
ʼಸು ಫ್ರಂ ಸೋʼ ಫಿಲಂನ ʼಬಂದರೋ ಬಂದರೋ ಬಾವ ಬಂದರುʼ ಹಾಡಿನ ಖ್ಯಾತಿಯ ಪುಷ್ಪರಾಜ್ ಬೋಳಾರ್ ಒಂದು ಕಾಲದಲ್ಲಿ ಅವಕಾಶಕ್ಕಾಗಿ ಸಾಕಷ್ಟು ಸೈಕಲ್ ಹೊಡೆದವರು. ಕರಾವಳಿಯ ತುಳು ನಾಟಕ ರಂಗದಲ್ಲಿ ಹಲವು ಪಾತ್ರಗಳನ್ನು ಮಾಡಿದರು. ಕೆಲವು ತುಳು ಫಿಲಂಗಳಲ್ಲೂ ನಟಿಸಿದ್ದಾರೆ. ಆದರೆ ಅವರು ಅಖಿಲ ಕರ್ನಾಟಕ ವ್ಯಾಪ್ತಿಯ ಚಿತ್ರರಸಿಕರ ಗಮನ ಸೆಳೆದದ್ದು ಕಾಂತಾರ ಚಾಪ್ಟರ್ 1 ಚಿತ್ರದ ಗರ್ನಲ್ ಅಬ್ಬು ಪಾತ್ರದ ಮೂಲಕ. ಈ ಪಾತ್ರ ಹೇಗೆ ಸಿಕ್ಕಿತು ಎಂಬುದರ ಹಿಂದಿನ ಒಂದು ಕತೆಯತ್ತ ಪುಷ್ಪರಾಜ್ ಗಮನ ಸೆಳೆದಿದ್ದಾರೆ. ಅದರಲ್ಲಿ ದೈವಾನುಗ್ರಹ, ಭಕ್ತಿ ಭಾವದ ಕತೆಯೂ ಇದೆ.
ಕೊರೊನಾ ಬಂದ ಸಮಯ. ಆಗ ಪುಷ್ಪರಾಜ್ ಬಳಿ ಕೆಲಸ ಇರಲಿಲ್ಲ. ಕೈಯಲ್ಲಿ ಕಾಸಿರಲಿಲ್ಲ. ಮಗುವಿಗೆ ಬಿಸ್ಕೆಟ್ ಕೊಡಿಸಲು ಸಹ ಐದು ರೂಪಾಯಿ ಇರಲಿಲ್ಲ. ದುಃಖವಾಗುತ್ತಿತ್ತು. ಇವರು ಫ್ಯಾಬ್ರಿಕೇಶನ್ ಅಂಗಡಿಯಲ್ಲಿದ್ದರು. ಇವರ ಅವಸ್ಥೆಯನ್ನು ನೋಡುತ್ತಿದ್ದ ಇವರ ಪಕ್ಕದ ವೆಲ್ಡಿಂಗ್ ಅಂಗಡಿಯ ಮಿತ್ರ ಲೀಲಾಧರ್ ಎಂಬವರು ಒಂದು ದಿನ ʼನಾವು ಮಾಡಾಯಿ ಕಾವು ದೇವಸ್ಥಾನಕ್ಕೆ ಹೋಗುವ. ಅಲ್ಲಿಗೆ ಹೋಗಿ ಬಂದರೆ ಒಳ್ಳೆಯದಾಗುತ್ತದೆʼ ಎಂದು ಹೇಳಿದರು. ಭಾನುವಾರ ಹೋಗೋಣ ಎಂದು ಪುಷ್ಪರಾಜ್ ಸಿದ್ಧರಾದರು. ಆದರೆ ಕಾರು ಬುಕ್ ಮಾಡಲೂ ಅವರ ಬಳಿ ಹಣ ಇರಲಿಲ್ಲ. ಅದನ್ನೂ ಪ್ರಸಾದದ ಹಣವನ್ನೂ ಲೀಲಾಧರ್ ಅವರೇ ನೀಡಿದರು.
