
ಬೆಂಗಳೂರು: ಚಂದನವನ ಕಂಡ ಬಹುಮುಖ ಪ್ರತಿಭೆ ಶಂಕರ್ ನಾಗ್ ಅವರ ಸಿನಿಮಾಗಳು ಇಂದಿಗೂ ಅದೇ ತಾಜಾತನದಿಂದ ಕೂಡಿವೆ. 80-90ರ ದಶಕದಲ್ಲಿಯೇ ಶಂಕರ್ ನಾಗ್ ಹೊಸ ಪ್ರಯೋಗಗಳ ಮೂಲಕ ಸಿನಿಮಾಗಳನ್ನು ಅದ್ಧೂರಿಯಾಗಿ ತೆರೆ ಮೇಲೆ ತಂದಿದ್ದರು. ಶಂಕರ್ ನಾಗ್ ನಿರ್ದೇಶನದ ಒಂದು ಮುತ್ತಿನ ಕಥೆ ಸಿನಿಮಾ 1987ರಲ್ಲಿ ಬಿಡುಗಡೆಯಾಗಿತ್ತು. ಡಾ.ರಾಜ್‌ಕುಮಾರ್ ನಟನೆಯ ಈ ಸಿನಿಮಾದಲ್ಲಿ ಸಮುದ್ರದಾಳದಲ್ಲಿನ ಚಿತ್ರೀಕರಣ ಕಂಡು ಇಡೀ ಕರುನಾಡು ಆಶ್ಚರ್ಯಪಟ್ಟಿತ್ತು. ಹಾಗಾಗಿ ಶಂಕರ್ ನಾಗ್ ಜೊತೆ ಕೆಲಸ ಮಾಡಲು ಕಲಾವಿದರು ಮತ್ತು ತಂತ್ರಜ್ಞರು ಉತ್ಸುಕರಾಗಿರುತ್ತಿದ್ದರು. ಶಂಕರ್ ನಾಗ್ ಜೊತೆ ಕೆಲಸ ಮಾಡಿದ ಕಲಾವಿದರು ಅದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆದ್ರೆ ಶಂಕರ್ ನಾಗ್ ಒಮ್ಮೆ ಆಯ್ಯೋ ಈ ಹುಡುಗಿ ನನ್ನ ಸಿನಿಮಾಗೆ ಬೇಡ ಎಂದಿದ್ದರು. ಈ ವಿಷಯವನ್ನೇ ಆ ನಟಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಅಂದು ಶಂಕರ್ ನಾಗ್ ಬೇಡ ಅಂತ ಹೇಳಿದ ಹುಡುಗಿಯೇ ಇಂದಿನ ಹೇಮಾ ಪ್ರಭಾತ್. ಅಮೆರಿಕ ಅಮೆರಿಕ ಸಿನಿಮಾ ಖ್ಯಾತಿಯ ಹೇಮಾ ಪ್ರಭಾತ್ ಸದ್ಯ ಕರಿಮಣಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಹೇಮಾ ಪ್ರಭಾತ್ ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದವರು. 6ನೇ ವಯಸ್ಸಿನಲ್ಲಿ ಎರಡು ರೇಖೆ ಸಿನಿಮಾದ ಮೂಲಕ ಹೇಮಾ ಪ್ರಭಾತ್ ಚಿತ್ರರಂಗಕ್ಕೆ ಎಂಟ್ರಿಯಾದರು.
ಶಂಕರ್ ನಾಗ್ ಸಿನಿಮಾದಲ್ಲಿ ಡೈಲಾಗ್ ಹೇಳಲು ಗಿಫ್ಟ್!
