
ಆರ್. ಕೇಶವಮೂರ್ತಿ
ಪುಷ್ಪ ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿದೆ?
ಪಾತ್ರದ ಹೆಸರು ಶ್ರೀವಲ್ಲಿ. ಕಾಡಂಚಿನಲ್ಲಿರುವ ಹಳ್ಳಿ ಹುಡುಗಿ ಪಾತ್ರ. ನಾನು ಮಾತನಾಡುವ ಭಾಷೆ, ವರ್ತನೆ ಎಲ್ಲವೂ ವಿಶೇಷ. ಮೇಕಪ್ ಇಲ್ಲ. ಹೇರ್ ಸ್ಟೈಲ್ ಚೆನ್ನಾಗಿರಲ್ಲ. ತುಂಬಾ ಪೀಸ್‌ಫುಲ್, ಕನ್ನಿಂಗ್ ಹುಡುಗಿ. ಪಕ್ಕಾ ಡಿ-ಗ್ಲಾಮರ್ ಹಾಗೂ ರಾ ಕ್ಯಾರೆಕ್ಟರ್. ಆ ಕಾರಣಕ್ಕೆ ಈ ಚಿತ್ರದಲ್ಲಿ ನನ್ನ ಪಾತ್ರವನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲ ಇದೆ.
ಶ್ರೀವಲ್ಲಿ ಪಾತ್ರಕ್ಕಾಗಿ ನೀವು ಮಾಡಿಕೊಂಡ ತಯಾರಿಗಳೇನು?
ಭಾಷೆ ಕಷ್ಟಕರವಾಗಿತ್ತು. ಡೈಲಾಗ್ ಡೆಲಿವರಿ ಬೇರೆ ರೀತಿ ಮಾಡಬೇಕಿತ್ತು. ನಿರ್ದೇಶಕ ಸುಕುಮಾರ್ ಕತೆ ಹೇಳುತ್ತಲೇ ಡೈಲಾಗ್‌ಗಳನ್ನೂ ಹೇಳಿದ್ದರು. ಮೊದಲು ಭಯ ಇತ್ತು. ಆದರೆ, ಕತೆಗೆ ಮತ್ತು ನನ್ನ ಪಾತ್ರಕ್ಕೆ ಎಷ್ಟುಬೇಕೋ ಅಷ್ಟುತಯಾರಿ ಮಾಡಿಕೊಂಡೆ. ನನ್ನ ಡಿ-ಗ್ಲಾಮರ್ ಲುಕ್ಕು ಬಾಡಿ ಲಾಂಗ್ವೇಜ್ ಅನ್ನು ಬದಲಾಯಿಸಿತು.
ಪುಷ್ಪ ಚಿತ್ರದಲ್ಲಿ ಇಬ್ಬರು ಕನ್ನಡಿಗರು ಇದ್ದೀರಲ್ಲ?
ಹೌದು. ನಾನು ಮತ್ತು ಧನಂಜಯ್. ಶ್ರೀವಲ್ಲಿ ಮತ್ತು ಜಾಲಿರೆಡ್ಡಿ. ಸೆಟ್‌ನಲ್ಲಿ ನಾವಿಬ್ಬರು ಒಟ್ಟಿಗೆ ಇದ್ದಾಗ ‘ಕನ್ನಡದ ಮಕ್ಕಳು’ ಅಂತ ಅಲ್ಲೂ ಅರ್ಜುನ್ ತಮಾಷೆ ಮಾಡುತ್ತಿದ್ದರು. ಜಾಲಿರೆಡ್ಡಿ ಪಾತ್ರಧಾರಿ ಧನಂಜಯ್ ನಟನೆಯಲ್ಲಿ ಸೂಪರ್. ಅವರ ಜತೆ ಕೆಲಸ ಮಾಡಿದ್ದು ತುಂಬಾ ಖುಷಿ ಆಯಿತು. ಅವರ ನಟನೆಗೆ ನಾನು ಮಾತ್ರವಲ್ಲ, ಪುಷ್ಪ ತಂಡವೇ ಫಿದಾ ಆಗಿತ್ತು.
ನೀವು ಕೇವಲ ಪ್ಯಾನ್ ಇಂಡಿಯಾ ಚಿತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದೀರಾ?
ಒಳ್ಳೆಯ ಕತೆ, ನಟನೆಗೆ ಸ್ಕೋಪ್ ಇರುವ ಪಾತ್ರವನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ಅದು ಪ್ಯಾನ್ ಇಂಡಿಯಾ ಆಗುತ್ತಿದೆ. ‘ಪುಷ್ಪ’ ಸಿನಿಮಾ ಪ್ಯಾನ್ ಇಂಡಿಯಾ ಅಂತ ಮೊದಲು ಅಂದುಕೊಂಡಿರಲಿಲ್ಲ. ಆ ನಂತರ ಎರಡು ಭಾಗಗಳಲ್ಲಿ ಮಾಡಬೇಕು, ತೆಲುಗು ಜತೆಗೆ ತಮಿಳು, ಕನ್ನಡ, ಮಲಯಾಳಂ ಮಾಡಬೇಕು ಎನ್ನುವ ನಿರ್ಧಾರ ತೆಗೆದುಕೊಂಡರು.
