
ಸಂದರ್ಶನ: ಪ್ರಿಯಾ ಕೆರ್ವಾಶೆ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಯಲ್ಲಿ ಈ ಬಾರಿ ನಿರ್ಮಾಪಕರ ವಲಯದಿಂದ ಸ್ಪರ್ಧಿಸಿ ಗೆದ್ದವರು ಚಿತ್ರನಟಿ, ನಿರ್ಮಾಪಕಿ ಜಯಮಾಲಾ. ರಾಷ್ಟ್ರಮಟ್ಟದಲ್ಲೇ ಎರಡನೇ ಬಾರಿ ವಾಣಿಜ್ಯಮಂಡಳಿ ಅಧ್ಯಕ್ಷ ಪದವಿಗೇರಿದ ಮೊದಲ ಮಹಿಳೆ ಜಯಮಾಲಾ. ಈ ಹಿಂದೆ ವಾಣಿಜ್ಯ ಮಂಡಳಿಯಲ್ಲಿದ್ದಾಗ ಅಮೃತ ಮಹೋತ್ಸವ ಸೇರಿ ಅನೇಕ ಚಿತ್ರರಂಗ ಸ್ನೇಹಿ ಕೆಲಸಗಳಿಂದ ಗಮನ ಸೆಳೆದಿದ್ದ ಜಯಮಾಲಾ ಅವರು ಕನ್ನಡ ಓಟಿಟಿ ಬರಲಿದೆಯೇ? ಪ್ಯಾನ್ ಇಂಡಿಯಾ ಹೊಡೆತಕ್ಕೆ ಸ್ಯಾಂಡಲ್‌ವುಡ್ ಸಹಿಸಬಲ್ಲದೇ? ಫೈರ್ ನಂತಹ ಮಹಿಳಾ ಆಂದೋಲನದ ಅಗತ್ಯ ಕನ್ನಡ ಚಿತ್ರರಂಗಕ್ಕೂ ಇದೆಯೇ? ಕನ್ನಡದಲ್ಲಿ ಸಿನಿಮಾ ಅತಿವೃಷ್ಟಿ ಹತೋಟಿ ಸಾಧ್ಯವೇ? ಕಲಾತ್ಮಕ ಸಿನಿಮಾಗಳ ಮರು ಜೀವ ಸಾಧ್ಯವೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜಯಮಾಲ.
ಟೆನ್ಶನ್ ಇಲ್ಲ. ಖುಷಿ ಇದೆ. ಕೆಲಸ ಮಾಡಬೇಕಷ್ಟೆ. ಇಲ್ಲಿ ಎಷ್ಟೇ ಸಮಸ್ಯೆ ಇದ್ದರೂ ಪರಿಹಾರ ಅದರ ಹಿಂದೆಯೇ ಇರುವುದರಿಂದ ಕೆಲಸ ಶುರು ಮಾಡಿದ್ದೇನೆ. ಈ ಹಿಂದೆ ಇಲ್ಲಿ ಕೆಲಸ ಮಾಡಿರುವ ಅನುಭವ ಇದೆ. ಒಂದಷ್ಟು ಓಡಾಡಬೇಕು, ಬೇಡಿಕೆಗಳನ್ನು ಇಟ್ಟು ಅದನ್ನು ಸರಿಯಾದ ಮಾರ್ಗದಲ್ಲಿ ಪರಿಹರಿಸಬೇಕು.
