ನಟಿ ಅದಿತಿ ಪ್ರಭುದೇವ ಮತ್ತು ಉದ್ಯಮಿ ಯಶಸ್ ಅವರ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸುಖ ದಾಂಪತ್ಯದ ಗುಟ್ಟು ಹೇಳಿದೆ ಜೋಡಿ
ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ್ (Aditi Prabhudeva) ಹಾಗೂ ಕೂರ್ಗ್ ಮೂಲದ ಉದ್ಯಮಿ ಯಶಸ್ 2022ರ ನವೆಂಬರ್ 28ರಂದು ಮದುವೆಯಾಗಿದ್ದು, ಇದೀಗ ಮೊದಲ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಹೀಗಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ಭರ್ಜರಿಯಾಗಿ ವಿವಾಹ ವಾರ್ಷಿಕೊತ್ಸವ ಆಚರಿಸಿಕೊಂಡಿದೆ ಜೋಡಿ. ಎರಡು ವರ್ಷಗಳ ಪ್ರೀತಿ ಹಾಗೂ ಒಂದು ವರ್ಷದ ವೈವಾಹಿಕ ಜೀವನದ ಕುರಿತು ಅದಿತಿ ಮತ್ತು ಯಶಸ್ ಈ ಸಂದರ್ಭದಲ್ಲಿ ಮಾತನಾಡಿದ್ದಾರೆ. ಚಿತ್ರನಟಿಯಾಗಿ ಫೇಮಸ್ ಆಗಿರೋ ಅದಿತಿ ಸದ್ಯ ಅಪ್ಪಟ ಗೃಹಿಣಿಯೂ ಆಗಿದ್ದಾರೆ. ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ ನಟಿ, ಸ್ಯಾಂಡಲ್ವುಡ್ನಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದರು. ಅದಿತಿ, ಕೂರ್ಗ್ ಮೂಲದ ಉದ್ಯಮಿ ಯಶಸ್ ಜೊತೆ ದಾಂಪತ್ಯ ಬದುಕನ್ನು ಎಂಜಾಯ್ ಮಾಡ್ತಿದ್ದಾರೆ. ಸಿನಿಮಾ ಜೊತೆಗೆ ವೈವಾಹಿಕ ಬದುಕನ್ನು ಬ್ಯಾಲೆನ್ಸ್ ಮಾಡ್ತಿದ್ದಾರೆ. ‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಅದಿತಿ ಪ್ರಭುದೇವ ಅವರು ಸದ್ಯ ಗೃಹಿಣಿಯಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ, ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್‍ಮೆಂಟ್ ನಲ್ಲಿ ಮಾಸ್ಟರ್ ಮುಗಿಸಿದವರು. ಇದರ ಹೊರತಾಗಿಯೂ ಅಡುಗೆಯಲ್ಲಿಯೂ ಇವರದ್ದು ಎತ್ತಿದ ಕೈ. ಅಡುಗೆ, ಆರೋಗ್ಯಕ್ಕೆ ಸಂಬಂಧಿಸಿದ ಕೆಲವೊಂದು ಟಿಪ್ಸ್ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.
ಇದೀಗ ಈ ಜೋಡಿ ಸುಖ ಸಂಸಾರದ ಗುಟ್ಟನ್ನು ಹೇಳಿದೆ. ಶಿಕ್ಷಣಕ್ಕೆ, ಕೆಲಸ ಸಿಕ್ಕಾಗ, ಕೆಲಸ ಸಿಗದಿದ್ದಾಗ, ಏಳು-ಬೀಳು ಎಲ್ಲವುಗಳಲ್ಲಿಯೂ ದಂಪತಿ ಪರಸ್ಪರ ಬೆಂಬಲ ಸೂಚಿಸುತ್ತಾ ಬಂದರೆ ಸಂಸಾರ ಸುಖವಾಗಿರುತ್ತದೆ ಎಂದಿದ್ದಾರೆ ಅದಿತಿ. ಎಷ್ಟೋ ಮಂದಿ ಸಂಸಾರ ಚೆನ್ನಾಗಿರಬೇಕು ಎಂದರೆ ಅಡ್ಜಸ್ಟ್ ಮಾಡಿಕೊಳ್ಳಬೇಕು ಎನ್ನುತ್ತಾರೆ. ಆದರೆ ಈ ರೀತಿಯ ಅಡ್ಜ್ಸ್ಟ್ಮೆಂಟ್ ಒಳ್ಳೆಯದಲ್ಲ ಎನ್ನುವ ಅಭಿಪ್ರಾಯ ನಟಿಯದ್ದು. ಇದೇ ಕಾರಣಕ್ಕೆ ಅಡ್ಜಸ್ಟ್ ಬದಲು ಒಬ್ಬರನ್ನೊಬ್ಬರು ಅಕ್ಸೆಪ್ಟ್ ಮಾಡಿಕೊಳ್ಳಬೇಕು. ಹೇಗೆ ಇದ್ದೇವೋ ಅದೇ ರೀತಿ ಒಪ್ಪಿಕೊಂಡರೆ ದಾಂಪತ್ಯದಲ್ಲಿ ಯಾವುದೇ ಸಮಸ್ಯೆ ತಲೆದೋರುವುದಿಲ್ಲ ಎಂದಿದ್ದಾರೆ.
