ಪುನೀತ್ ರಾಜ್‌ಕುಮಾರ್ ನಟನೆಯ ‘ಜೇಮ್ಸ್’ ಚಿತ್ರಕ್ಕೆ ಎದುರಾಗಿದ್ದ ಥಿಯೇಟರ್ ಸಮಸ್ಯೆ ಕೊನೆಗೂ ಬಗೆಹರಿದಿದೆ. ಒಟ್ಟು 280 ಥಿಯೇಟರ್‌ಗಳಲ್ಲಿ ಈ ವಾರ ‘ಜೇಮ್ಸ್’ ಪ್ರದರ್ಶನ ಮುಂದುವರಿಸಲಿದೆ ಎಂದು ನಿರ್ಮಾಪಕ ಕಿಶೋರ್ ಪತ್ತಿಕೊಂಡ ತಿಳಿಸಿದ್ದಾರೆ.
ಪುನೀತ್ ರಾಜ್‌ಕುಮಾರ್ (Puneeth Rajkumar) ನಟನೆಯ ‘ಜೇಮ್ಸ್’ (James) ಚಿತ್ರಕ್ಕೆ ಎದುರಾಗಿದ್ದ ಥಿಯೇಟರ್ ಸಮಸ್ಯೆ ಕೊನೆಗೂ ಬಗೆಹರಿದಿದೆ. ಒಟ್ಟು 280 ಥಿಯೇಟರ್‌ಗಳಲ್ಲಿ ಈ ವಾರ ‘ಜೇಮ್ಸ್’ ಪ್ರದರ್ಶನ ಮುಂದುವರಿಸಲಿದೆ ಎಂದು ನಿರ್ಮಾಪಕ ಕಿಶೋರ್ (Kishore Pathikonda) ಪತ್ತಿಕೊಂಡ ತಿಳಿಸಿದ್ದಾರೆ.
ಜೇಮ್ಸ್ ನಿರ್ದೇಶಕ ಚೇತನ್ ಕುಮಾರ್ ಹಾಗೂ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಪರಭಾಷಾ ಚಿತ್ರಗಳ ಆಗಮನದಿಂದ ಜೇಮ್ಸ್ ಚಿತ್ರ ಪ್ರದರ್ಶನಕ್ಕೆ ಸಮಸ್ಯೆ ಆಗುತ್ತಿದೆ. ಚೆನ್ನಾಗಿ ಪ್ರದರ್ಶನಗೊಳ್ಳುತ್ತಿರುವ ನಮ್ಮ ಕನ್ನಡ ಚಿತ್ರವನ್ನು ಥಿಯೇಟರ್‌ಗಳಿಂದ ಎತ್ತಂಗಡಿ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ್ದರು. ಇದೀಗ ಮಾತುಕತೆಯ ಬಳಿಕ ವಿವಾದ ಬಗೆ ಹರಿದಿದೆ. ಈ ಬಗ್ಗೆ ವಿವರ ನೀಡುವ ಕಿಶೋರ್, ‘ನಮಗೆ ಕಾಶ್ಮೀರ ಫೈಲ್ಸ್‌ನಿಂದ ಸಮಸ್ಯೆ ಆಗಿರಲಿಲ್ಲ. ಆರ್‌ಆರ್‌ಆರ್‌ನಿಂದ ಆಗಿತ್ತು. ಬೆಂಗಳೂರಿನ 8 ಥಿಯೇಟರ್‌ಗಳಲ್ಲಿ ಜೇಮ್ಸ್ ಪ್ರದರ್ಶನಕ್ಕೆ ತಡೆ ಉಂಟಾಗಿತ್ತು.
ಆದರೆ ರಾಜ್ಯದಲ್ಲಿ ಸಿನಿಮಾ ಪ್ರದರ್ಶನಕ್ಕೆ ಯಾವ ಅಡೆತಡೆಗಳೂ ಉಂಟಾಗಿರಲಿಲ್ಲ. ಸದ್ಯ ಶಿವಣ್ಣ, ಸಿಎಂ ಅವರ ಮಧ್ಯೆ ಪ್ರದೇಶದಿಂದ ಈ ಸಮಸ್ಯೆ ಸರಿಯಾಗಿದೆ. ಎರಡನೇ ವಾರವೂ ಜೇಮ್ಸ್ ಅತ್ಯುತ್ತಮ ಪ್ರದರ್ಶನ ಕಾಣುತ್ತಿದೆ. ರಾಜ್ಯದ ಸುಮಾರು 280 ಥಿಯೇಟರ್‌ಗಳಲ್ಲಿ ಶೋ ಮುಂದುವರಿಯುತ್ತಿದೆ. ಕಳೆದ ವಾರ ರಾಜ್ಯದ 386 ಥಿಯೇಟರ್‌ಗಳಲ್ಲಿ ಪ್ರದರ್ಶನ ಕಂಡಿತ್ತು. ಹೊರದೇಶಗಳ ಶೋಗಳಿಗೂ ಉತ್ತಮ ಪ್ರತಿಕ್ರಿಯೆ ಇದೆ. ಚಿತ್ರ ಒಳ್ಳೆಯ ರೆವೆನ್ಯೂ ತಂದಿದೆ. ಎಷ್ಟುಕಲೆಕ್ಷನ್ ಆಗಿದೆ ಅನ್ನೋ ಬಗ್ಗೆ ಇನ್ನೆರಡು ದಿನಗಳಲ್ಲಿ ಅಪ್‌ಡೇಟ್ ಮಾಡುವೆ’ ಎಂದಿದ್ದಾರೆ.
