
‘ನಾನೊಬ್ಬ ಕಲಾವಿದನಾಗಿ, ಹೀರೋ ಆಗಿ ನನಗೆ ಸಿಗಬೇಕಾದ ಸ್ಥಾನ-ಮಾನ ಇಲ್ಲಿ ಸಿಕ್ಕಿಲ್ಲ. ನನ್ನ ಸೂಕ್ತವಾಗಿ ಬಳಸಿಕೊಂಡಿಲ್ಲ ಎನ್ನುವ ಕೊರಗು ಇದೆ. ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಮಾಡಿದ ಪ್ರಯತ್ನವೇ ಈ ಚಿತ್ರ.’ ಹೀಗೆ ಹೇಳಿದ್ದು ನಟ ಅಜಯ್ ರಾವ್. ಅದು ‘ಯುದ್ಧಕಾಂಡ’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಕಾರ್ಯಕ್ರಮದ ವೇದಿಕೆ. ಪವನ್ ಭಟ್ ನಿರ್ದೇಶಿರುವ ಚಿತ್ರವಿದು. ಚಿತ್ರದ ನಾಯಕ ಕಂ ನಿರ್ಮಾಪಕ ಅಜಯ್ ರಾವ್, ‘ನಾನು ಒಬ್ಬ ಕಲಾವಿದನಾಗಿ ಫ್ರಂಟ್‌ಲೈನ್ ಹೀರೋಗಳ ಸಾಲಲ್ಲಿ ನಿಲ್ಲಬೇಕಿತ್ತು. ಯಾಕೆಂದರೆ ನನಗೆ ಸಿಗಬೇಕಾದ ಸ್ಥಾನ-ಮಾನ ಸರಿಯಾದ ರೀತಿಯಲ್ಲಿ ದೊರಕಿಲ್ಲ.
ಹಾಗಂತ ನಾನು ಯಾರನ್ನೂ ದೂಷಿಸುತ್ತಿಲ್ಲ. ಆದರೆ, ಸರಿಯಾಗಿ ನನ್ನ ಬಳಸಿಕೊಂಡಿಲ್ಲ ಎನ್ನುವ ಕೊರಗು ಇದೆ. ನಮ್ಮ ಪ್ರತಿಭೆಯನ್ನು ಬಳಸಿಕೊಳ್ಳುವುದಕ್ಕೆ ಯಾರೂ ಪ್ರಯತ್ನ ಮಾಡದೆ ಇದ್ದಾಗ ನಾವೇ ನಮ್ಮ ಭವಿಷ್ಯ ಕಟ್ಟಿಕೊಳ್ಳಬೇಕು, ನನ್ನ ಜಾತಕವನ್ನು ಬೇರೆಯವರ ಬಳಿ ಹೋಗಿ ಕೇಳುವುದಕ್ಕಿಂತ ನಾವೇ ನಮ್ಮ ಜಾತಕ ಬರೆಯೋಣ ಎಂದು ನಿರ್ಧರಿಸಿ ‘ಯುದ್ಧಕಾಂಡ’ ಚಿತ್ರ ಮಾಡಿದ್ದೇವೆ’ ಎಂದರು. ‘ಈ ಚಿತ್ರದ ಕತೆ ಹೆಣ್ಣಿನ ಮೇಲೆ ನಿಂತಿದೆ. ಭಾರತದ ಅಷ್ಟೂ ಹೆಣ್ಣು ಮಕ್ಕಳನ್ನು ಈ ಚಿತ್ರ ರೆಪ್ರೆಸೆಂಟ್ ಮಾಡುತ್ತದೆ. ಇಲ್ಲಿ ನನ್ನ ಪಾತ್ರದ ಹೆಸರು ಭರತ್ ಎಂಬುದು. ಧರ್ಮಕ್ಕಾಗಿ ಹೋರಾಟ ನಡೆಯುತ್ತದೆ.
