ಪಿ. ವಾಸು ನಿರ್ದೇಶನದ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅಭಿನಯದ ದೃಶ್ಯ 2 ಚಿತ್ರದ ಟ್ರೇಲರನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ. ಸಾಕಷ್ಟು ಸಸ್ಪೆನ್ಸ್ಗಳಿರುವ ಈ ಚಿತ್ರದ ಟ್ರೇಲರ್‌ಗೆ ಸಿನಿಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.
2014ರ ಜೂನ್ 20ರಂದು ಬಿಡುಗಡೆಯಾದ ಕ್ರೇಜಿಸ್ಟಾರ್ ವಿ.ರವಿಚಂದ್ರನ್ (V.Ravichandran) ಅಭಿನಯದ ಚಿತ್ರ 'ದೃಶ್ಯ' (Drishya). ಈ ಸಿನಿಮಾದಲ್ಲಿ ರಾಜೇಂದ್ರ ಪೊನ್ನಪ್ಪ ಪಾತ್ರದಲ್ಲಿ ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿ ರವಿಚಂದ್ರನ್ ಕಾಣಿಸಿಕೊಂಡಿದ್ದರು. ಇದೀಗ ಆ ಚಿತ್ರದ ಸೀಕ್ವೆಲ್ ಸಿದ್ಧವಾಗಿದ್ದು, ಪಿ.ವಾಸು (P.Vasu) ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 'ದೃಶ್ಯ 2' (Drishya 2) ಚಿತ್ರದಲ್ಲೂ ರವಿಚಂದ್ರನ್ ಮತ್ತು ನವ್ಯಾ ನಾಯರ್ (Navya Nair) ಮುಂದುವರಿದಿದ್ದಾರೆ. ಪುತ್ರಿ ಪಾತ್ರದಲ್ಲಿ ನಟಿ ಆರೋಹಿ ನಾರಾಯಣ್ (Arohi Narayan) ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟ್ರೇಲರ್‌ನ್ನು (Trailer) ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಇತ್ತೀಚೆಗೆ ಬಿಡುಗಡೆ ಮಾಡಿದರು.
ರವಿ ಅಣ್ಣ ನನ್ನನ್ನು, ನಮ್ಮ ಕುಟುಂಬದವನು ಎಂದದ್ದು ಇನ್ನೂ ಸಂತೋಷ ತಂದಿದೆ. ಈ ಚಿತ್ರ ಮಲಯಾಳಂ, ತೆಲುಗು ಭಾಷೆಯಲ್ಲಿ ಬಂದಿದೆ. ಆದರೆ ನಾನು ಯಾವ ಭಾಷೆಯಲ್ಲೂ ಈ ಸಿನಿಮಾ ನೋಡಿಲ್ಲ. ಹಾಗಾಗಿ ನನಗೆ ಕಥೆ ಗೊತ್ತಿಲ್ಲ. ನನ್ನ ಹೆಂಡತಿ ಮಲಯಾಳಿ. ಅವರು ಮಲೆಯಾಳಂ ಚಿತ್ರ ನೋಡುವಾಗ ನನಗೂ ತೋರಿಸುತ್ತಾರೆ. ನಾನು ಸಬ್ ಟೈಟಲ್ ನೋಡುತ್ತಿರುತ್ತೇನೆ. ಒಳ್ಳೆಯ ಕಲಾವಿದರು ಹಾಗೂ ಒಳ್ಳೆಯ ತಂತ್ರಜ್ಞರು ಸೇರಿ ಮಾಡಿದಾಗ ಅದು ಒಳ್ಳೆಯ ಸಿನಿಮಾನೇ ಆಗಿರುತ್ತದೆ. ದೃಶ್ಯ ಚಿತ್ರವನ್ನು ಕನ್ನಡದಲ್ಲೇ ನೋಡಿದ್ದೀನಿ.
ಡಿಸೆಂಬರ್‌ನಲ್ಲಿ ರವಿಚಂದ್ರನ್ ನಟನೆಯ Drishya 2 ತೆರೆಗೆ!
ಎರಡನೇ ಭಾಗವನ್ನು ಕನ್ನಡದಲ್ಲೇ ನೋಡುತ್ತೇನೆ. ನೀವು ಮೂರನೇ ಭಾಗ ಮಾಡುವುದಿದ್ದರೆ ಮೊದಲು ಕನ್ನಡದಲ್ಲೇ ಮಾಡಿ. ದೃಶ್ಯ ಮೊದಲ ಭಾಗದ ಸಿನಿಮಾ ಮಾತುಕತೆ ಆರಂಭವಾಗಿದ್ದು, ನಮ್ಮ 'ಮಾಣಿಕ್ಯ' ಚಿತ್ರದ ಚಿತ್ರೀಕರಣ ಸಮಯದಲ್ಲಿ. ನಾನು ರವಿ ಸರ್‌ಗೆ ಒಂದು ಚೆನ್ನಾಗಿರುವ ಮಲಯಾಳಂ ಕಥೆ ಬಂದಿದೆ ಕೇಳಿ ಅಂತ ಹೇಳಿದೆ. ಅವರು ಮೊದಲು ಕೇಳಲಿಲ್ಲ. ನಂತರ ಕೆಲವು ದಿನಗಳ ನಂತರ ಕಥೆ ಕೇಳಿದರು. ಹೀಗೆ 'ದೃಶ್ಯ' ಚಿತ್ರ ಆರಂಭವಾಯಿತು ಎಂದು ಸುದೀಪ್ ಟ್ರೇಲರ್ ಸಮಾರಂಭದಲ್ಲಿ ಹೇಳಿದರು.
