
ಈ ಚಿತ್ರದ ಹೆಸರು ‘ಟಾರ್ಗೆಟ್’. ಇತ್ತೀಚೆಗೆ ಮುಹೂರ್ತ ನಡೆದಿದೆ. ಆಂಧ್ರ ಮೂಲದ ರವಿವರ್ಮ ನಿರ್ದೇಶನ ಮಾಡಿದರೆ, ಮೋಹನ್ ರೆಡ್ಡಿ, ಸುಬ್ಬಾರೆಡ್ಡಿ, ಮಧು ಬಾಬು ಚಿತ್ರದ ನಿರ್ಮಾಪಕರು. ಹಿರಿಯ ನಟ ರವಿಕಿರಣ್ ಪುತ್ರ ಪ್ರೇಮ್ ಕಿರಣ್, ವಿಜಯ್ ಕಾರ್ತಿಕ್, ಸಾಕ್ಷಿ ರಾಜ್, ಮೇಘಶ್ರೀ, ಸಹರ್ ಕೃಷ್ಣನ್ ಚಿತ್ರದ ಮುಖ್ಯಪಾತ್ರಧಾರಿಗಳು. ವಿನೋದ್ ಬಾಲ ಕ್ಯಾಮೆರಾ ಹಿಡಿಯುತ್ತಿದ್ದರೆ, ಡಾ ವಿ ನಾಗೇಂದ್ರ ಪ್ರಸಾದ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಮುಹೂರ್ತದ ನಂತರ ಚಿತ್ರತಂಡ ಮಾಧ್ಯಮಗಳ ಮುಂದೆ ಹಾಜರಾಗಿ ಚಿತ್ರದ ಕುರಿತು ಹೇಳಿಕೊಂಡಿತು.
‘ಚಿಕ್ಕಂದಿನಿಂದಲೂ ಶೋಷಣೆಗೆ ಗುರಿಯಾಗಿರುವ ಮೂವರು ಹೆಣ್ಣು ಮಕ್ಕಳು ಹೇಗೆ ಮತ್ತು ಯಾಕೆ ದ್ವೇಷ ತೀರಿಸಿಕೊಳ್ಳುತ್ತಾರೆ ಎಂಬುದರ ಮೇಲೆ ಸಿನಿಮಾ ಸಾಗುತ್ತದೆ. ಇದರ ಜತೆಗೆ ಡ್ರಗ್ಸ್ ಮಾಫಿಯಾ ಕೂಡ ಬರುತ್ತದೆ. ಪ್ರೀತಿ- ಪ್ರೇಮ, ಡ್ರಗ್ಸ್ ಹಾಗೂ ಹೆಣ್ಣಿನ ದ್ವೇಷ... ಈ ಮೂರು ಅಂಶಗಳ ಮೇಲೆ ಚಿತ್ರ ಸಾಗುತ್ತದೆ. ಇದೊಂದು ಯಗ್ ಜನರೇಷನ್ ಸಿನಿಮಾ. ಈಗಿನ ಸಮಾಜಕ್ಕೆ ತುಂಬಾ ಅಗತ್ಯವಾಗಿ ಹೇಳಬೇಕಾದ ಕತೆ ಇದು’ ಎಂಬುದು ನಿರ್ದೇಶಕ ರವಿವರ್ಮ ಮಾತುಗಳು.
ಚಿತ್ರದ ಇಬ್ಬರು ಹೀರೋಗಳ ಪೈಕಿ ಪ್ರೇಮ್ ಕಿರಣ್ ಇಲ್ಲಿ ಗೌತಮ್ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರಿಗೆ ಈ ಚಿತ್ರದ ಕತೆ ತುಂಬಾ ಇಷ್ಟವಾಗಿದೆ. ಹೀಗಾಗಿ ಚಿತ್ರಕ್ಕೆ ಬೇಕಾದ ತಯಾರಿ ಮಾಡಿಕೊಂಡು ಪಾತ್ರ ಮಾಡುತ್ತಿರುವುದಾಗಿ ಹೇಳಿಕೊಂಡರು. ವಿಜಯ್ ಕಾರ್ತಿಕ್ ಚಿತ್ರದ ಮತ್ತೊಬ್ಬ ನಾಯಕ. ‘ಈ ಚಿತ್ರದ ನಿರ್ದೇಶಕರು ಆಂಧ್ರದವರು. ನಿರ್ಮಾಪಕರು ಕೂಡ ಅಲ್ಲಿನವರೇ. ಆದರೆ, ಕನ್ನಡದವರನ್ನು ಹಾಕಿಕೊಂಡು ಸಿನಿಮಾ ಮಾಡುತ್ತಿರುವುದಕ್ಕೆ ಹೆಮ್ಮೆ ಇದೆ’ ಎಂದರು ವಿಜಯ್ ಕಾರ್ತಿಕ್. ನಾಯಕಿ ಸಾಕ್ಷಿ ಅವರಿಗೂ ಇದು ಮೊದಲ ಚಿತ್ರ. ಈಗಾಗಲೇ ಅವರು ಕಿರುತೆರೆಯಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದು, ಈಗ ಬೆಳ್ಳಿತೆರೆಗೆ ಬರುತ್ತಿದ್ದಾರೆ. ಡಾ ವಿ ನಾಗೇಂದ್ರ ಪ್ರಸಾದ್ ಅವರ ಸಂಗೀತ ಈ ಚಿತ್ರಕ್ಕಿದೆ. ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.