ಡಾಲಿ ಧನಂಜಯ್ ಅಭಿನಯದ ಬಡವ ರಾಸ್ಕಲ್ ಚಿತ್ರದ ಆಗಾಗ ನೆನಪಾಗುತಾಳೆ ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಸಂಗೀತ ಪ್ರಿಯರ ಮನಸನ್ನು ಗೆದ್ದಿದೆ.
ಡಾಲಿ ಧನಂಜಯ್ (Dolly Dhananjay) ಅಭಿನಯದ 'ಬಡವ ರಾಸ್ಕಲ್' (Badava Rascal) ಚಿತ್ರದ 'ಆಗಾಗ ನೆನಪಾಗುತಾಳೆ' ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಈಗಾಗಲೇ ಚಿತ್ರದ 'ಉಡುಪಿ ಹೋಟೆಲು' ಹಾಡು ರಿಲೀಸ್ ಆಗಿ ಸಿನಿ ಪ್ರೇಮಿಗಳ ಮನಗೆದ್ದಿದೆ. ಇದೀಗ ಲವ್ ಬ್ರೇಕಪ್ ಸಾಂಗ್ ಬಿಡುಗಡೆಯಾಗಿ ಸಂಗೀತ ಪ್ರಿಯರ ಮನಸನ್ನು ಗೆದ್ದಿದೆ. ಈ ಹಾಡಿಗೆ ಧನಂಜಯ್ ಅವರೇ ಸಾಹಿತ್ಯ ರಚಿಸಿದ್ದು, ವಾಸುಕಿ ವೈಭವ್ (Vasuki Vaibhav) ಸಂಗೀತ ಸಂಯೋಜಿಸುವ ಜೊತೆಗೆ ಹಾಡಿಗೆ ದನಿಯಾಗಿದ್ದಾರೆ. ಜೊತೆಗೆ ತೆಲುಗು ವರ್ಷನ್‌ನಲ್ಲಿಯೂ ಈ ಹಾಡು ರಿಲೀಸ್ ಆಗಿದೆ
ಶಂಕರ್ ಅಲಿಯಾಸ್ 'ಬಡವ ರಾಸ್ಕಲ್': ಡಾಲಿ ಧನಂಜಯ್ ಹೊಸ ಅವತಾರ!
ಈ ಬಗ್ಗೆ ಧನಂಜಯ್ ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ 'ಚಿನ್ನದ ರೆಕ್ಕೆ ಹೊತ್ತಂತ ಚಿಟ್ಟೆ, ಹೃದಯ ಹೊಕ್ಕೀತು ಬಂದು, ಬಣ್ಣವ ತೋರಿ ಎದ್ದೋಯ್ತು ಹಾರಿ, ಹೃದಯ ಚೂರಾಯ್ತು ನೊಂದು..!' ಹಾಡು ಬಿಡುಗಡೆಯಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ಗೆ 'ಬಾನಿನ ಹನಿಗಳ ಇಂಚರ, ಎದೆಗೆ ನಾಟಿವೆ ನೋಡು ಒಮ್ಮೆ ಆ ಸುಂದರ, ಮಸುಕಿನ ಬಾಳಿನಲಿ ಮನಸಿಗೆ ಈ ಪ್ರೀತಿಯೇ ಸಾಗರ ಅಣ್ಣಯ್ಯ'. 'ತುಟಿ ಅಂಚಿನ ಕಿರುನಗೆ ನನ್ನ ಕಾಡಿದೆ, ನಿನ್ನಯ ಹೆಜ್ಜೆಯ ಗೆಜ್ಜೆ ಸದ್ದು ನನ್ನ ಕಾಡಿದೆ, ಕನಸಿನ ಕನ್ಯೆಯ ರೂಪದಿ ನನ್ನ ಕಾಡಿದೆ, ನಿನ್ನಯ ರೂಪವೇ'. ಹಾಗೂ 'ನಾನು ಇಷ್ಟ ಪಟ್ಟವಳನ್ನು ಮರಿಯೋಕೆ ಟ್ರೈ ಮಾಡ್ತಾ ಇದ್ದೆ ಈ ಸಾಂಗ್ ಕೇಳಿ ಮತ್ತೆ ನೋವು ಜಾಸ್ತಿ ಆಯ್ತು' ಸೇರಿದಂತೆ ತರೇಹವಾರಿ ಪ್ರತಿಕ್ರಿಯೆಯನ್ನು ನೆಟ್ಟಿಗರು ಕಾಮೆಂಟಿಸಿದ್ದಾರೆ.