ಅಂದರೆ ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಬೇಕು ಎಂಬುದು. ನ್ಯಾಯಾಂಗ ವ್ಯವಸ್ಥೆಯಲ್ಲೂ ಒಂದಿಷ್ಟು ವಿಚಾರಗಳು ಬದಲಾಗಬೇಕಿದೆ. ಆ ನಿಟ್ಟಿನಲ್ಲಿ ಸಿನಿಮಾ ಬಂದಿದೆ. ಇದು ಯಾರೋ ಒಬ್ಬ ಹೆಣ್ಣು ಮಗುವಿನ ಸುತ್ತ ಇರುವ ಕತೆಯಲ್ಲ. ಈ ಚಿತ್ರ ರಾಷ್ಟ್ರಪತಿಗಳವರೆಗೂ ತಲುಪಬೇಕು ಎನ್ನುವ ಉದ್ದೇಶ ಇದೆ. ಮಿಡ್ ಸ್ಕೇಲ್ ಚಿತ್ರವೊಂದು ಭಾರತದ್ಯಾಂತ ದಾಖಲೆ ಮಾಡಬೇಕು. ಅದಕ್ಕೆ ನಮ್ಮ ಚಿತ್ರ ಉದಾಹರಣೆ ಆಗಿರಬೇಕು ಎನ್ನುವುದು ನನ್ನ ಹಠ. ಕತೆ ಗಟ್ಟಿಯಾಗಿದ್ದಾಗ 100 ಕೋಟಿ ಗಳಿಕೆ ದಾಟ್ಟುತ್ತವೆ ಎಂಬುದಕ್ಕೆ ಈಗಾಗಲೇ ಬೇರೆ ಬೇರೆ ಭಾಷೆಯಲ್ಲಿ ಬಂದಿರುವ ಮಿಡ್ ಸ್ಕೇಲ್ ಚಿತ್ರಗಳೇ ಸಾಬೀತು ಮಾಡಿವೆ. ಕನ್ನಡದಲ್ಲಿ ನಮ್ಮ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ ಆಗಬೇಕು’ ಎಂದು ಹೇಳಿದರು.
ಇದನ್ನೂ ಓದಿ: ಬಾಹುಬಲಿ ಸಿನಿಮಾವನ್ನೇ ರಿಜೆಕ್ಟ್ ಮಾಡಿದ ಸ್ಟಾರ್ ಹೀರೋ ಯಾರು?: ಪ್ರಭಾಸ್‌ಗಿಂತ ಮುಂಚೆ ಆಫರ್ ಹೋಗಿದ್ದು ಇವರಿಗೆ!
ಚಿತ್ರದ ನಾಯಕಿ ಅರ್ಚನಾ ಜೋಯಿಸ್, ‘ಒಳ್ಳೆಯ ಉದ್ದೇಶದೊಂದಿಗೆ ಮೂಡಿ ಬರುತ್ತಿರುವ ಸಿನಿಮಾ ಇದು. ಟೈಮ್ಲಿ ಜಸ್ಟೀಸ್ ಎನ್ನುವುದು ಈ ಚಿತ್ರದ ಸಂದೇಶ. ಸಾಮಾಜದಲ್ಲಿ ಇಂಥ ಘಟನೆಗಳು ಅದರಲ್ಲೂ ಮಹಿಳೆಯರ ಮೇಲೆ ದೌರ್ಜನ್ಯ, ಶೋಷಣೆ ಆಗಬಾರದು. ಆದರೆ, ಸಮಯಕ್ಕೆ ಸರಿಯಾಗಿ ನ್ಯಾಯ ಸರಿಯಾಗಿ ಸಿಗಬೇಕು ಎನ್ನುವ ಕಾರಣಕ್ಕೆ ಈ ಚಿತ್ರ ನಾನು ಒಪ್ಪಿಕೊಂಡೆ’ ಎಂದರು. ಚಿತ್ರದ ನಿರ್ದೇಶಕ ಪವನ್ ಭಟ್, ಚಿತ್ರದ ಪಾತ್ರಧಾರಿಗಳಾದ ಟಿ ಎಸ್ ನಾಗಭರಣ, ಪ್ರಕಾಶ್ ಬೆಳವಾಡಿ ಹಾಗೂ ಕ್ರೇಜಿಮೈಂಡ್ ಶ್ರೀ ಹಾಜರಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.