ವಿಶ್ವ ಅಪ್ಪಂದಿರ ದಿನ: ನಿನ್ನಂಥೋರ್ ಯಾರೂ ಇಲ್ವಲ್ಲೋ..!

By Kannadaprabha NewsFirst Published Jun 18, 2023, 1:03 PM IST
Highlights

ನಿಂಗೆ ಅಪ್ಪ ಹೆಚ್ಚೋ ಅಮ್ಮ ಹೆಚ್ಚೋ ಎಂದು ಮಕ್ಕಳ ಹತ್ತಿರ ಕೇಳುವುದುಂಟು. ಈ ಪ್ರಶ್ನೆಗೆ ಸಾರ್ವಜನಿಕವಾಗಿ ಸಮಸ್ತರೂ ಅಮ್ಮ ಅಂತಲೇ ಹೇಳಬಹುದು. ಆದರೆ ಅಪ್ಪ ಒಂದು ಕೈ ಹೆಚ್ಚು ಅಂತ ಕ್ರಮೇಣ ಅನ್ನಿಸುತ್ತಾ ಹೋಗುತ್ತದೆ. ವಯಸ್ಸಾಗುತ್ತಾ ಆಗುತ್ತಾ ಅಪ್ಪನ ಅಕ್ಕರೆ, ಜವಾಬ್ದಾರಿ, ಕಷ್ಟ, ಯಾತನೆ ಎಲ್ಲವೂ ಅರ್ಥವಾಗುತ್ತಾ ಹೋಗುತ್ತದೆ. ಹೆಣ್ಮಕ್ಕಳಿಗೆ ಅದು ಇನ್ನೂ ಬೇಗ ಅರ್ಥವಾಗುತ್ತದೆ. ಹೀಗಾಗಿಯೇ ಅಪ್ಪನ ದಿನವೆಂದರೆ ಭಾವನಾತ್ಮಕ ದಿನ. ಇಲ್ಲಿ ಅನೇಕರು ಅಪ್ಪನ ಜತೆಗಿನ ಬಾಂಧವ್ಯವನ್ನು ನೆನಪಿಸಿಕೊಂಡಿದ್ದಾರೆ.

ನೀನು ನೀನಾಗಿರು ಎಂದು ಹೇಳಿಕೊಟ್ಟ ಅಪ್ಪ
- ನಿವೇದಿತಾ ಶಿವರಾಜ್ ಕುಮಾರ್, ನಿರ್ಮಾಪಕಿ

ನನ್ನ ಅಪ್ಪ ಚಿತ್ರರಂಗದಲ್ಲಿ ತುಂಬಾ ಬ್ಯುಸಿ. ಆದರೂ ನನ್ನ ದಿನಾ ಶಾಲೆಗೆ ಅವರೇ ಡ್ರಾಪ್ ಮಾಡುತ್ತಿದ್ದರು. ಶೂಟಿಂಗ್ ಮುಗಿಸಿಕೊಂಡು ತಡ ರಾತ್ರಿ ಮನೆಗೆ ಬಂದರೂ ಅವರೇ ನನ್ನ ಕೂರಿಸಿಕೊಂಡು ಓದಿಸುತ್ತಿದ್ದರು. 10ನೇ ತರಗತಿವರೆಗೂ ನನ್ನ ಅಪ್ಪನೇ ನನಗೆ ಮನೆಯಲ್ಲಿ ಟೀಚರ್ ಆಗಿದ್ದರು. ಶಾಲೆಗೆ ರಜಾ ದಿನಗಳು ಬಂದರೆ ಪ್ರತಿ ವರ್ಷ ನನ್ನ ಇಷ್ಟದ ಜಾಗಗಳಿಗೆ ಕುಟುಂಬ ಸಮೇತ ಪ್ರವಾಸ ಕರೆದುಕೊಂಡು ಹೋಗುತ್ತಿದ್ದರು. ಮಗಳಿಗೆ ಅಪ್ಪನೇ ಮೊದಲ ಬೆಸ್ಟ್ ಫ್ರೆಂಡ್ ಅಂತಾರಲ್ಲ, ಅದನ್ನು ನಾನು ಜೀವನದಲ್ಲಿ ಕಂಡಿದ್ದೇನೆ.

