ಖೈಮರಾ ಚಿತ್ರದಲ್ಲಿ ಪ್ರಿಯಾಮಣಿ, ಛಾಯಾ ಸಿಂಗ್‌, ಪ್ರಿಯಾಂಕ; ಗೌತಮ್‌ ನಿರ್ದೇಶನದ ಹಾರರ್‌ ಸಿನಿಮಾ!

By Kannadaprabha NewsFirst Published Nov 13, 2020, 11:26 AM IST
Highlights

ಲಾಕ್‌ಡೌನ್‌ ನಂತರ ಸಿನಿಮಾಗಳು ಅದ್ದೂರಿಯಾಗಿ ಸೆಟ್ಟೇರುತ್ತಿದೆ. ಧ್ರುವ ಸರ್ಜಾ ನಟನೆಯ ‘ದುಬಾರಿ’ ಚಿತ್ರದ ನಂತರ ಈಗ ‘ಖೈಮರಾ’ ಹೆಸರಿನ ಸಿನಿಮಾ ಟೈಟಲ್‌ ಲಾಂಚ್‌ ಮಾಡಿಕೊಳ್ಳುವ ಮೂಲಕ ಸೆಟ್ಟೇರಿದೆ.

ಪ್ರಿಯಾಂಕ ಉಪೇಂದ್ರ, ಪ್ರಿಯಾಮಣಿ ಹಾಗೂ ಛಾಯಾ ಸಿಂಗ್‌ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೆ ಗೌತಮ್‌ ವಿಪಿ ನಿರ್ದೇಶಕರು. ಇವರು ನಿರ್ದೇಶಕ ಪಿ ವಾಸು ಸೋದರ ಪಿ ವಿಮಲ್‌ ಪುತ್ರ. ಹಾಗೆ ನೋಡಿದರೆ ಗೌತಮ್‌ ಅವರ ತಾತ ಪೀತಾಂಬರಂ ಅವರೂ ಕೂಡ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದವರೇ. ಮೇಕಪ್‌ ಆರ್ಟಿಸ್ಟ್‌ ಆಗಿದ್ದ ಪೀತಾಂಬರಂ ಅವರು ಡಾ.ವಿಷ್ಣುವರ್ಧನ್‌ ನಟನೆಯ ‘ಕಥಾನಾಯಕ’ ಚಿತ್ರ ನಿರ್ಮಿಸಿದವರು.

ಇತ್ತೀಚೆಗೆ ನಡೆದ ಟೈಟಲ್‌ ಅನಾವರಣ ಕಾರ್ಯಕ್ರಮದಲ್ಲಿ ನಟ ಉಪೇಂದ್ರ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್‌ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿದರು. ಹಾರರ್‌, ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ ಇದಾಗಿದ್ದು ಪಿ ವಿಮಲ್‌ ಅವರೇ ಇದಕ್ಕೆ ಕತೆ ಬರೆದಿರುವುದು ವಿಶೇಷ. ಟೈಟಲ್‌ ಜತೆಗೆ ಫಸ್ಟ್‌ ಲುಕ್‌ ಕೂಡ ಬಿಡುಗಡೆ ಆಯಿತು.

ಚಿತ್ರದ ನಿರ್ಮಾಪಕ ಮತಿಯಲಗಾನ್‌ ಕೂಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ‘ನಾನು ಚಿತ್ರದ ಕಥೆ ಕೇಳಿದ್ದೀನಿ. ಚೆನ್ನಾಗಿದೆ, ಚಿತ್ರದ ಫಸ್ಟ್‌ ಲುಕ್‌ ಸೂಪರಾಗಿದೆ. ಚಿತ್ರವನ್ನು ಇದೇ ರೀತಿ ಮಾಡಿದ್ದಾರೆಂಬ ನಂಬಿಕೆ ಇದೆ. ಇಡೀ ತಂಡಕ್ಕೆ ಒಳೆಯದಾಗಲಿ’ ಎಂದು ಉಪೇಂದ್ರ ಶುಭಕೋರಿದರು. ನಿರ್ದೇಶಕ ಗೌತಮ…, ‘ಖೈಮರಾ’ ಎಂದರೆ ಏನು ಎಂಬುದು ಚಿತ್ರ ಬಿಡುಗಡೆ ನಂತರ ತಿಳಿಯಲಿದೆ ಎನ್ನುವ ಮೂಲಕ ಚಿತ್ರದ ಹೆಸರಿನ ಗುಟ್ಟು ರಟ್ಟಾಗದಂತೆ ಎಚ್ಚರ ವಹಿಸಿದರು. ನಟಿ ಪ್ರಿಯಾಂಕ ಉಪೇಂದ್ರ ಅವರಿಗೆ ‘ಮಮ್ಮಿ’ ಸಿನಿಮಾ ನಂತರ ‘ಖೈಮರಾ’ ಎರಡನೇ ಹಾರರ್‌ ಸಿನಿಮಾ. ನಿರ್ದೇಶಕರು ಕತೆ ಹೇಳಿದ ರೀತಿ ಚೆನ್ನಾಗಿತ್ತು. ಪ್ರಿಯಾಮಣಿ ಹಾಗೂ ಛಾಯಾಸಿಂಗ್‌ ಜತೆಗೆ ತೆರೆ ಹಂಚಿಕೊಳ್ಳುತ್ತಿರುವುದು ಖುಷಿ ಕೊಟ್ಟಿದೆ ಎಂಬುದು ಪ್ರಿಯಾಂಕ ಮಾತು.

ನಟಿ ಛಾಯಾ ಸಿಂಗ್‌ ಹಲವು ವರ್ಷಗಳ ನಂತರ ನಟನೆಗೆ ಮರಳಿದ್ದಾರೆ. ‘ತೆರೆ ಮೇಲೆ ಕಾಣಿಸಿಕೊಂಡು ತುಂಬಾ ವರ್ಷಗಳಾಗಿವೆ. ಖೈಮರಾ ಚಿತ್ರದಲ್ಲಿನ ನನ್ನ ಪಾತ್ರ ತುಂಬಾ ಚೆನ್ನಾಗಿದೆ’ ಎಂದರು ಛಾಯಾಸಿಂಗ್‌.

ಗುರುಕಿರಣ್‌ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ‘ಕತೆಗೆ ಹೊಂದುವ ಸಂಗೀತ ನೀಡುತ್ತೇನೆ. ಪ್ರಿಯಾಂಕ ಉಪೇಂದ್ರ ನಟಿಸುತ್ತಿರುವ ಚಿತ್ರಕ್ಕೆ ಇಪ್ಪತ್ತು ವರ್ಷಗಳ ನಂತರ ಸಂಗೀತ ನೀಡುತ್ತಿದ್ದೇನೆ. ಅವರು ನಟಿಸಿದ್ದ ಮೊದಲ ತೆಲುಗು ಚಿತ್ರಕ್ಕೆ ನಾನೇ ಸಂಗೀತ ನೀಡಿದ್ದೆ’ ಎಂದು ಗುರುಕಿರಣ್‌ ನೆನಪಿಸಿಕೊಂಡರು. ರಾಮಕೃಷ್ಣನ್‌ ಕ್ಯಾಮೆರಾ ಹಿಡಿಯಲಿದ್ದಾರೆ.

click me!