
ಹಿರಿಯ ನಟ, ನವರಸ ನಾಯಕ ಜಗ್ಗೇಶ್ ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಭಾವುಕ ಬರಹವೊಂದನ್ನು ಹಂಚಿಕೊಂಡಿದ್ದು, ಬಾಲ್ಯದಿಂದ ಯಶಸ್ಸಿನ ಶಿಖರ ತಲುಪುವವರೆಗಿನ ತಮ್ಮ ಜೀವನದ ಹೋರಾಟದ ಪಯಣವನ್ನು ನೆನಪಿಸಿಕೊಂಡಿದ್ದಾರೆ. ಬಾಲ್ಯ ಮತ್ತು ಯೌವನದ ದಿನಗಳಲ್ಲಿ ಆರ್ಥಿಕ ಸಂಕಷ್ಟ, ಹಸಿವು, ಅವಮಾನ, ಅವಕಾಶಗಳ ಕೊರತೆ ಹಾಗೂ ಜೀವನದ ಹಲವು ಕಠಿಣ ಪರೀಕ್ಷೆಗಳನ್ನು ಎದುರಿಸಿದ್ದಾಗಿ ಜಗ್ಗೇಶ್ ತಿಳಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ತಂದೆ-ತಾಯಿಯ ಮೇಲೆಯೂ ಅಸಮಾಧಾನ ಮೂಡುತ್ತಿತ್ತು. ಆದರೆ ಜೀವನದಲ್ಲಿ ಎಂದಿಗೂ ಕುಗ್ಗದಂತೆ ಮಾಡಿದವರು ತಮ್ಮ ತಾಯಿ ಎಂದು ಅವರು ಭಾವುಕರಾಗಿ ಸ್ಮರಿಸಿದ್ದಾರೆ.
"ಭಕ್ತಿ, ಪ್ರಾಮಾಣಿಕ ಶ್ರಮ, ತಾಳ್ಮೆ ಮತ್ತು ನಿರಂತರ ಅಭ್ಯಾಸವೇ ಬದುಕಿನ ನಿಜವಾದ ಬಂಡವಾಳ" ಎಂದು ತಾಯಿ ಹೇಳುತ್ತಿದ್ದ ಮಾತುಗಳು ತಮ್ಮ ಜೀವನದ ದಿಕ್ಕನ್ನೇ ಬದಲಿಸಿವೆ ಎಂದು ಜಗ್ಗೇಶ್ ಬರೆದಿದ್ದಾರೆ. ವಿಶೇಷವಾಗಿ, "ಗೆದ್ದರೆ ಸನ್ಮಾನ... ಸೋತರೆ ಅಪಮಾನ" ಎಂಬ ತಾಯಿಯ ಮಾತು ಪ್ರತಿಯೊಂದು ಹೆಜ್ಜೆಯಲ್ಲೂ ತಮ್ಮನ್ನು ಮುನ್ನಡೆಸಿದ ದಾರಿದೀಪವಾಗಿತ್ತು ಎಂದು ತಿಳಿಸಿದ್ದಾರೆ. ಇಂದು ತಾಯಿ ತಮ್ಮೊಂದಿಗಿಲ್ಲದಿದ್ದರೂ, ಆಕೆಯ ಆದರ್ಶಗಳು ಮತ್ತು ಬದುಕಿನ ಪಾಠಗಳೇ ಪ್ರತಿದಿನ ತಮ್ಮನ್ನು ಮುನ್ನಡೆಸುತ್ತಿವೆ ಎಂದು ಜಗ್ಗೇಶ್ ಭಾವುಕರಾಗಿ ಹೇಳಿದ್ದಾರೆ. ಜೀವನದಲ್ಲಿ ಎದುರಾದ ಪ್ರತಿಯೊಂದು ಕಷ್ಟವೂ ತಮ್ಮನ್ನು ಇನ್ನಷ್ಟು ಗಟ್ಟಿಗೊಳಿಸಿತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಜಗ್ಗೇಶ್ ಪೋಸ್ಟ್‌ನಲ್ಲಿ ಏನಿದೆ?
ಯೌವನದ ದಿನದಲ್ಲಿ ನನಗೆ ಯಾರು ಸಹಾಯ ಮಾಡಲಿಲ್ಲಾ ಕೋಪ! ಎಲ್ಲರಿಗು ಇಷ್ಟಪಟ್ಟ ವಸ್ತು ಕೊಡಿಸೋ ತಂದೆ-ತಾಯಿ ನನಗೇಕಿಲ್ಲಾ ಕೋಪ! ಸ್ನೇಹಿತರ ಜೊತೆ ವಾರಕ್ಕೊಂದು ಸಿನಿಮ ಹೋಟಲ್ ದೋಸೆಗೆ ಕಾಸುಕೊಡಲ್ಲಾ ಅಪ್ಪ ಕೋಪ! ಕಾಲೇಜಿಗೆ ಒಳ್ಳೆ ಬಟ್ಟೆ ಶೋ ಧರಿಸಿ ಸೈಕಲ್ ನಲ್ಲಿ ಹೋಗಬೇಕು ಅಪ್ಪ ಕ್ಯಾರೆ ಅನ್ನನು ಕೋಪ!
ಈ ಮುಖಕ್ಕೆ ಒಬ್ಬಳು ಪ್ರೇಮಿ ಸಿಕ್ಕಳು ಚಾಕ್ಲೇಟ್ ಕೊಡಿಸಲು ಕಾಸಿಲ್ಲಾ ಕೋಪ! ನನ್ನ ಇಷ್ಟದ ಕ್ಷೇತ್ರ ಕಲಾರಂಗದಲ್ಲಿ ನನ್ನ ನೋಡಿದರೆ ಎಲ್ಲರಿಗು ವಾಕರಿಕೆ ಓಡಿಸುತ್ತದ್ದರು ಹೊರಗೆ ಕೋಪ! ಹೈಲ್ಯಾಂಡ್ ಹೋಟೆಲ್ ಪುಟ್ಪಾತ್ ನಲ್ಲಿ ನಿಂತು ಬರುವ ತಾರೆಗಳ ನೋಡಿ ನನಗೇಕಿಲ್ಲಾ ಈ ಯೋಗ ಕೋಪ!
ಬೆಳಗಿನಿಂದ ಸಂಜೆಯವರೆಗು ಗಾಂಧಿನಗರ ಪಾತ್ರಕ್ಕೆ ಅಲೆದಾಟ ಹಸಿವು ಊಟವಿಲ್ಲದೆ ಕೋಪ! ನನಗೆ ಅಂತ ಯಾರಿಲ್ಲವೆ ಎಂದು ಬಂದ ಕೋಪಕ್ಕೆ ಸಾಂತ್ವನ ಹೇಳಿ ಹುರಿದುಂಬಿಸಿ ಭುಜತಟ್ಟಿ ಏಳು ಎದ್ದೇಳು ನಿನಗೆ ನಾನು ಜನ್ಮ ನೀಡಿದ್ದೆ ಗೆಲ್ಲಲು,ಗದ್ದು ವಂಶಕ್ಕೆ ಕಳಶಪ್ರಾಯವಾಗಲು ಮಗನೆ... ನೀನು ಗೆಲ್ಲಬೇಕೆಂದರೆ ನಿನ್ನ ನೀನು ಸೈನಿಕನಂತೆ ತಯಾರು ಮಾಡಿಕೋ, ಮಾಡುವ ಕಾಯಕ ಅಭ್ಯಾಸ ಮಾಡಿಕೋ, ಅರ್ಜುನ ಕೃಷ್ಣನ ಜೊತೆಯಲ್ಲಿ ಇಟ್ಟುಕೊಂಡಂತೆ ಭಕ್ತಿ ರೂಡಿಸಿಕೋ, ಅಣಕ ಅಪಮಾನ ಮಾಡುವವರ ಗಮನಿಸದೆ ನಿನ್ನ ಗುರಿಯ ಕಡೆ ಹೆಜ್ಜೆಹಾಕು ಸಾಧಕನಾಗುವೆ, ಒಂದು ನೆನಪಿಡು ಗೆದ್ದರೆ ಮಾತ್ರ ಸನ್ಮಾನ ಸೋತರೆ ಅಪಮಾನ ಎಂದು ಬದುಕಿನ ಯುದ್ಧಕ್ಕೆ ತಯಾರು ಮಾಡಿಬಿಟ್ಟಳು ಅಮ್ಮ ನನ್ನ ದೇವರು.