ಸಂದರ್ಶನದಲ್ಲಿ ಮಾತನಾಡಿರುವ ಹೇಮಾ ಪ್ರಭಾತ್ ನನಗೆ ಈ ವಿಷಯ ಅಷ್ಟು ನೆನಪಿಲ್ಲ. ಆದ್ರೆ ನಮ್ಮ ತಂದೆ ಈ ವಿಷಯವನ್ನು ತುಂಬಾ ಬಾರಿ ಹೇಳಿದ್ದರು. ನನಗೆ ಶಂಕರ್ ನಾಗ್ ಅವರ ಕಾಳಿಂಗ ಸರ್ಪ ಹೆಸರಿನ ಸಿನಿಮಾ ಆಫರ್ ಬಂದಿತ್ತು. ಶೂಟಿಂಗ್ ಹೋದ ಕೂಡಲೇ ನನಗೆ ಪಾತ್ರದ ಡ್ರೆಸ್ ಹಾಕಿದ್ರಂತೆ. ಚಾಕ್ಲೇಟ್ ಕೊಟ್ರೆ ಮಾತ್ರ ಡೈಲಾಗ್ ಹೇಳ್ತಿನಿ ಅಂದಿದ್ದಕ್ಕೆ ತಂದು ಕೊಟ್ರಂತೆ. ನಂತರ ಮತ್ತೊಂದು ಡೈಲಾಗ್ ಹೇಳಲು ಗೊಂಬೆ ಕೇಳಿದ್ದೆ. ಶಂಕರ್ ನಾಗ್ ಅವರು ಅದನ್ನು ತರಿಸಿಕೊಟ್ಟಿದ್ದರಂತೆ. ಕೊನೆಗೆ ನಾನು ಆಕ್ಟ್ ಮಾಡಲ್ಲ ಎಂದು ಅಲ್ಲಿಂದ ಓಡಿ ಬಂದೆ ಅಂತ ನಮ್ಮ ತಂದೆ ಈ ವಿಷಯವನ್ನು ಹೇಳುತ್ತಿದ್ದರು. ನಂತರ ಕೊನೆಗೆ ಈ ಸಿನಿಮಾದಲ್ಲಿ ನಮ್ಮ ಅಕ್ಕ ನಟಿಸಿದರು.
ಇದನ್ನೂ ಓದಿ: ನೋ.. ಇದು ಶಂಕರ್‌ನಾಗ್ ಅವರದ್ದು..! ಇಳಯರಾಜ ಗುಡುಗು: ಇದು ಕನ್ನಡಿಗರು ಹೆಮ್ಮಪಡುವಂತಹ ವಿಷಯ!
ಈ ಘಟನೆ ನಡೆದ ಎರಡ್ಮೂರು ವರ್ಷದ ನಂತರ ಮತ್ತೊಮ್ಮೆ ಶಂಕರ್ ನಾಗ್ ಅವರ 'ರಸ್ತೆ ರಾಜ' ಸಿನಿಮಾದಲ್ಲಿ ನಟಿಸುವ ಅವಕಾಶ ಬಂತು. ಆಗ ನನ್ನನ್ನು ನೋಡುತ್ತಿದ್ದಂತೆ, ಅಯ್ಯೊಯ್ಯೋ, ಈ ಹುಡುಗಿನಾ ನನ್ನ ಸಿನಿಮಾಗೆ ಬೇಡಪ್ಪ. ಈ ಹುಡುಗಿ ನನ್ನ ಗಿಫ್ಟ್ ಮತ್ತು ಚಾಕ್ಲೆಟ್ ತೆಗೆದುಕೊಂಡು ಹೋಗ್ತಾಳೆ ಎಂದು ಶಂಕರ್ ನಾಗ್ ಹೇಳಿದ್ದರಂತೆ. ಆಗ ಇನ್ನುಳಿದವರು, ಇಲ್ಲ ನಾಲ್ಕೈದು ಸಿನಿಮಾದಲ್ಲಿ ನಟಿಸಿದ್ದಾಳೆ. ಈಗ ಹಾಗೆ ಮಾಡಲ್ಲ, ಚೆನ್ನಾಗಿ ಆಕ್ಟ್ ಮಾಡ್ತಾಳೆ ಎಂದು ಹೇಳಿದರು. ನಂತರ ರಸ್ತೆರಾಜ ಮತ್ತು ನ್ಯಾಯ ಗೆದ್ದಿತು ಎಂಬ ಎರಡು ಸಿನಿಮಾಗಳಲ್ಲಿ ಶಂಕರ್ ನಾಗ್ ಜೊತೆಯಲ್ಲಿ ಹೇಮಾ ಪ್ರಭಾತ್ ನಟಿಸಿದ್ದಾರೆ.
ಇದನ್ನೂ ಓದಿ: ಸೂರ್ಯನನ್ನ ಯಾಕೆ ಮದುವೆ ಆಗ್ಲಿಲ್ಲ ಅಂತ ಎಲ್ಲರೂ ಬೈತಿದ್ರು: ನಟಿ ಹೇಮಾ ಪ್ರಭಾತ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.