ಮಾನ್ವಿತಾ, ಮಯೂರಿ ಹಾಗೂ ಅದಿತಿ ಮನೆಯಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮ!

Kannadaprabha News   | Asianet News
Published : Aug 21, 2020, 10:15 AM IST
ಮಾನ್ವಿತಾ, ಮಯೂರಿ ಹಾಗೂ ಅದಿತಿ ಮನೆಯಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮ!

ಸಾರಾಂಶ

ಗೌರಿ ಗಣೇಶ ಹಬ್ಬ ಎಲ್ಲರ ಪಾಲಿಗೂ ವಿಶೇಷ. ಕೆಲವು ಮನೆಯಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಿದರೆ ಮತ್ತೂ ಹಲವರ ಮನೆಯಲ್ಲಿ ಪೂಜೆ, ಪ್ರಸಾದ ಇದ್ದೇ ಇರುತ್ತದೆ. ಇಂತಿಪ್ಪ ಗೌರಿ ಗಣೇಶ ಹಬ್ಬವನ್ನು ನಮ್ಮ ಸ್ಯಾಂಡಲ್‌ವುಡ್‌ನ ಸೆಲೆಬ್ರಿಟಿಗಳು ಹೇಗೆಲ್ಲಾ ಆಚರಣೆ ಮಾಡುತ್ತಾರೆ ಎನ್ನುವ ಕುತೂಹಲ, ಹಬ್ಬದ ಜೊತೆಗಿನ ಅವರ ನಂಟು, ನೆನಪು, ಸಂಬಂಧ ಎಲ್ಲವೂ ನಮ್ಮ ಆಸಕ್ತಿಯ ವಿಚಾರಗಳೇ ಹೌದು. ಇಲ್ಲಿ ಸೆಲೆಬ್ರಿಟಿಗಳು ತಮ್ಮ ಹಾಗೂ ಗೌರಿ-ಗಣೇಶ ಹಬ್ಬದ ನಡುವಿನ ಸುಂದರ ನಂಟಿನ ಬಗ್ಗೆ ಮಾತನಾಡಿದ್ದಾರೆ.

ನಮ್ಮ ಮನೆಯಲ್ಲೀಗ ಡಬಲ್‌ ಸಂಭ್ರಮ

- ಮಯೂರಿ

ಮದುವೆಯಾದ ಬಳಿಕ ನನಗೆ ಇದು ಮೊದಲನೇ ಗೌರಿ ಗಣೇಶ ಹಬ್ಬ. ಹಾಗಾಗಿ ನನಗೆ ಮತ್ತು ನಮ್ಮ ಮನೆಯವರಿಗೆ ಸಾಕಷ್ಟುಖುಷಿ ಇದೆ. ಇನ್ನು ನಾಲ್ಕು ವರ್ಷದ ಹಿಂದೆ ನಮ್ಮ ತಂದೆ ತೀರಿಕೊಂಡ ಬಳಿಕ ನಮ್ಮ ಮನೆಯಲ್ಲಿ ಗಣೇಶನನ್ನು ಕೂರಿಸಿರಲಿಲ್ಲ. ಈ ವರ್ಷ ಕೂರಿಸುತ್ತಿದ್ದೇವೆ. ಇದರಿಂದ ನಮ್ಮ ಮನೆಯಲ್ಲಿ ಡಬಲ್‌ ಸಂಭ್ರಮ ಇದೆ.