ಮುಂದೆ ಅವಳು ಹೇಳಿದಂತೆ ಬದುಕು ಸಾಧಿಸಿ ಗೆದ್ದೆ ಅದನ್ನು ನೋಡಲು ಅಮ್ಮನೆ ಇಲ್ಲಾ ನನ್ನ 30ನೆ ವಯಸ್ಸಿಗೆ ಯಾತ್ರೆ ಮುಗಿಸಿ ನನ್ನ ಮುಂದಿನ ಗೋಡೆಯ ಮೇಲೆ ಶಾಶ್ವತ ಚಿತ್ರವಾದಳು... ಯುವ ಮನಸುಗಳೆ ಯಾವುದೆ ಆಗಲು ಈ ಜಗದಲ್ಲಿ ಅವರವರ ಧರ್ಮದ ದೇವರ ಮೇಲಿನ ಭಕ್ತಿ, ತಾಳ್ಮೆ, ಶ್ರಮ, ಸಮಯಪ್ರಜ್ಞೆ, ನಿರಂತರ ಅಭ್ಯಾಸ, ಉತ್ತಮ ಜನರ ಒಡನಾಟ ಅಭ್ಯಾಸ ಮಾಡಿಕೊಳ್ಳಬೇಕು.. ಯಾವುದೆ ಸಾಧನೆ ಒಂದೆ ದಿನ ಆಗದು. ಕಾದವ ಮೇಧಾವಿ ನುಗ್ಗಿದವ ಮೂರ್ಖ. ನಿಮ್ಮ ಗೆಲುವಿಗೆ ನನ್ನ ಜೀವನದ ಶ್ರಮದಕಥೆ ಸ್ಪೂರ್ಥಿಯಾಗಲಿ ಎಂಬ ಆಶಯ. ಶುಭಮಸ್ತು. #ತಾಯಿದೇವರು ಎಂದು ಬರೆದುಕೊಂಡಿದ್ದಾರೆ.
ತಮ್ಮ ಬರಹದ ಮೂಲಕ ಇಂದಿನ ಯುವಕರಿಗೂ ಜಗ್ಗೇಶ್ ಮಹತ್ವದ ಸಂದೇಶ ನೀಡಿದ್ದಾರೆ. ಯಶಸ್ಸಿಗೆ ಯಾವುದೇ ಶಾರ್ಟ್‌ಕಟ್ ಇಲ್ಲ. ನಿರಂತರ ಪರಿಶ್ರಮ, ತಾಳ್ಮೆ, ಶಿಸ್ತು ಮತ್ತು ಉತ್ತಮ ವ್ಯಕ್ತಿಗಳ ಒಡನಾಟವೇ ವ್ಯಕ್ತಿಯನ್ನು ಸಾಧನೆಯತ್ತ ಕೊಂಡೊಯ್ಯುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ. ಜಗ್ಗೇಶ್ ಅವರ ಈ ಸ್ಪೂರ್ತಿದಾಯಕ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಅವರ ಹೋರಾಟದ ಬದುಕಿಗೆ ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ತಾಯಿಯ ಮೇಲಿನ ಅವರ ಅಪಾರ ಗೌರವಕ್ಕೂ ಭಾವುಕರಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.