ಅದಕ್ಕೂ ಕೆಲ ದಿನಗಳ ಮೊದಲು, ಕಾಂತಾರ ಚಾಪ್ಟರ್ 1 ಸಿನಿಮಾ ಆಗುತ್ತಿದೆ ಎಂದು ಇವರಿಗೆ ಗೊತ್ತಿತ್ತು. ಪ್ರಕಾಶ್ ತುಮಿನಾಡ್ ಬಳಿ ʼನನಗೇನಾದರೂ ಒಂದು ಪಾತ್ರ ಸಿಗಬಹುದಾ?ʼ ಅಂತ ಕೇಳಿದ್ದರು. ಆದರೆ ಪ್ರಕಾಶ್ ʼಸಾರಿ, ಎಲ್ಲ ಪಾತ್ರಗಳಿಗೂ ಜನ ಆಗಿದ್ದಾರೆ, ಮುಂದೆ ನೋಡೋಣʼ ಎಂದರು. ಅಲ್ಲೂ ನಿರಾಶೆಯೇ ಕಾದಿತ್ತು. ಹೀಗಾಗಿ ಅದರ ಆಸೆಯನ್ನೇ ಬಿಟ್ಟಿದ್ದರು.
ದೇವಸ್ಥಾನಕ್ಕೆ ಹೋಗುವುದು ಎಂದು ನಿರ್ಧರಿಸಿ ಫಿಕ್ಸ್ ಮಾಡಿದ ದಿನವೇ ತುಮಿನಾಡ್ ಫೋನ್ ಬಂತು. ʼಒಂದು ಪಾತ್ರ ಇದೆ, ಆಡಿಷನ್ ಆಗಬೇಕು, ಭಾನುವಾರ ಬರಬಹುದಾ?ʼ ಅಂತ. ʼಅಯ್ಯೋ, ಗುರುವಾರ ಮಾಡಾಯಿ ಕಾವು ದೇವಸ್ಥಾನಕ್ಕೆ ಹೋಗುವುದು ಫಿಕ್ಸ್ ಆಗಿದೆಯಲ್ಲʼ ಅಂತ ಇವರು ಉತ್ತರಿಸಿದರು. ಅಷ್ಟರಲ್ಲಿ ಪ್ರಕಾಶ್ ಪಕ್ಕದಲ್ಲೇ ಇದ್ದ ರಿಷಭ್ ಶೆಟ್ಟಿ, ʼದೇವಸ್ಥಾನಕ್ಕೆ ತಾನೆ, ಹೋಗಿ ಸೋಮವಾರ ಬರಲಿʼ ಎಂದರಂತೆ. ಹಾಗೆ ಇವರು ದೇವಸ್ಥಾನಕ್ಕೆ ಹೋಗಿ ಬಂದರು. ಇವರ ಜೊತೆಗಿದ್ದ ಮಿತ್ರರು, ʼನೋಡಿ, ನೀವು ಇಷ್ಟು ದಿನ ಕಷ್ಟಪಟ್ಟಿರಿ, ಇಂದು ಮಾಡಾಯಿ ಕಾವು ದೇವಸ್ಥಾನಕ್ಕೆ ಹೋಗಿ ಬರುವ ಸಂಕಲ್ಪ ಮಾಡಿದ ಕೂಡಲೇ ನಿಮಗೆ ಪಾತ್ರ ಸಿಕ್ಕಿತಲ್ಲʼ ಅಂತ. ಇವರಿಗೂ ಅದು ಹೌದು ಅನಿಸಿತು. ಮಾಡಾಯಿ ಕಾವು ದೇವಸ್ಥಾನ ಅಷ್ಟೊಂದು ಪವರ್‌ಫುಲ್ ಎಂದು ಪುಷ್ಪರಾಜ್ ಅವರಿಗೆ ಬಹಳ ನಂಬಿಕೆ.
