KGF Chapter 2: ರಾಕಿಭಾಯ್ ಆರ್ಭಟಕ್ಕೆ ಬಾಲಿವುಡ್ ಢರ್‌ಗಯಾ!

By Govindaraj SFirst Published Apr 18, 2022, 7:01 PM IST
Highlights

ರಣಧೀರನ ಆರ್ಭಟಕ್ಕೆ ಬಾಲಿವುಡ್‌ನ ಬುಡ ಕಂಪಿಸುತ್ತಿದೆ. ಇಲ್ಲಿ ನಮ್ಗೆ ನಾವೇ ಸರದಾರರು, ನಾವು ಬಿಟ್ರೆ ಬೇರೆ ಯಾರೂ ಇಲ್ಲ ಅಂತ ಮೆರೆಯುತ್ತಿದವರ ಎದೆ ನಡುಗುತ್ತಿದೆ. 

ತೊಡೆ ತಟ್ಟಿ ನಿಂತ ಗಟ್ಟಿಗನ ಕೆಚ್ಚು, ಮುನ್ನುಗ್ಗೋ ಸಿಡಿಲ ಕಿಚ್ಚು. ಈ ಕಿಚ್ಚಿನ ಮುಂದೆ ಬಾಲಿವುಡ್ (Bollywood) ಸೂಪರ್ ಸ್ಟಾರ್‌ಗಳೆಲ್ಲಾ ಸೈಲೆಂಟ್, ಸೈಲೆಂಟ್. ದಕ್ಷಿಣದ ಸಿನಿಮಾಗಳನ್ನು ಕಾಲ ಕಸದಂತೆ ಕಂಡ ಬಾಲಿವುಡ್ ಚಿತ್ರರಂಗವನ್ನು ಅದೇ ದಕ್ಷಿಣದ ಸಿನಿಮಾಗಳು ಪೊರಕೆಯಲ್ಲಿ ಗುಡಿಸಿ ಹಾಕಿ ಬಿಟ್ಟಿವೆ. ಬಾಲಿವುಡ್ ಅಧಃಪತನಕ್ಕೆ ಕೊನೇ ಮೊಳೆ ಹೊಡೆದಿರೋದು ಕನ್ನಡ ಚಿತ್ರರಂಗದ ಹೆಮ್ಮೆ ಕೆ.ಜಿ.ಎಫ್ ಚಾಪ್ಟರ್-2 (KGF Chapter 2) ಅನ್ನೋ ಮಹೋನ್ನತ ಸಿನಿಮಾ. ಕೆ.ಜಿ.ಎಫ್ ಅಂದ್ರೆ ಕೋಲಾರ ಗೋಲ್ಡ್ ಫೀಲ್ಡ್ ಅಂತ. ಹೆಸರಿಗೆ ತಕ್ಕಂತೆ ಕೆಜಿಎಫ್ (KGF) ಅಪ್ಪಟ ಗೋಲ್ಡೇ ಬಿಡ್ರೀ.

ಭಾರತೀಯ ಚಿತ್ರರಂಗದ ದಾಖಲೆಗಳನ್ನೆಲ್ಲಾ ಉಡೀಸ್ ಮಾಡ್ತಾ ಮುನ್ನುಗ್ತಾ ಇರೋ ಕೆ.ಜಿ.ಎಫ್ ಚಾಪ್ಟರ್-2 ಸಿನಿಮಾ, ಕೇವಲ ಎರಡೇ ಎರಡು ದಿನಗಳಲ್ಲಿ ಬಾಚಿಕೊಂಡ ದುಡ್ಡೆಷ್ಟು ಗೊತ್ತಾ. ಇದು ಕನ್ನಡ ಚಿತ್ರವೊಂದರ ತಾಕತ್ತು. ಕನ್ನಡಿಗರ ಸಾರಥ್ಯದಲ್ಲೇ ನಿರ್ಮಾಣಗೊಂಡ ಸಿನಿಮಾ ಶಕ್ತಿ. ಕೆ.ಜಿ.ಎಫ್ ನಾಗಾಲೋಟದ ಮುಂದೆ ಯಾವ ಬಾಲಿವುಡ್ಡೂ ಇಲ್ಲ, ಯಾವ ಖಾನು, ಕಿಂಗು, ಕಪೂರು, ಕುಮಾರೂ ಇಲ್ಲ. ಕೆ.ಜಿ.ಎಫ್ ರಣಾರ್ಭಟದ ಮುಂದೆ ಬಾಲಿವುಡ್‌ನ ಸೂಪರ್ ಸ್ಟಾರ್‌ಗಳು ಅದ್ಯಾವ ಪರಿ ಗರ ಬಡಿದು ಹೋಗಿದ್ದಾರೆ ಅನ್ನೋದಕ್ಕೆ ಒಂದೇ ಒಂದು ಸಣ್ಣ ಉದಾಹರಣೆಯನ್ನು ನೋಡಿ.

