
'ಎಲ್ರ ಕಾಲೆಳೆಯೋದಕ್ಕೆ ಬರ್ತಿದಾರೆ ಚಂದನ್ ಶೆಟ್ಟಿ1
ಬೆಂಗಳೂರು: ಬಿರುಬೇಸಿಗೆಯ ಈ ಕಾಲದಲ್ಲಿ ಹೊಸದೊಂದು ಸುದ್ದಿ ಸಿಕ್ಕಿದೆ. 'ಎಲ್ರ ಕಾಲೆಳೆಯೋದಕ್ಕೆ ಕನ್ನಡ ಚಿತ್ರರಂಗದಲ್ಲೊಂದು ವಿಶೇಷ ಬರುತ್ತಿದೆ. ಕನ್ನಡ ಚಿತ್ರರಂಗದ 'ರಾಪ್ ಕಿಂಗ್' ಎಂದೇ ಖ್ಯಾತರಾಗಿರುವ ಚಂದನ್ ಶೆಟ್ಟಿ (Chandan Shetty) ಅವರ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ಸಿಕ್ಕಿದೆ. ಬಹಳ ದಿನಗಳಿಂದ ಕುತೂಹಲ ಮೂಡಿಸಿದ್ದ, ಚಂದನ್ ಶೆಟ್ಟಿ ನಾಯಕನಾಗಿ ನಟಿಸಿರುವ ‘ಎಲ್ರ ಕಾಲೆಳಿಯತ್ತೆ ಕಾಲ’ ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದೆ. ಸ್ಯಾಂಡಲ್‌ವುಡ್‌ನಲ್ಲಿ ತನ್ನದೇ ಆದ ವಿಭಿನ್ನ ಸಂಗೀತದ ಮೂಲಕ ಮೋಡಿ ಮಾಡಿದ್ದ ಚಂದನ್, ಈಗ ಬೆಳ್ಳಿಪರದೆಯ ಮೇಲೆ ಪೂರ್ಣ ಪ್ರಮಾಣದ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಬಹಳ ದಿನಗಳ ಕಾಯುವಿಕೆಗೆ ಸಿಕ್ಕಿತು ಉತ್ತರ!
ಈ ಸಿನಿಮಾ ಸೆಟ್ಟೇರಿ ಸಾಕಷ್ಟು ಸಮಯ ಕಳೆದಿದ್ದರೂ, ತಾಂತ್ರಿಕ ಕಾರಣಗಳಿಂದಾಗಿ ಬಿಡುಗಡೆ ವಿಳಂಬವಾಗಿತ್ತು. "ಈ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ?" ಎಂಬ ಪ್ರಶ್ನೆ ಸೋಷಿಯಲ್ ಮೀಡಿಯಾದಲ್ಲಿ ಚಂದನ್ ಅಭಿಮಾನಿಗಳನ್ನು ಸದಾ ಕಾಡುತ್ತಿತ್ತು. ಈಗ ಚಿತ್ರತಂಡ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದು, ಏಪ್ರಿಲ್ 17ರಂದು ಅದ್ಧೂರಿಯಾಗಿ ರಾಜ್ಯಾದ್ಯಂತ ಚಲನಚಿತ್ರ ಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿದೆ.
ಖ್ಯಾತ ನಟ ಸುಜಯ್ ಶಾಸ್ತ್ರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಗೋಕುಲ ಎಂಟರ್ಟೈನರ್ಸ್ ಬ್ಯಾನರ್ ಅಡಿಯಲ್ಲಿ ಗೋವಿಂದರಾಜು ಅವರು ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ನಿರ್ದೇಶಕ ಸುಜಯ್ ಶಾಸ್ತ್ರಿ ಚಿತ್ರದ ಬಗ್ಗೆ ಮಾತನಾಡುತ್ತಾ, "ನಮ್ಮ ಸಿನಿಮಾ ಬಿಡುಗಡೆ ಸ್ವಲ್ಪ ತಡವಾಯಿತು ನಿಜ, ಆದರೆ ಈಗ ಸರಿಯಾದ ಸಮಯ ಬಂದಿದೆ. ಇದೊಂದು 90ರ ದಶಕದ ಕಾಲಘಟ್ಟದಲ್ಲಿ ನಡೆಯುವ ಅದ್ಭುತ ಕಥೆ. ಕಾಲ ಅಥವಾ ಸಮಯದ ಮಹತ್ವವೇನು ಎಂಬುದನ್ನು ಕಾಮಿಡಿ ಮತ್ತು ಎಮೋಷನ್ ಮೂಲಕ ಹೇಳಲು ಪ್ರಯತ್ನಿಸಿದ್ದೇವೆ. ಚಿತ್ರದ ಬಹುತೇಕ ಭಾಗವನ್ನು ಕನಕಪುರದ ನೈಸರ್ಗಿಕ ಪರಿಸರದಲ್ಲಿ ಚಿತ್ರೀಕರಿಸಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.