ನಟಿ ಮಯೂರಿ ಅರಿಶಿಣ ಶಾಸ್ತ್ರ ಹೇಗಿತ್ತು ನೋಡಿ

ನಾವೆಲ್ಲಾ ಕೈಗೆ ಕಂಕಣ ಕಟ್ಟಿಕೊಂಡು, ಮುತ್ತೈದೆಯರಿಗೆ ಬಾಗೀನ ನೀಡಿ ತುಂಬಾ ಅರ್ಥಪೂರ್ಣವಾಗಿ ಗೌರಿ ಗಣೇಶ ಆಚರಣೆ ಮಾಡುವುದು ತುಂಬಾ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇಡೀ ಕುಟುಂಬವೇ ಒಂದಾಗಿ ಸಾಕಷ್ಟುತಯಾರಿ ಮಾಡಿಕೊಂಡಿದ್ದೇವೆ. ಹಲವಾರು ರೀತಿಯ ಸಿಹಿ ತಿನಿಸು ಮಾಡುವ ತಯಾರಿ ನಡೆಯುತ್ತಿದೆ. ನಾನು ಚಿಕ್ಕವಳಿದ್ದಾಗ ಹುಬ್ಬಳ್ಳಿಯ ಒಂದು ಅಪಾರ್ಟ್‌ಮೆಂಟ್‌ನಲ್ಲಿ ಇದ್ದೆವು. ಅಲ್ಲಿ ಗಣೇಶ ಕೂರಿಸುತ್ತಿದ್ದದ್ದು ನಮ್ಮ ಮನೆಯಲ್ಲಿ ಮಾತ್ರ. ಆಗ ಎಲ್ಲರೂ ನಮ್ಮ ಮನೆಗೆ ಬಂದು ಪೂಜೆ ಮಾಡಿ, ನಮಸ್ಕಾರ ಹಾಕುತ್ತಿದ್ದರು. ಐದು ದಿನವೂ ನಮ್ಮ ತಂದೆಯೇ ವಿಶೇಷ ಪೂಜೆ ಮಾಡುತ್ತಿದ್ದದ್ದು. ಗಣೇಶನ ಜೊತೆಗೆ ಗೌರಮ್ಮನ ಕೂರಿಸುವುದೂ ನಮಗೆ ದೊಡ್ಡ ಸಂಭ್ರಮವೇ. ಸ್ವರ್ಣ ಗೌರಿ ವ್ರತ ಮಾಡಿಕೊಂಡು ಬರುವುದರಿಂದ ಈ ಹಬ್ಬ ನಮಗೆ ವಾರ ಪೂರ್ತಿ ಸಂತೋಷ ತರುತ್ತದೆ.

ಪಂಚಕಜ್ಜಾಯ, ಹೋಳಿಗೆ, ಮೋದಕ ಹೀಗೆ ನಾನಾ ಬಗೆಯ ತಿನಿಸು ಮಾಡುವುದರ ಜೊತೆಗೆ ಹಳೆಯ ಎಲ್ಲಾ ಸಂಪ್ರದಾಯಗಳನ್ನು ಅನುಸರಿಸಿಕೊಂಡು ಬರುತ್ತಿದ್ದೇವೆ. ಹಿಂದೆ ನಮ್ಮ ಅಪ್ಪ ಅಮ್ಮ ಮಾಡಿಕೊಂಡು ಬಂದ ಎಲ್ಲಾ ಆಚರಣೆಗಳನ್ನು ಇಂದು ನಾನು ಮತ್ತು ನನ್ನ ಗಂಡ ಮುಂದುವರೆಸಿಕೊಂಡು ಹೋಗುತ್ತೇವೆ. ಅದಕ್ಕೆ ಇದು ಮೊದಲನೇ ಹೆಜ್ಜೆ. ಹಾಗಾಗಿ ಮದುವೆ ಆದ ಮೇಲೆ ಇದು ಮೊದಲ ಗೌರಿ ಗಣೇಶ ಎನ್ನುವ ಸಂತೋಷವೂ ಸೇರಿಕೊಂಡಿದೆ.

--------------

ಮನೆಯ ವ್ಯಾಪ್ತಿಯಲ್ಲೇ ಹಬ್ಬ

- ಆಶಿಕಾ ರಂಗನಾಥ್‌

ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬ ಮಾಡುವ ಕಾರಣ ಗೌರಿ ಗಣೇಶ ಅಷ್ಟೇನು ಅದ್ಧೂರಿ ಇರಲ್ಲ. ಆದರೆ ಪೂಜೆ ಮಾಡಿ ಪ್ರಾರ್ಥನೆ ಮಾಡಿಕೊಂಡು ಸರಳವಾಗಿ ಹಬ್ಬ ಮಾಡುತ್ತೇವೆ. ಅಮ್ಮ ಕೆಲವಾರು ಸಹಿ ತಿಂಡಿ ಮಾಡುತ್ತಾರೆ. ಅರಿಶಿಣದ ಎಲೆಯಿಂದ ಮಾಡುವ ಸಿಹಿ ಕಡುಬು, ಖಾರ ಕಡುಬು ನನಗೆ ಇಷ್ಟ. ಇವೆನ್ನೆಲ್ಲಾ ಮಾಡಿಕೊಂಡು ಮನೆಯಲ್ಲೇ ದಿನ ಕಳೆಯುತ್ತೇವೆ. ಮೊದಲಿನಂತೆ ಎಲ್ಲವೂ ಇದ್ದಿದ್ದರೆ ಪರಿಸ್ಥಿತಿ ಬೇರೆಯೇ ಇರುತ್ತಿತ್ತು. ಈಗ ಎಲ್ಲೂ ಹೋಗಲು ಆಗುವುದಿಲ್ಲ.

