ನಿಮ್ಮ ಕಂಕುಳ ಕೂದಲಿಂದ ಇರಿಟೇಟ್ ಆಗ್ತಾ ಇದೀರಾ? ಸಂಗಾತಿಯನ್ನು ಆಕರ್ಷಿಸಬಹುದು ಇದು!

By Suvarna NewsFirst Published Nov 17, 2022, 1:46 PM IST
Highlights

ಪುರುಷನಾಗಲೀ, ಸ್ತ್ರೀಯಾಗಲೀ, ಹದಿಹರೆಯಕ್ಕೆ ಬಂದ ಕೂಡಲೇ ದೇಹದ ಮೇಲೆ ಅಲ್ಲಲ್ಲಿ ಕೂದಲು ಬೆಳೆಯಲಾರಂಭಿಸುತ್ತದೆ. ಅವುಗಳಲ್ಲಿ ಕಂಕುಳ ಸಂದಿಯ ಕೂದಲೂ ಒಂದು. ಇದ್ಯಾಕಿದೆ ಎಂಬುದರ ಬಗ್ಗೆ ಹೆಚ್ಚಿನವರಿಗೆ ಗೊತ್ತೇ ಇರೊಲ್ಲ. ಇದರಿಂದ ಲಾಭವಿದೆ ಎಂಬುದು ನಿಮಗೆ ಗೊತ್ತೆ?

ಪುರುಷನಾಗಲೀ, ಸ್ತ್ರೀಯಾಗಲೀ, ಹದಿಹರೆಯಕ್ಕೆ ಬಂದ ಕೂಡಲೇ ದೇಹದ ಮೇಲೆ ಅಲ್ಲಲ್ಲಿ ಕೂದಲು ಬೆಳೆಯಲಾರಂಭಿಸುತ್ತದೆ. ಅವುಗಳಲ್ಲಿ ಕಂಕುಳ ಸಂದಿಯ ಕೂದಲೂ (armpit hair) ಒಂದು. ಇದ್ಯಾಕಿದೆ ಎಂಬುದರ ಬಗ್ಗೆ ಹೆಚ್ಚಿನವರಿಗೆ ಗೊತ್ತೇ ಇರೊಲ್ಲ. ತುಂಬಾ ಮಂದಿ ಈ ಕೂದಲು ರೇಜಿಗೆ ಎಂದು ಇದನ್ನು ಬೋಳಿಸಿಕೊಳ್ಳುತ್ತಾರೆ. ಇದ್ಯಾಕಿದೆ? ಇದ್ದರೆ ಹಾನಿಕರವೇ? ಅಥವಾ ಇಲ್ಲದೇ ಇದ್ದರೇ ಹಾನಿಕರವೇ? ತಿಳಿಯೋಣ. ಹದಿಹರೆಯಕ್ಕೆ ಬಂದ ಪುರುಷ ಅಥವಾ ಸ್ತ್ರೀಯಲ್ಲಿ ಪಿಟ್ಯುಟರಿ (Pituitary Gland) ಗ್ರಂಥಿಯಲ್ಲಿ ಒಸರುವ ಲೈಂಗಿಕ ಹಾರ್ಮೋನುಗಳೇ (Sexual Hormones) ಈ ಕೂದಲ ಜನನಕ್ಕೆ ಕಾರಣ. ಆಂಡ್ರೋಜೆನ್‌ಗಳೆಂದು ಕರೆಯಲ್ಪಡುವ ಈ ಹಾರ್ಮೋನ್‌ಗಳು ಅಪೋಕ್ರೈನ್ ಸ್ವೆಟ್ ಗ್ರಂಥಿಗಳ ಮೂಲಕ ಕಂಕುಳಿನ ಹಾಗೂ ತೊಡೆಸಂದಿಯ ಕೂದಲ ಜನನಕ್ಕೆ ಕಾರಣವಾಗುತ್ತವೆ. ಹದಿಹರೆಯದಲ್ಲಿ ತೆಳ್ಳಗೆ, ನವಿರಾಗಿ ಮೂಡುವ ಈ ಕೂದಲುಗಳು ವಯಸ್ಸಾದಂತೆ ಹೆಚ್ಚು ಗಡುಸಾಗುತ್ತವೆ.

