ಚಿತ್ರ ವಿಮರ್ಶೆ : ಬ್ರಹ್ಮಚಾರಿ

By Kannadaprabha News  |  First Published Nov 30, 2019, 11:18 AM IST

ಸಮಸ್ಯೆ, ಸಮಸ್ಯೆ ಅಂತಾರೆ, ಅವ್ನಿಗಿರೋ ಸಮಸ್ಯೆಯಾದ್ರೂ ಏನ್ಲಾ? ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಊರಿನ ಜನರು ಹಾಗೆ ಮಾತನಾಡಿಕೊಂಡು ಹೊರಡುತ್ತಾರೆ. ಅತ್ತ ಕಥಾ ನಾಯಕ ರಾಮು ಮನೆಯೊಳಗಡೆ ಸಮಸ್ಯೆಯ ಪರಿಹಾರಕ್ಕೆ ಮಾತುಕತೆ ನಡೆಯುತ್ತಿದೆ. ಸಮಸ್ಯೆ ತಿಳಿಯಲು 'ಬ್ರಹ್ಮಚಾರಿ' ಸಿನಿಮಾವನ್ನೇ ನೋಡಬೇಕು. 


ಸಮಸ್ಯೆ, ಸಮಸ್ಯೆ ಅಂತಾರೆ, ಅವ್ನಿಗಿರೋ ಸಮಸ್ಯೆಯಾದ್ರೂ ಏನ್ಲಾ? ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಊರಿನ ಜನರು ಹಾಗೆ ಮಾತನಾಡಿಕೊಂಡು ಹೊರಡುತ್ತಾರೆ. ಅತ್ತ ಕಥಾ ನಾಯಕ ರಾಮು ಮನೆಯೊಳಗಡೆ ಸಮಸ್ಯೆಯ ಪರಿಹಾರಕ್ಕೆ ಮಾತುಕತೆ ನಡೆಯುತ್ತಿದೆ.

ಅಷ್ಟೊತ್ತಿಗಾಗಲೇ ಹೆಣ್ಣೆಂಬ ಮಡಿವಂತಿಕೆಯ ಸಮಸ್ಯೆಯ ಸುಳಿಗೆ ಸಿಲುಕಿ ಒದ್ದಾಡಿದ್ದ ರಾಮು, ತನ್ನ ಹೆಂಡತಿ ಕೈ ಹಿಡಿದುಕೊಂಡು ರೂಂ ಸೇರಿಕೊಳ್ಳುತ್ತಾನೆ. ಎಲ್ಲರಿಗೂ ಆತಂಕ. ಆದರೆ ಕೊಠಡಿಯಿಂದ ಅವರಿಬ್ಬರು ಹೊರಬರುವ ಹೊತ್ತಿಗೆ ಸಮಸ್ಯೆಗೆ ಪರಿಹಾರ ಸಿಕ್ಕಂತೆ ಎಲ್ಲರ ಮುಖದಲ್ಲಿ ನಗು ಅರಳುತ್ತದೆ.

Tap to resize

Latest Videos

ಚಿತ್ರ ವಿಮರ್ಶೆ: ದಮಯಂತಿ

ಅಲ್ಲಿಗೆ ಇದೊಂದು ದಾಂಪತ್ಯ ಬದುಕಿಗೆ ಅಡ್ಡಿ ಆಗಿದ್ದ ಸಮಸ್ಯೆಯೊಂದರ ಕತೆ ಎನ್ನುವುದು ಅರ್ಥವಾಗದೆ ಉಳಿಯುವುದಿಲ್ಲ. ಆ ಸಮಸ್ಯೆ ಏನು, ಯಾಕಾಗಿ ಆತ ಹಾಗೆ ಮಾಡಿದ ಎನ್ನುವುದು ಸಿನಿಮಾದ ಉಳಿದ ಭಾಗ.