ತಪ್ಪು ಹುಡುಕೋದು ಬೇಡ, ಚೆನ್ನಾಗಿ ಹೋಗುತ್ತಿರುವ ಸಿನಿಮಾ ತೆಗೆಯೋದು ಸರಿ ಅಲ್ಲ: ಶಿವರಾಜ್‌ಕುಮಾರ್
ಪ್ರದರ್ಶಕರ ಸಂಘದ ಅಧ್ಯಕ್ಷ ಕೆವಿಎನ್ ಚಂದ್ರಶೇಖರ್ ಪ್ರತಿಕ್ರಿಯೆ ನೀಡಿ, ‘ಇದೆಲ್ಲ ಕಮ್ಯೂನಿಕೇಶನ್ ಗ್ಯಾಪ್ ಆಗಿರೋದು. ಥಿಯೇಟರ್ ಸಮಸ್ಯೆ ನಿಜಕ್ಕೂ ಇರಲಿಲ್ಲ. ಕೆಲವು ಕಡೆ ಇದ್ದ ಸಮಸ್ಯೆಯನ್ನು ಇದೀಗ ಮಾತುಕತೆ ನಡೆಸಿ ಬಗೆಹರಿಸಿದ್ದಾರೆ. ಕನ್ನಡ ಚಿತ್ರಗಳು ಉತ್ತಮ ಪ್ರದರ್ಶನ ಕಾಣುತ್ತಿದ್ದರೆ ಯಾರೂ ಸಿನಿಮಾವನ್ನು ಥಿಯೇಟರ್‌ಗಳಿಂದ ತೆಗೆಯೋದಿಲ್ಲ. ಕೆಲವೊಮ್ಮೆ ಚಿತ್ರದ ನಿರ್ಮಾಪಕರಿಗೂ ಥಿಯೇಟರ್‌ನವರಿಗೂ ಒಪ್ಪಂದಗಳಾಗಿರುತ್ತವೆ. ಅಂಥಾ ಸಂದರ್ಭ ಅನಿವಾರ್ಯವಾಗಿ ಬೇರೆ ಚಿತ್ರ ಪ್ರದರ್ಶಿಸಬೇಕಾಗುತ್ತದೆ’ ಎಂದಿದ್ದಾರೆ. ಅಲ್ಲಿಗೆ ಈ ವಿವಾದ ಸುಖಾಂತ್ಯ ಕಂಡಿದೆ.
ಸುಮಾರು 120 ಥಿಯೇಟರ್‌ಗಳಲ್ಲಿ ಆರ್‌ಆರ್‌ಆರ್: ರಾಜಮೌಳಿ ನಿರ್ದೇಶನದ, ಜೂ. ಎನ್‌ಟಿಆರ್ ಹಾಗೂ ರಾಮ್‌ಚರಣ್ ತೇಜಾ ನಟನೆಯ ‘ಆರ್‌ಆರ್‌ಆರ್’ ಚಿತ್ರದ ಪ್ರದರ್ಶನ ಆರಂಭವಾಗಿದೆ. ರಾತ್ರಿ 12.15ಕ್ಕೆ ಮೊದಲ ಪ್ರದರ್ಶನ ಶುರುವಾಗಿದೆ. ಬಹುತೇಕ ಚಿತ್ರಮಂದಿರಗಳಲ್ಲಿ 4 ಗಂಟೆಗೆ ಪ್ರದರ್ಶನ ಆರಂಭವಾಗಲಿದೆ. ಪ್ರದರ್ಶಕರ ಸಂಘದ ಅಧ್ಯಕ್ಷ ಕೆವಿಎನ್ ಚಂದ್ರಶೇಖರ್, ‘ನಮ್ಮ ರಾಜ್ಯದಲ್ಲಿರುವುದು ಒಟ್ಟು 500 ಚಿತ್ರಮಂದಿರಗಳು. ಈಗಾಗಲೇ 280 ಥಿಯೇಟರ್‌ಗಳಲ್ಲಿ ‘ಜೇಮ್ಸ್’ ಪ್ರದರ್ಶನ ಕಾಣುತ್ತಿದೆ, 100 ಚಿತ್ರಮಂದಿರಗಳಲ್ಲಿ ‘ಕಾಶ್ಮೀರ ಫೈಲ್ಸ್’ ಓಡುತ್ತಿದೆ. ಉಳಿದ 120 ಥಿಯೇಟರ್‌ಗಳಷ್ಟೇ ಆರ್‌ಆರ್‌ಆರ್‌ಗೆ ಉಳಿದಿರುವುದು. ಅದರಲ್ಲೇ ಶಕ್ತಿಮೀರಿ ಪ್ರದರ್ಶನ ನೀಡಲು ಮುಂದಾಗಿರುವ ಆರ್‌ಆರ್‌ಆರ್ ಮಧ್ಯರಾತ್ರಿ 12.30, ಮುಂಜಾನೆ 4 ಗಂಟೆಗೂ ಚಿತ್ರಪ್ರದರ್ಶನಕ್ಕೆ ಮುಂದಾಗಿದೆ. ಈ ಮೂಲಕ ಥಿಯೇಟರ್ ಕೊರತೆಯನ್ನು ತುಂಬುವ ಪ್ರಯತ್ನ ಮಾಡುತ್ತಿದೆ’ ಎನ್ನುತ್ತಾರೆ
