12 ವರ್ಷಗಳ ಶ್ರಮಕ್ಕೆ ಬೆಲೆ ಇಲ್ಲವೇ? ಆಯುಷ್ ಸಿನಿಮಾ ವಿವಾದದಲ್ಲಿ ಪುರುಷೋತ್ತಮ್-ಪ್ರಿಯಾಂಕಾ ನಡುವೆ ವಾಕ್ಸಮರ!

Published : Nov 12, 2026, 04:27 PM IST
Priyanka Upendra vs Purushotham

ಸಾರಾಂಶ

ಉಪೇಂದ್ರ ಪುತ್ರ ಆಯುಷ್ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಮೊದಲ ಸಿನಿಮಾದಲ್ಲಿ ನಿರ್ದೇಶಕರ ಬದಲಾವಣೆ ವಿವಾದಕ್ಕೆ ಕಾರಣವಾಗಿದೆ. ಎರಡು ಹಂತಗಳ ಚಿತ್ರೀಕರಣ ಮುಗಿದ ಬಳಿಕ ನಿರ್ದೇಶಕ ಪುರುಷೋತ್ತಮ್..

ನಟ ಉಪೇಂದ್ರ ಪುತ್ರ ಆಯುಷ್‌ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿರುವ ಮೊದಲ ಚಿತ್ರ ವಿವಾದಕ್ಕೆ ಸಿಲುಕಿದೆ. ಚಿತ್ರದ ನಿರ್ದೇಶಕ ಪುರುಷೋತ್ತಮ್‌ ಅವರನ್ನು ಚಿತ್ರತಂಡದಿಂದ ಕೈಬಿಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ. ಚಿತ್ರದ ಎರಡು ಹಂತಗಳ ಚಿತ್ರೀಕರಣ ಮುಗಿದ ಬಳಿಕ ನಿರ್ದೇಶಕರನ್ನು ಬದಲಾಯಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ನಿರ್ದೇಶಕ ಪುರುಷೋತ್ತಮ್‌ ಮತ್ತು ನಿರ್ಮಾಪಕರ ಕುಟುಂಬದ ಪರವಾಗಿ ನಟಿ ಪ್ರಿಯಾಂಕ ಉಪೇಂದ್ರ ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಿದ್ದಾರೆ.

ತಮ್ಮ 12 ವರ್ಷಗಳ ಪರಿಶ್ರಮಕ್ಕೆ ತಕ್ಕ ಗೌರವ ಮತ್ತು ಪರಿಹಾರ ಸಿಗಬೇಕು ಎಂಬುದು ಪುರುಷೋತ್ತಮ್‌ ಅವರ ಬೇಡಿಕೆ. ಮತ್ತೊಂದೆಡೆ, ಸರಿಯಾದ ಯೋಜನೆ ಇಲ್ಲದೆ ಚಿತ್ರೀಕರಣ ನಡೆದಿದ್ದರಿಂದ ನಿರ್ದೇಶಕರನ್ನು ಬದಲಾಯಿಸಬೇಕಾಯಿತು ಎಂಬುದು ಪ್ರಿಯಾಂಕ ಉಪೇಂದ್ರ ಅವರ ವಾದ. ಈ ವಿವಾದಕ್ಕೆ ಸಂಬಂಧಿಸಿದಂತೆ ಇಬ್ಬರೂ ನೀಡಿರುವ ಹೇಳಿಕೆಗಳು ಇಲ್ಲಿವೆ.

ನಿರ್ದೇಶಕ ಪುರುಷೋತ್ತಮ್‌ ಹೇಳುವುದೇನು?

‘ಚಿತ್ರಕ್ಕೆ ಎರಡು ಶೆಡ್ಯೂಲ್‌ಗಳ ಚಿತ್ರೀಕರಣ ಮಾಡಲಾಗಿತ್ತು. ಆನಂತರ ಇದ್ದಕ್ಕಿದ್ದಂತೆ ನಿರ್ಮಾಪಕರು ಫೋನ್‌ ಮಾಡಿ, ಈ ಚಿತ್ರವನ್ನು ಪ್ರಿಯಾಂಕ ಉಪೇಂದ್ರ ಅವರೇ ನಿರ್ದೇಶಿಸುತ್ತಾರೆ ಎಂದರು. ಅವರು ನಿರ್ದೇಶಕಿಯಾಗುವುದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ, ನನ್ನದೇ ಕತೆಯನ್ನು ಇಟ್ಟುಕೊಂಡು ಸಿನಿಮಾ ಮುಂದುವರಿಸುವುದಾದರೆ ನನಗೆ ತಕ್ಕ ಪರಿಹಾರ ನೀಡಬೇಕು. ಚಿತ್ರದ ಕತೆ ಮತ್ತು ನಿರ್ದೇಶನದ ಕ್ರೆಡಿಟ್‌ ಎರಡೂ ನನಗೆ ಸಿಗಬೇಕು. ಯಾಕೆಂದರೆ ಈ ಕತೆಗಾಗಿ 12 ವರ್ಷ ಕೆಲಸ ಮಾಡಿದ್ದೇನೆ. 30 ವರ್ಷಗಳಿಂದ ಚಿತ್ರರಂಗದಲ್ಲಿ ಶಿಸ್ತಿನ ಜೀವನ ಮಾಡಿಕೊಂಡು ಬಂದಿದ್ದೇನೆ.

ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇದನ್ನು ನನಗೊಂದು ಪಾಠ ಎಂದು ಭಾವಿಸುತ್ತೇನೆ. ಪ್ರಿಯಾಂಕ ಉಪೇಂದ್ರ ಅವರು ಮಾಧ್ಯಮಗಳಲ್ಲಿ ನನ್ನ ಕತೆ ಇಟ್ಟುಕೊಂಡು ಸಿನಿಮಾ ಮಾಡುತ್ತಿಲ್ಲ, ಹೊಸ ಕತೆ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ಹಾಗಿದ್ದರೆ ಅದನ್ನು ಕೇವಲ ಬಾಯಿಮಾತಿನಲ್ಲಿ ಹೇಳಿದರೆ ಸಾಲದು. ಪತ್ರದಲ್ಲಿ ಬರೆದುಕೊಡಲಿ. ಈ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ದೇಶಕರ ಸಂಘ ಮತ್ತು ನಿರ್ಮಾಪಕರ ಸಂಘಕ್ಕೂ ಮನವಿ ಮಾಡಿದ್ದೇನೆ. ನನಗೆ ವಿವಾದ ಬೇಕಿಲ್ಲ. ಸೂಕ್ತ ನ್ಯಾಯ ಸಿಕ್ಕರೆ ಸಾಕು.’

ಪ್ರಿಯಾಂಕ ಉಪೇಂದ್ರ ಅವರ ವಾದವೇನು?

‘ಹಣ ಮತ್ತು ಸಿನಿಮಾವನ್ನು ರಕ್ಷಿಸುವ ಉದ್ದೇಶದಿಂದ ನಿರ್ದೇಶಕರನ್ನು ಚಿತ್ರದಿಂದ ಹೊರಹಾಕಿದ್ದೇವೆ. ನಿರ್ದೇಶಕರು ಆರಂಭದಲ್ಲಿ ಕೇವಲ ಕತೆಯ ಎಳೆ ಇಟ್ಟುಕೊಂಡು ನಮ್ಮ ಬಳಿ ಬಂದಿದ್ದರು. ಆನಂತರ ನಿರ್ಮಾಪಕರ ತಂಡ ಸಂಪೂರ್ಣ ಕತೆ ಮತ್ತು ಚಿತ್ರಕಥೆ ಸಿದ್ಧಪಡಿಸಲು ಹಣ ಹಾಗೂ ಸಮಯ ವ್ಯಯಿಸಿದೆ. ಚಿತ್ರೀಕರಣಕ್ಕೂ ಮುನ್ನ ನಿರ್ದೇಶಕರ ಸೂಚನೆಯಂತೆ ಎರಡು ಬಾರಿ ಜಮ್ಮು-ಕಾಶ್ಮೀರಕ್ಕೆ ಹೋಗಿ ಬಂದಿದ್ದೇವೆ. ಸಂಪೂರ್ಣ ಚಿತ್ರಕಥೆ ಸಿದ್ಧವಾಗಿಲ್ಲದಿದ್ದರೂ ನಿರ್ದೇಶಕರ ಮೇಲಿನ ನಂಬಿಕೆಯಿಂದ ಚಿತ್ರೀಕರಣ ಆರಂಭಿಸಿದೆವು.

ಆದರೆ, ಚಿತ್ರೀಕರಣ ಆರಂಭವಾದ ಬಳಿಕ ಸರಿಯಾದ ಯೋಜನೆ ಇರಲಿಲ್ಲ. ಅಂದುಕೊಂಡಂತೆ ಶೂಟಿಂಗ್‌ ನಡೆಯಲಿಲ್ಲ. 27 ದಿನಗಳ ಚಿತ್ರೀಕರಣದ ವಿಡಿಯೋವನ್ನು ಸಂಕಲಿಸಿ ತೋರಿಸುವಂತೆ ಕೇಳಿದರೂ ಅವರು ತೋರಿಸಲಿಲ್ಲ. ನಾವೇ ನೋಡಿದಾಗ ನಮಗೆ ಸಮಾಧಾನವಾಗಲಿಲ್ಲ. ಎರಡನೇ ಹಂತದ ಚಿತ್ರೀಕರಣಕ್ಕೆ ತೆರಳುವ ಮೊದಲು ಸ್ಪಷ್ಟ ಯೋಜನೆ ಕೇಳಿ 15 ದಿನಗಳ ಕಾಲಾವಕಾಶವನ್ನೂ ನೀಡಿದ್ದೆವು. ಆದರೂ ನಿರ್ದೇಶಕರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹೀಗಾಗಿ ಅವರನ್ನು ಚಿತ್ರದಿಂದ ಹೊರಹಾಕುವ ನಿರ್ಧಾರ ಕೈಗೊಳ್ಳಬೇಕಾಯಿತು.’

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

1000 ಕೋಟಿ ಕ್ಲಬ್ ಸೇರಲು ಯಶ್‌ಗೆ ಬೇಕಾಗಿರುವುದೆಷ್ಟು? ರಾಮಾಯಣದ ಕಲೆಕ್ಷನ್‌ನಲ್ಲಿ ಕರ್ನಾಟಕದ ಪಾಲೆಷ್ಟು?
ಬಾಕ್ಸ್ ಆಫೀಸ್‌ನಲ್ಲಿ ‘ರಾಮಾಯಣ’ ಅಬ್ಬರ; ಒಂದೇ ವಾರದಲ್ಲಿ ₹1,000 ಕೋಟಿ ಸಮೀಪ ಕಲೆಕ್ಷನ್ ಮಾಡಿದ ಯಶ್ ಸಿನಿಮಾ..!