ನಿರ್ದೇಶಕ ಚಂದ್ರಮೋಹನ್‌ ಈ ಹಿಂದೆ ‘ಡಬಲ್‌ ಇಂಜಿನ್‌’ ಹೆಸರಿನ ಸಿನಿಮಾ ಮಾಡಿದ್ದರು. ಹೆಸರಿಗೆ ತಕ್ಕಂತೆ ಅದು ಡಬಲ್‌ ಮೀನಿಂಗ್‌ ಸಿನಿಮಾವೇ ಆಗಿತ್ತು. ಅದರ ಛಾಯೆ ಇಲ್ಲೋ ಇದ್ದಂತೆ ಟ್ರೇಲರ್‌ ನೋಡಿದವರೆಲ್ಲ ಹೇಳಿದ್ದರು. ಆದರೆ, ‘ಊಟಕ್ಕೆ ಉಪ್ಪಿನ ಕಾಯಿ’ ಎನ್ನುವಷ್ಟೇ ಇಲ್ಲೂ ಡಬಲ್‌ ಮೀನಿಂಗ್‌ ಬಳಸಿಕೊಂಡರೂ, ಹೆಣ್ಣು ಅಂದ್ರೆ ಮಡಿವಂತಿಕೆ ಎನ್ನುವಂತೆ ಬೆಳೆದು ಬಂದ ಹುಡುಗನೊಬ್ಬ ಮದುವೆ ನಂತರ ಹೇಗೆಲ್ಲ ಪಿಕಲಾಟಗಳಿಗೆ ಸಿಲುಕಿದ, ಅದರಿಂದಾಗಿ ಆತ ಏನೆಲ್ಲ ಸಮಸ್ಯೆಗಳನ್ನು ಏದುರಿಸಬೇಕಾಗಿ ಬಂತು ಎನ್ನುವುದನ್ನು ಭರಪೂರ ಹಾಸ್ಯದ ಮೂಲಕವೇ ನೋಡುಗನ ಮನಸ್ಸಿಗೆ ತಟ್ಟುವಂತೆ ಕಟ್ಟಿಕೊಟ್ಟಿರುವುದು ಇಲ್ಲಿನ ವಿಶೇಷ. ಒಂದು ವೇಳೆ, ಇದು ಕೊಠಡಿಯೊಳಗಿನ ಮಡಿವಂತಿಕೆ ಸಮಸ್ಯೆ ಅಂತ ಇನ್ನಷ್ಟುಡಬಲ್‌ ಮೀನಿಂಗ್‌ ಸಂಭಾಷಣೆ ಬಳಸಿದ್ದರೆ ಇಡೀ ಸಿನಿಮಾ ಅಶ್ಲೀಲತೆಯ ಆರೋಪಕ್ಕೆ ಸಿಲುಕಬೇಕಾಗುತ್ತಿತ್ತು. ಅಂತಹ ಅಪಾಯದಿಂದ ಇಲ್ಲಿ ಜಾಗರೂಕತೆಯಿಂದಲೇ ತಪ್ಪಿಸಿಕೊಂಡಿದ್ದಾರೆ ನಿರ್ದೇಶಕರು.

ಚಿತ್ರ ವಿಮರ್ಶೆ: ಮುಂದಿನ ನಿಲ್ದಾಣ

ಚಿತ್ರದ ಫಸ್ಟ್‌ ಹಾಫ್‌ ಹೆಚ್ಚೇನು ವಿಶೇಷತೆ ಎನಿಸದೆ, ನಿಧಾನಗತಿಯಲ್ಲೇ ಸಾಗಿದರೂ, ಕತೆಗೆ ವೇಗ ಸಿಗುವುದು ಸೆಕೆಂಡ್‌ ಹಾಫ್‌ನಲ್ಲಿ ಮಾತ್ರ. ಅಲ್ಲಿಂದ ಅದು ಒಂದಷ್ಟುತಿರುವುಗಳ ಮೂಲಕ ಸಮಸ್ಯೆಯ ಮೂಲ, ಅದಕ್ಕಿದ್ದ ಕಾರಣ ಎಲ್ಲವನ್ನು ಬಿಚ್ಚಿಡುತ್ತಾ ತಿಳಿ ಹಾಸ್ಯದಲ್ಲಿ ರಂಜಿಸುತ್ತದೆ. ಹಾಗೆ ನೋಡಿದರೆ ಚಿತ್ರದ ಕಥಾ ವಸ್ತು ಕಾಶೀನಾಥ್‌ ಅವರ ಅನುಭವ ಸಿನಿಮಾ ನೆನಪಿಸಿದರೂ ಅಚ್ಚರಿಯಿಲ್ಲ. ಇನ್ನು ನಾಯಕ ನಟ ನೀನಾಸಂ ಸತೀಶ್‌ಗೆ ಹಾಸ್ಯ ಎನ್ನುವುದು ಹೊಸದಲ್ಲ.