ಗಗನಕ್ಕೇರಿದ ಆರ್‌ಆರ್‌ಆರ್ ಟಿಕೆಟ್ ದರ: ದೇಶಾದ್ಯಂತ ‘ಆರ್‌ಆರ್‌ಆರ್’ ಚಿತ್ರದ ದರದಲ್ಲಿ ವಿಪರೀತ ಏರಿಕೆಯಾಗಿದೆ. 2 ಡಿ, 3ಡಿ ಹಾಗೂ 3ಡಿ ರಿಕ್ಲೈನರ್ಸ್ ಶೋಗಳಿದ್ದು, ತೆಲುಗು ಹಾಗೂ ಹಿಂದಿ ವರ್ಶನ್‌ಗಳಲ್ಲಿ 3ಡಿ ಶೋಗಳಿವೆ. ಬೆಂಗಳೂರಿನಲ್ಲಿ ಐಷಾರಾಮಿ 3ಡಿ ರಿಕ್ಲೈನರ್ಸ್ ಶೋಗೆ 978 ರು. ನಿಗದಿಯಾಗಿದೆ. ಕೆಲವು ಮಲ್ಟಿಪ್ಲೆಕ್ಸ್‌ಗಳಲ್ಲಿನ ಇನ್‌ಸಿಗ್ನಿಯಾ ಶೋಗಳಿದ್ದು, ಅವುಗಳ ದರ 1460 ರು.ಗಳವರೆಗೂ ಏರಿಕೆಯಾಗಿದೆ. 3ಡಿ ಶೋಗಳಿಗೆ ಸರಾಸರಿ 700 ರು. ನಿಗದಿಯಾಗಿದೆ. ಸಾಮಾನ್ಯ 2ಡಿ ಶೋಗಳನ್ನು 250 ರು. ನೀಡಿ ನೋಡಬಹುದು. ಇವುಗಳ ದರದಲ್ಲೂ ವ್ಯತ್ಯಾಸವಿದೆ. ರಾಷ್ಟ್ರಮಟ್ಟದಲ್ಲೂ ಈ ಸಿನಿಮಾದ ದರ ಚರ್ಚೆಯಲ್ಲಿದೆ. ದೆಹಲಿಯಲ್ಲಿ ಅತ್ಯಧಿಕ ರು.2,171 ದರ 3ಡಿ ಶೋಗೆ ನಿಗದಿಯಾಗಿದೆ. ಇಷ್ಟೆಲ್ಲ ದರವಿದ್ದರೂ ಇಂದಿನ ಶೋಗಳಿಗೆ ಹೆಚ್ಚಿನ ಕಡೆ ಟಿಕೆಟ್‌ಗಳು ಸೋಲ್ಡ್‌ಔಟ್ ಆಗಿವೆ.
Kishore Pathikonda: 'ಜೇಮ್ಸ್'ಗೆ 'ದಿ ಕಾಶ್ಮೀರ್ ಫೈಲ್' ಅಲ್ಲ 'ಆರ್‌ಆರ್‌ಆರ್' ಅಡ್ಡಿ
ವಿದೇಶದಲ್ಲಿ ಬಾಹುಬಲಿಯ ರೆಕಾರ್ಡ್ ಮುರಿದ ಆರ್‌ಆರ್‌ಆರ್: ಅಮೆರಿಕಾದ ಇಂಡಿಯನ್ ಪ್ರೀಮಿಯರ್ ಶೋಗಳಲ್ಲಿ ಆರ್‌ಆರ್‌ಆರ್ ಹೊಸ ರೆಕಾರ್ಡ್ ಮಾಡಿದೆ. ಸಿನಿಮಾ ರಿಲೀಸ್ ಆಗೋದಕ್ಕೂ ಮೊದಲೇ 18.43 ಕೋಟಿ ರು.ಗಳ ಗಳಿಕೆ ಮಾಡಿದೆ. ಈ ಮೂಲಕ ರಾಜಮೌಳಿ ಅವರೇ ನಿರ್ದೇಶಿಸಿದ್ದ ‘ಬಾಹುಬಲಿ’ ಚಿತ್ರದ 2.4 ಮಿಲಿಯನ್ ಗಳಿಕೆಯ ದಾಖಲೆಯನ್ನು ಹಿಂದಿಕ್ಕಿದೆ.