ಯಾವುದಕ್ಕೂ ಫೋರ್ಸ್ ಮಾಡಿದವರಲ್ಲ. ನೀನು ಹೀಗೇ ಇರಬೇಕು, ಇಂಥದ್ದೇ ಓದಬೇಕು, ಇಷ್ಟೇ ಮಾರ್ಕ್ಸ್ ತೆಗೆದುಕೊಳ್ಳಬೇಕು ಎಂದು ಒತ್ತಡ ಹಾಕಿದವರಲ್ಲ. ನಿರ್ಮಾಪಕಿಯಾಗಿ ಸಿನಿಮಾ ಕ್ಷೇತ್ರಕ್ಕೆ ಬರುವುದಕ್ಕೂ ಅಪ್ಪನೇ ಸ್ಫೂರ್ತಿ. ಜೀವನದಲ್ಲಿ ಶಿಸ್ತು ಇರಲಿ, ಯಾರನ್ನೂ ಕಾಯಿಸಬಾರದು. ಟೈಮ್ ಫಾಲೋ ಮಾಡು... ಇದಿಷ್ಟು ನನ್ನ ತಂದೆ ನನಗೆ ಹೇಳಿಕೊಟ್ಟಿದ್ದು. ನಿರ್ಮಾಪಕಿಯಾಗಿ ಬರುತ್ತೇನೆ ಎಂದಾಗ ಹೇಳಿದ್ದು ಎರಡೇ ಮಾತು, ಒಳ್ಳೆಯ ಕತೆ ಮತ್ತು ಒಳ್ಳೆಯ ಸ್ಕ್ರಿಪ್ಟ್‌ಗೆ ಮಹತ್ವ ಕೊಡು ಅಂತ. ನನ್ನ ನಿರ್ಮಾಣದ ‘ಫೈರ್​ ಫ್ಲೈ’ ಚಿತ್ರದ ಕತೆಯನ್ನು ನಾನು ಮತ್ತು ನನ್ನ ತಂದೆ ಒಟ್ಟಿಗೆ ಕೂತು ಕೇಳಿದ್ದು ಮರೆಯಲಾಗದ ಇತ್ತೀಚಿನ ಘಟನೆ. ‘ನೀನು ನೀನಾಗಿರು’ ಎಂದು ಹೇಳಿಕೊಟ್ಟ ಅಪ್ಪನಿಗೆ ಹ್ಯಾಪಿ ಫಾದರ್ಸ್ ಡೇ.

--------------

ಕಾಂಪಿಟೀಶನ್‌ನಲ್ಲಿ ಗೆದ್ರೆ ಅಪ್ಪ ಮಸಾಲೆ ದೋಸೆ ಕೊಡಿಸ್ತಿದ್ರು
- ಶಶಾಂಕ್‌ ಸೋಗಲ್‌, ಡೇರ್‌ ಡೆವಿಲ್‌ ಮುಸ್ತಾಫಾ ನಿರ್ದೇಶಕ

ತಂದೆ ಹೆಸರು ಶ್ರೀನಿವಾಸನ್‌. ಬಿಎಸ್‌ಎನ್‌ಎಲ್‌ ರಿಟೈರ್ಡ್‌ ಎಂಜಿನಿಯರ್‌. ಅವರಿಂದಲೇ ನನಗೆ ಬಣ್ಣದ ಲೋಕಕ್ಕೆ ಎಂಟ್ರಿ ಸಿಕ್ಕಿರೋದು. ಈಗ ಮೈಸೂರಲ್ಲಿ ಡೇರ್‌ ಡೆವಿಲ್‌ ಮುಸ್ತಾಫಾ ಸಿನಿಮಾದ ಪ್ರತೀ ಶೋಗೂ ಅವರು ಹೋಗ್ತಾರೆ. ಸಿನಿಮಾ ನೋಡಿ ಪ್ರೋತ್ಸಾಹಿಸಿ ಅಂತ ಪ್ರೇಕ್ಷಕರಲ್ಲಿ ಕೇಳ್ಕೊಳ್ತಾರೆ. ನನಗೆ ಮುಜುಗರ ಅನಿಸಿ ಒಂದೊಂದು ಸಲ ಬೈತೀನಿ. ಆದ್ರೆ ಅವರು ಮಾತ್ರ ತಲೆ ಕೆಡಿಸಿಕೊಳ್ಳದೇ ನೆಕ್ಸ್ಟ್‌ ಶೋಗೂ ಹೋಗಿ ಮಾತಾಡ್ತಾರೆ.