ಸಾಕಷ್ಟಿವೆ. ಒಂದು ರಾತ್ರಿ, ಹಗಲಿನಲ್ಲಿ ಎಲ್ಲವನ್ನೂ ಸರಿ ಮಾಡುತ್ತೇವೆ ಎಂಬ ಪೊಳ್ಳು ಆಶ್ವಾಸನೆ ನೀಡುವುದಿಲ್ಲ. ಇದು ಬದಲಾದ ಕಾಲಘಟ್ಟ. ಚಿತ್ರರಂಗ ಸೆಲ್ಯುಲಾಯ್ಡ್‌ನಿಂದ ಡಿಜಿಟಲ್‌ಗೆ ಬಂದಿದ್ದು, ಅನೇಕ ಸವಾಲುಗಳಿವೆ. ಎಐ, ಲೇಸರ್ ಸಿನಿಮಾದಂಥ ಹೊಸ ಹೊಸ ತಂತ್ರಜ್ಞಾನಗಳ ನಡುವೆ ನಾವು ಫಿಟ್ ಆಗುವುದು ಹೇಗೆ ಎಂಬ ಕುತೂಹಲ, ಆತಂಕ ಎರಡೂ ಇದೆ. ಹೊಸ ನಿರ್ಮಾಪಕರಿಗೆ ಹೊಸ ಚಾಲೆಂಜ್‌ಗಳಿವೆ. ಹಳೆಯ ನಿರ್ಮಾಪಕರು ಸೋತು ಬಿಟ್ಟಿದ್ದಾರೆ. ಸೋತವರಿಗೆ ದಾರಿ ತೋರಿಸಬೇಕು, ಹೊಸಬರನ್ನು ಬರಮಾಡಿಕೊಳ್ಳಬೇಕು. ಅನೇಕ ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ. ಚಿತ್ರರಂಗದ ಮೇಲಿನ ಪ್ರೀತಿಯಿಂದ ಕೆಲವರು ಚಿತ್ರಮಂದಿರ ಮುಚ್ಚದೇ, ಥಿಯೇಟರ್ ನವೀಕರಣಕ್ಕೆ ಸರ್ಕಾರದ ಹೊಸ ಯೋಜನೆ ಬರಬಹುದು ಎಂಬ ಆಶಾವಾದದಲ್ಲಿದ್ದಾರೆ. ಅವರಿಗೆ ಧ್ವನಿಯಾಗಬೇಕು. ಸದ್ಯದ ತುರ್ತು ಮುಚ್ಚಿಹೋಗಿರುವ ಚಿತ್ರಮಂದಿರಗಳನ್ನು ಅಸ್ತಿತ್ವಕ್ಕೆ ತರುವುದು. ಹೊಸ ಬಡಾವಣೆಗಳಲ್ಲಿ ಚಿತ್ರಮಂದಿರ ನಿರ್ಮಾಣ, ಜನತಾ ಚಿತ್ರಮಂದಿರ, ಚಿತ್ರಮಂದಿರದ ಮಾಲೀಕರಿಗೆ ನವೀಕರಿಸಲು ಸಾಲ ಕೊಡಿಸುವುದು ಹೀಗೆ, ಎಲ್ಲಕ್ಕಿಂತ ಮುಖ್ಯವಾಗಿ ಸಿನಿಮಾ ಇಂಡಸ್ಟ್ರಿ ಎಂಬುದು ಕಾರ್ಯಗತವಾಗಬೇಕು. ಇದರಿಂದ ಚಿತ್ರರಂಗಕ್ಕೆ ಬಹಳ ದೊಡ್ಡ ಸಹಾಯವಾಗುತ್ತದೆ.
ವರ್ಷಕ್ಕೆ 250ಕ್ಕೂ ಹೆಚ್ಚು ಸಿನಿಮಾ ನಿರ್ಮಾಣವಾದಾಗ ರಿಲೀಸ್ ನಿಲ್ಲಿಸಿದರೆ ಸಮಸ್ಯೆ ಆಗುತ್ತದೆ. ನಿರ್ಮಾಪಕರು ಕಾಯುತ್ತಲೇ ಹೋದರೆ ಅವರು ಸಿನಿಮಾಗೆ ಹಾಕಿದ ದುಡ್ಡು, ಮನೆ ಮಠ ಅಡಲಿಟ್ಟು ಸಾಲ ತಂದಿದ್ದು ಒಂದಕ್ಕೆ ನಾಲ್ಕು ಪಟ್ಟಾಗುತ್ತದೆ. ನಿರ್ಮಾಪಕರು ಸ್ಪರ್ಧೆ ಎದುರಿಸುವ ಶಕ್ತಿ ಇಟ್ಟುಕೊಳ್ಳಬೇಕು. ಇಲ್ಲವೆಂದರೆ ಖಂಡಿತವಾಗಿ ಸಿನಿಮಾ ಮಾಡಬಾರದು. ಸಿಲಿಕಾನ್ ಸಿಟಿ ಇದು. ಎಲ್ಲ ಭಾಷೆಯ ಚಿತ್ರಗಳೂ ಬರುತ್ತವೆ. ಅವುಗಳ ನಡುವೆ ಸ್ಪರ್ಧಿಸಿ ಗೆಲ್ಲದೇ ಬೇರೆ ಮಾರ್ಗವಿಲ್ಲ.