ಇವುಗಳ ಕೆಲಸವೇನು? ನಿಮಗೆ ಆಶ್ಚರ್ಯವಾಗಬಹುದು. ನಿಮ್ಮ ಭಾವಿ ಸಂಗಾತಿಯನ್ನು ಕಂಡುಕೊಳ್ಳಲು ಸಹಾಯ ಮಾಡುವುದೇ ಈ ಕೂದಲು! ಹೌದು. ನಿಮ್ಮ ಕಂಕುಳಲ್ಲಿ ಫೆರೋಮೋನ್‌ಗಳೆಂಬ ಲೈಂಗಿಕ ಹಾರ್ಮೋನ್‌ಗಳು ಸ್ರವಿಸುತ್ತಿರುತ್ತವೆ, ಇದು ದೇಹಕ್ಕೆ ಒಂದು ಬಗೆಯ ಪರಿಮಳವನ್ನು ಒದಗಿಸುತ್ತವೆ. ಪ್ರತಿಯೊಂದು ಜೀವಿಯ ಪರಿಮಳವೂ ಬೇರೆ ಬೇರೆ. ಈ ಭೂಮಿಯಲ್ಲಿ ಆರುನೂರು ಕೋಟಿ ಜನರಿದ್ದರೆ, ಅಷ್ಟೂ ಮಂದಿಯ ತನುಗಂಧವೂ ಬೇರೆಯೇ ಆಗಿರುತ್ತೆ.

ಈ ಫೆರೋಮೋನ್ (Pheromone) ಅಥವಾ ಪರಿಮಳದ ಹಾರ್ಮೋನ್ ಗಾಳಿಯನ್ನು ಸೇರಿ ಆವಿಯಾಗಬಾರದಲ್ಲ? ಅದಕ್ಕೆಂದೇ ಈ ಕೂದಲ ಸೃಷ್ಟಿಯಾಗಿರುವುದು. ಫೆರೋಮೋನನ್ನು ಈ ಕಂಕುಳ ಕೂದಲು ಹಿಡಿದಿಡುತ್ತದೆ. ಕೂದಲಿಗೆ ಅಂಟಿಕೊಂಡ ಫೆರೋಮೋನ್ ಕಣಗಳು ಇನ್ನಷ್ಟು ಗಾಢವಾಗುತ್ತವೆ. ಗಂಡಿನ ದೇಹದ ಪರಿಮಳದಿಂದ ಹೆಣ್ಣು, ಹೆಣ್ಣಿನಿಂದ ಗಂಡ ಆಕರ್ಷಿತವಾಗುತ್ತದೆ. ಇದು ಸೃಷ್ಟಿಯ ಮುಂದುವರಿಕೆಗಾಗಿ ಪ್ರಕೃತಿಯೇ ರಚಿಸಿದ ಒಂದು ಬಲೆ. ಕಂಕುಳ ಕೂದಲು ಸಹ ಈ ಬಲೆಯ ಒಂದು ಎಳೆ.

ಪುರುಷ ದೇಹದ ಟೆಸ್ಟೋಸ್ಟಿರಾನ್ (testosterone) ಹಾಗೂ ಹೆಣ್ಣು ದೇಹದ ಆಂಡ್ರೋಜೆನ್‌ಗಳು (Androgen) ಲೈಂಗಿಕ ಹಾರ್ಮೋನ್‌ಗಳು. ಹಲವು ಅಧ್ಯಯನಗಳಲ್ಲಿ ಕಂಡುಂದ ಅಂಶವೆಂದರೆ, ಇದರ ಮಟ್ಟ ಯಾವಾಗ ದೇಹದಲ್ಲಿ ಹೆಚ್ಚಾಗಿರುತ್ತದೇ ಆಗ ದೇಹ ಲೈಂಗಿಕ ಕ್ರಿಯೆಗೆ ಸಜ್ಜಾಗಿರುತ್ತದೆ ಎಂದರ್ಥ. ಹೆಣ್ಣಿನ ದೇಹದಲ್ಲಿ ಇದು ಪೀರಿಯೆಡ್ಸ್ ಅವಧಿಯ ಮಧ್ಯದಲ್ಲಿರುತ್ತದೆ. ಇಂಥ ಸಂದರ್ಭದಲ್ಲಿ ದೇಹದ ಪರಿಮಳವೂ ಹೆಚ್ಚು ಹಾಗೂ ಅದು ವಿರುದ್ಧ ಲಿಂಗಿಯನ್ನು ಆಕರ್ಷಿಸುವ ಸಾಧ್ಯೆತೆಯೂ ಅಧಿಕ, ಪ್ರಾಣಿಗಳಲ್ಲೂ ಕೆಲಸ ಮಾಡುವುದು ಇದೇ ದೇಹಧರ್ಮವೇ.