ತಂದೆ ಮಗನ ಸಂಬಂಧ ಒಂಥರಾ ವಿಚಿತ್ರ. ಮೇಲ್‌ ಇಗೋ ಮೀರೋದು ಇಬ್ಬರಿಗೂ ಕಷ್ಟ. ಆದರೆ ಇಬ್ಬರ ನಡುವೆ ಒಂದು ಹೊಂದಾಣಿಕೆ ಇರುತ್ತೆ. ನನ್ನ ಸಿನಿಮಾ ಬಂದು ಇಷ್ಟು ಸಮಯ ಆಯ್ತು. ಇವತ್ತಿನವರೆಗೂ ಅಪ್ಪ ನೀನು ಮಾಡಿರೋ ಸಿನಿಮಾ ಚೆನ್ನಾಗಿದೆ ಅಂತ ನನ್ನ ಹತ್ರ ಹೇಳಿಲ್ಲ. ಆದರೆ ನನ್ನ ಹೆಂಡ್ತಿ ಹತ್ರ ಹೇಳ್ತಿರ್ತಾರೆ. ನಾನು ಬೆಳೆದದ್ದು ಮೈಸೂರಲ್ಲಿ. ಆಗ ಅಪ್ಪನ ಹತ್ರ ಟಿವಿಎಸ್‌ 50 ಗಾಡಿ ಇತ್ತು. ಪ್ರತೀ ಭಾನುವಾರ ಅದರಲ್ಲಿ ಕೂರಿಸಿಕೊಂಡು ಸಂಗೀತ, ಮಿಮಿಕ್ರಿ, ದೇವರ ನಾಮ ಇತ್ಯಾದಿ ಕಾಂಪಿಟೀಶನ್‌ಗೆ ಕರ್ಕೊಂಡು ಹೋಗೋರು. ಗೆದ್ದರೆ ಮಸಾಲೆ ದೋಸೆ ಗ್ಯಾರಂಟಿ.

ಈಗ ನನಗೂ ಮಗಳಿದ್ದಾಳೆ. ನನ್ನ ಬಾಲ್ಯವನ್ನೂ ಅವಳ ಬಾಲ್ಯವನ್ನೂ ರಿಲೇಟ್‌ ಮಾಡ್ತಾ ಇರ್ತೀನಿ. ಅಪ್ಪ ನಮ್ಮ ಇಡೀ ಬದುಕು ರೂಪಿಸೋದಕ್ಕೆ ಅಷ್ಟು ಸಮಯ ಕೊಟ್ಟಿದ್ದಾರೆ. ನಂಗೆ ಹಾಗೆಲ್ಲ ಸಮಯ ಕೊಡಕ್ಕಾಗ್ತಿಲ್ಲ. ಪ್ರತೀ ಭಾನುವಾರ ನನ್ನನ್ನು ಕಾಂಪಿಟೀಶನ್‌ಗೆ ಕರ್ಕೊಂಡು ಹೋಗಬೇಕಾದರೆ ಅವರು ಏನನ್ನೆಲ್ಲ ಸಾಕ್ರಿಫೈಸ್‌ ಮಾಡಿರ್ತಾರಲ್ಲ.. ಅದೇ ಈಗ ನಾನು ನನ್ನ ಮಗಳನ್ನು ಕಾಂಪಿಟೀಶನ್‌ಗೆ ಕರೆದುಕೊಂಡು ಹೋಗಬೇಕು ಅಂದ್ರೆ ಹತ್ತು ಸಲ ಯೋಚನೆ ಮಾಡ್ತೀನಿ. ಅಪ್ಪ ಹಾಗೆಲ್ಲ ಯೋಚಿಸಿದವರೇ ಅಲ್ಲ. ಅಲ್ಲೇ ಅವರ ಗ್ರೇಟ್‌ನೆಸ್‌ ಇತ್ತು ಅನಿಸುತ್ತೆ.