ಎಲ್ಲಿದ್ದಾರೆ ಆ ಥರದವರು? ಇಲ್ಲಿ ಕೈಗೆ ಹೂ ಕಟ್ಟಿಕೊಂಡು ಬಂದಿರೋರನ್ನು ನನಗೆ ತೋರಿಸಿ. ಚಿತ್ರರಂಗದಲ್ಲಿ ಏನನ್ನೋ ಸಾಧಿಸ್ತೀನಿ ಅಂತ ಕನಸು ಕಟ್ಟಿ ಬಂದವರೇ ಎಲ್ಲ. ಕನಸು ಕಟ್ಟುವವರು ಮಾತ್ರ ಇಲ್ಲಿಗೆ ಬರಲು ಸಾಧ್ಯವಾಗುತ್ತದೆ. ಇಂದು ಚಿತ್ರರಂಗದ ಗೌರವವನ್ನು ಉಳಿಸಿದ್ರೆ ಕೈಸುಟ್ಟುಕೊಂಡ ಹೊಸ ನಿರ್ಮಾಪಕರು ಮಾತ್ರ. ಅವರಿಗೆ ಕೃತಜ್ಞರಾಗಿರಬೇಕು.
ಕರ್ನಾಟಕದಲ್ಲಿ ಸಿನಿಮಾ ನೋಡಿದರೆ ಮಾತ್ರ ಜನರನ್ನು ತಲುಪಿದ್ದೀವಿ ಎಂಬ ಕಲ್ಪನೆ ತಪ್ಪು. ನಮ್ಮ ತಾಯಿ ಸಾಹೇಬ 48 ರಾಷ್ಟ್ರಗಳಲ್ಲಿ ಹೌಸ್‌ಫುಲ್ ಶೋ ಆಯ್ತು. ಅವರು ಜನರಲ್ವಾ. ಆದರೂ ಕಲಾತ್ಮಕ ಚಿತ್ರಗಳು ಹಿಂದೆ ಆಂದೋಲನದ ರೀತಿ ಮುನ್ನೆಲೆಗೆ ಬಂದವು. ಅನೇಕ ಸಾಹಿತಿಗಳೇ ನಿರ್ದೇಶಕರಾದರು. ಅವರಿಗೆ ರಾಷ್ಟ್ರ, ಅಂತಾರಾಷ್ಟ್ರೀಯ ಪ್ರಶಸ್ತಿ ಬಂತು. ನಂತರದಲ್ಲಿ ಕೆಲವರು ಪ್ರಶಸ್ತಿಗಾಗಿ ಸಿನಿಮಾ ಮಾಡಲು ಪ್ರಾರಂಭಿಸಿದರು. ಜನರಿಗಾಗಿ ಸಿನಿಮಾ ಮಾಡೋದು ಬಿಟ್ಟುಹೋಯಿತು. ಇಂದಿಗೂ ಉತ್ತಮ ಕಲಾತ್ಮಕ ಸಿನಿಮಾಗಳು ಕನ್ನಡ ಸಿನಿಮಾರಂಗಕ್ಕೆ ಬೇಕು.
ಇಂಥ ಸಿನಿಮಾಗಳಿಗೆ ಥೇಟರ್ ಸಮಸ್ಯೆಯಾದರೆ ಖಂಡಿತಾ ನಾವು ಬಗೆಹರಿಸ್ತೀವಿ. ಚಿತ್ರರಂಗ ಇಂಡಸ್ಟ್ರಿ ಎಂದು ಘೋಷಣೆ ಆದಾಗ ಸಾಲ ಸಿಗುತ್ತದೆ. ಒಂದೊಳ್ಳೆ ಸಿನಿಮಾ ಮಾಡಿ ಜನರಿಗೆ ತಲುಪಿಸಬಹುದು.
