Vikranth Rona ಸಿನಿಮಾದ ಇಂಗ್ಲೀಷ್ ವರ್ಷನ್‌ಗೆ ಕಿಚ್ಚ ಸುದೀಪ್ ಡಬ್ಬಿಂಗ್!

By Suvarna News  |  First Published Mar 3, 2022, 6:05 PM IST

ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ವಿಕ್ರಾಂತ್ ರೋಣ' ಇಂಗ್ಲಿಷ್‌ ಡಬ್ಬಿಂಗ್ ಪೂರ್ಣಗೊಳಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅನೂಪ್ ಭಂಡಾರಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.


ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಅಭಿನಯದ 'ರಂಗಿತರಂಗ' ಖ್ಯಾತಿಯ ಅನೂಪ್ ಭಂಡಾರಿ (Anup Bhandari) ನಿರ್ದೇಶನದ  ಪ್ಯಾನ್ ಇಂಡಿಯಾ ಬಿಗ್‌ ಬಜೆಟ್‌ ಸಿನಿಮಾ 'ವಿಕ್ರಾಂತ್ ರೋಣ' (Vikranth Rona) ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಈಗಾಗಲೇ ಚಿತ್ರದ ಟೀಸರ್, ​ಪೋಸ್ಟರ್ ಲುಕ್‌ಗಳು ಬಿಡುಗಡೆಯಾಗಿ ಸಿನಿರಸಿಕರ ಗಮನ ಸೆಳೆದಿದ್ದು, ಸಖತ್ ಸದ್ದು ಮಾಡುತ್ತಿದೆ. ಫೆ.24ರಂದು ತೆರೆ ಕಾಣಬೇಕಿದ್ದ ಚಿತ್ರದ ಬಿಡುಗಡೆ ಕೋವಿಡ್‌ ಸೃಷ್ಟಿಸಿದ ಪ್ರತಿಕೂಲ ಪರಿಸ್ಥಿತಿ, ನಿಯಮಾವಳಿಗಳ ಇತಿಮಿತಿಗಳಿಂದಾಗಿ ಮುಂದೂಡಲಾಗಿತ್ತು. 

ಈ ಮಧ್ಯೆ  ಅಭಿಮಾನಿಗಳಿಗಾಗಿ ಚಿತ್ರತಂಡ ಹೊಸ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ಇನ್ನಷ್ಟು ಕುತೂಹಲವನ್ನು ಹೆಚ್ಚಿಸಿದೆ. ಮಾ.2ರಂದು 'ವಿಕ್ರಾಂತ್ ರೋಣ' ನಿರ್ದೇಶಕ ಅನೂಪ್ ಭಂಡಾರಿ ಹುಟ್ಟುಹಬ್ಬ. ಹೀಗಾಗಿ ಚಿತ್ರರಂಗದ ಹಲವು ತಾರೆಯರು ಸೇರಿದಂತೆ ಅಭಿಮಾನಿಗಳು ನಿರ್ದೇಶಕರಿಗೆ ಶುಭಾಶಯವನ್ನು ತಿಳಿಸಿದ್ದರು. ಈ ನಡುವೆ ಅಭಿಮಾನಿಗಳಿಗಾಗಿ ಅನೂಪ್ ಭಂಡಾರಿ ಹೊಸ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸುದೀಪ್ ಅವರು ಈಗಾಗಲೇ 'ವಿಕ್ರಾಂತ್ ರೋಣ' ಇಂಗ್ಲಿಷ್‌ ಡಬ್ಬಿಂಗ್ ಪೂರ್ಣಗೊಳಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ (Social Media) ಅನೂಪ್ ಭಂಡಾರಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

Tap to resize

Latest Videos

Kichcha Sudeep: 'ಬಿಲ್ಲಾ ರಂಗ ಭಾಷ' ಹಿಂದೆ ಹೊರಟ ಬಾದ್‌ಷಾ!

ಈ ಬಗ್ಗೆ ಅನೂಪ್ ಭಂಡಾರಿ ತಮ್ಮ ಟ್ವೀಟ್ಟರ್ (Twitter) ಖಾತೆಯಲ್ಲಿ 'ಇಂಗ್ಲಿಷ್‌ನಲ್ಲಿ ತಮ್ಮ ಪಾತ್ರಕ್ಕೆ ಸುದೀಪ್ ಅವರೇ ಧ್ವನಿ ನೀಡಿದ್ದಾರೆ. ಕನ್ನಡದ ಸೂಪರ್ ಸ್ಟಾರ್ ಒಬ್ಬರು ತಮ್ಮ ಇಂಗ್ಲಿಷ್‌ ಚಿತ್ರಕ್ಕೆ ತಮ್ಮದೇ ಧ್ವನಿ ನೀಡುತ್ತಿರುವುದು ಇದೇ ಮೊದಲು. ಮಾತ್ರವಲ್ಲದೇ, ರಾಷ್ಟ್ರ ಮಟ್ಟದಲ್ಲೂ ಇಂತಹ ನಾಯಕರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ' ಎಂದು ಬರೆದುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಸುದೀಪ್ ಚಿತ್ರದಲ್ಲಿ ಕಾಣಿಸಿಕೊಂಡಿರುವ ಝಲಕ್ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಇದನ್ನು ನೋಡಿದ ಕಿಚ್ಚನ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಸುದೀಪ್‌ ಅವರೇ ಕನ್ನಡದ ಜೊತೆಗೆ, ಹಿಂದಿ, ತಮಿಳು, ತೆಲುಗು ಹಾಗೂ ಇಂಗ್ಲಿಷ್‌ನಲ್ಲಿ 'ವಿಕ್ರಾಂತ್ ರೋಣ' ಚಿತ್ರಕ್ಕೆ ಡಬ್ಬಿಂಗ್‌ ಮಾಡಿದ್ದಾರೆ. 



