Ullas Gowda Last Minutes: ಬಾಮಾ ಹರೀಶ್‌ ಪುತ್ರ ಉಲ್ಲಾಸ್‌ ಗೌಡ ದುರಂತ ಅಂತ್ಯದ ಕೊನೇ ಕ್ಷಣಗಳು ಹೀಗಿದ್ದವು; ಮಾಹಿತಿ ನೀಡಿದ ಆಪ್ತ ಸ್ನೇಹಿತ!

Published : Jun 28, 2026, 08:34 PM IST
BaMa Harish son Ullas Gowda

ಸಾರಾಂಶ

ಇಂದು ಬೆಂಗಳೂರಿನ ವಿಜಯನಗರದ ಸ್ವಂತ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸ್ಯಾಂಡಲ್‌ವುಡ್‌ನ ಗಣ್ಯರು ಹಾಗೂ ಬಂಧುಮಿತ್ರರು ಕಣ್ಣೀರಿನ ವಿದಾಯ ಕೋರಿದರು. ಮಧ್ಯಾಹ್ನ 3 ಗಂಟೆಗೆ ಸುಮನಹಳ್ಳಿಯ ಚಿತಾಗಾರದಲ್ಲಿ ಉಲ್ಲಾಸ್ ಅವರ ಅಂತ್ಯಕ್ರಿಯೆ ನೆರವೇರಿದೆ.

ಕೊಡಚಾದ್ರಿಯ ಸುಂದರ ಬೆಟ್ಟದಲ್ಲಿ ನಡೆದ ಆ ಒಂದು ಘೋರ ದುರಂತ; ಉಲ್ಲಾಸ್ ಕೊನೆಯ ಕ್ಷಣದ ಕಣ್ಣೀರಿನ ಕಥೆ!

ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ಮಾಪಕ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಭಾ. ಮಾ. ಹರೀಶ್ (Ba Ma Harish) ಅವರ ಮನೆಯಲ್ಲಿ ಇಂದು ಮೌನ ಆವರಿಸಿದೆ. ಯಾವತ್ತೂ ಖುಷಿಖುಷಿಯಾಗಿ ಇರುತ್ತಿದ್ದ ಆ ಕುಟುಂಬ, ಈಗ ಮಗನ ಅಕಾಲಿಕ ಮರಣದ ಆಘಾತದಲ್ಲಿ ಮುಳುಗಿದೆ, ಆಕ್ರಂದನ ಮುಗಿಲು ಮುಟ್ಟಿದೆ. ಕೊಡಚಾದ್ರಿಯ ತಂಪಾದ ಪರಿಸರದಲ್ಲಿ ಹರ್ಷದಾಯಕ ಟ್ರೆಕ್ಕಿಂಗ್ ಮುಗಿಸಿ ಮರಳುತ್ತಿದ್ದ ಉಲ್ಲಾಸ್ ಗೌಡ (Ullas Gowda), ವಿಧಿಯ ಕ್ರೂರ ಆಟಕ್ಕೆ ಬಲಿಯಾದ ಆ ಕೊನೆಯ ಕ್ಷಣಗಳನ್ನು ಕೇಳಿದರೆ ಕಲ್ಲು ಮನಸ್ಸು ಕೂಡ ಕರಗುತ್ತದೆ.

ಕುಸಿಯುವ ಐದು ನಿಮಿಷ ಮುಂಚೆಯೂ ಸಖತ್ ಎನರ್ಜೆಟಿಕ್!