C Section ಆದ ಎಷ್ಟು ದಿನದ ನಂತರ ದೈಹಿಕ ಸಂಬಂಧ ಬೆಳೆಸಿದರೆ ಓಕೆ?

ಕಂಕುಳ ಕೂದಲ ಇನ್ನೊಂದು ಉಪಯೋಗವೆಂದರೆ ಅದು ಚರ್ಮ- ಚರ್ಮದ ನಡುವಿನ ಘರ್ಷಣೆಯನ್ನು ಕಡಿಮೆ ಮಾಡುತ್ತದೆ. ಓಡುವಾಗ, ವಾಕಿಂಗ್ ಮಾಡುವಾಗ, ಆಡುವಾಗ ಉಂಟಾಗುವ ಚರ್ಮದ ಚಕಮಕಿಯ ನಡುವೆ ಇದು ಕುಷನ್‌ನಂತೆ ವರ್ತಿಸುತ್ತದೆ. ಇದೇ ಮಾತು ತೊಡೆ ಸಂದಿಯ ಕೂದಲಿಗೂ ಅನ್ವಯ. ಅದು ಕೂಡ ಎರಡು ಜೀವಿಗಳ ನಡುವೆ ನಡೆಯುವ ಲೈಂಗಿಕ ಘರ್ಷಣೆಯ ಸಂದರ್ಭದಲ್ಲಿ ಚರ್ಮಗಳು ತಿಕ್ಕಾಡಿಕೊಂಡು ತರಚಿದ ಗಾಯವಾಗದಂತೆ ನೋಡಿಕೊಳ್ಳುತ್ತದೆ.

ಹಾಗಂತ ಕಂಕುಳ ಕೂದಲನ್ನು ತೆಗೆಯಬಾರದೇ? ತೆಗೆಯಬಹುದು. ಕೆಲವರು ಕಂಕುಳ ಕೂದಲನ್ನು ಇಷ್ಟಪಡುವುದಿಲ್ಲ. ಚರ್ಮದ ನೋಟವನ್ನು ಇಷ್ಟಪಡುತ್ತಾರೆ, ಸಂಗಾತಿಯ ಮೈಯಲ್ಲೂ ಹೆಚ್ಚಿನ ರೋಮವನ್ನು ಕೆಲವರು ಇಷ್ಟಪಡುವುದಿಲ್ಲ. ಹಾಗಿದ್ದರೆ ಕಂಕುಳ ಕೂದಲನ್ನು ತೆಗೆಯುವುದರಿಂದ ಲಾಭವೇನು?

ಮೊದಲ ಪ್ರಯೋಜನವೆಂದರೆ, ಕಡಿಮೆ ಬೆವರುವುದು. ಹೆಚ್ಚು ಬೆವರುವವರು ಕೂದಲನ್ನು ತೆಗೆಯುವುದು ಬೆಸ್ಟು. ಯಾಕೆಂದರೆ ಕೂದಲುಗಳು ಬೆವರನ್ನು ತುಂಬ ಕಾಲ ಹಿಡಿದಿಡುವುದರಿಂದ, ಅಂಗಿಯಲ್ಲಿ ಬೆವರಿನ ಕಲೆಗಳಾಗಿಬಿಡುತ್ತವೆ. ಇದರಿಂದ ಪಾರಾಗಬಹುದು. ಎರಡನೇ ಲಾಭ, ದೇಹದ ವಾಸನೆಯನ್ನು ಕಡಿಮೆ ಮಾಡುವುದು. ಕೆಲವರು ಸಾಮಾನ್ಯಕ್ಕಿಂತ ಅಧಿಕ ಮೈ ವಾಸನೆ ಹೊಂದಿರುತ್ತಾರೆ, ಇವರು ಕೂದಲು ತೆಗೆಯುವುದು ವಾಸಿ.

Unmarried Couplesಗೆ ಇವೆಲ್ಲಾ ಗೊತ್ತಿದ್ದರೆ, ಲೈಫಲ್ಲಿ ಯಡವಟ್ಟಾಗೋಲ್ಲ!
 

 

click me!