ಹಿಂದೆಯೇ ಸಮಗ್ರ ಚಲನಚಿತ್ರ ನೀತಿಯನ್ನು ತಂದಿದ್ದೇವೆ. ಆದರೆ ಸರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ. ಈಗ ಅದನ್ನು ಈ ಕಾಲದ ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಿ ಅನುಷ್ಠಾನಕ್ಕೆ ತನ್ನಿ ಎಂದು ಸರ್ಕಾರವನ್ನು ಕೇಳುತ್ತಿದ್ದೇವೆ. ಈ ಹಿಂದೆ ಚಿತ್ರನಗರಿ ಬೇಕು ಎಂಬ ಪ್ರಸ್ತಾವನೆ ಇತ್ತು. ಈಗ ಚಿತ್ರನಗರಿಯೊಳಗೆ ನಮ್ಮ ತಂತ್ರಜ್ಞರು, ಕಾರ್ಮಿಕರು ಇರುವಂಥ ವ್ಯವಸ್ಥೆ ಆಗಬೇಕು ಎಂದು ಕೇಳಿದ್ದೇವೆ. ನಮಗೆ ರೈಲಿನಲ್ಲಿ, ಜೈಲಿನಲ್ಲಿ, ಏರೋಪ್ಲೇನ್, ಪೊಲೀಸ್ ಸ್ಟೇಶನ್, ಕೋರ್ಟ್‌ಗಳಲ್ಲಿ ಶೂಟಿಂಗ್‌ಗೆ ಅವಕಾಶ ಕೊಡಲ್ಲ. ಚಿತ್ರನಗರಿ ಇದ್ದರೆ ಈ ಸೆಟಪ್ ಅಲ್ಲೇ ಇರುತ್ತದೆ. ಅಲ್ಲೇ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಹೊರಬರಬಹುದು. ಸಂಪೂರ್ಣ ಗ್ರಾಫಿಕ್ ಪಾರ್ಕ್, ಗ್ರೀನ್ ಮ್ಯಾಟ್ ಸ್ಟುಡಿಯೋ, ಪಾರ್ಕ್ ಇತ್ಯಾದಿ ಎಲ್ಲವನ್ನೂ ಮಾಡಬಹುದು. ಜೊತೆಗೆ ಚಿತ್ರಮಂದಿರಗಳ ಗುಣಮಟ್ಟ ಸುಧಾರಣೆ, ಟೂರಿಂಗ್ ಟಾಕೀಸ್ ಉಳಿಸೋದು, ಲೈಸನ್ಸ್‌ಗೆ ಸಿಂಗಲ್ ವಿಂಡೋ ಪಾಲಿಸಿ ಇತ್ಯಾದಿ ಬೇಡಿಕೆ ಇದೆ.
ನಮ್ಮ ಸಿನಿಮಾಗಳು ಶಕ್ತಿ ಗಳಿಸಿಕೊಳ್ಳಬೇಕು. ಸತ್ವ ಇಲ್ಲ ಅಂದರೆ ಕಷ್ಟ. ನಮ್ಮವರೂ ಹೋಂವರ್ಕ್ ಮಾಡಬೇಕು.
ಈಗ ಹಿಂದಿನಂತೆ ನಮ್ಮ ನಡುವೆ ಕೋಆರ್ಡಿನೇಶನ್ ಇಲ್ಲ. ಚಿತ್ರನಗರಿ ಇದ್ದರೆ ಸಿನಿಮಾ ಸಂಸ್ಕೃತಿ, ಸಹಕಾರ ಬೆಳೆಯುತ್ತದೆ. ಇದು ಸರಿಹೋಗಬೇಕೆಂದರೆ ಮುಕ್ತವಾಗಿ ಮಾತನಾಡಬೇಕು. ಆ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.