ಹುಡುಗರ ನಿದ್ದೆ ಗೆಡಿಸಿತ್ತು ಚುಟು-ಚುಟು ಹುಡುಗಿ ಸೊಂಟ ಬಳುಕಿಸೋ ವಿಡಿಯೋ!

ನನ್ನ ಬಾಲ್ಯ ತುಮಕೂರಿನಲ್ಲಿ ಕಳೆದದ್ದು. ಅಲ್ಲಿ ಗಣೇಶ ಹಬ್ಬ ಬಂತು ಎಂದರೆ ಸಾಕು ಎಲ್ಲಾ ಕಡೆ ಹೋಗುವುದು ಎಲ್ಲಿ ಯಾವ ರೀತಿಯ ಗಣೇಶ ಕೂರಿಸಿದ್ದಾರೆ ನೋಡುವುದು, ಅಕ್ಕ ಪಕ್ಕದವರ ಮನೆಗೆ ಹೋಗಿ ಅಲ್ಲಿ ಮಾಡಿರುವ ಅಲಂಕಾರ ನೋಡಿ ಪ್ರಸಾದ ತಿನ್ನುವುದು, ಗೆಳೆಯರ ಜೊತೆ ಇಡೀ ದಿನ ಸುತ್ತಾಡುತ್ತಿದ್ದೆ. ಆದರೆ ಆಗ ನಮ್ಮ ಮನೆಯ ಸಂಪ್ರದಾಯ, ಆಚರಣೆಗಳ ಬಗ್ಗೆ ನನಗೆ ಅಷ್ಟಾಗಿ ತಿಳಿಯದ ಕಾರಣ ನಮ್ಮ ಮನೆಯಲ್ಲೂ ಗೌರಿ, ಗಣೇಶ ಕೂರಿಸಿ, ಪೂಜೆ ಮಾಡಿ ಎಂದು ಹಠ ಮಾಡುತ್ತಿದ್ದೆ. ಬೇರೆಯವರ ಮನೆಯಲ್ಲಿ ಅಷ್ಟೊಂದು ಚೆಂದವಾಗಿ ಗಣೇಶ ಕೂರಿಸಿದ್ದಾರೆ ನಮ್ಮ ಮನೆಯಲ್ಲಿ ಯಾಕೆ ಇಲ್ಲ ಎನ್ನಿಸುತ್ತಿತ್ತು. ಈ ವಿಚಾರವಾಗಿ ನಿರಾಶೆ ಮಾಡಿಕೊಂಡದ್ದೂ ಉಂಟು. ಆಮೇಲೆ ದೊಡ್ಡವಳಾದಾಗ ಇದೆಲ್ಲಾ ಗೊತ್ತಾಗಿ ಅಂದಿನ ನನ್ನ ಹಠಕ್ಕೆ ನಾನೇ ನಗುತ್ತೇನೆ.

ಈ ಕೋವಿಡ್‌ ಇರದೇ ಇದ್ದಿದ್ದರೆ ಹಬ್ಬ ಮತ್ತಷ್ಟುಕಳೆಗಟ್ಟುತ್ತಿತ್ತು. ಆದರೂ ಜನ ತಮ್ಮ ತಮ್ಮ ವ್ಯಾಪ್ತಿಯಲ್ಲಿಯೇ ಹಬ್ಬ ಮಾಡಿಕೊಳ್ಳುತ್ತಿದ್ದಾರೆ. ನಾವು ಈ ಬಾರಿಯ ಗೌರಿ ಗಣೇಶವನ್ನು ಮನೆಯಲ್ಲಿಯೇ ಸೀಮಿತವಾಗಿ ಮಾಡಿಕೊಂಡು ಮುಂದೆ ಎಲ್ಲವೂ ಸರಿಯಾಗಲಿ ಎಂದು ಬೇಡಿಕೊಳ್ಳುತ್ತೇವೆ.