ಫಳಫಳ ಹೊಳೆಯುವ ತ್ವಚೆ- ಕೂದಲಿಗೆ ನ್ಯಾಚುಲರ್ ಪೇಸ್ಟ್ ತಯಾರಿಕೆ ಹೇಗೆ? ಅದಿತಿ ಪ್ರಭುದೇವ ಟಿಪ್ಸ್ ಕೇಳಿ
ಇದೇ ವೇಳೆ ಈ ಒಂದು ವರ್ಷದ ದಾಂಪತ್ಯ ಜೀವನದಲ್ಲಿ ಪತ್ನಿಗಿಂತಲೂ ಹೆಚ್ಚಾಗಿ ಅದಿತಿ ಸ್ನೇಹಿತೆಯಾಗಿದ್ದಳು ಎಂದು ಯಶಸ್ ಹೇಳಿದ್ದಾರೆ. ಪ್ರತಿ ನಿತ್ಯವೂ ಬೆಟರ್ ಪರ್ಸನ್ ಆಗಲು ಆಕೆ ನೆರವಾಗುತ್ತಿರುವುದಾಗಿ ಶ್ಲಾಘಿಸಿದ್ದಾರೆ. ಶಾಲಾ-ಕಾಲೇಜುಗಳಲ್ಲಿ ಸ್ನೇಹಿತರ ಜೊತೆ ಒಂದೆರಡು ಗಂಟೆ ಕಾಲ ಕಳೆಯುತ್ತೇವೆ. ಅದು ತುಂಬಾ ಖುಷಿ ಕೊಡುತ್ತದೆ. ಇದೀಗ ಪತ್ನಿಯೂ ಸ್ನೇಹಿತೆಯಾಗಿರುವ ಕಾರಣ 24/7 ಆಕೆಯ ಜೊತೆ ಇರುವುದು ತುಂಬಾ ಖುಷಿ ಎಂದು ಯಶಸ್ ಹೇಳಿದರೆ, ದಂಪತಿ ಸ್ನೇಹಿತರಂತೆ ಇದ್ದರೆ ಬದುಕು ಸುಂದರ ಎಂದಿದ್ದಾರೆ ಅದಿತಿ ಪ್ರಭುದೇವ. ತಮ್ಮ ಕಪಿಚೇಷ್ಠೆ, ಹುಸಿ ಮುನಿಸು, ಇರಿಟೇಷನ್, ವಿಚಿತ್ರ ಹಾಡು ಎಲ್ಲವನ್ನೂ ಸಹಿಸಿಕೊಂಡಿರುವುದಕ್ಕೆ ಪತಿಗೆ ನಟಿ ಧನ್ಯವಾದ ಸಲ್ಲಿಸಿದ್ದಾರೆ.
ಇದೇ ವೇಳೆ ಎಲ್ಲಾ ಸಂಸಾರಗಳಂತೆ ತಮ್ಮ ಸಂಸಾರದಲ್ಲಿಯೂ ಪ್ರೀತಿ, ಪ್ರೇಮದ ಹೊರತಾಗಿ ಚಿಕ್ಕಪುಟ್ಟ ಜಗಳ, ಮಿಸ್ ಅಂಡರ್ಸ್ಟಾಂಡಿಂಗ್ ಎಲ್ಲವೂ ಆಗಾಗ್ಗೆ ನಡೆಯುತ್ತಲೇ ಇರುತ್ತದೆ ಎನ್ನುವ ದಂಪತಿ, ಇದು ಎಲ್ಲಾ ಸಂಸಾರಗಳಲ್ಲಿಯೂ ಮಾಮೂಲು. ಆ ಸಮಯದಲ್ಲಿ ಪರಸ್ಪರ ಗೌರವ ಕೊಟ್ಟು ಮಾತನಾಡಿದರೆ, ಕೂತು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಂಡರೆ ಯಾವ ಸಮಸ್ಯೆಯೂ ಬರುವುದಿಲ್ಲ. ಭಿನ್ನಾಭಿಪ್ರಾಯ ಬಂದರೂ ಫುಲ್ ಸ್ಟಾಪ್ ಬೀಳುತ್ತದೆ ಎಂದಿದ್ದಾರೆ.