ಬಾಲಿವುಡ್‌ನ ಬಾಕ್ಸ್ ಆಫೀಸ್ ಸುಲ್ತಾನ ಅಂತಾನೇ ಕರೆಸಿಕೊಳ್ಳೋ ಸಲ್ಮಾನ್ ಖಾನ್ ನಟನೆಯ ಭಜರಂಗಿ ಭಾಯಿಜಾನ್ 100 ಕೋಟಿ ಗಳಿಸಲು ಮೂರು ದಿನಗಳು ಬೇಕಾಗಿದ್ದವು. ಆದರೆ ಕೆ.ಜಿ.ಎಫ್ ಚಾಪ್ಟರ್-2ನ ಹಿಂದಿ ಅವತರಣಿಕೆ ಕೇವಲ ಎರಡೇ ದಿನಗಳಲ್ಲಿ100 ಕೋಟಿ ಕ್ಲಬ್ ಸೇರಿದೆ. 3 ದಿನಗಳಲ್ಲಿ 100 ಕೋಟಿ ದೋಚಿದ್ದ ಭಜರಂಗಿ ಭಾಯಿಜಾನ್ ದಾಖಲೆಗಳನ್ನು ನಮ್ಮ ಕೆ.ಜಿ.ಎಫ್ ಉಡೀಸ್ ಮಾಡಿ ಬಿಟ್ಟಿದೆ. ರಣಧೀರನ ಆರ್ಭಟಕ್ಕೆ ಬಾಲಿವುಡ್‌ನ ಬುಡ ಕಂಪಿಸುತ್ತಿದೆ. ಇಲ್ಲಿ ನಮ್ಗೆ ನಾವೇ ಸರದಾರರು, ನಾವು ಬಿಟ್ರೆ ಬೇರೆ ಯಾರೂ ಇಲ್ಲ ಅಂತ ಮೆರೆಯುತ್ತಿದವರ ಎದೆ ನಡುಗುತ್ತಿದೆ. 