---------------

ಗಣೇಶನ ಕತೆಗಳು ನನ್ನೊಳಗನ್ನು ಬೆಳಗಿವೆ

- ಅದಿತಿ ಪ್ರಭುದೇವ್‌

ನನ್ನ ಅಜ್ಜಿ ಮನೆಯಲ್ಲಿ ಗಣೇಶ ಕೂರಿಸುತ್ತಿದ್ದರು. ವಾರ ಗಟ್ಟಲೆ ಸಂಭ್ರಮ, ಬಗೆ ಬಗೆಯ ತಿಂಡಿಗಳು, ಎಲ್ಲರೂ ಒಟ್ಟಾಗಿ ಸೇರುತ್ತಿದ್ದೆವು, ಎಲ್ಲಾ ಬೀದಿಗಳು, ಮನೆಗಳನ್ನು ಸುತ್ತು ಹಾಕಿ ಒಂದು ಗಣೇಶನ ಜೊತೆಗೆ ಮತ್ತೊಂದು ಹೋಲಿಕೆ ಮಾಡುತ್ತಾ, ಅದು ಹಾಗಿದೆ, ಇದು ಹೀಗಿದೆ ಎಂದುಕೊಳ್ಳುತ್ತಾ, ಎಲ್ಲರ ಮನೆಯ ಪ್ರಸಾದದ ಟೇಸ್ಟ್‌ ನೋಡುತ್ತಿದ್ದೆವು. ನನಗೆ ಇನ್ನೂ ನೆನಪಿದೆ ನನ್ನ ಅಜ್ಜಿ ಮನೆಯಲ್ಲಿ ಕಡೆಯ ದಿನ ಗಣೇಶನನ್ನು ನೀರಿಗೆ ಬಿಡುಲು ಹೋಗುವಾಗ ನಾನು ನೀರಿಗೆ ಬಿಡಬೇಡಿ, ಅದು ನಮ್ಮ ಮನೆಯಲ್ಲಿಯೇ ಇರಲಿ ಎಂದು ಕಣ್ಣೀರು ಹಾಕುತ್ತಿದ್ದೆ. ಅಷ್ಟರ ಮಟ್ಟಿಗೆ ನಮ್ಮೊಂದಿಗೆ ಗಣೇಶ ಬೆಸೆದುಕೊಂಡಿರುತ್ತಿದ್ದ. ಅಜ್ಜಿ, ಸ್ನೇಹಿತರು ಹೇಳುತ್ತಿದ್ದ ಗಣೇಶನ ಕತೆಗಳು ಈಗಲೂ ನನ್ನನ್ನು ಆವರಿಸಿಕೊಂಡಿವೆ.

ಕನ್ನಡ ಕ್ಲಾಸಿಕ್ ನಟಿಮಣಿಯರು ಏಳೂವರೆ ಮೀಟರ್‌ ಕಾಟನ್ ಸೀರೆ ಮೇಲೆ!

ಜೊತೆಗೆ ನನಗೆ ಆಗ ದೀಪಾವಳಿ ಮತ್ತು ಗೌರಿ ಗಣೇಶ ಮಾತ್ರ ನಿಜವಾದ ಸಂಭ್ರಮಿಸುವ ಹಬ್ಬಗಳಾಗಿ ಕಾಣುತ್ತಿದ್ದದ್ದು. ಯಾವಾಗ ಈ ಹಬ್ಬಗಳು ಬರುತ್ತವೆ ಎಂದು ದಿನಗಳನ್ನು ಎಣಿಸಿಕೊಂಡು ಕೂರುತ್ತಿದ್ದೆ. ಒಂದರಲ್ಲಿ ಪಟಾಕಿ ಹೊಡೆದರೆ ಇದರಲ್ಲಿ ಎಲ್ಲರೊಂದಿಗೆ ಸುತ್ತುವುದು. ಜೊತೆಗೆ ಹೊಸ ಬಟ್ಟೆಗಳ ಸಡಗರ ಬೇರೆ.

ಈಗ ಕಾಲ ಬದಲಾಗಿದೆ. ನಮ್ಮ ಮನೆಯಲ್ಲೂ ನಾರ್ಮಲ್‌ ಆಗಿ ಪೂಜೆ ಮಾಡಿಕೊಂಡು, ಗಣೇಶನಿಗೆ ನಮಸ್ಕಾರ ಮಾಡಿಕೊಂಡು ಹಬ್ಬ ಮಾಡುತ್ತೇವೆ. ನನಗೆ ಮೊದಲಿನಿಂದಲೂ ಸ್ವೀಟ್‌ ಎಂದರೆ ತುಂಬಾ ಇಷ್ಟ. ನಾನೇ ಹಲವು ಬಗೆಯ ಸ್ವೀಟ್‌ ತಯಾರು ಮಾಡಿಕೊಂಡು ಹಬ್ಬ ಮಾಡುತ್ತೇನೆ.

