ಹ್ಯಾಪಿ ಬರ್ತಡೇ; ಪ್ರಶಾಂತ್‌ ನೀಲ್‌ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳು!

By Kannadaprabha NewsFirst Published Jun 4, 2020, 8:56 AM IST
Highlights

ನೀನು ಗೆದ್ದರೆ ಜಗತ್ತಿಗೆ ನಿನ್ನ ಪರಿಚಯ ಆಗುತ್ತದೆ ಎನ್ನುವ ಮಾತಿನಂತೆ ಯಶಸ್ಸಿನ ಮೂಲಕವೇ ಸಿನಿಮಾ ಜಗತ್ತಿಗೆ ಪರಿಚಯವಾದರು ಪ್ರಶಾಂತ್‌ ನೀಲ್‌. ‘ಉಗ್ರಂ’ನ ಸಾರಥಿ, ‘ಕೆಜಿಎಫ್‌’ನ ಸೃಷ್ಟಿಕರ್ತನಿಗೆ ಇಂದು ಜನ್ಮದಿನದ ಸಂಭ್ರಮ. ಈ ಹೊತ್ತಿನಲ್ಲಿ ಅವರ ಕುರಿತ ಆಸಕ್ತಿ ಸಂಗತಿಗಳು.

1. ಪ್ರಶಾಂತ್‌ ನೀಲ್‌ ಅವರು ನಿರ್ದೇಶಕರಾಗುವ ಮುನ್ನ ಬೇರೆ ನಿರ್ದೇಶಕರ ಚಿತ್ರಗಳಿಗೆ ಅಸಿಸ್ಟೆಂಟ್‌, ಅಸೋಸಿಯೇಟ್‌ ಅಥವಾ ಕ್ಲಾಪ್‌ ಬಾಯ್‌ ಕೆಲಸ ಕೂಡ ಮಾಡಿದವರಲ್ಲ. ಯಾವ ತರಬೇತಿ ಸಂಸ್ಥೆಯಲ್ಲೂ ಸಿನಿಮಾ ಪಾಠ ಕಲಿಯಲಿಲ್ಲ.

ಜೂ.NTR ಜೊತೆ ಪ್ರಶಾಂತ್ ನೀಲ್; ಸಂಭಾವನೆ ಎಷ್ಟು ಗೊತ್ತಾ? .

2. ಶ್ರೀಮುರಳಿ ನಟನೆಯ ‘ಉಗ್ರಂ’ ಸಿನಿಮಾ ಮಾಡುವ ಮುನ್ನ ಒಂದರೆಡು ಬಾರಿ ಮುರಳಿ ಅವರ ನಟನೆಯ ಚಿತ್ರಗಳ ಶೂಟಿಂಗ್‌ ಸೆಟ್‌ಗೆ ಹೋಗಿ ಬಂದಿದ್ದರು ಅಷ್ಟೆ. ಹೀಗಾಗಿ ತನಗೆ ತಾನೇ ಶಿಷ್ಯ, ತಾನೇ ಗುರುವಾಗಿ ಸಿನಿಮಾ ಕಟ್ಟುವುದನ್ನು ಕಲಿತವರು.

3. ಎಲ್ಲವನ್ನೂ ಮೊದಲೇ ಕಲಿತು ಸಿನಿಮಾ ಮಾಡುತ್ತೇನೆ ಎನ್ನುವವರು, ಕೆಲಸ ಮಾಡುತ್ತಲೇ ಕಲಿಯುತ್ತೇನೆ ಎನ್ನುವವರ ಪೈಕಿ ಪ್ರಶಾಂತ್‌ ನೀಲ್‌ ಎರಡನೇ ಸಾಲಿಗೆ ಸೇರಿದವರು. ಯಾಕೆಂದರೆ ಅವರು ‘ಉಗ್ರಂ’ ಚಿತ್ರ ನಿರ್ದೇಶನ ಮಾಡುವಾಗ ಸಿನಿಮಾ ವ್ಯಾಕರಣ ಗೊತ್ತಿರಲಿಲ್ಲ. ಆದರೆ, ಆ ಚಿತ್ರ ಮುಗಿಸುವ ಹೊತ್ತಿಗೆ ಸಿನಿಮಾ, ನಿರ್ದೇಶನ ಸೇರಿದಂತೆ ಇಡೀ ಸಿನಿಮಾ ಮಾಧ್ಯಮವನ್ನು ಪ್ರಾಕ್ಟಿಕಲ್ಲಾಗಿ ಕಲಿತವರು.