ಒಂದು ಕಡೆ ಪ್ಯಾನ್ ಇಂಡಿಯಾ ಸಿನಿಮಾಗಳು, ಮತ್ತೊಂದು ಕಡೆ ಜಾಹೀರಾತುಗಳಲ್ಲಿ ನಟನೆ, ಜತೆಗೆ ಆಲ್ಬಂ ಸಾಂಗ್ಸ್. ಹೇಗೆ ನಿಭಾಯಿಸುತ್ತಿದ್ದೀರಿ?
ನಾನು 24*7 ನಟಿ. ಯಾವಾಗಲೂ ಕೆಲಸ ಮಾಡಬೇಕು ಎನ್ನುವುದು ನನ್ನಾಸೆ. ತುಂಬಾ ಸ್ಪೀಡಾಗಿರಬೇಕು. ಕೆಲಸದ ವಿಚಾರದಲ್ಲಿ ಸೋಮಾರಿತನ ತೋರಬಾರದು. ಹೀಗೆ ಸ್ಪೀಡಾಗಿ ಕೆಲಸ ಮಾಡುವ ವಿಚಾರದಲ್ಲಿ ನಮಗೆ ನಟ ಶಂಕರ್‌ನಾಗ್ ಸ್ಫೂರ್ತಿ ಆಗಬೇಕು. ನಾನು ಶಂಕರ್‌ನಾಗ್ ಅವರ ಫೀಮೇಲ್ ವರ್ಷನ್. ಅಂದರೆ ಅವರ ಜಾಗ ತುಂಬಲು ಆಗಲ್ಲ. ಕೆಲಸದಲ್ಲಿ ಅವರನ್ನು ಸ್ಫೂರ್ತಿಯಾಗಿಟ್ಟುಕೊಂಡಿರುವ ನಟಿ.
ಕನ್ನಡದ್ದೇ ಸಿನಿಮಾ ಅಂತ ಯಾವುದು ಒಪ್ಪಿಕೊಂಡಿಲ್ಲವೇ?
ನನಗೆ ಭಾಷೆಯ ಬೇಲಿ ಇಲ್ಲ. ಕನ್ನಡ ಚಿತ್ರದಲ್ಲಿ ಮಾಡಬಾರದು, ತೆಲುಗಿನಲ್ಲೇ ಇರಬೇಕು, ಬೇರೆ ಭಾಷೆಗಳ ಮೂಲಕ ಕನ್ನಡಕ್ಕೆ ಬರುತ್ತಿರಬೇಕು ಎನ್ನುವ ಯಾವ ವೂರ್ವ ನಿರ್ಧರಿತ ಪ್ಲಾನ್‌ಗಳು ಕೂಡ ಇಲ್ಲ. ನಟಿಯಾಗಿ ನನಗೆ ಸೂಕ್ತ ಎನಿಸುವ ಕತೆ ಮತ್ತು ಪಾತ್ರ ಸಿಕ್ಕರೆ ನಟಿಸುತ್ತೇನೆ.
ಶಾನ್ವಿಯಿಂದ ಶ್ರೀವಲ್ಲಿ ಆಗಿದ್ದೀರಿ. ಒಮ್ಮೆ ನಿಮ್ಮ ಜರ್ನಿಯನ್ನು ಹಿಂತಿರುಗಿ ನೋಡಿಕೊಂಡರೆ ಏನನಿಸುತ್ತದೆ?
ನಾನು ಪ್ರತಿ ದಿನ ಎದ್ದಾಗ ನನ್ನ ಜರ್ನಿಯನ್ನು ಒಮ್ಮೆ ನೋಡಿಕೊಳ್ಳುತ್ತೇನೆ. ಹಾಗೆ ನೆನಪಿಸಿಕೊಂಡಾಗ ನಾನು ಯಾರು, ಇಲ್ಲಿಗೆ ಹೇಗೆ ಬಂದೆ, ಈ ಸಕ್ಸಸ್ ಹೇಗಿ ಸಿಕ್ಕಿತು, ಈಗ ಏನೇ ಇದ್ದರೂ ಇದೇ ಲೈಫ್ ಲಾಂಗ್ ಅಲ್ಲ. ಇದರ ಆಚೆಗೂ ನಾನು ಇರಬೇಕು... ಇತ್ಯಾದಿಗಳನ್ನು ಹತ್ತು ನಿಮಿಷ ಯೋಚನೆ ಮಾಡುತ್ತೇನೆ. ನಾನು ಯಾವತ್ತೂ ಹಿಂದಿನದ್ದನ್ನು ಮರೆತಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.