-------

ನನ್ನ ದಿನ ಶುರುವಾಗುವುದೇ ಗಣೇಶನಿಂದ

- ಮಾನ್ವಿತಾ ಹರೀಶ್‌

ಪ್ರತಿ ದಿನವೂ ನಾನು ಗಂ ಗಣಪತೇ ಮಂತ್ರ ಹೇಳಿಕೊಂಡೇ ಎದ್ದೇಳುತ್ತೇನೆ. ನನ್ನ ರೂಮಿನಲ್ಲಿ ಈಗಲೂ ಇಡುಗುಂಜಿಯ ಗಣೇಶನ ದೊಡ್ಡ ಫೋಟೋ ಇದೆ. ನನ್ನ ನಂಬಿಕೆಯ ಪ್ರಕಾರ ಗಣೇಶ ವಿಘ್ನ ನಿವಾರಕ. ಏನೇ ಸಮಸ್ಯೆ ಇದ್ದರೂ ಅವನನ್ನು ಮನಸಾರೆ ಪ್ರಾರ್ಥನೆ ಮಾಡಿದರೆ ಅದಕ್ಕೆ ಪರಿಹಾರ ಸಿಕ್ಕುತ್ತದೆ. ಅವನು ನನ್ನ ಮತ್ತು ನಮ್ಮ ರಕ್ಷಕ.

ತಂದೆ ಜೊತೆ ಒಂದು ಫೋಟೋ ಇಲ್ಲ; ಕಣ್ಣೀರಿಟ್ಟ ಮಾನ್ವಿತಾಗೆ ಸಿಗ್ತು ಬಿಗ್ ಸರ್ಪ್ರೈಸ್!

ನಮ್ಮ ಚಿಕ್ಕಪ್ಪ ಉಡುಪಿಯಲ್ಲಿ ದೊಡ್ಡ ಮಟ್ಟದಲ್ಲಿ ಗಣೇಶನ ಮೂರ್ತಿ ಮಾಡುತ್ತಾರೆ. ಮನೆಯಲ್ಲಿಯೂ ಗಣೇಶನ ಪೂಜೆ ಇದ್ದೇ ಇರುತ್ತದೆ. ಹಬ್ಬಕ್ಕಾಗಿ ನಾವು ಗಣೇಶನನ್ನು ಕೂರಿಸುವುದಿಲ್ಲ. ಆದರೆ ನಮ್ಮ ಕೊಂಕಣಿ ಶೈಲಿಯ ಅಡುಗೆಗಳನ್ನು ಮಾಡಿಕೊಂಡು ನಾರ್ಮಲ್‌ ಆಗಿ ಹಬ್ಬ ಮಾಡುತ್ತೇವೆ.

ನಾನು ಹೈಸ್ಕೂಲ್‌ ಮುಗಿಸಿದ್ದು ಕಳಸದಲ್ಲಿ. ಅಲ್ಲಿ ಗಣೇಶ ಹಬ್ಬ ಬಂತು ಎಂದರೆ ಫ್ಯಾನ್ಸಿ ಡ್ರೆಸ್‌ ಕಾಂಪಿಟೇಷನ್‌ ಮಾಡುತ್ತಿದ್ದರು. ಆಗ ಯಾವ ಬಗೆಯ ಡ್ರೆಸ್‌ ಹಾಕುವುದು, ಏನು ವಿಶೇಷ ಮಾಡುವುದು ಎಂದುಕೊಳ್ಳುತ್ತಲೇ ವಿವಿಧ ವೇಷಗಳನ್ನು ಹಾಕುತ್ತಿದ್ದೆವು. ಅವೆಲ್ಲಕ್ಕೂ ಈ ಗಣೇಶ ಹಬ್ಬವೇ ವೇದಿಕೆ ಒದಗಿಸಿಕೊಡುತ್ತಿದ್ದದ್ದು. ನನಗೆ ಈಗಲೂ ಬಲವಾಗಿ ಅನ್ನಿಸುವುದು ಏನೆಂದರೆ ಗಣೇಶ ಎನ್ನುವುದೇ ಒಂದು ದೊಡ್ಡ ಎಮೋಷನ್‌. ಅವನ ಆಕಾರ, ಅವನ ಕುರಿತು ಹುಟ್ಟಿಕೊಂಡಿರುವ ಕತೆಗಳೆಲ್ಲವೂ ತುಂಬಾ ಆಪ್ತ. ಏನೇ ಬಂದರೂ ಗಣೇಶ ನನ್ನನ್ನು ಕಾಪಾಡುತ್ತಾನೆ ಎನ್ನುವ ಭರವಸೆಯೇ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