Love You Rachchu Film Review: ದಾಂಪತ್ಯ ಗೀತದಲ್ಲಿ ಕೊಲೆ ಗಿಲೆ ಇತ್ಯಾದಿ

By Kannadaprabha News  |  First Published Jan 1, 2022, 8:35 AM IST

ಒಳ್ಳೆಯ ಗಂಡ, ಮುದ್ದಿನ ಹೆಂಡತಿ, ದಾರಿಯಲ್ಲಿ ಎದುರಾದ ಆಗಂತುಕ, ಕಿರಿಕಿರಿಗೊಬ್ಬ ಹಳೇ ಮುದುಕ, ಆತಂಕ ಹೆಚ್ಚಿಸಲೊಬ್ಬ ಹಳೇ ಡಾನ್‌, ಶೂಟಿಂಗ್‌ ಮರೆತ ಪೊಲೀಸರು ಎಲ್ಲರೂ ಕತೆಯನ್ನು ಮುಂದೆ ದರದರನೆ ಎಳೆದುಕೊಂಡು ಹೋಗುತ್ತಾರೆ. ನಿರ್ದೇಶಕ ಶಂಕರ್‌ ರಾಜ್‌ ಈ ಕತೆಯನ್ನು ತುಂಬಾ ಸಾವಧಾನದಿಂದ ಹೇಳಬೇಕು ಎಂದು ನಿರ್ಧರಿಸಿದ್ದಾರೆ. 


ರಾಜೇಶ್‌ ಶೆಟ್ಟಿ

ಸಂತೋಷವಾಗಿರುವ ಕುಟುಂಬದಲ್ಲಿ ಕತೆಗಳಿರುವುದಿಲ್ಲ. ಯಾವಾಗ ಸಂಕಟ ಬರುತ್ತದೋ ಆಗಲೇ ಕತೆ ಶುರುವಾಗುವುದು. ಈ ಸಿನಿಮಾದ ಆರಂಭದಲ್ಲೂ ಒಂದು ಸುಖೀ ಕುಟುಂಬ ಇರುತ್ತದೆ. ಗಂಡ ಅಜಯ್‌ (Ajay Rao), ಹೆಂಡತಿ ರಚಿತಾ (Rachita Ram). ಒಂದೇ ಹಾಡಿನಲ್ಲಿ ಕಣ್‌ಕಣ್ಣ ಸಲಿಗೆ, ಮದುವೆಯ ಈ ಬಂಧ, ಮೊದಲ ರಾತ್ರಿಯ ಹಾಲು ಕುಡಿಯುವ ಕಾರ್ಯಕ್ರಮ ಎಲ್ಲವೂ ನಡೆದುಹೋಗುತ್ತದೆ. ಅದು ಮುಗಿದ ತಕ್ಷಣ ಎದುರಾಗುವ ಸಂಕಟದಲ್ಲಿ ಕತೆ ಹುಟ್ಟಿಕೊಳ್ಳುತ್ತದೆ.

Latest Videos

Love You Rachchu: ರೊಮ್ಯಾಂಟಿಕ್ ಥ್ರಿಲ್ಲರ್ ಕಥಾಹಂದರದ ಅಜಯ್-ರಚ್ಚು ಚಿತ್ರದ ಟ್ರೇಲರ್ ರಿಲೀಸ್

ಅಲ್ಲಿಂದ ಒಂದು ಜರ್ನಿ ಶುರು. ಎರಡು ದಿನದ ಆ ಜರ್ನಿಯಲ್ಲೇ ಇಡೀ ಸಿನಿಮಾ ಇದೆ. ಒಳ್ಳೆಯ ಗಂಡ, ಮುದ್ದಿನ ಹೆಂಡತಿ, ದಾರಿಯಲ್ಲಿ ಎದುರಾದ ಆಗಂತುಕ, ಕಿರಿಕಿರಿಗೊಬ್ಬ ಹಳೇ ಮುದುಕ, ಆತಂಕ ಹೆಚ್ಚಿಸಲೊಬ್ಬ ಹಳೇ ಡಾನ್‌, ಶೂಟಿಂಗ್‌ ಮರೆತ ಪೊಲೀಸರು ಎಲ್ಲರೂ ಕತೆಯನ್ನು ಮುಂದೆ ದರದರನೆ ಎಳೆದುಕೊಂಡು ಹೋಗುತ್ತಾರೆ. ನಿರ್ದೇಶಕ ಶಂಕರ್‌ ರಾಜ್‌ ಈ ಕತೆಯನ್ನು ತುಂಬಾ ಸಾವಧಾನದಿಂದ ಹೇಳಬೇಕು ಎಂದು ನಿರ್ಧರಿಸಿದ್ದಾರೆ. ಅಲ್ಲೊಂದು ಇಲ್ಲೊಂದು ಸರ್ಪೆ್ರೖಸ್‌ ಟ್ವಿಸ್ಟ್‌ ಇಟ್ಟಿದ್ದಾರೆ. ಟ್ವಿಸ್ಟ್‌ ಸಿಗುವ ಪಾಯಿಂಟಿಗೆ ಬರುವ ದಾರಿ ಮಾತ್ರ ಸುದೀರ್ಘವಾದ ಪಯಣ.

