
ಚಿತ್ರರಂಗದಲ್ಲಿ ಸಾಮಾನ್ಯವಾಗಿ ತಮ್ಮ ಸಿನಿಮಾಗಳ ಬಿಡುಗಡೆಗೆ ಪೈಪೋಟಿ ನಡೆಸುವವರೇ ಹೆಚ್ಚು. ಆದರೆ, ಕೆಲವೊಮ್ಮೆ ಸಿನಿಮಾ ಮೇಲಿನ ಪ್ರೀತಿ ಮತ್ತು ಪರಸ್ಪರ ಗೌರವ ಇಂತಹ ಪೈಪೋಟಿಯನ್ನೂ ಮೀರಿಸುತ್ತದೆ. ಇದಕ್ಕೊಂದು ತಾಜಾ ಉದಾಹರಣೆ ಗಣೇಶ್ ಅಭಿನಯದ ‘ಬೃಂದಾವಿಹಾರಿ’ ಮತ್ತು ‘ಪ್ರೇಮದ ಊರಲಿ’ ಚಿತ್ರತಂಡಗಳ ನಡುವಿನ ಸ್ನೇಹಪೂರ್ಣ ನಡೆ. ಹೌದು, ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಬೃಂದಾವಿಹಾರಿ’ ಸಿನಿಮಾಗೆ ಇದೀಗ ‘ಪ್ರೇಮದ ಊರಲಿ’ ಚಿತ್ರತಂಡ ಬೆಂಬಲವಾಗಿ ನಿಂತಿದೆ. ವಿಶೇಷವೆಂದರೆ, ಈ ಬೆಂಬಲದ ಹಿಂದೆ ಒಂದು ಸುಂದರ ಕಾರಣವೂ ಇದೆ.
ಅಂದು ತಮ್ಮ ಸಿನಿಮಾದ ಬಿಡುಗಡೆ ಮುಂದೂಡಿದ್ದ ಗಣೇಶ್ ತಂಡ!
‘ಬೃಂದಾವಿಹಾರಿ’ ಸಿನಿಮಾ ಅಕ್ಟೋಬರ್ 16ರಂದು ತೆರೆಗೆ ಬರಲು ಸಿದ್ಧವಾಗಿತ್ತು. ಆದರೆ, ಅದೇ ಸಂದರ್ಭದಲ್ಲಿ ‘ಪ್ರೇಮದ ಊರಲಿ’ ಸಿನಿಮಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿತ್ತು. ಮತ್ತೊಂದು ಸಿನಿಮಾದ ಯಶಸ್ವಿ ಓಟಕ್ಕೆ ಅಡ್ಡಿಯಾಗಬಾರದು ಎಂಬ ಸದುದ್ದೇಶದಿಂದ ಗಣೇಶ್ ಹಾಗೂ ‘ಬೃಂದಾವಿಹಾರಿ’ ಚಿತ್ರತಂಡ ತಮ್ಮ ಸಿನಿಮಾದ ಬಿಡುಗಡೆಯನ್ನು ಮುಂದೂಡಿತ್ತು. ಅಂದು ‘ಪ್ರೇಮದ ಊರಲಿ’ ಸಿನಿಮಾಗೆ ಅವಕಾಶ ಮಾಡಿಕೊಟ್ಟಿದ್ದ ಚಿತ್ರತಂಡದ ಈ ನಿರ್ಧಾರಕ್ಕೆ ಇದೀಗ ಪ್ರತಿಯಾಗಿ ಪ್ರೀತಿಯ ಬೆಂಬಲ ಸಿಕ್ಕಿದೆ. ‘ಪ್ರೇಮದ ಊರಲಿ’ ಚಿತ್ರತಂಡ ‘ಬೃಂದಾವಿಹಾರಿ’ ಚಿತ್ರದ ಪ್ರಚಾರಕ್ಕೆ ಕೈಜೋಡಿಸಲು ಮುಂದಾಗಿದೆ.