ಚಂದನ್ ಶೆಟ್ಟಿಗೆ ಇದು ಮೊದಲ ಪ್ರೇಮ!
ಈಗಾಗಲೇ ಚಂದನ್ ಶೆಟ್ಟಿ ನಟನೆಯ ಎರಡು ಚಿತ್ರಗಳು ಬಿಡುಗಡೆಯಾಗಿದ್ದರೂ, ‘ಎಲ್ರ ಕಾಲೆಳಿಯತ್ತೆ ಕಾಲ’ ಅವರಿಗೆ ಬಹಳ ವಿಶೇಷ. ಏಕೆಂದರೆ, ಅವರು ನಾಯಕನಾಗಿ ನಟಿಸಲು ಒಪ್ಪಿಕೊಂಡ ಮೊದಲ ಸಿನಿಮಾ ಇದಾಗಿದೆ. ಈ ಪಾತ್ರಕ್ಕಾಗಿ ಚಂದನ್ ಬಹಳಷ್ಟು ತಯಾರಿ ನಡೆಸಿದ್ದಾರೆ. "ನಾನು ಹೀರೊ ಆಗಿ ಸಹಿ ಮಾಡಿದ ಮೊದಲ ಸಿನಿಮಾ ಇದು. ಪಾತ್ರದ ಬೇಡಿಕೆಯಂತೆ 90ರ ದಶಕದ ಯುವಕನಂತೆ ಕಾಣಲು ನನ್ನ ದೇಹದ ತೂಕವನ್ನು ಕೂಡ ಹೆಚ್ಚಿಸಿಕೊಂಡಿದ್ದೆ. ಸಮಯದ ಬೆಲೆ ಗೊತ್ತಿಲ್ಲದಿದ್ದರೆ ಜೀವನದಲ್ಲಿ ಏನೆಲ್ಲಾ ಅವಾಂತರಗಳಾಗುತ್ತವೆ ಎಂಬುದನ್ನು ಈ ಚಿತ್ರದಲ್ಲಿ ತುಂಬಾ ಚೆನ್ನಾಗಿ ತೋರಿಸಲಾಗಿದೆ" ಎಂದು ಚಂದನ್ ಶೆಟ್ಟಿ ಚಿತ್ರದ ಮೇಲಿರುವ ತಮ್ಮ ಪ್ರೀತಿಯನ್ನು ಹಂಚಿಕೊಂಡಿದ್ದಾರೆ.
ಚಿತ್ರದಲ್ಲಿ ಐದು ಸುಂದರ ಹಾಡುಗಳಿದ್ದು, ಪ್ರವೀಣ್ - ಪ್ರದೀಪ್ ಸಂಗೀತ ನೀಡಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ 'ಮಾತು ಮಧುರ' ಎಂಬ ಹಾಡು ಈಗಾಗಲೇ ಕೇಳುಗರ ಮನ ಗೆದ್ದಿದೆ. ವಿಶೇಷವೆಂದರೆ, ಚಿತ್ರದ ಪ್ರಮೋಷನಲ್ ಹಾಡಿಗೆ ಸ್ವತಃ ಚಂದನ್ ಶೆಟ್ಟಿ ಸಂಗೀತ ನೀಡಿ ಧ್ವನಿಯಾಗಿದ್ದಾರೆ. ನಾಯಕಿಯಾಗಿ ಅರ್ಚನಾ ಕೊಟ್ಟಿಗೆ ಕಾಣಿಸಿಕೊಂಡಿದ್ದು, ಅವರು ಮೆಸ್ ಮಾಲೀಕಿಯ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಹಿರಿಯ ಕಲಾವಿದರಾದ ದತ್ತಣ್ಣ, ತಾರಾ ಅನುರಾಧ ಹಾಗೂ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಂಜು ಪಾವಗಡ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ.
ಒಟ್ಟಿನಲ್ಲಿ, ಬೇಸಿಗೆಯ ರಜೆಯ ಸಮಯದಲ್ಲಿ ‘ಎಲ್ರ ಕಾಲೆಳಿಯತ್ತೆ ಕಾಲ’ ಸಿನಿಮಾ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಲು ಸಜ್ಜಾಗಿದೆ. ಏಪ್ರಿಲ್ 17ರಂದು ಚಿತ್ರಮಂದಿರಗಳಲ್ಲಿ ಚಂದನ್ ಶೆಟ್ಟಿ ಅವರ ಈ ಹೊಸ ಅವತಾರವನ್ನು ನೋಡಲು ಸ್ಯಾಂಡಲ್‌ವುಡ್ ಸಿನಿಪ್ರಿಯರು ಕಾತರರಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.