ನನ್ನ ಕತೆ ಹುಡುಗರಿಗೆ ಸ್ಫೂರ್ತಿಯಾದರೆ ಅಷ್ಟೇ ಸಾಕು;ಕ್ಯಾಪ್ಟನ್‌ ಗೋಪಿನಾಥ್‌ ಸಂದರ್ಶನ

By Kannadaprabha NewsFirst Published Nov 13, 2020, 11:32 AM IST
Highlights

ಏರ್‌ ಡೆಕ್ಕನ್‌ ವಿಮಾನಯಾನ ಸ್ಥಾಪಿಸಿದ ಕರುನಾಡಿನ ಕನಸುಗಾರ ಕ್ಯಾಪ್ಟನ್‌ ಜಿಆರ್‌ ಗೋಪಿನಾಥ್‌ ಅವರ ಆತ್ಮಚರಿತ್ರೆ ‘ಸಿಂಪ್ಲಿ ಫ್ಲೈ- ಎ ಡೆಕ್ಕನ್‌ ಒಡಿಸ್ಸಿ’(ಕನ್ನಡದಲ್ಲಿ ಬಾನಯಾನ) ಆಧರಿಸಿದ ಸಿನಿಮಾ ‘ಸೂರರೈ ಪೊಟ್ರು’ ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಿದೆ. ಗೋಪಿನಾಥ್‌ ಪಾತ್ರದಲ್ಲಿ ತಮಿಳು ಖ್ಯಾತ ನಟ ಸೂರ್ಯ ನಟಿಸಿದ್ದಾರೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಬರುತ್ತಿರುವ ಸಂದರ್ಭದಲ್ಲಿ ಗೋಪಿನಾಥ್‌ ಜತೆ ಮಾತುಕತೆ.

- ರಾಜೇಶ್‌ ಶೆಟ್ಟಿ

ಸೂರರೈ ಪೊಟ್ರು ಸಿನಿಮಾ ರಿಲೀಸಾಗಿದೆ, ನಿಮಗೆ ಸಮಾಧಾನ ಆಗಿದೆಯೇ?

ನಾನಿನ್ನೂ ಸಿನಿಮಾ ನೋಡಿಲ್ಲ. ಇನ್ನಷ್ಟೇ ನೋಡಬೇಕು. ಪರಿಸ್ಥಿತಿ ಸರಿ ಇದ್ದಿದ್ದರೆ ಪ್ರೀಮಿಯರ್‌ ಶೋದಲ್ಲಿ ಸಿನಿಮಾ ನೋಡುತ್ತಿದ್ದೆ. ಕೋವಿಡ್‌ 19 ಕಾರಣಕ್ಕೆ ಅದು ಸಾಧ್ಯವಾಗಿಲ್ಲ. ನನ್ನ ಕತೆ ಸಿನಿಮಾ ಆಗಿ ನಾಲ್ಕು ಜನರಿಗೆ ಸ್ಫೂರ್ತಿ ಆಗುತ್ತದೆ ಎಂದಾದರೆ ಅದು ನನಗೆ ಖುಷಿ ಕೊಡುತ್ತದೆ. ಒಬ್ಬ ಹುಡುಗ ದೊಡ್ಡ ಬಿಸಿನೆಸ್‌ಮನ್‌ ಆದರೂ ನನಗೆ ಸಮಾಧಾನ.

ಸಿನಿಮಾ ಚಿತ್ರಕತೆ ಹಂತದಲ್ಲಿ ನೀವು ತೊಡಗಿಸಿಕೊಂಡಿದ್ರಾ?

ಇಲ್ಲ. ನನ್ನ ಪುಸ್ತಕ ಆಧರಿಸಿದ ಸಿನಿಮಾ ಇದು. ಪುಸ್ತಕದ ಹಕ್ಕನ್ನು ಅವರಿಗೆ ಕೊಟ್ಟುಬಿಟ್ಟಿದ್ದೇನೆ. ಸಿನಿಮಾ ನಿರ್ದೇಶಕಿ ಸುಧಾ ಕೊಂಗಾರ ನನ್ನ ಜತೆ ಮಾತನಾಡಿ ಚಿತ್ರಕತೆ ಬರೆದಿದ್ದಾರೆ. ಈ ಹಂತದಲ್ಲಿ ನಾನು ಭಾಗಿಯಾಗಿಲ್ಲ. ನನ್ನ ಪುಸ್ತಕವನ್ನು ವಿಸ್ತಾರವಾಗಿ ಗ್ರಹಿಸಿ ಸಿನಿಮಾ ಮಾಡಬೇಕು, ಸಂಕುಚಿತವಾಗಿ ಮಾಡಬಾರದು ಅನ್ನುವುದು ನನ್ನ ಆಶಯವಾಗಿತ್ತು. ಹಳ್ಳಿಯಿಂದ ಬಂದವನು ನಾನು. ನನ್ನ ಥರ ಗ್ರಾಮೀಣ ಭಾಗದಿಂದ ಬಂದವರು ದೊಡ್ಡದಾಗಿ ಕನಸು ಕಂಡು ಅದನ್ನು ನನಸು ಮಾಡಲು ಹಠ ಕಟ್ಟಬೇಕು ಮತ್ತು ಪರಿಶ್ರಮ ಪಡಬೇಕು ಅನ್ನುವುದು ನನ್ನ ಆಸೆಯಾಗಿತ್ತು. ಅದನ್ನು ಸಿನಿಮಾದಲ್ಲಿ ತೋರಿಸಿದರೆ ಅದಕ್ಕಿಂತ ಇನ್ನೇನು ಬೇಕು.