ಕಾಂತಾರ ಸೆಟ್‌ನಲ್ಲಿ ಏನಾಗಿತ್ತು ಎಂದರೆ, ಅಬ್ಬು ಪಾತ್ರದವನು ಬಂದಿರಲಿಲ್ಲ. ಆಗ ಪ್ರಕಾಶ್ ಅವರು ಪುಷ್ಪರಾಜರನ್ನು ಕರೆದಿದ್ದರು. ಸ್ಕ್ರಿಪ್ಟ್ ಕೊಟ್ಟು, ರಾತ್ರಿ ರಿಷಬ್ ಬರ್ತಾರೆ. ಅವರ ಎದುರು ಮಾಡಿ ತೋರಿಸಿ ಎಂದು ಹೇಳಿದರು. ಪುಷ್ಪರಾಜ್ ಡೈಲಾಗ್ ಕಲಿತು, ರಿಷಬ್ ಅವರ ಎದುರು ಹೇಳಿ, ಜೈಲಿನ ದೃಶ್ಯದ ಡೈಲಾಗ್ ಮಾಡಿ ತೋರಿಸಿದರು. ಸೆಲೆಕ್ಟ್ ಆದರು. ಮೊದಲು ಆ ಪಾತ್ರ 2 ದಿನದ ಶೂಟ್ಗಾಗಿ ಶೆಡ್ಯೂಲ್ ಆಗಿತ್ತು. ಆದರೆ, 24 ದಿನ ಮಾಡೋಕೆ ಅವಕಾಶ ಸಿಕ್ಕಿತು. ‘ಗರ್ನಾಲ್ ಅಬ್ಬು’ ಪಾತ್ರದಲ್ಲಿ ಕಾಣಿಸಿಕೊಂಡ ಬಳಿಕ ಅವರ ಬೇಡಿಕೆ ಸಾಕಷ್ಟು ಹೆಚ್ಚಾಗಿದೆ.
ಪುಷ್ಪರಾಜ್ ಮೂಲತಃ ಕಾಸರಗೋಡಿನವರು. ಅವರ ಊರು ಕೇರಳ-ಕರ್ನಾಟಕ ಗಡಿಯಲ್ಲಿದೆ. ಮನೆಯಲ್ಲಿ ತಂದೆ-ತಾಯಿ ಹಾಗೂ ಮೂರು ಮಕ್ಕಳಿದ್ದಾರೆ. ಶಾಲೆಗೆ ಹೋಗುವಾಗ ಸಂಗೀತದ ಬಗ್ಗೆ ಆಸಕ್ತಿ ಇತ್ತು. ಆರ್ಕೆಸ್ಟ್ರಾದಲ್ಲಿ ಹಾಡುತ್ತಿದ್ದರು. ಆ ಬಳಿಕ ತುಳುವಿನ ನಾಟಕಗಳು ಪ್ರಭಾವ ಬೀರಿತು. ನಾಟಕ ಸೇರಿದರು. ಹವ್ಯಾಸಿ ಕಲಾವಿದರ ತಂಡದ ಬಳಿಕ ನಂತರ ವೃತ್ತಿಪರ ಡ್ರಾಮ ಮಾಡಿದರು. ತುಳು ಹಾಗೂ ಕನ್ನಡದಲ್ಲಿ ಸಾಕಷ್ಟು ಸಿನಿಮಾ ಮಾಡಿದ್ದಾರೆ. ತುಳುವಿನ ಕೆಲವು ಶೋಗಳಲ್ಲಿಯೂ ಕಾಣಿಸಿಕೊಂಡ ನಂತರ ಕರಾವಳಿಯಲ್ಲಿ ಜನಪ್ರಿಯತೆ ಸಿಕ್ಕಿತು. ಕನ್ನಡದಲ್ಲಿ ನುಗ್ಗೆಕಾಯಿ ಅವರ ಮೊದಲ ಸಿನಿಮಾ. ಸಹಿಪ್ರಾ ಶಾಲೆಯಲ್ಲಿ ರಾಮಣ್ಣ ರೈ ಅವರ ಎಂ80 ಡ್ರೈವರ್ ಆಗಿ ಕಾಣಿಸಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.