KGF 2 ಹೀರೋ ಯಶ್ ರಾಧಿಕಾ ಪ್ರೇಮ ಕಹಾನಿಗೆ ಮತ್ತೆ ಜೀವ ಬಂತು! ಹರಿದಾಡ್ತಿದೆ ಹಳೇ ಫೋಟೋ

ನಾವು ಸಿನಿಮಾ ಮಾಡ್ತೀವಿ, ನೀವು ನೋಡ್ಬೇಕು ಅಷ್ಟೇ ಅಂತ ದೌಲತ್ತು ಮಾಡ್ತಿದ್ದವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಪಾಠ ಕಲಿಸಿ ಬಿಟ್ಟಿದೆ ಕೆ.ಜಿ.ಎಫ್ ಚಾಪ್ಟರ್-2. ಇನ್ಮುಂದೆ ಬಾಲಿವುಡ್ ಪ್ರೇಕ್ಷಕರು ಯಾವ ಸಿನಿಮಾಗಳನ್ನು ನೋಡ್ಬೇಕು ಅನ್ನೋದನ್ನು ದಕ್ಷಿಣದ ಚಿತ್ರರಂಗದವರು ಡಿಸೈಡ್ ಮಾಡ್ತೇವೆ ಅನ್ನೋ ರಣಘೋಷವನ್ನು ದೊಡ್ಡದಾಗಿ ಮೊಳಗಿಸಿ ಬಿಟ್ಟಿದೆ ನಮ್ಮ ಕೆ.ಜಿ.ಎಫ್. ಬಾಲಿವುಡ್ ಅನ್ನೋ ಸೊಕ್ಕಿನ ಕುದುರೆಯನ್ನು ಕಟ್ಟಿ ಹಾಕಿದ ದಕ್ಷಿಣ ಭಾರತದ  ಮೊದಲ ಮಹಾ ಸಿನಿಮಾ ಅಂದ್ರೆ ಅದು ಬಾಹುಬಲಿ, ಜಕ್ಕಣ್ಣ ರಾಜಮೌಳಿಯವರ ಬಾಹುಬಲಿ ದಿ ಬಿಗಿನಿಂಗ್. 2015ರಲ್ಲಿ ಬಿಡುಗಡೆಗೊಂಡಿದ್ದ ಬಾಹುಬಲಿ-1 ಸಿನಿಮಾ ಜಗತ್ತಿನಾದ್ಯಂತ ಎಬ್ಬಿಸಿದ ಹವಾ, ಸೃಷ್ಠಿಸಿದ ಸುನಾಮಿ ಅಷ್ಟಿಷ್ಟಲ್ಲ. 



ಭಾರತೀಯ ಚಿತ್ರರಂಗಕ್ಕೆ ನಾವೇ ಬಾದ್’ಷಾ ಅಂತ ಮೆರೆಯುತ್ತಿದ್ದ ಬಾಲಿವುಡ್ ಮಂದಿಯ ಬುಡ ನಡುಗುವಂತೆ ಮಾಡಿದ ದಕ್ಷಿಣದ ಮೊದಲ ಸಿನಿಮಾವದು. ಅಂದು ಬಾಲಿವುಡ್‌ನ ಬುಡ ಇದೇ ರೀತಿ ನಡುಗಿ ಹೋಗಿತ್ತು. ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಸೂರೆಗೈದ ಬಾಹುಬಲಿಯ ಈ ರೆಕಾರ್ಡನ್ನು ಬ್ರೇಕ್ ಮಾಡಿದ್ದು ಯಾವ ಹಿಂದಿ ಸಿನಿಮಾವೂ ಅಲ್ಲ, ಅದ್ಯಾವ ಖಾನು, ಕುಮಾರು, ಕಪೂರೂ ಅಲ್ಲ. ಎಸ್ಎಸ್ ರಾಜಮೌಳಿಯವರ ಮತ್ತದೇ ದಕ್ಷಿಣದ ಬಾಹುಬಲಿ. ಕೆ.ಜಿ.ಎಫ್ ಬರೀ ಸಿನಿಮಾವಲ್ಲ. ಕನ್ನಡ ಚಿತ್ರರಂಗದ ಬಗ್ಗೆ ಅನ್ಯಭಾಷಿಕರಿಗೆ ಇದ್ದ ಅಸಡ್ಡೆಯನ್ನು ಸುಟ್ಟು ಹಾಕಿದ ಐತಿಹಾಸಿಕ ಸಿನಿಮಾ. ರಾಜಮೌಳಿಯವರ ಬಾಹುಬಲಿಗೆ ಸರಿಸಾಟಿಯಾಗಿ ನಿಂತು, ಹಿಂದಿ ಚಿತ್ರರಂಗವನ್ನು ಬೆಚ್ಚಿ ಬೀಳಿಸಿದ ಸಿನಿಮಾ. 