undefined

ಚಿತ್ರ: ಲವ್‌ ಯೂ ರಚ್ಚು

ನಿರ್ದೇಶನ: ಶಂಕರ್‌ ರಾಜ್‌

ತಾರಾಗಣ: ಅಜಯ್‌ ರಾವ್‌, ರಚಿತಾ ರಾಮ್‌, ಅರುಣ್‌ ಗೌಡ, ಅಚ್ಯುತ್‌ ಕುಮಾರ್‌, ರಾಘು ಶಿವಮೊಗ್ಗ

ರೇಟಿಂಗ್‌: 3

ಕೆಲವು ಕಡೆ ಕತೆ ಮುಂದಕ್ಕೆ ಹೋಗುತ್ತಿಲ್ಲ ಅನ್ನಿಸಿದಾಗ ಹೊಸ ಪಾತ್ರಗಳು ಧುತ್ತನೆ ಎದುರಾಗುತ್ತವೆ. ಥ್ರಿಲ್ಲರ್‌ ಸಿನಿಮಾದಲ್ಲಿ ಅನವಶ್ಯ ಪಾತ್ರಗಳು ಬಂದಾಗ ಒಂದೊಳ್ಳೆ ಮಾವಿನಕಾಯಿ ಚಿತ್ರಾನ್ನದಲ್ಲಿ ಹಾಳಾದ ಕಡ್ಲೆಕಾಯಿ ಸಿಕ್ಕಷ್ಟು ಬೇಸರವಾಗುತ್ತದೆ. ಕಡ್ಲೆಕಾಯಿ ಬಿಸಾಕಿ ಮುಂದಕ್ಕೆ ಹೋದರೆ ಎಲ್ಲವೂ ಒಂದು ಹದಕ್ಕೆ ಬರಲು ಕೊನೆಯವರೆಗೆ ಕಾಯಬೇಕು. ಕಟ್ಟಕಡೆಯಲ್ಲಿ ಒಂದರ ಹಿಂದೊಂದು ಟ್ವಿಸ್ಟ್‌ ಕೊಟ್ಟು ಏಟಿನ ಮೇಲೆ ಏಟು ಕೊಟ್ಟು ಕೊನೆಗೆ ಉಸ್ಸಪ್ಪಾ ಎಂದು ನಿಟ್ಟುಸಿರು ಬಿಡುವಂತೆ ಮಾಡುತ್ತಾರೆ ನಿರ್ದೇಶಕರು. ಅಷ್ಟರ ಮಟ್ಟಿಗೆ ಅವರಲ್ಲಿರುವ ಜಾಣ ನಿರ್ದೇಶಕ ಎದ್ದು ಕಾಣುತ್ತಾನೆ.

Love You Rachchu: 'ಲವ್ ಯು ರಚ್ಚು' ಟ್ರೈಲರ್ ರಿಲೀಸ್‌ಗೆ ಅಜಯ್ ಗೈರು, ಅಸಲಿ ಕತೆ ಏನು?

ಶುರುವಲ್ಲಿ ನಿರಾಳತೆ. ಆಮೇಲೆ ಭಯ. ಮಧ್ಯದಲ್ಲಿ ಆತಂಕ. ಕೊನೆಯಲ್ಲಿ ವಿಷಾದ. ಇವೆಲ್ಲವನ್ನೂ ದಾಟಿಸುವ ಪಾತ್ರದಲ್ಲಿ ಅಜಯ್‌ ರಾವ್‌ ಮತ್ತು ರಚಿತಾ ರಾಮ್‌ ಸಶಕ್ತವಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅರುಣ್‌ ಗೌಡ (Arun Gowda) ನಟನೆ ಮೆಚ್ಚುಗೆಗೆ ಅರ್ಹ. ದಾಂಪತ್ಯ ಮತ್ತು ದಾಂಪತ್ಯದಲ್ಲಿ ಹುಳಿ ಹಿಂಡುವ ವ್ಯಕ್ತಿಗಳ ಕತೆ ಹೊಂದಿರುವ ಈ ಥ್ರಿಲ್ಲರ್‌ ಅನ್ನು ಸ್ವಲ್ಪ ತೀಕ್ಷ್ಣಗೊಳಿಸಿದ್ದರೆ ಒಳ್ಳೆಯದಿತ್ತು ಅನ್ನಿಸುವುದೇ ಈ ಸಿನಿಮಾದ ಗೆಲುವು. ನಿಮ್ಮಲ್ಲಿ ಸಾವಧಾನಕ್ಕೆ ಜಯವಿದ್ದರೆ ಈ ಸಿನಿಮಾಗೂ ಜಯವಿದೆ.

click me!