
ದಿವಂಗತ ನಟ ಡಾ.ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಆಂಧ್ರಪ್ರದೇಶದ ಪೊಲೀಸರು ಅವಮಾನಿಸಿರುವ ಘಟನೆ ಬುಧವಾರ ತಿರುಪತಿಯಲ್ಲಿ ನಡೆಯಿತು ಎಂದು ಗಜಸೇನೆ ಸಂಘಟನೆ ರಾಜ್ಯಾಧ್ಯಕ್ಷ ತಾಯ್ನಾಡು ರಾಘವೇಂದ್ರ ತಿಳಿಸಿದ್ದಾರೆ.
ಬೆಂಗಳೂರು ನಗರದಿಂದ ತಿರುಪತಿಗೆ ತೆರಳಿದ್ದ ವಾಹನದ ಹಿಂಬದಿಯಲ್ಲಿ ಪುನೀತ್ ರಾಜ್‌ಕುಮಾರ್ ಭಾವಚಿತ್ರ ಅಂಟಿಸಲಾಗಿತ್ತು. ತಿರುಮಲ ಪ್ರವೇಶಕ್ಕೂ ಮುನ್ನ ಸಿಗುವ ಟೋಲ್ ಗೇಟ್‌ನಲ್ಲಿ ಭಾವಚಿತ್ರವನ್ನು ತೆರವುಗೊಳಿಸುವಂತೆ ಸಿಬ್ಬಂದಿ ಸೂಚಿಸಿದರು. ಇದಕ್ಕೆ ನಿರಾಕರಿಸಿದಾಗ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿ ಭದ್ರತಾ ಸಿಬ್ಬಂದಿಯೇ ಫೋಟೋ ತೆರವುಗೊಳಿಸಿದರು ಎಂದು ಅವರು ಆರೋಪಿಸಿದ್ದಾರೆ.
ತಾವು ಕರ್ನಾಟಕ ರಾಜ್ಯದಿಂದ ಎರಡು ಕಾರುಗಳಲ್ಲಿ ತಿರುಪತಿಗೆ ತೆರಳಿದ್ದು, ಒಂದಕ್ಕೆ ಪುನೀತ್ ರಾಜ್‌ಕುಮಾರ್ ಫೋಟೋ ಅಂಟಿಸಲಾಗಿತ್ತು. ಮತ್ತೊಂದು ವಾಹನದಲ್ಲಿದ್ದವರು ಕನ್ನಡ ಶಲ್ಯಗಳನ್ನು ಹಾಕಿಕೊಂಡಿದ್ದೆವು. ಎರಡೂ ವಾಹನಗಳನ್ನು ತಡೆದ ಭದ್ರತಾ ಸಿಬ್ಬಂದಿ ಸ್ಟಿಕ್ಕರ್ ಮತ್ತು ಶಲ್ಯಗಳನ್ನು ವಶಕ್ಕೆ ಪಡೆದು ತಿರುಮಲ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟರು ಎಂದು ಅವರು ಹೇಳಿದ್ದಾರೆ.
ಪುನೀತ್ ಫೋಟೋ ಮತ್ತು ಶಲ್ಯಗಳನ್ನು ಯಾವ ಕಾರಣಕ್ಕೆ ತೆರವುಗೊಳಿಸುತ್ತಿದ್ದೀರಿ ಎಂದು ಪ್ರಶ್ನಿಸಿದರೂ ಭದ್ರತಾ ಸಿಬ್ಬಂದಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಘಟನೆಯನ್ನು ಚಿತ್ರೀಕರಣ ಮಾಡಲು ಮುಂದಾದರೂ ಅವಕಾಶ ನೀಡಲಿಲ್ಲ ಎಂದು ತಮಗಾದ ಅನುಭವವನ್ನು ವಿವರಿಸಿದರು.