‘ಬೃಂದಾವಿಹಾರಿ’ ಕಾರ್ಯಕ್ರಮದಲ್ಲಿ ಪ್ರೇಮದ ಊರಲಿ ತಂಡ ಭಾಗಿ!
‘ಬೃಂದಾವಿಹಾರಿ’ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ‘ಪ್ರೇಮದ ಊರಲಿ’ ಸಿನಿಮಾದ ಕಲಾವಿದರು ಮತ್ತು ತಂತ್ರಜ್ಞರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಮೂಲಕ ಗಣೇಶ್ ಅಭಿನಯದ ಚಿತ್ರಕ್ಕೆ ಪ್ರಚಾರದ ಬಲ ನೀಡುವುದರ ಜೊತೆಗೆ ಚಿತ್ರತಂಡಕ್ಕೆ ಶುಭ ಹಾರೈಸಲಿದ್ದಾರೆ. ಒಂದು ಸಿನಿಮಾದ ಯಶಸ್ಸಿಗೆ ಮತ್ತೊಂದು ಸಿನಿಮಾದ ತಂಡವೇ ಬೆಂಬಲವಾಗಿ ನಿಲ್ಲುತ್ತಿರುವುದು ಕನ್ನಡ ಚಿತ್ರರಂಗದ ಆರೋಗ್ಯಕರ ಬೆಳವಣಿಗೆಯೂ ಹೌದು.
ಇನ್ನು ‘ಬೃಂದಾವಿಹಾರಿ’ ಚಿತ್ರದ ಬಿಡುಗಡೆ ದಿನಾಂಕ ಮತ್ತೊಮ್ಮೆ ಮುಂದೂಡಿಕೆಯಾಗಿದೆ ಎಂಬ ಮಾತುಗಳು ಇತ್ತೀಚೆಗೆ ಹರಿದಾಡಿದ್ದವು. ಆದರೆ ಈ ವದಂತಿಗಳಿಗೆ ತೆರೆ ಎಳೆದಿರುವ ಗಣೇಶ್, ಸಿನಿಮಾ ನವೆಂಬರ್ 20ರಂದು ಬಿಡುಗಡೆಯಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಚಿತ್ರದಲ್ಲಿ ಗಣೇಶ್ ಅವರು ಮಾಧವ ಎಂಬ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಶ್ರೀನಿವಾಸ್ ರಾಜು ನಿರ್ದೇಶನವಿದೆ. ಈ ಹಿಂದೆ ಗಣೇಶ್ ಅಭಿನಯದ ಯಶಸ್ವಿ ಸಿನಿಮಾ ‘ಕೃಷ್ಣಂ ಪ್ರಣಯ ಸಖಿ’ಯನ್ನೂ ಇದೇ ನಿರ್ದೇಶಕರು ರೂಪಿಸಿದ್ದರು.
ಸದ್ಯ ದೇವಿಕಾ ಭಟ್ ಮತ್ತು ಮಾಳವಿಕಾ ಶರ್ಮಾ ಚಿತ್ರದ ನಾಯಕಿಯರಾಗಿ ನಟಿಸಿದ್ದಾರೆ. ಸಮೃದ್ಧಿ ಮಂಜುನಾಥ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅಂದು ಮತ್ತೊಂದು ಸಿನಿಮಾದ ಗೆಲುವಿಗೆ ದಾರಿ ಮಾಡಿಕೊಟ್ಟಿದ್ದ ‘ಬೃಂದಾವಿಹಾರಿ’ ತಂಡಕ್ಕೆ ಇಂದು ‘ಪ್ರೇಮದ ಊರಲಿ’ ತಂಡ ಸಾಥ್ ನೀಡುತ್ತಿದೆ. ಈ ಸ್ನೇಹದ ಬೆಂಬಲ ಗಣೇಶ್ ಸಿನಿಮಾದ ಬಾಕ್ಸ್ ಆಫೀಸ್ ಓಟಕ್ಕೂ ನೆರವಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.