4. ಪ್ರಶಾಂತ್‌ ನೀಲ್‌ಗೆ ಕ್ಯಾಮೆರಾ ಮುಂದೆ ನಿಂತು ಮಾತನಾಡುವುದು, ನಟಿಸುವುದು ಅಂದರೆ ಭಯ. ತಮ್ಮದೇನಿದ್ದರೂ ಕ್ಯಾಮೆರಾ ಹಿಂದೆ ಕೂತು ಕೆಲಸ ಎನ್ನುವುದು ಅವರ ನಂಬಿಕೆ.

'KGF ಡೈರೆಕ್ಟರ್ ಪ್ರಶಾಂತ್‌ ನೀಲ್‌ಗೆ ತಮ್ಮ ಮದುವೆ ಬಗ್ಗೆ ಕ್ಲಾರಿಟಿ ಸಿಕ್ಕಿಲ್ವಂತೆ' ಏನ್ ಕತೆ

5. ನಟ ಶ್ರೀಮುರಳಿ ಹಾಗೂ ಪ್ರಶಾಂತ್‌ ಅವರು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ವಿದ್ಯಾರ್ಥಿಗಳು. ಪ್ರಶಾಂತ್‌ ನೀಲ್‌ ಓದಿದ್ದು ಶೇಷಾದ್ರಿಪುರಂ ಕಾಲೇಜಿನಲ್ಲಿ ಇಂಜಿನಿಯರಿಂಗ್‌. ಕಾಲೇಜು ದಿನಗಳಿಂದಲೂ ಸಿನಿಮಾಗಳನ್ನು ಹೆಚ್ಚಾಗಿ ನೋಡುತ್ತಿದ್ದವರು.

6. ನಾಲ್ಕು ವರ್ಷ ಸಮಯ ತೆಗೆದುಕೊಂಡು ಮಾಡಿದ ಮೊದಲ ನಿರ್ದೇಶನದ ಚಿತ್ರ‘ಉಗ್ರಂ’ಗೆ ಆರಂಭದಲ್ಲಿ ‘ನಂದೆ’ ಎನ್ನುವ ಟೈಟಲ್‌ ಇತ್ತು. ಸಿನಿಮಾ ಅರ್ಧಕ್ಕೂ ಹೆಚ್ಚು ಚಿತ್ರೀಕರಣ ಮಾಡಿಕೊಂಡ ಮೇಲೆ ‘ಉಗ್ರಂ’ ಎಂದು ಬದಲಾಯಿಸಲಾಯಿತು.

7. ‘ಕೆಜಿಎಫ್‌’ ಸಿನಿಮಾ ಮಾಡುವಾಗ ಇದು ಬಹುಭಾಷೆಯ ಸಿನಿಮಾ ಆಗುತ್ತದೆಯೇ ಎಂದು ಪದೇ ಪದೇ ನಟ ಯಶ್‌ ಅವರಿಗೇ ಪ್ರಶ್ನೆ ಕೇಳುತ್ತಿದ್ದರು ಪ್ರಶಾಂತ್‌ ನೀಲ್‌. ಯಶ್‌ ಅವರು ತಮ್ಮ ನಿರ್ದೇಶಕನ ಕೆಲಸವನ್ನು ನಂಬಿದರು, ನಿರ್ದೇಶಕ ತನ್ನ ಚಿತ್ರದ ಹೀರೋ ಮಾತುಗಳಿಂದ ಧೈರ್ಯ ತಂದುಕೊಂಡರು. ‘ಕೆಜಿಎಫ್‌’ ಸೂಪರ್‌ಹಿಟ್‌ ಆಯಿತು.

8. ಎರಡನೇ ಚಿತ್ರದ ಮೂಲಕ ಭಾರತೀಯ ಸ್ಟಾರ್‌ ಸಿನಿಮಾ ನಿರ್ದೇಶಕರ ಹೆಸರುಗಳ ಸಾಲಿಗೆ ಸೇರ್ಪಡೆಗೊಂಡವರು. ಆ ಮೂಲಕ ‘ನೀನು ಗೆದ್ದರೆ ಜಗತ್ತಿಗೆ ನಿನ್ನ ಪರಿಚಯ ಆಗುತ್ತದೆ’ ಎನ್ನುವ ಚಾರಿತ್ರಿಕ ಮಾತನ್ನು ನಿಜ ಮಾಡಿದವರು ಪ್ರಶಾಂತ್‌ ನೀಲ್‌.

9. ಎರಡನೇ ಚಿತ್ರಕ್ಕೇ ಕನ್ನಡ ಸಿನಿಮಾಗಳತ್ತ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಯ ಪ್ರೇಕ್ಷಕರನ್ನು ತಿರುಗಿ ನೋಡುವಂತೆ ಮಾಡಿದವರು. ಜತೆಗೆ ಕನ್ನಡ ಚಿತ್ರರಂಗದ ಮಾರುಕಟ್ಟೆಯ ವಿಸ್ತರಣೆಯನ್ನು ಮತ್ತಷ್ಟುಹೆಚ್ಚಿಸಿದವರು.