ಹೌದು. ಈಗ ಬಿಡುಗಡೆ ಆಗುವ 250 ಚಿತ್ರದಲ್ಲಿ ಮೂರು ನಾಲ್ಕು ಮಾತ್ರ ಯಶಸ್ವಿ ಆಗುತ್ತವೆ. ರೈತ ಮಳೆಗಾಗಿ ಆಕಾಶ ನೋಡ್ತಾನಲ್ಲ, ಅದೇ ರೀತಿ ನಿರ್ಮಾಪಕರೂ ಸಬ್ಸಿಡಿಗೆ ಎದುರು ನೋಡ್ತಾರೆ. ಹೆಂಡ್ತಿ ಮಕ್ಕಳ ಒಡವೆ ಒತ್ತೆ ಇಟ್ಟು ಸಿನಿಮಾ ಮಾಡಿರುತ್ತಾರಲ್ವಾ, ಅದಾದ್ರೂ ವಾಪಸ್ ಬರುತ್ತೆ ಅಂತ ಕಾಯ್ತಾರೆ. ಸಬ್ಸಿಡಿ ಬೇಕೇ ಬೇಕು.
ನಾನು ಯಾವ ಪ್ರೇಕ್ಷಕನಿಗೆ ಸಿನಿಮಾ ಮಾಡಲಿ ಅನ್ನುವ ಪ್ರಶ್ನೆ ಎದುರಾಗಿದೆ. ಇದು ಹಳೇ ನಿರ್ಮಾಪಕರ ಪರಿಸ್ಥಿತಿ. ಮೊದಲು ಒಂದಿಷ್ಟು ಜನ ಏನಾದರೂ ಸರಿ, ಬಂದು ಸಿನಿಮಾ ನೋಡುತ್ತಿದ್ದರು. ಕೋವಿಡ್ ಬಳಿಕ ಚಿತ್ರಮಂದಿರಕ್ಕೆ ಬರಲು ಹೆದರಿದ್ರು. ಆಮೇಲೆ ಚಿತ್ರಮಂದಿರವನ್ನೇ ಮರೆತುಬಿಟ್ಟಂತಾದರು. ಈಗ ತುಂಬಾ ಚೆನ್ನಾಗಿದೆ ಅಂದಾಗ ಬರುತ್ತಿದ್ದಾರೆ. ಜನರನ್ನು ವಾಪಸ್ ಕರೆತರುವ ಪ್ರಯತ್ನ ಆಗಬೇಕು. ಸದ್ಯದ ಜವಾಬ್ದಾರಿ ಮುಗಿಸಿ ಸಿನಿಮಾ ನಿರ್ಮಾಣ ಮಾಡುವ ಯೋಚನೆ ಮಾಡುವೆ.
ಇದೆಲ್ಲವೂ ಸೋಷಿಯಲ್ ಮೀಡಿಯಾದಲ್ಲಿ ನಡೀತಿದೆ. ಸುಮ್ಮನಾಗಬೇಕಷ್ಟೇ.
ಒಳ್ಳೆಯ ಸಿನಿಮಾಕ್ಕೆ ವರದಾನ ಆಗಿದೆ. ಕೆಲವರು ಅತಿಯಾದ ನೆಗೆಟಿವ್ ಕಾಮೆಂಟ್ ಮೂಲಕ ಜನ ಸಿನಿಮಾದತ್ತ ಮುಖ ಮಾಡದ ಹಾಗೆ ಮಾಡಿಬಿಟ್ಟಿದ್ದಾರೆ. ಕಚಡಾ ಸಿನಿಮಾ ನೋಡಬೇಡಿ ಅಂದರೆ ಯಾರು ಬರ್ತಾರೆ? ಒಂದು ಸಿನಿಮಾದಲ್ಲಿ ಒಂದು ಅಂಶ ಚೆನ್ನಾಗಿಲ್ಲ ಅಂದ ಮಾತ್ರಕ್ಕೆ ಇಡೀ ಸಿನಿಮಾ ಚೆನ್ನಾಗಿಲ್ಲ ಅಂತಲ್ಲವಲ್ಲ. ಹೀಗಿರುವಾಗ ಕೋರ್ಟ್‌ಗೆ ಯಾಕೆ ಹೋಗಬಾರದು?