'ಟ್ರೆಕ್ಕಿಂಗ್ ಅಂದ್ರೆ ಉಲ್ಲಾಸ್‌ಗೆ ಎಲ್ಲಿಲ್ಲದ ಪ್ರಾಣ. ಎತ್ತರದ ಬೆಟ್ಟಗಳನ್ನು ಹತ್ತುವುದೆಂದರೆ, ಸ್ನೇಹಿತರ ಜೊತೆಗೆ ಸಾಹಸ, ಕ್ರೀಡೆಗಳಲ್ಲಿ ತೊಡುಗುವುದು ಉಲ್ಲಾಸ್‌ಗೆ ಒಂದು ರೀತಿಯ ಸಂಭ್ರಮ. ಶನಿವಾರ ಕೂಡ ಅಷ್ಟೇ, ತನ್ನ ಪ್ರೀತಿಯ ಗೆಳೆಯರ ಜೊತೆ ಕೊಡಚಾದ್ರಿ ಬೆಟ್ಟ ಏರಲು ಪ್ಲ್ಯಾನ್ ಮಾಡಿದ್ದರು. ಎಲ್ಲವೂ ಅಂದುಕೊಂಡಂತೆಯೇ ನಡೆದಿತ್ತು. ಬೆಟ್ಟದ ತುದಿಯಲ್ಲಿ ಪ್ರಕೃತಿಯ ಸೌಂದರ್ಯ ಸವಿದು, ಫೋಟೋಗಳನ್ನು ತೆಗೆಸಿಕೊಂಡು ಹಗುರ ಮನಸ್ಸಿನಿಂದ ಕೆಳಗೆ ಇಳಿದು ಬಂದಿದ್ದರು. "ಇನ್ನೇನು ಐದು ನಿಮಿಷದ ಹಿಂದಷ್ಟೇ ತುಂಬಾನೇ ಎನರ್ಜೆಟಿಕ್ ಆಗಿದ್ದ ಉಲ್ಲಾಸ್, ಸಡನ್ ಆಗಿ ಸುಸ್ತಾಗುತ್ತಿದೆ ಎಂದು ಕುಳಿತುಕೊಂಡ. ಕುಳಿತುಕೊಂಡವನೇ ಹಾಗೆಯೇ ಪ್ರಜ್ಞೆ ತಪ್ಪಿ ಬಿದ್ದ" ಎಂದು ಆತನ ಜೊತೆಯಲ್ಲಿದ್ದ ಆಪ್ತ ಗೆಳೆಯ ಆ ದಾರುಣ ಕ್ಷಣಗಳನ್ನು ನೆನೆದು ಕಣ್ಣೀರು ಹಾಕಿದ್ದಾರೆ.

ಕಾಡಿನ ಮಧ್ಯೆ ಗೆಳೆಯರ ಹೋರಾಟ!

ಉಲ್ಲಾಸ್ ಕುಸಿದು ಬಿದ್ದ ತಕ್ಷಣ ಗೆಳೆಯರಲ್ಲಿ ಆತಂಕ ಶುರುವಾಯಿತು. ಮೊದಲು ಇದು ಸಾಮಾನ್ಯ ಸುಸ್ತು ಅಥವಾ ಡಿಹೈಡ್ರೇಶನ್ ಇರಬಹುದು ಎಂದು ಭಾವಿಸಿ ಮುಖಕ್ಕೆ ನೀರು ಚಿಮುಕಿಸಿದರು. ಆದರೆ ಉಲ್ಲಾಸ್‌ನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆ ದಟ್ಟ ಕಾಡಿನ ಮಧ್ಯೆ ಗೆಳೆಯರು "ಯಾರಾದರೂ ವೈದ್ಯರಿದ್ದೀರಾ? ನಮಗೆ ಸಹಾಯ ಬೇಕಿದೆ" ಎಂದು ಅಸಹಾಯಕರಾಗಿ ಕೂಗಾಡಿದರು. ಅದೃಷ್ಟವಶಾತ್ ಅಲ್ಲಿದ್ದ ಒಬ್ಬ ಸ್ಥಳೀಯ ವೈದ್ಯರು ಧಾವಿಸಿ ಬಂದು ಜೀಪ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವವರೆಗೂ ಸತತವಾಗಿ ಸಿಪಿಆರ್ (ಕೃತಕ ಉಸಿರಾಟ) ನೀಡುತ್ತಲೇ ಇದ್ದರು. ಆಸ್ಪತ್ರೆ ತಲುಪುವವರೆಗೂ ಉಲ್ಲಾಸ್‌ನ ಪಲ್ಸ್ ರೇಟ್ ಅಲ್ಪ ಸ್ವಲ್ಪ ಇತ್ತು, ಪ್ರಾಣ ಉಳಿಯಬಹುದು ಅನ್ನೋ ಸಣ್ಣ ಆಸೆ ಗೆಳೆಯರಲ್ಲಿತ್ತು. ಆದರೆ ಹೊಸನಗರದ ಆಸ್ಪತ್ರೆ ತಲುಪಿದಾಗ ವೈದ್ಯರು 'ಅವನು ಇನ್ನಿಲ್ಲ' ಎಂದಾಗ ಗೆಳೆಯರ ಲೋಕವೇ ಕುಸಿದು ಬಿದ್ದಂತಾಯಿತು.

