ಅಮ್ಮ ಆಗ್ತಿರೋ ನಟಿ ಅದಿತಿ ಪ್ರಭುದೇವ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ: ಭಾವುಕ ಪೋಸ್ಟ್ ಶೇರ್ ಮಾಡಿದ ಪತಿ ಯಶಸ್
ಇಂದು ಅಂದರೆ ಜನವರಿ 13 ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ ಅವರಿಗೆ 30ನೇ ಹುಟ್ಟುಹಬ್ಬದ ಸಂಭ್ರಮ. ಇತ್ತೀಚೆಗಷ್ಟೇ ಅಮ್ಮ ಆಗ್ತಿರೋ ಗುಡ್ನ್ಯೂಸ್ ಕೊಟ್ಟಿದ್ದ ನಟಿಗೆ ಪತಿ ಯಶಸ್ ಅವರು ವಿಶೇಷ ರೀತಿಯಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ನಟಿ ಅದಿತಿ ಅವರು ಸದ್ಯ ಅಲೆಕ್ಸಾ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಇದೇ ಜನವರಿ 26ರಂದು ಚಿತ್ರ ಬಿಡುಗಡೆಯಾಗಲಿದೆ. ಅಂದಹಾಗೆ, ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ , ಈಗ ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ ನಟಿ, ಸ್ಯಾಂಡಲ್ವುಡ್ನಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದರು. ಅದಿತಿ, ಕೂರ್ಗ್ ಮೂಲದ ಉದ್ಯಮಿ ಯಶಸ್ ಜೊತೆ ದಾಂಪತ್ಯ ಬದುಕನ್ನು ಎಂಜಾಯ್ ಮಾಡ್ತಿದ್ದಾರೆ. ಇದೀಗ ಅವರು ಅಮ್ಮ ಆಗುತ್ತಿದ್ದು, ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಈ ಸಂದರ್ಭದಲ್ಲಿ ಪತಿ ಯಶಸ್ ಅವರು, ಸೋಷಿಯಲ್ ಮೀಡಿಯಾದಲ್ಲಿ ಭಾವುಕವಾಗಿರುವ ಪೋಸ್ಟ್ ಶೇರ್ ಮಾಡಿದ್ದಾರೆ. ನಿನ್ನನ್ನು ಪಡೆದಿರುವ ನಾನೇ ಧನ್ಯ. ನಾನು ಅದೃಷ್ಟಶಾಲಿ. ನಾನು ಯಾವಾಗಲೂ ನಿನ್ನ ದೊಡ್ಡ ಬೆಂಬಲಿಗನಾಗಿರುತ್ತೇನೆ. ಬದುಕಿನ ಈ ಪಯಣದಲ್ಲಿ ನನ್ನ ಬಾಳಸಂಗಾತಿಯಾಗಿ ಪಡೆದಿರುವುದಕ್ಕೆ ನನಗೆ ಖುಷಿಯಿದೆ. ನೀನು ನಗುತ್ತಿರುವುದನ್ನು ನೋಡಿದಕ್ಕಿಂತ ನನಗೆ ಏನೂ ಸಂತೋಷವಿಲ್ಲ. ನಾವು ಮೊದಲು ಭೇಟಿಯಾದ ದಿನದಿಂದಲೂ ಇಂದಿನವರೆಗೂ ಕಳೆದಿರುವ ಕ್ಷಣಗಳು ಅಪೂರ್ವವಾಗಿದೆ. ನಮ್ಮ ಪ್ರೀತಿಯ ಉಡುಗೊರೆಯನ್ನು ನೀವು ಹೊತ್ತುಕೊಂಡಿರುವುದರಿಂದ ಇದು ವಿಶೇಷ ಜನ್ಮದಿನವಾಗಿದೆ ಎಂದಿದ್ದಾರೆ.
ಪತಿಯ ಕಣ್ಣಿಗೆ ಬಟ್ಟೆ ಕಟ್ಟಿ ಡಿಫರೆಂಟಾಗಿ ಗರ್ಭಿಣಿ ವಿಷ್ಯ ತಿಳಿಸಿದ ನಟಿ ಅದಿತಿ: ವಿಡಿಯೋ ನೋಡಿ ಆಹಾ ಎಂದ ಫ್ಯಾನ್ಸ್
ಅಂದಹಾಗೆ ಅದಿತಿ ಅವರು ದಾವಣಗೆರೆ ಮೂಲದವರು. ಅಲ್ಲಿ ಜನಿಸಿದ ಇವರು ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್‍ಮೆಂಟ್ ನಲ್ಲಿ ಮಾಸ್ಟರ್ಸ್ ಮಾಡಿದ್ದಾರೆ. ನಿರೂಪಕಿಯಾಗಿ ವೃತ್ತಿಜೀವನ ಪ್ರಾರಂಭಿಸಿದ ನಟಿ, ‘ಗುಂಡ್ಯಾನ್ ಹೆಂಡ್ತಿ’ ಧಾರಾವಾಹಿಯ ಮೂಲಕ ಕಿರುತೆರೆಗೆ ಪ್ರವೇಶಿಸಿದರು. 2017 ರಲ್ಲಿ ನಟ ಅಜಯ್ ರಾವ್ ಜೊತೆ ‘ಧೈರ್ಯಂ’ ಚಿತ್ರದಲ್ಲಿ ನಟಿಸುವ ಮೂಲಕ ಬಿಗ್ ಸ್ಕ್ರೀನ್‌ಗೆ ಪದಾರ್ಪಣೆ ಮಾಡಿದರು. ಆದಿತಿ ಪ್ರಭುದೇವ 2022ರ ನವೆಂಬರ್ 28ರಂದು ಉದ್ಯಮಿ ಯಶಸ್ (ಯಶಸ್ವಿ) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇತ್ತೀಚೆಗೆ ಅಮ್ಮ ಆಗುವ ವಿಷಯ ಶೇರ್ ಮಾಡಿಕೊಂಡಿದ್ದ ನಟಿ, ಸಂಬಂಧಗಳಲ್ಲಿ ಶ್ರೇಷ್ಠವಾದದ್ದು , ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿಯೊಂದು ನೋವು ನಲಿವಿನಲ್ಲೂ ನಮ್ಮ ಬಾಯಿಂದ ಬರುವ ಏಕೈಕ ಪದ "ಅಮ್ಮ" ಎಂದು ಬರೆದುಕೊಂಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಆಗಿರುವ ನಟಿ, ಬ್ಯೂಟಿ, ಅಡುಗೆ ಮುಂತಾದವುಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.
ಹೊಸ ವರ್ಷಕ್ಕೆ ನಟಿ ಅದಿತಿ ಕಲಿಸಿಕೊಟ್ರು ಸುಲಭದಲ್ಲಿ ಮಾಡುವ ಬನಾನಾ ವಾಲ್ನಟ್ ಕೇಕ್