ಅಪ್ಪು ಅಪ್ಡೇಟ್:
ಅಕ್ಟೋಬರ್ 29ರಂದು ಹೃದಯಾಘಾತದಿಂದ ಪುನೀತ್ ರಾಜ್‌ಕುಮಾರ್ ಅಗಲಿದರು. ಇಂದು ಅಪ್ಪು ಅಗಲಿ 5 ತಿಂಗಳಾದರೂ ಯಾರಿಗೂ ಆ ನೋವನ್ನು ಮರೆಯುವುದಕ್ಕೆ ಆಗುತ್ತಿಲ್ಲ. ಅಪ್ಪು ಇಲ್ಲೇ ಇದ್ದಾರೆ, ಸಿನಿಮಾ ಚಿತ್ರೀಕರಣಕ್ಕೆ ವಿದೇಶಕ್ಕೆ ತೆರಳಿದ್ದಾರೆ ಎಂದು ನಮಗೆ ನಾವೇ ಬುದ್ದಿ ಕೇಳಿಕೊಂಡು ಮುಂದೆ ಸಾಗಬೇಕಿದೆ.
ಪ್ರತಿಯೊಂದು ಸಭೆ ಸಮಾರಂಭಗಳಲ್ಲಿ ಪುನೀತ್ ರಾಜ್‌ಕುಮಾರ್‌ಗೆ ಮೊದಲು ಪೂಜೆ ಸಲ್ಲಿಸಿ ಆನಂತರ ಕಾರ್ಯಕ್ರಮ ಶುರು ಮಾಡುತ್ತಾರೆ. ಪಾರ್ವತಿ ಪುತ್ರಿ ಗಣೇಶನಿಗೆ ಮೊದಲ ಆಧ್ಯತೆ ನೀಡುವಂತೆ ಪಾರ್ವತಿ ಪುತ್ರ ಪುನೀತ್‌ಗೆ ಮೊದಲ ಆಧ್ಯತೆ ನೀಡಲಾಗುತ್ತಿದೆ ಎಂದು ನೆಟ್ಟಿಗರು ಬರೆದುಕೊಂಡಿದ್ದಾರೆ. ಕರ್ನಾಟಕದ ಮೂಲೆ ಮೂಲೆಗಳಲ್ಲೂ ನೀವು ಪುನೀತ್ ರಾಜ್‌ಕುಮಾರ್ ಫೋಟೋ, ಪುಸ್ಥಳಿ ನೋಡಬಹುದು.
ಅಪ್ಪು ಪ್ರೀತಿಯಿಂದ ಆರಂಭಿಸಿದ PRK ಸಂಸ್ಥೆಯನ್ನು (ಪಾರ್ವತಮ್ಮ ರಾಜ್‌ಕುಮಾರ್) ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ನಡೆಸಿಕೊಂಡು ಹೋಗುತ್ತಿದ್ದಾರೆ. ಓನ್ ಕಟ್ ಟು ಕಟ್ ಸಿನಿಮಾ, ಫ್ಯಾಮಿಲಿ ಫ್ಯಾಕ್ ಸಿನಿಮಾವನ್ನು ಅವರ ನಿರ್ಮಾಣ ಸಂಸ್ಥೆಯಿಂದ ಬಿಡುಗಡೆ ಮಾಡಲಾಗಿದೆ. ಪುನೀತ್ ಕೊನೆಯ ಡಾಕ್ಯುಮೆಂಟರ್ ಗಂಧದಗುಡಿ ಪೋಸ್ಟ್ ಪ್ರೋಡಕ್ಷನ್ ಕೆಲಸಗಳು ನಡೆಯುತ್ತಿದೆ ಶೀಘ್ರದಲ್ಲಿ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ.
ಕೆಲವು ದಿನಗಳ ಹಿಂದೆ ಆಚಾರ್ ಆಂಡ್ ಕೋ ಸಿನಿಮಾ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದರು. ಮಹಿಳಾ ನಿರ್ದೇಶಕರು, ಮಹಿಳಾ ನಿರ್ಮಾಪಕರು, ಮಹಿಳಾ ಸಂಗೀತ ನಿರ್ದೇಶಕರು ಸೇರಿದಂತೆ ಮಹಿಳೆಯರ ತಂಡ ಮಾಡುತ್ತಿರುವ ಸಿನಿಮಾ ಇದು.ಚಿತ್ರರಂಗ ಮಾತ್ರವಲ್ಲ ಇಡೀ ಕರ್ನಾಟಕವೇ ಈ ಚಿತ್ರಕ್ಕೆ ಸಪೋರ್ಟ್ ಮಾಡುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.