
ಇಲ್ಲೊಂದು ಹಿರಿಯ ಜೀವವಿದೆ. ಅವರು ವರನಟ ಡಾ.ರಾಜ್‌ಕುಮಾರ್ ಅವರ ಸಹೋದರಿ. ಏನಿಲ್ಲಾ ಅಂದರೂ ಅವರ ವಯಸ್ಸು 95ರ ಆಸುಪಾಸಿನಲ್ಲಿರಬಹುದು ಅನ್ಸುತ್ತೆ. ಯಾಕೆಂದರೆ ಡಾ. ರಾಜ್‌ಕುಮಾರ್ ಅವರಿಗೇ ಬದುಕಿದ್ದಿದ್ದರೆ ಈಗ 96 ಆಗಿರುತ್ತಿತ್ತು. ರಾಜ್ ಅವರು ಹುಟ್ಟಿ ಬೆಳೆದ ಚಾಮರಾಜನಗರದ ಗಾಜನೂರಿನಲ್ಲಿ ವಾಸವಾಗಿದ್ದಾರೆ. ಪುನೀತ್ ರಾಜ್‌ಕುಮಾರ್ ಅಂದರೆ ಅವರಿಗೆ ಜೀವ. ಆದರೆ ಪುನೀತ್ ಕೊನೆಯುಸಿರು ಎಳೆದು ನಾಲ್ಕು ವರ್ಷ ಆಗಿರೋದು ಅವರಿಗೆ ಗೊತ್ತೇ ಇಲ್ಲ! ಅಪ್ಪು ಒಂದು ಸಲ ಬಂದು ತನ್ನನ್ನು ನೋಡಲಿ ಎಂಬುದಷ್ಟೇ ಆ ಅಜ್ಜಿಯ ಹಾರೈಕೆ, ಅವರಿಗೆ ಇನ್ನೇನೂ ಬೇಡ.
ಹೌದು, ಆ ಹಿರಿಯ ಜೀವಕ್ಕೆ ಆಘಾತ ಆಗೋದು ಬೇಡ ಅಂತ ಫ್ಯಾಮಿಲಿಯವರು ಈ ಸುದ್ದಿಯನ್ನು ಅವರಿಂದ ಮುಚ್ಚಿಟ್ಟಿದ್ದಾರೆ. ಅವರ ಹೆಸರು ನಾಗಮ್ಮ. ಸಹೋದರ ರಾಜ್‌ಕುಮಾರ್ ಅವರನ್ನು ಕಳೆದುಕೊಂಡಿರೋದೇ ಅವರಿಗೆ ಅರಗಿಸಿಕೊಳ್ಳಲಾಗದ ವಿಷಯ. ಇನ್ನೂ ಪುನೀತ್ ಅವಸಾನವನ್ನು ಹೇಗೆ ಸಹಿಸಿಕೊಳ್ಳುತ್ತಾರೋ ಗೊತ್ತಿಲ್ಲ. ಈ ಜೀವನ ಸಂಜೆಯಲ್ಲಿ ಅವರಿಗೆ ಆ ಕಷ್ಟ ಕೊಡೋದು ಬೇಡ ಎಂಬುದು ಕುಟುಂಬದವರ ಅಭಿಪ್ರಾಯ. ಕೊರೊನಾ ಕಾಯಿಲೆಯ ಕಷ್ಟದ ದಿವಸಗಳು, ಸಹೋದರನ ಸಾವು ಎಲ್ಲ ಕಷ್ಟಗಳನ್ನೂ ದಾಟಿ ಅವರು ಇದೀಗ ಜೀವನದ ಸಂಧ್ಯೆಯ ಕಾಲದಲ್ಲಿದ್ದಾರೆ.
ಇಂಥ ನಾಗಮ್ಮನವರು ಕ್ಯಾಮೆರಾ ಮುಂದೆ ಪುನೀತ್ ಅವರಿಗೆ ನೀಡಿರುವ ಸಂದೇಶ ನೋಡಿದರೆ ಎಂಥವರ ಕಣ್ಣಲ್ಲೇ ಆಗಲಿ ನೀರು ತರಿಸದೇ ಇರದು. "ಅಬ್ಬಬ್ಬಾ ಐವತ್ತು ವರ್ಷ! ಅಪ್ಪಪ್ಪಾ...! ಚೆನ್ನಾಗಿದ್ದೀಯಾ ಮಗನೇ?" ಎಂಬುದು ಅವರ ಉದ್ಗಾರ. ಪುನೀತ್‌ಗೆ ಐವತ್ತು ವರ್ಷ ಆಯ್ತು ಎಂಬುದನ್ನೂ ನಂಬಲು ಅವರು ತಯಾರಿಲ್ಲ! ಪುನೀತ್‌ನನ್ನು ಇನ್ನೂ ಆಟವಾಡುತ್ತಿರುವ ಸಣ್ಣ ಬಾಲಕನಾಗಿಯೇ ಕಾಣಲು ಅವರಿಗೆ ಇಷ್ಟ. "ಒಂದ್ಸಲ ಬಂದು ನೋಡ್ಕೊಂಡು ಹೋಗೋ ಕಂದಾ ನನ್ನ..." ಎಂದು ಆ ವೃದ್ಧ ಜೀವ ಆರ್ತವಾಗಿ ಬೇಡಿಕೊಳ್ಳುತ್ತದೆ. ಆದರೆ ಆ ಮೊರೆ ಆಲಿಸಲು ಯುವರತ್ನ ಎಲ್ಲಿದ್ದಾರೆ?