ಸುದೀಪ್ ನನ್ನ ಮಗ. ಆತನನ್ನು ಬರಮಾಡಿಕೊಳ್ಳಲು ನಾನೇ ಮುಖ್ಯದ್ವಾರದ ಬಳಿ ಹೋಗಿದ್ದೆ. ನನ್ನ ಸಮಾರಂಭಕ್ಕೆ ಬರಲು ಸುದೀಪ್‌ಗೆ ಕರೆಯಬೇಕೆಂದು ಏನು ಇಲ್ಲ. ಆರ್ಡರ್ ಮಾಡಬಹುದು. ಏಕೆಂದರೆ ಆತ ನನ್ನ ಮಗ. ಸುದೀಪ್ ಸಮಾರಂಭಗಳಿಗೆ ನಾನೂ ಹಾಗೆಯೇ ಹೋಗುತ್ತೇನೆ. ನಮ್ಮಿಬ್ಬರಲ್ಲಿ ಆ ಬಾಂಧವ್ಯವಿದೆ. ಪಿ.ವಾಸು ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ಮೊದಲ ಭಾಗದ ತರಹ ನೂರಕ್ಕೆ ನೂರು ಜನರ ಮೆಚ್ಚುಗೆಗೆ ಪಾತ್ರವಾಗಲಿದೆ. ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕೈಚಳಕ ತುಂಬಾ ಚೆನ್ನಾಗಿದೆ. 'ದೃಶ್ಯ' ಚಿತ್ರದ ಚಿತ್ರತಂಡ ಬಹುತೇಕ ಈ ಚಿತ್ರದಲ್ಲೂ ಇದೆ. ಹಿರಿಯ ನಟ ಅನಂತನಾಗ್ (Ananth Nag) 'ದೃಶ್ಯ 2'ನಲ್ಲಿ ಅಭಿನಯಿಸಿದ್ದಾರೆ. ಒಬ್ಬ ಜವಾಬ್ದಾರಿಯುತ ತಂದೆ ಸಂಕಷ್ಟದಿಂದ ತನ್ನ ಕುಟುಂಬವನ್ನು ಹೇಗೆ ಪಾರು ಮಾಡುತ್ತಾನೆ ಎಂಬ ವಿಷಯ ಚಿತ್ರದ ಹೈಲೆಟ್ ಎಂದು ವಿ.ರವಿಚಂದ್ರನ್ ಹೇಳಿದರು.
ಥಿಯೇಟರ್‌ಗೇ ಬರ್ತೀವಿ, ಓಟಿಟಿ ನಮ್ಮದಲ್ಲ: ರವಿಚಂದ್ರನ್
'ದೃಶ್ಯ 2' ಚಿತ್ರದ ಟ್ರೇಲರ್ ಸಾಕಷ್ಟು ಸಸ್ಪೆನ್ಸ್ಗಳಿಂದ ಕೂಡಿದ್ದು, ಇ4 ಎಂಟರ್‌ಟೈನ್‌ಮೆಂಟ್ ಬ್ಯಾನರ್ನಲ್ಲಿ ಮೂಡಿಬಂದಿದೆ. ಜಿ.ಎಸ್.ವಿ. ಸೀತಾರಾಂ ಕ್ಯಾಮರಾ ಕೈಚಳಕ, ರವಿ ಸಂತೆಹುಕ್ಲು ಕಲಾ ನಿರ್ದೇಶನ, ಸುರೇಶ್ ಅರಸ್ ಸಂಕಲನ ಹಾಗೂ ಲೋಕೇಶ್ ಬಿ.ಕೆ ಗೌಡ, ಭರತ್ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ. ಪ್ರಭು ಶಿವಾಜಿ, ಸಾಧುಕೋಕಿಲ, ನೀತು ರೈ, ಪ್ರಮೋದ್ ಶೆಟ್ಟಿ, ಅಶೋಕ್, ಶಿವರಾಂ, ಉನ್ನತಿ, ಕೃಷ್ಣ ಯುಟರ್ನ್, ನಾರಾಯಣ್ ಸ್ವಾಮಿ, ಲಾಸ್ಯ ನಾಗರಾಜ್ ಸೇರಿದಂತೆ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಡಿಸೆಂಬರ್ 10ರಂದು 'ದೃಶ್ಯ 2' ಚಿತ್ರ ಬಿಡುಗಡೆಯಾಗಲಿದೆ.