10. ಕನ್ನಡದ ಪುನೀತ್‌ ರಾಜ್‌ಕುಮಾರ್‌, ತೆಲುಗಿನ ಮಹೇಶ್‌ ಬಾಬು, ಜೂ ಎನ್‌ಟಿಆರ್‌, ಪ್ರಭಾಸ್‌, ತಮಿಳಿನ ವಿಜಯ್‌ ಮುಂತಾದ ಸ್ಟಾರ್‌ ಹೀರೋಗಳು ಪ್ರಶಾಂತ್‌ ನೀಲ್‌ ನಿರ್ದೇಶನದ ಸಿನಿಮಾಗಳಲ್ಲಿ ನಟಿಸುತ್ತಾರೆಂದು ಹೇಳುವ ಮಟ್ಟಿಗೆ ಬೆಳೆದಿರುವ ಕನ್ನಡದ ಸ್ಟಾರ್‌ ಡೈರೆಕ್ಟರ್‌ ಪ್ರಶಾಂತ್‌ ನೀಲ್‌.

11. ನಾಯಕ ನಟನ ಹುಟ್ಟು ಹಬ್ಬಕ್ಕೆ ದೊಡ್ಡ ದೊಡ್ಡ ಜಾಹೀರಾತುಗಳನ್ನು ಕೊಟ್ಟು ಶುಭ ಕೋರುವುದು ಸಾಮಾನ್ಯ. ಆದರೆ, ನಿರ್ದೇಶಕನ ಹುಟ್ಟು ಹಬ್ಬಕ್ಕೆ ಜಾಹೀರಾತು ಕೊಟ್ಟು ಶುಭ ಕೋರುವುದು ಅಪರೂಪ. ಹೀಗಾಗಿ ಪ್ರಶಾಂತ್‌ ನೀಲ್‌, ಸ್ಟಾರ್‌ ಡೈರೆಕ್ಟರ್‌.

12. ಪ್ರತಿಷ್ಠಿತ ಮೈತ್ರಿ ಮೂವಿ ಮೇಕರ್ಸ್‌ ಹಾಗೂ ಸದ್ಯ ರಾಜ್‌ಮೌಳಿ ಅವರ ನಿರ್ದೇಶನದ ‘ಅರ್‌ಆರ್‌ಆರ್‌’ ಚಿತ್ರವನ್ನು ನಿರ್ಮಿಸುತ್ತಿರುವ ತೆಲುಗಿನ ಪ್ರಸಿದ್ಧ ನಿರ್ಮಾಪಕ ಡಿವಿವಿ ದಾನಯ್ಯ ನಿರ್ಮಾಣದ ಚಿತ್ರಗಳಿಗೆ ಮುಂದೆ ಪ್ರಶಾಂತ್‌ ನೀಲ್‌ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ಈ ಎರಡೂ ಚಿತ್ರಗಳಿಗೆ ಯಾರು ಹೀರೋ ಎಂಬುದು ಇನ್ನೂ ಅಧಿಕೃತಗೊಂಡಿಲ್ಲವಾದರೂ ಒಂದು ಚಿತ್ರಕ್ಕೆ ಜೂ.ಎನ್‌ಟಿಆರ್‌ ಹೆಸರು ಕೇಳಿಬರುತ್ತಿದೆ.