ಪುನೀತ್ ಆಗಾಗ ತಮ್ಮ ತಂದೆ ಹುಟ್ಟೂರಿಗೆ ಅಂದರೆ ಗಾಜನೂರಿಗೆ ಹೋಗುತ್ತಿದ್ದುದುಂಟು. ಪುನೀತ್ ಸಣ್ಣವರಿದ್ದಾಗ ಹೆಚ್ಚಾಗಿ ತಂದೆ ಜೊತೆಗೆ ಹೋಗುತ್ತಿದ್ದರು. ಆಗ ಕುಟುಂಬದ ಎಲ್ಲರೂ ಒಟ್ಟಾಗಿ ಸಂತೋಷಪಡುತ್ತಿದ್ದರು. ಆದರೆ ಕಾಡುಗಳ್ಳ ವೀರಪ್ಪನ್‌ನಿಂದ ವರನಟನ ಅಪಹರಣ ಆದ ಬಳಿಕ ಈ ಹೋಗಿಬರುವಿಕೆಯೂ ನಿಂತಿತು. ಅಂದಿನಿಂದ ಪುನೀತ್ ಆ ಕಡೆಗೆ ಹೋಗಲೇ ಇಲ್ಲ ಅಂತಾರೆ ತಿಳಿದವರು. ಇದೀಗ ಇತ್ತೀಚೆಗಿನ ಪುನೀತ್ ಅವರನ್ನು ಫೋಟೋದಲ್ಲಿ ನೋಡಿ ಮಾತ್ರವೇ ನಾಗಮ್ಮನವರಿಗೆ ಗೊತ್ತು. ಅಪ್ಪುಗೆ ಐವತ್ತು ವರ್ಷವಾಗಿದೆ ಎಂದು ಅವರಿಗೆ ಗೊತ್ತು. ಅವರ ಕಿವಿ, ಕಣ್ಣು ಇತ್ಯಾದಿಗಳು ಚುರುಕಾಗಿವೆ. ನೆನಪೂ ಸಮೃದ್ಧವಾಗಿದೆ.
ಎಲ್ಲರೂ ಹೃದಯಾಳದಿಂದ ಪ್ರೀತಿಸುವ ಸ್ಟಾರ್ ಪುನೀತ್ ರಾಜ್‌ಕುಮಾರ್, ಅಪ್ಪು ನೆನೆದ ದಿನೇಶ್ ಕಾರ್ತಿಕ್
ವೈರಲ್ ಆಗಿರುವ ಈ ವಿಡಿಯೋ ನೋಡಿ ನೆಟಿಜನ್‌ಗಳು ಭಾವುಕರಾಗಿದ್ದಾರೆ. "ನಿಮ್ಮನ್ನು ನೋಡಲು ಕಾಯುತ್ತಿರೋ ಆ ಹಿರಿ ಜೀವಕ್ಕೋಸ್ಕರ ಆದರೂ ಒಂದು ಸಲ ವಾಪಾಸ್ ಬನ್ನಿ ಬಾಸ್.. " "ಮನಸ್ಸಿಗೆ ಗಾಢವಾದ ನೋವಾಗುತ್ತೆ. ಅಪ್ಪು ಸತ್ತಿರುವ ವಿಷಯವೇ ತಿಳಿದಿಲ್ಲ ಅಣ್ಣಾವ್ರ ಸಹೋದರಿಗೆ" "ಈ ವಿಡಿಯೋ ನೋಡಿದ್ರೇನೇ ನಮಗೆನೇ ಅಳು ಬರುತ್ತೆ ಇನ್ನು ಈ ಅಜ್ಜಿಗೆ ವಿಷಯ ಗೊತ್ತಾದ್ರೆ ಎಂಗೆ ಆಗ್ಬಾರ್ದು ಅಲ್ವಾ" ಎಂದು ಜನ ಕಮೆಂಟ್ ಮಾಡಿದ್ದಾರೆ. "ಮನಸ್ಸಿಗೆ ಭಾರವಾದ ಸಂಕಟ ಈ ವಿಡಿಯೋ ನೋಡಿ ದೇವರಿಗೆ ಕರುಣೆ ಅನ್ನೋದೇ ಇಲ್ಲ" "ಅಯ್ಯೋ ದೇವ್ರೇ ಇಂತ ಸ್ಥಿತಿ ಯಾರಿಗೂ ಬರಬಾರದು. ನಮ್ಮಂತಾ ಅಭಿಮಾನಿಗಳಿಗೂ" "ಆ ಅಜ್ಜಿಗೋಸ್ಕರ ಆದ್ರೂ ಅಪ್ಪೂನ ನಾ ಕೊಟ್ಟು ಕಳಿಸು ದೇವಾ" ಎಂದು ಪ್ರತಿಕ್ರಿಯಿಸಿದ್ದಾರೆ.
ಅಪ್ಪಾಜಿ ಸಮಾಧಿ ಬಳಿ ಯಾರೋ ಇಟ್ಟಿದ್ದ ಊಟ ಮಾರನೆಯ ದಿನ ತಿಂದಿದ್ದ ಅಪ್ಪು: ಆ ದಿನ ಆಗಿದ್ದೇನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.