ನಾಲ್ಕು ವರ್ಷಗಳ ಹಿಂದೆ ರಿಲೀಸ್ ಆಗಿದ್ದ ಕೆ.ಜಿ.ಎಫ್ ಚಾಪ್ಟರ್-1 ಚಿತ್ರ, ಇಡೀ ಭಾರತೀಯ ಚಿತ್ರರಂಗದಲ್ಲಿ ಅದೆಂಥಾ ಕ್ರೇಜ್ ಹುಟ್ಟು ಹಾಕಿತ್ತು ಅಂದ್ರೆ, ಅದನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ. ಬಾಹುಬಲಿ, ಕೆಜಿಎಫ್, ಪುಷ್ಪ, ಆರ್‌ಆರ್‌ಆರ್. ದಕ್ಷಿಣ ಸಿನಿಮಾಗಳ ಮುಂದೆ ಬಾಲಿವುಡ್ ಉಡೀಸ್. ಉರಿ ತಡೆಯಲಾರದೆ ಸೌತ್ ಸಿನಿಮಾಗಳನ್ನು ಹೀಯಾಳಿಸೋದಕ್ಕೆ ನಿಂತಿದ್ದಾರೆ ಬಾಲಿವುಡ್ ಮಂದಿ. ದಕ್ಷಿಣ ದಂಡಯಾತ್ರೆಯ ಸಕ್ಸಸ್ ನೋಡಿ ಬಾಲಿವುಡ್‌ನವರ ಹೊಟ್ಟೆ ಅದ್ಯಾಪ ಪರಿ ಉರೀತಾ ಇದೆ ಅನ್ನೋದನ್ನು ನೋಡಿ. ಬಾಹುಬಲಿ, ಕೆಜಿಎಫ್ ಸೀಕ್ವೆಲ್‌ಗಳ ನಂತ್ರ ಬಾಲಿವುಡ್ ಬುಡಕ್ಕೆ ಬಾಂಬ್ ಇಟ್ಟ ಮತ್ತೊಂದು ಸೌತ್ ಸಿನಿಮಾವಿದು. 

David Warner: ರಾಕಿ ಬಾಯ್​​ ಯಶ್​ ಅವತಾರದಲ್ಲಿ ಧೂಳೆಬ್ಬಿಸಿದ ವಾರ್ನರ್​​​

ಕಳೆದ ವರ್ಷ ರಿಲೀಸ್ ಆದ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ದಕ್ಷಿಣ ಭಾರತದಲ್ಲಷ್ಟೇ ಅಲ್ಲ, ಹಿಂದಿ ಚಿತ್ರರಂಗದಲ್ಲೂ ಧೂಳೆಬ್ಬಿಸಿತ್ತು. ಅದ್ರಲ್ಲೂ ಶ್ರೀವಲ್ಲಿ ಹಾಡಿಗೆ ಮಾರು ಹೋಗದವರೇ ಇಲ್ಲ. ಇನ್ನು ಎಸ್ಎಸ್ ರಾಜಮೌಳಿಯವರ ಆರ್‌ಆರ್‌ಆರ್ ಈಗ ಕೆ.ಜಿ.ಎಫ್ ಚಾಪ್ಟರ್-2 ಆರ್ಭಟ. ದಕ್ಷಿಣದ ಸಿನಿಮಾಗಳ ಮುಂದೆ ಎಲ್ಲಾದ್ರೂ ಹಿಂದಿ ಸಿನಿಮಾಗಳ ಸದ್ದಿದ್ಯಾ ನೋಡಿ..? ನೋ ವೇ, ಚಾನ್ಸೇ ಇಲ್ಲ. ಹಿಂದಿವಾಲಾಗಳ ಹೊಟ್ಟೆ ಉರಿಯದೇ ಇರತ್ತಾ? ಕೊಂಕು ಮಾತು ಬಂದೇ ಬಿಟ್ಟಿದೆ. ಮೂರು ಗಂಟೆ ಟಾಪ್ ಕ್ಲಾಸ್ ಟಾರ್ಚರ್. ಸಿನಿಮಾ ನಿರ್ಮಾಣದ ಹೆಸರಿನಲ್ಲಿ ಹಣ ಮತ್ತು ಸಮಯ ವ್ಯರ್ಥ. 

ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಗೆದ್ದರೆ ಬಾಲಿವುಡ್‌ನ ಅಂತ್ಯ. ಯಾಕೆಂದರೆ ಬಾಲಿವುಡ್ ಚಿತ್ರಗಳು ಹೀಗಾದರೆ ಅನಾಬುತವಾಗುತ್ತದೆ. ಥೂ. ಅಂತ ಟ್ವೀಟ್ ಮಾಡಿದ್ದಾನೆ ಬಾಲಿವುಡ್ ನಟ, ಸ್ವಯಂ ಘೋಷಿತ ಚಲನಚಿತ್ರ ವಿಮರ್ಶಕ ಕಮಲ್ ಆರ್ ಖಾನ್.  ‘ಆರ್‌ಆರ್‌ಆರ್’ ಬಿಡುಗಡೆಯಾದಾಗಲೂ ಕಮಾಲ್ ಆರ್ ಖಾನ್ ಇದೇ ರೀತಿ ನೆಗೆಟಿವ್ ರಿವ್ಯೂ ಮಾಡಿದ್ದ. ಚಿತ್ರತಂಡ ನೀಡಿದ ಬಾಕ್ಸ್ ಆಫೀಸ್ ಲೆಕ್ಕಾಚಾರ ಸುಳ್ಳು ಎಂದಿದ್ದ. ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತಾ? ಬಾಲಿವುಡ್ ಮಂದಿಯ ಹೊಟ್ಟೆಕಿಚ್ಚಿಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ಉತ್ತರ ಕೊಟ್ಟಿದ್ದಾರೆ ನೋಡಿ ದಕ್ಷಿಣದ ಸ್ಟಾರ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ. 



ಕೆ.ಜಿ.ಎಫ್-2 ಗ್ಯಾಂಗ್‌ಸ್ಟರ್ ಸಿನಿಮಾ ಅಷ್ಟೇ ಅಲ್ಲ, ಬಾಲಿವುಡ್ ಪಾಲಿಗೆ ಹಾರರ್ ಸಿನಿಮಾವೂ ಹೌದು. ಕೆ.ಜಿ.ಎಫ್ ಯಶಸ್ಸು ಹಲವಾರು ವರ್ಷಗಳ ಕಾಲ ಬಾಲಿವುಡ್ ಮಂದಿಯನ್ನು ದುಸ್ವಪ್ನದಂತೆ ಕಾಡಲಿದೆ ಅಂತ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ. ಬಾಲಿವುಡ್ ಸೂಪರ್'ಸ್ಟಾರ್'ಗಳ ಕಳಪೆ ಸಿನಿಮಾಗಳು, ಆ ಸಿನಿಮಾಗಳು ಅಧಃಪತನಗೊಳ್ಳುತ್ತಿರುವ ವೇಗ. ಈಗ ಹಿಂದಿ ಬೆಲ್ಟಿನ ಆಡಿಯೆನ್ಸ್ ವರ್ಗವನ್ನು ಯಶಸ್ವಿಯಾಗಿ ಕ್ಯಾಪ್ಚರ್ ಮಾಡಿರೋ ಸೌತ್ ಸಿನಿಮಾಗಳು. Bollywood is Become a Dead Horse Now. ಭಾರತದ ಸಿನಿಮಾಗಳಂದ್ರೆ ಕೇವಲ ಹಿಂದಿ ಚಿತ್ರಗಳು ಅನ್ನೋ  ದುರಹಂಕಾರಕ್ಕೆ ಮುಟ್ಟಿ ನೋಡಿಕೊಳ್ಳುವ ಹಾಗೆ ಕೊಡಲಿ ಏಟು ಕೊಟ್ಟಿವೆ ಸೌತ್ ಸಿನಿಮಾಗಳು. 