ಪ್ರಶಾಂತ್‌ ನೀಲ್‌ ಹಾಲಿವುಡ್‌ ಚಿತ್ರ ನಿರ್ದೇಶಿಸಬೇಕು: ಯಶ್‌

ಕನ್ನಡ ಚಿತ್ರರಂಗಕ್ಕೆ ಸಿಕ್ಕಿರುವ ಪ್ರತಿಭಾವಂತ ನಿರ್ದೇಶಕ ಪ್ರಶಾಂತ್‌ ನೀಲ್‌. ಒಳ್ಳೆಯ ಮನುಷ್ಯ, ಶ್ರಮ ಜೀವಿ. ಸಿನಿಮಾಗಳ ಬಗ್ಗೆ ಅಪಾರವಾದ ತಿಳುವಳಿಕೆ ಇದೆ. ಅವರ ಸಿನಿಮಾ ಆಲೋಚನೆಗಳೇ ವಿಶಾಲವಾಗಿರುತ್ತವೆ. ‘ಕೆಜಿಎಫ್‌’ ಪ್ಯಾನ್‌ ಇಂಡಿಯಾ ಸಿನಿಮಾ ಆಗುತ್ತದೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ಅದು ತಾನಾಗಿಯೇ ಆಯ್ತು. ಅದು ಪ್ರಶಾಂತ್‌ ನೀಲ್‌ ಅವರ ಸಿನಿಮಾ ಮೇಕಿಂಗ್‌ಗೆ ಇರುವ ಶಕ್ತಿ. ನಾನು ಅವರನ್ನು ಹತ್ತಿರದಿಂದ ನೋಡಿದ್ದೇನೆ. ಒಬ್ಬ ನಿರ್ದೇಶಕನಿಗೆ ಇರುವ ಸೂಕ್ಷ್ಮಗಳು ಅವರಿಗಿವೆ. ಅವರಿಗೆ ದೊಡ್ಡ ದೊಡ್ಡ ಆಸೆಗಳು ಇಲ್ಲ. ಒಳ್ಳೆಯ ಸಿನಿಮಾ ಮಾಡಬೇಕು, ಮಾಡಿದ ಚಿತ್ರವನ್ನು ಎಲ್ಲರೂ ನೋಡಬೇಕು ಎನ್ನುವುದೇ ಅವರ ಗುರಿ. ಆದರೆ, ನನಗೆ ಪ್ರಶಾಂತ್‌ ನೀಲ್‌ ಅವರ ಮೇಲೆ ಇರೋ ಕನಸು ಒಂದೇ. ಅವರು ಒಂದು ಹಾಲಿವುಡ್‌ ಸಿನಿಮಾ ನಿರ್ದೇಶನ ಮಾಡಬೇಕು ಎಂಬುದು. ಯಾಕೆಂದರೆ ಆ ಮಟ್ಟಿಗಿನ ಪ್ರತಿಭೆ ಅವರಲ್ಲಿದೆ. ಅವರ ಸಿನಿಮಾ ಮೇಕಿಂಗ್‌ ಮೇಲೆ ಅವರಿಗಿಂತ ಹೆಚ್ಚಾಗಿ ನನಗೆ ನಂಬಿಕೆ ಇದೆ. ಆ ಕಾರಣಕ್ಕೆ ನಾವು ‘ಕೆಜಿಎಫ್‌’ನಂತಹ ದೊಡ್ಡ ಸಾಧನೆ ಮಾಡಿದ್ದು. ‘ಕೆಜಿಎಫ್‌’ ನಂತರವೂ ತುಂಬಾ ಒಳ್ಳೆಯ ಸಿನಿಮಾಗಳನ್ನು ಕೊಡುವ ಶಕ್ತಿ ಪ್ರಶಾಂತ್‌ ನೀಲ್‌ ಅವರಿಗೆ ಇದೆ. ಅವರ ನಿಜವಾದ ಹಾಗೂ ಮತ್ತಷ್ಟುಪ್ರತಿಭೆಯನ್ನು ನೀವು ‘ಕೆಜಿಎಫ್‌-2’ನಲ್ಲಿ ನೋಡುತ್ತೀರಿ. ಅಷ್ಟುಮಜವಾಗಿ ದೃಶ್ಯ ವೈಭವ ಅಲ್ಲಿದೆ.

ನನಗೆ ದಾರಿ ತೋರಿಸಿದವರು. ಇವತ್ತು ನಾನು ಒಂದು ದೊಡ್ಡ ಚಿತ್ರಕ್ಕೆ ಛಾಯಾಗ್ರಾಹಕ ಎಂದರೆ ಅದಕ್ಕೆ ಕಾರಣವೇ ಪ್ರಶಾಂತ್‌ ನೀಲ್‌. ಯಾರಿಗೂ ಕೆಟ್ಟದ್ದನ್ನು ಬಯಸದ, ಒಳ್ಳೆಯ ಫ್ಯಾಮಿಲಿ ಮ್ಯಾನ್‌. ಸಿನಿಮಾವನ್ನು ಪ್ರತಿ ಕ್ಷಣ ಸಂಭ್ರಮಿಸುವ ವ್ಯಕ್ತಿ.. ಇದು ನಾನು ನೋಡಿದ ಪ್ರಶಾಂತ್‌ ನೀಲ್‌. ಹೀಗಾಗಿ ಅವರ ಸಿನಿಮಾ ಮತ್ತು ಅವರ ವ್ಯಕ್ತಿತ್ವ ನಿಜಕ್ಕೂ ಕೆಜಿಎಫ್‌ನ ಗೋಲ್ಡ್‌. -ಭುವನ್‌ ಗೌಡ, ಛಾಯಾಗ್ರಾಹಕ

click me!