ಈ ಹಿಂದೆ 'ಬಡವ ರಾಸ್ಕಲ್' ಚಿತ್ರತಂಡ ಚಿತ್ರದ ಗ್ಲಿಂಪ್ಸ್ ವಿಡಿಯೋವನ್ನು ಬಿಡುಗಡೆ ಮಾಡಿತ್ತು. ವಿಡಿಯೋದಲ್ಲಿ ಧನಂಜಯ್, ಶಂಕರ್ ಅಲಿಯಾಸ್ ಬಡವ ರಾಸ್ಕಲ್... ಎಂದು ಮಾಸ್ ಎಂಟ್ರಿ ಕೊಟ್ಟಿದ್ದು, ಜೊತೆಯಲ್ಲಿ ಪಿಟ್ಟ, ಪ್ಯಾಕೆಟ್, ಕಬಾಬ್, ಬೆಂಕಿ, ಸಣ್ಣಪ್ಪ, ಡೌನ್ ಟು ಅರ್ಥ್, ನಾಗ ಎಂಬ ಪಾತ್ರಗಳ ಪರಿಚಯವಿತ್ತು. ಮಧ್ಯಮ ವರ್ಗದ ಜನರ ದಿನನಿತ್ಯದ ಜೀವನದಲ್ಲಿ ನಡೆಯುವ ಘಟನೆಗಳ ಸುತ್ತ ನಡೆಯುವ ಈ ಚಿತ್ರದಲ್ಲಿ ಧನಂಜಯ್ ಆಟೋ ಡ್ರೈವರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. 'ಡಾಲಿ ಪಿಕ್ಚರ್' (Dolly Picture) ಬ್ಯಾನರ್‌ನಲ್ಲಿ ಸಾವಿತ್ರಮ್ಮ ಅಡವಿ ಸ್ವಾಮಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶಂಕರ್ ಗುರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಡಾಲಿ ಧನಂಜಯ ಅವರಿಗೆ ನಾಯಕಿಯಾಗಿ ಅಮೃತ ಅಯ್ಯಂಗಾರ್ ಅಭಿನಯಿಸುತ್ತಿದ್ದಾರೆ.
ಬಡವ ರಾಸ್ಕಲ್ ಚಿತ್ರದಲ್ಲಿ ಮಠ ಗುರುಪ್ರಸಾದ್
ವಿಶೇಷವಾಗಿ ಈ ಚಿತ್ರದಲ್ಲಿ 'ಮಠ' ಗುರುಪ್ರಸಾದ್ (Guruprasad) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಕತೆಗೆ ತಿರುವು ಕೊಡುವ ಪಾತ್ರ ಇದಾಗಿದ್ದು, ಚಿತ್ರದಲ್ಲಿನ ಅವರ ಗೆಟಪ್ ಈ ಹಿಂದೆ ರಿವೀಲ್ ಆಗಿತ್ತು. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ವಾಸುಕಿ ವೈಭವ್ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಇನ್ನು 'ಬಡವ ರಾಸ್ಕಲ್' ಚಿತ್ರಕ್ಕೆ ಪ್ರೀತ ಜಯರಾಮನ್ ಛಾಯಾಗ್ರಹಣ, ನಿರಂಜನ್ ದೇವರಮನೆ ಸಂಕಲನ ಹಾಗೂ ವಿನೋದ್ ಸಾಹಸ ನಿರ್ದೇಶನವಿದೆ. ಡಿಸೆಂಬರ್ 24 ಕ್ರಿಸ್‌ಮಸ್ (Christmas) ಹಬ್ಬದಂದು ಚಿತ್ರ ಬಿಡುಗಡೆಯಾಗಲಿದೆ. ಸದ್ಯ ಧನಂಜಯ್ ಮಾನ್ಸೂನ್ ರಾಗ (Monsoon Raga) ಸೇರಿದಂತೆ ಹೆಡ್ ಬುಷ್ (Head Bush) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಡಾಲಿ ಧನಂಜಯ್ ಅಭಿನಯದ 'ಹೆಡ್ ಬುಷ್' ಸಿನಿಮಾಕ್ಕೆ ಅಗ್ನಿ ಶ್ರೀಧರ್ ಕತೆ ಬರೆದಿದ್ದು, ಶೂನ್ಯ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ.