆಗಿದ್ದು, ಸೆನ್ಸಾರ್ ಮಂಡಳಿಯವರು ಚಿತ್ರಕ್ಕೆ 'ಯು' (U Certificate) ಪ್ರಮಾಣ ಪತ್ರ ನೀಡಿದ್ದಾರೆ. ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ಅವರೇ ಆಕ್ಷನ್ ಕಟ್ ಹೇಳಿದ್ದು, ನಾಯಕಿಯರಾಗಿ ಮಿಲನಾ ನಾಗರಾಜ್ (Milana Nagaraj) ಮತ್ತು ರಾಚೆಲ್ (Rachel) ನಟಿಸಿದ್ದಾರೆ. ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ 'ಲವ್ ಮಾಕ್ಟೇಲ್ 2' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮೊದಲ ಭಾಗಕ್ಕೆ ರಘು ದೀಕ್ಷಿತ್ ಸಂಗೀತ ನೀಡಿದ್ದರು. ಆದರೆ ಎರಡನೇ ಭಾಗಕ್ಕೆ ರಘು ದೀಕ್ಷಿತ್ ಬದಲಿಗೆ ನಕುಲ್ ಅಭಯಂಕರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಬಿಡುಗಡೆಯಾದ ಚಿತ್ರದ ಮೂರು ಹಾಡುಗಳಿಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.