ಮದುವೆ ಮನೆಯಲ್ಲಿ ಸೂತಕದ ಛಾಯೆ!

ಇವೆಲ್ಲದರ ನಡುವೆ ಅತ್ಯಂತ ನೋವಿನ ಸಂಗತಿ ಎಂದರೆ ಉಲ್ಲಾಸ್ ಬದುಕಿನಲ್ಲಿ ಹೊಸ ಅಧ್ಯಾಯವೊಂದು ಶುರುವಾಗಬೇಕಿತ್ತು. ಆಗಸ್ಟ್‌ನಲ್ಲಿ ನಿಶ್ಚಿತಾರ್ಥ ಮತ್ತು ಡಿಸೆಂಬರ್‌ನಲ್ಲಿ ಮದುವೆ ನಿಶ್ಚಯವಾಗಿತ್ತು. ಮನೆಯಲ್ಲಿ ಮದುವೆಯ ಸಿದ್ಧತೆಗಳು ಭರದಿಂದ ಸಾಗುತ್ತಿದ್ದವು, ಕನಸುಗಳು ಸಾವಿರವಿದ್ದವು. "ಟ್ರೆಕ್ಕಿಂಗ್ ಹೋಗಬೇಡಪ್ಪ ಅಂತ ಹೇಳಿದ್ರೂ ಅವನು ಕೇಳ್ತಾ ಇರಲಿಲ್ಲ, ಅವನಿಗೆ ಬೆಟ್ಟ ಹತ್ತುವುದೆಂದರೆ ಹುಚ್ಚು ಆಸೆ" ಎಂದು ಆತನ ಚಿಕ್ಕಪ್ಪ ಭಾ.ಮಾ. ಗಿರೀಶ್ ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯ ನೋಡುಗರ ಕಣ್ಣನ್ನು ಒದ್ದೆ ಮಾಡುತ್ತಿತ್ತು.

ಇಂದು (28 ಜೂನ್ 2026) ಬೆಂಗಳೂರಿನ ವಿಜಯನಗರದ ಸ್ವಂತ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸ್ಯಾಂಡಲ್‌ವುಡ್‌ನ ಗಣ್ಯರು ಹಾಗೂ ಬಂಧುಮಿತ್ರರು ಕಣ್ಣೀರಿನ ವಿದಾಯ ಕೋರಿದರು. ಮಧ್ಯಾಹ್ನ 3 ಗಂಟೆಗೆ ಸುಮನಹಳ್ಳಿಯ ಚಿತಾಗಾರದಲ್ಲಿ ಉಲ್ಲಾಸ್ ಅವರ ಅಂತ್ಯಕ್ರಿಯೆ ನೆರವೇರಿದೆ. ಒಬ್ಬ ಪ್ರತಿಭಾವಂತ ಯುವಕ, ಕ್ರೀಡಾಪ್ರೇಮಿ, ಭವಿಷ್ಯದ ನಿರ್ಮಾಪಕ ಹಾಗೂ ನಿರ್ದೇಶಕ ಹೀಗೆ ಅಕಾಲಿಕವಾಗಿ ಮರಣ ಹೊಂದಿದ್ದು ಸ್ಯಾಂಡಲ್‌ವುಡ್‌ಗೆ ತುಂಬಲಾರದ ನಷ್ಟ. ವಿಧಿಯ ಆಟವನ್ನು ಯಾರೂ ಅರಿಯರು ಎಂಬುದು ಉಲ್ಲಾಸ್ ಸಾವಿನಿಂದ ಮತ್ತೊಮ್ಮೆ ಸಾಬೀತಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Radhika Pandit: ಯಶ್ ಪತ್ನಿ ಸ್ಯಾಂಡಲ್‌ವುಡ್‌ ಸಿಂಡ್ರೆಲ್ಲಾ ಬಗ್ಗೆ ನಿಮಗೆ ಈ ಆಸಕ್ತಿಕರ ಸಂಗತಿಗಳು ಗೊತ್ತಾ?
K Bhagyaraj Kannada remakes list: ಕೆ. ಭಾಗ್ಯರಾಜ್ ಸಿನಿಮಾಗಳನ್ನು ರೀಮೇಕ್ ಮಾಡಿ ಗೆದ್ದಿರುವ ಕನ್ನಡದ ಹೀರೋಗಳು ಇವರೇ ನೋಡಿ; ಇದು ಆ ಚಿತ್ರಗಳ ಲಿಸ್ಟ್!‌