ಮಂಡ್ಯ ಶೈಲಿಯ ಸಂಭಾಷಣೆಯ ಮೂಲಕವೇ ಪ್ರೇಕ್ಷಕರನ್ನು ನಗಿಸುವಂತೆ ಬಂದವರು ಅವರು. ಇಲ್ಲೂ ಕಾಮಿಡಿ ಜಾನರ್‌ ಒಳಗಿನ ಪಾತ್ರವನ್ನು ಅಚ್ಚುಕಟ್ಟಾಗಿಯೇ ನಿಭಾಯಿಸಿದ್ದಾರೆ. ಪ್ರೇಕ್ಷಕರ ಪಾಲಿಗೆ ಆ ಪಾತ್ರ ಕಾಮಿಡಿ ಎನಿಸಿದರೂ, ಅದಕ್ಕೆ ಗಂಭೀರತೆ ತುಂಬಿ ಗಮನ ಸೆಳೆಯುತ್ತಾರೆ. ನಾಯಕಿ ಅದಿತಿ ಪ್ರಭುದೇವ ಅಭಿನಯದಲ್ಲೂ ಅಷ್ಟೇ ಲವಲವಿಕೆಯಿದೆ. ಅವರ ಸಿನಿಮಾ ನೋಡಿದವರಿಗೆ ನಟನೆಯಲ್ಲಿ ಏಕಾತಾನತೆ ಕಂಡರೂ, ಯಾವುದೇ ಪಾತ್ರಕ್ಕೂ ಸೈ ಎನ್ನುವುದನ್ನು ಇಲ್ಲಿ ತೋರಿಸಿದ್ದಾರೆ.

ಚಿತ್ರ ವಿಮರ್ಶೆ : ಮೂಕಜ್ಜಿಯ ಕನಸುಗಳು

ದತ್ತಣ್ಣ ಈ ಚಿತ್ರದ ಮತ್ತೊಂದು ಆಕರ್ಷಣೆ. ಯೋಗ ವೈದ್ಯ ರಾಮ್‌ ದೇವ್‌ ಪಾತ್ರದಲ್ಲಿ ಅವರದು ಮಾಗಿದ ಅಭಿನಯ. ಉಳಿದವರ ಪಾತ್ರಗಳಿಗೂ ಇದೇ ಮಾತು ಅನ್ವಯ. ಇನ್ನು ಹಾಡುಗಳು ಕತೆಯ ಓಘಕ್ಕೆ ತಕ್ಕಂತೆಯೇ ಮೂಡಿ ಬಂದಿವೆ. ತಾಂತ್ರಿಕ ಕೆಲಸಗಳು ಅಚ್ಚುಕಟ್ಟಾಗಿವೆ. ಹೊಡಿ, ಬಡಿ ಎನ್ನುವ ಯಾವುದೇ ಅಬ್ಬರ ಇಲ್ಲದ ಈ ಸಿನಿಮಾ ತಿಳಿಹಾಸ್ಯದ ದಾಟಿಯಲ್ಲಿ ಕೊನೆ ತನಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ ಎನ್ನುವುದು ಚಿತ್ರದ ಪ್ಲಸ್‌ ಪಾಯಿಂಟ್‌.

-  ತಾರಾಗಣ: ಸತೀಶ್‌ ನೀನಾಸಂ, ಅದಿತಿ ಪ್ರಭುದೇವ್‌, ದತ್ತಣ್ಣ, ಶಿವರಾಜ್‌ ಕೆ.ಆರ್‌.ಪೇಟೆ, ಅಶೋಕ, ಅಚ್ಯುತ್‌ ಕುಮಾರ್‌, ಪದ್ಮಜಾ ರಾವ್‌

ನಿರ್ದೇಶನ : ಚಂದ್ರ ಮೋಹನ್‌

click me!