ಸದ್ಯ 'ವಿಕ್ರಾಂತ್ ರೋಣ' ಸಿನಿಮಾ 2 ಡಿ ಮತ್ತು 3 ಡಿ ಯಲ್ಲಿ ಸಿದ್ಧವಾಗಿದ್ದು, ಅಂದಾಜಿನ ಪ್ರಕಾರ ಸಾವಿರಾರು ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ರಿಲೀಸ್ ಮಾಡುವ ಪ್ಲ್ಯಾನ್ ಚಿತ್ರತಂಡಕ್ಕಿದೆ. ಕಿಚ್ಚ ಸುದೀಪ್ ಮತ್ತು ಅನೂಪ್ ಭಂಡಾರಿ ಕಾಂಬಿನೇಷನ್‌ನ ಮೊದಲ ಸಿನಿಮಾ ಇದಾಗಿದ್ದು, ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. 'ವಿಕ್ರಾಂತ್ ರೋಣ' ಸಿನಿಮಾದ ಟೀಸರ್ ಬಿಡುಗಡೆ ಮಾಡುವ ಮೂಲಕ ಸಿನಿಮಾದ ಪ್ರಮೋಷನ್ ಶುರು ಮಾಡಲಿರುವ ಚಿತ್ರತಂಡ, ಆ ನಂತರ 'ಹೇ ಫಕೀರಾ' ಹಾಡು ರಿಲೀಸ್ ಆಗಲಿದೆಯಂತೆ. ಈಗಾಗಲೇ ಟ್ರೇಲರ್‌ಗೆ ಬಳಸಿಕೊಂಡಿರುವ ಮತ್ತು ಸಖತ್ ಕ್ರೇಜ್ ಕ್ರಿಯೇಟ್ ಮಾಡಿದ್ದ 'ಗುಮ್ಮ ಬಂದ ಗುಮ್ಮ' ಹಾಡು ಕೂಡಾ ಬಿಡುಗಡೆ ಆಗಲಿದೆಯಂತೆ.

Kichcha Sudeep: ಅಭಿಮಾನಿಗಳಿಗೆ ಡಬಲ್ ಗುಡ್​ನ್ಯೂಸ್ ನೀಡಿದ 'ವಿಕ್ರಾಂತ್ ರೋಣ'

ಮೂಲಗಳ ಪ್ರಕಾರ ದೇಶದ ನಾನಾ ರಾಜ್ಯಗಳಲ್ಲಿ ಚಿತ್ರದ ಇವೆಂಟ್ ಮಾಡುವ ಪ್ಲ್ಯಾನ್ ಚಿತ್ರತಂಡಕ್ಕಿದ್ದು, ಹಲವು ಭಾಷೆಗಳಲ್ಲಿ 'ವಿಕ್ರಾಂತ್ ರೋಣ' ಸಿನಿಮಾ ಬಿಡುಗಡೆಯಾಗುತ್ತಿದೆ. ಹಾಗಾಗಿ ಆಯಾ ಭಾಷೆಯ ಚಿತ್ರರಂಗದ ಗಣ್ಯರ ಮಧ್ಯೆ ಇವೆಂಟ್ ಮಾಡುವ ಯೋಜನೆ ಸಿದ್ಧವಾಗಿದೆಯಂತೆ. ಇನ್ನು ಚಿತ್ರದಲ್ಲಿ ನಿರೂಪ್‌ ಭಂಡಾರಿ (Nirup Bhandari), ಮಿಲನಾ ನಾಗರಾಜ್ (Milana Nagaraj) ಹಾಗೂ ನೀತಾ ಅಶೋಕ್‌ (Neetha Ashok) ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಜೊತೆಗೆ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫೆರ್ನಾಂಡಿಸ್ (Jacqueline Fernandez) 'ಗಡಂಗ್ ರಕ್ಕಮ್ಮ' ಪಾತ್ರದಲ್ಲಿ ಕಿಚ್ಚನ ಜೊತೆ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ವಿಲಿಯಮ್ ಡೇವಿಡ್ ಕ್ಯಾಮರಾ ಕೈಚಳಕ ಈ ಚಿತ್ರಕ್ಕಿದೆ.
 

sir completes dubbing for the English version. First Kannada superstar & one of the few from India to dub for a full fledged commercial movie in English pic.twitter.com/xXAvJgAmts

— Anup Bhandari (@anupsbhandari)
click me!