ಇದರ ಅವಶ್ಯಕತೆ ಇದೆ ಅಂತ ನನಗನಿಸಲ್ಲ. ಎಲ್ಲಿಯವರೆಗೆ ಹೆಣ್ಣುಮಕ್ಕಳು ಗಟ್ಟಿಯಾಗಿ ನಿಲ್ಲುವುದಿಲ್ಲವೋ ಅಲ್ಲಿಯವರೆಗೆ ಸಮಸ್ಯೆ ಇದ್ದೇ ಇರುತ್ತದೆ. ಬೀಳುವವರಿದ್ದಾರೆ ಅಂದರೆ ನೂಕುವವರೂ ಇರುತ್ತಾರೆ. ಗಟ್ಟಿಯಾಗಿ ನಿಂತರೆ ಅವರನ್ನೇ ನೀವು ಬೀಳಿಸಬಹುದು. ಹೆಣ್ಣುಮಕ್ಕಳಿಗೆ ನಾನು ಹೇಳೋದಿಷ್ಟೇ, ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳುವ ಶಕ್ತಿ ಬೆಳೆಸಿಕೊಳ್ಳಬೇಕು. ನಮಗೆ ಯಾವ ಫೈರೂ ಬೇಡ. ನಮ್ಮಲ್ಲಿ ಎಷ್ಟು ಉದಾರಿಗಳು, ಒಳ್ಳೆಯವರಿದ್ದಾರೆ. ನಾನೂ 75 ಸಿನಿಮಾ ಮಾಡಿದ್ದೇನೆ. 13 ವರ್ಷ ವಯಸ್ಸಿಗೇ ಸಿನಿಮಾರಂಗಕ್ಕೆ ಬಂದಿದ್ದೇನೆ. ನನ್ನನ್ನು ಮಗಳ ಹಾಗೆ, ಅಕ್ಕ, ತಂಗಿಯಂತೆ ಸಲಹಿದ್ದಾರೆ.
ಎಲ್ಲವನ್ನೂ ನಾವೇ ಮಾಡ್ತೀವಿ ಅಂತ ಹೋಗಲ್ಲ. ಅಂಥಾ ಕನಸೇ ನನಗಿಲ್ಲ. ನನ್ನ ಕಾಲಾವಧಿಯಲ್ಲಿ ಒಂದು ನಿಮಿಷವೂ ವಿಶ್ರಮಿಸದೇ ಕೆಲಸ ಮಾಡುವೆ. ಉಳಿಕೆಯಾಗಿರೋದು ಮುಂದಿನವರಿಗೆ ಹೇಳ್ತೀವಿ. ಎಲ್ಲರಿಗೂ ಅವಕಾಶ ಸಿಕ್ಕರೆ ತಾನೇ ಅವರು ಸಾಧನೆ ಮಾಡಲು ಸಾಧ್ಯ.
ಪಕ್ಕದ ಎರಡು ರಾಜ್ಯಗಳಲ್ಲಿ ಗರಿಷ್ಠ ಟಿಕೆಟ್ ದರ ನಿಗದಿ ಯಶಸ್ವಿ ಆಗಿದೆ. ಅಲ್ಲೂ ಮಲ್ಟಿಪ್ಲೆಕ್ಸ್, ಸಿಂಗಲ್ ಥೇಟರ್‌ಗಳಿವೆ. ನಮ್ಮ ರಾಜ್ಯದಲ್ಲಿ ಮಾತ್ರ ಈ ಥರದ ಸಮಸ್ಯೆ ಬಂದಿದೆ. ನಾವು ಕೂತು ಪರಸ್ಪರ ಮಾತಾಡಿ ಇದನ್ನು ಬಗೆಹರಿಸುವುದು ಉತ್ತಮ. ನಾವು 200 ರು. ದರ ನಿಗದಿ ಕೇಳುತ್ತಿರುವುದು ಜನರಿಗೋಸ್ಕರ. ಅವರು ಥೇಟರಿಗೆ ಬರಲಿ ಅಂತ.
ಇದು ನಮ್ಮ ಕನಸು. ಸದ್ಯ ಅದರ ಹಿಂದೆ ಬಿದ್ದಿದ್ದೇವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.