ಇದು ಆರಂಭ ಅಷ್ಟೇ. ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿನ್ನು ದಕ್ಷಿಣ ಚಿತ್ರಗಳದ್ದೇ ಹವಾ. ಬಾಲಿವುಡ್ ಮಂದಿಯ ಮೆರೆದಾಟಕ್ಕೆ, ಹಿಂದಿ ಚಿತ್ರರಂಗದವರ ದುರಹಂಕಾರಕ್ಕೆ ದಕ್ಷಿಣ ಸಿನಿಮಾಗಳು ಕೊಟ್ಟಿರೋ ಪೆಟ್ಟು ಸಣ್ಣದಲ್ಲ. ಇದ್ರಿಂದ ಚೇತರಿಸಿಕೊಳ್ಳಲು ಬಾಲಿವುಡ್‌ಗೆ ವರ್ಷಗಶಳೇ ಬೇಕಾಗಬಹುದು. ಕೆಲವೇ ವರ್ಷಗಳ ಹಿಂದಿನ ಮಾತು. ಭಾರತೀಯ ಚಿತ್ರರಂಗವೆಂದರೆ ಬಾಲಿವುಡ್ ಮಾತ್ರ ಅಂತ ಬಿಂಬಿಸಲಾಗುತ್ತಿತ್ತು. ಆದರೆ, ಇಂದು ಚಿತ್ರಣವೇ ಬದಲಾಗಿದೆ. ದಕ್ಷಿಣದ ಚಿತ್ರಗಳು ಬಜೆಟ್‌ನಲ್ಲಿ, ಮೇಕಿಂಗ್‌ನಲ್ಲಿ, ಕ್ಯಾನ್ವಾಸ್‌ನಲ್ಲಿ, ಎಲ್ಲಕ್ಕಿಂತ ಹೆಚ್ಚಾಗಿ ಜನರನ್ನು ತಲುಪುವ ವಿಚಾರದಲ್ಲಿ ಹಿಂದಿ ಚಿತ್ರಗಳನ್ನು ಮೀರಿಸುತ್ತಿವೆ. ಭಾರತೀಯ ಚಿತ್ರರಂಗದಲ್ಲೇ ಹೊಸಹೊಸ ದಾಖಲೆಗಳನ್ನು ಮಾಡುತ್ತಿವೆ. 

KGF Chapter 2: ರಾಕಿ ಡೋಂಟ್ ಲೈಕ್ ರೆಕಾರ್ಡ್: ರೆಕಾರ್ಡ್ ಲೈಕ್ಸ್ ರಾಕಿ!

ದಕ್ಷಿಣದ ಚಿತ್ರಗಳು ಕೇವಲ ದಕ್ಷಿಣ ರಾಜ್ಯಗಳಿಗೆ ಮಾತ್ರ ಸೀಮಿತ ಎಂಬುದನ್ನು ಸುಳ್ಳು ಮಾಡಿ, ಇಡೀ ಜಗತ್ತಿನಲ್ಲಿ ಮಿಂಚುತ್ತಿವೆ. ಇದು ಆರಂಭ ಅಷ್ಟೇ. ಇನ್ನು ಪುಷ್ಪ-2 ಬರೋದಿದೆ, ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಬರ್ತಾ ಇದೆ. ಪ್ರಶಾಂತ್ ನೀಲ್-ಪ್ರಭಾಸ್ ಜೋಡಿಯ ಸಲಾರ್ ಸಿನಿಮಾ ಕೂಡ ರಿಲೀಸ್‌ಗೆ ಕಾಯ್ತಿದೆ. ಜಕ್ಕಣ್ಣ ರಾಜಮೌಳಿಯವರ ಮುಂದಿನ ಸಿನಿಮಾ ಬಗ್ಗೆ ಈಗಲೇ ಕುತೂಹಲ ಬೆಟ್ಟದಷ್ಟಿದೆ. ಈ ತೂಫಾನ್‌ಗಳೆಲ್ಲಾ ಅಪ್ಪಳಿಸಿ ಬಿಟ್ರೆ, ಬಾಲಿವುಡ್ ಸಮಾಧಿ ಕಟ್ಟಿಟ್ಟ ಬುತ್ತಿ. ದುಡ್ಡು ಕೊಟ್ಟು ಸಿನಿಮಾ ನೋಡೋ ಜನರಿಗೆ ಬೇಕಾಗಿರೋದು ಭರ್ತಿ ಮನರಂಜನೆ. ಅದು ದೇಶದ ಯಾವುದೇ ಭಾಗದಿಂದ ಸಿಕ್ಕರೂ ಅದನ್ನು ಜನ ಒಪ್ಪಿಕೊಳ್ತಾರೆ ಅನ್ನೋದಕ್ಕೆ ದಕ್ಷಿಣ ಸಿನಿಮಾಗಳ ಯಶಸ್ಸೇ ಸಾಕ್ಷಿ.

ಸಿನಿಮಾ ಡೆಸ್ಕ್, ಏಷ್ಯಾನೆಟ್ ಸುವರ್ಣ ನ್ಯೂಸ್

click me!