ಪುಸ್ತಕ ಮತ್ತು ಸಿನಿಮಾ ಇವೆರಡರ ಮಧ್ಯೆ ವ್ಯತ್ಯಾಸ ಹೇಗಿದೆ?

ಪುಸ್ತಕ ಬರೆಯಲು ನಾನು 3-4 ವರ್ಷ ತೆಗೆದುಕೊಂಡಿದ್ದೆ. ತುಂಬಾ ಕಾಳಜಿ ವಹಿಸಿದ್ದೆ. ಪುಸ್ತಕದಲ್ಲಿ ಇರುವುದನ್ನೆಲ್ಲಾ ಸಿನಿಮಾದಲ್ಲಿ ತೋರಿಸಲು ಸಾಧ್ಯವಿಲ್ಲ. ಸಿನಿಮಾಗೆ ತಕ್ಕಂತೆ ಚಿತ್ರಕತೆಯಲ್ಲಿ ಬದಲಾವಣೆ ಮಾಡಿದ್ದಾರೆ ಎಂದು ನನಗೆ ಅನ್ನಿಸುತ್ತದೆ.

ಚಿರು ಪುತ್ರನ ತೊಟ್ಟಿಲು ಶಾಸ್ತ್ರ ಹೇಗಿತ್ತು?  ಇಲ್ಲಿವೆ ಪೋಟೋಸ್ 

ನಿಮ್ಮ ಪಾತ್ರದಲ್ಲಿ ಸೂರ್ಯ ನಟಿಸಿದ್ದಾರೆ, ನಿಮ್ಮ ಅವರ ಒಡನಾಟ ಹೇಗಿತ್ತು?

ಈ ಸಿನಿಮಾದ ಕೆಲಸ ಆರಂಭವಾಗುವ ಮೊದಲು ನಾನು ಅವರನ್ನು ಯಾವತ್ತೂ ನೋಡಿರಲಿಲ್ಲ. ನನಗೆ ಅವರ ಬಗ್ಗೆ ಗೊತ್ತಿರಲಿಲ್ಲ. ಸಿನಿಮಾ ಕೆಲಸ ಶುರುವಾದ ಮೇಲೆ ಅವರು ಮತ್ತು ನಿರ್ದೇಶಕರು ನಮ್ಮ ಮನೆಗೆ ಬಂದಿದ್ದರು. ಸೂರ್ಯ 3-4 ದಿನ ನಮ್ಮ ಜತೆ ಇದ್ದರು. ನನ್ನ ಜತೆ ಮಾತನಾಡಿ, ನನ್ನ ಕುಟುಂಬ ಮತ್ತು ಸಹೋದ್ಯೋಗಿಗಳ ಜತೆಗೂ ತುಂಬಾ ಚರ್ಚೆ ನಡೆಸಿದ್ದಾರೆ. ಹಳೆಯ ಸಂದರ್ಶನಗಳನ್ನೆಲ್ಲಾ ನೋಡಿ ಸಿಕ್ಕಾಪಟ್ಟೆಅಧ್ಯಯನ ನಡೆಸಿದ್ದಾರೆ.

ಓಟಿಟಿಯಲ್ಲಿ ರಿಲೀಸಾಗಿದ್ದಕ್ಕೆ ಬೇಸರವಿದೆಯೇ?

ಥಿಯೇಟರ್‌ಗಳಲ್ಲಿ ರಿಲೀಸ್‌ ಆಗಿದ್ದರೆ ಮಾಸ್‌ ಜನ ನೋಡುತ್ತಿದ್ದರು. ಆದರೆ ಈಗ ವಿಶ್ವ ಮಟ್ಟದಲ್ಲಿ ಸಿನಿಮಾ ತಲುಪುತ್ತದೆ.

click me!