------------

ಸಂಗೀತವೆಂಬ ಖುಷಿಯನ್ನು ಕೊಟ್ಟವರು ನನ್ನಪ್ಪ
- ಸಂಜಿತ್‌ ಹೆಗ್ಡೆ, ಗಾಯಕ

ನನ್ನ ಅಪ್ಪನ ಹೆಸರು ಗಣೇಶ್ ಹೆಗ್ಡೆ. ನಾನು ಚಿಕ್ಕವನಾಗಿದ್ದಾಗ ಅಪ್ಪ ಪ್ರತಿದಿನ ಸುಮಾರು ಎಂಟು ಗಂಟೆಗೆ ಆಫೀಸಿನಿಂದ ಮನೆಗೆ ಬರುತ್ತಿದ್ದರು. ಬಂದವರೇ ದೇವರ ಕೋಣೆಯ ಮುಂದೆ ಕುಳಿತು ಖುಷಿಯಿಂದ ಹಾಡುತ್ತಿದ್ದರು. ಆ ಕ್ಷಣಗಳು ಅವರು ನನ್ನ ಬದುಕಿಗೆ ಕೊಟ್ಟ ದೊಡ್ಡ ಕೊಡುಗೆ. ಅವರ ಖುಷಿಯನ್ನು ನಾನು ನನ್ನದಾಗಿಸಿಕೊಳ್ಳುತ್ತಾ ಬಂದೆ. ಸಂಗೀತ ಅನ್ನುವುದು ಖುಷಿ ಎಂಬುದು ಅವರಿಂದ ಕಲಿತೆ. ಅಷ್ಟು ಪ್ರೀತಿಯಿಂದ ಅವರು ಹಾಡುತ್ತಿದ್ದರು. ಹಾಗಾಗಿಯೇ ನಾನು ಸಂಗೀತವನ್ನು ಪ್ರೀತಿಸಿದೆ. ಅವರಿಂದಲೇ ಸಂಗೀತವನ್ನು ನನ್ನದಾಗಿಸಿಕೊಳ್ಳುವುದನ್ನು ಕಲಿತೆ. ಯಾರೇ ಅಪ್ಪ ಅಮ್ಮ ಏನನ್ನು ಖುಷಿಯಿಂದ ಮಾಡುತ್ತಾರೋ ಮಕ್ಕಳೂ ಅದರಿಂದ ಖುಷಿ ಪಡುತ್ತಾರೆ ಅನ್ನಿಸುತ್ತದೆ.

ನನ್ನ ಅಪ್ಪ ಯಾವತ್ತೂ ನನ್ನನ್ನು ಕಟ್ಟಿ ಹಾಕಲಿಲ್ಲ. ಯಾವುದಕ್ಕೂ ಅಡ್ಡಿ ಪಡಿಸಲಿಲ್ಲ. ಸಂಪೂರ್ಣ ಸ್ವಾತಂತ್ರ್ಯವನ್ನು ಕೊಟ್ಟರು. ಇವತ್ತಿಗೂ ನಾನು ಏನೇ ಮಾಡಿದರೂ ಅಪ್ಪ, ಅಮ್ಮನ ಬಳಿ ಹೇಳುತ್ತೇನೆ. ಯಾವುದನ್ನೂ ಮುಚ್ಚುಮರೆ ಮಾಡುವುದಿಲ್ಲ. ಅಷ್ಟರ ಮಟ್ಟಿಗೆ ಅವರು ನನಗೆ ಎಲ್ಲವನ್ನೂ ಕೊಟ್ಟಿದ್ದಾರೆ. ಅಪ್ಪನಿಂದ ನಾನು ಕಲಿತಿದ್ದು ಸಾಕಷ್ಟು. ಅವರ ಪ್ರೀತಿಯೇ ನನ್ನನ್ನು ಕೈಹಿಡಿದು ನಡೆಸುತ್ತಿದೆ.

---------------

ಗಿಡ ಮರ ಬೆಳೆಸಕೆ ದುಡ್ಡಿನ ಮುಖ ನೋಡ್ತಾರೇನವ್ವ ಅಂದ್ರು ಅಪ್ಪಾಜಿ
- ನಂದಿನಿ ಹೆದ್ದುರ್ಗ

''ವಿಮಾನ ಇಳ್ದು ಸೀದಾ ಬಲಕ್ ತಿರುಗಿದ್ರೆ ಎಲ್ಲಿಗೆ ಬೇಕು ಅಲ್ಲಿಗೆ ಬಸ್ ಸಿಕ್ತವೆ. ಕಾರ್ ಗೀರಿಗೆ ದುಡ್ಡು ದಂಡ ಮಾಡಬೇಡಿ''.
''ಆಯ್ತಪ್ಪಾಜಿ''.
''ದಾರಿಗೆ ಮೊಸರನ್ನ ಮಾಡ್ಕಳಿ. ಹೊರಗಡೆ ತಿಂದ್ರೆ ಒಂದಕ್ಕೆ ಎರಡು ದುಡ್ಡು. ದುಡಿದಿದ್ದೆಲ್ಲ ಈ ನನ್ ಮಕ್ಳು ಮೆಡಿಕಲ್ ಸ್ಟೋರಿನವ್ರ ಪಾರಿನ್ ಟೂರಿಗೇ ಆಯ್ತು''.
''ಹಂಗ್ಯಾಕಂತೀರಾ ಅಪ್ಪಾಜಿ…ನಮ್ ದರ್ದು ಅದು''.
ಈ ಮಾತಿಗೆ ಒಂದಿಡೀ ದಿನ ಮುಖ ದುಮ್ಮಿಸಿಕೊಂಡು ಕೂರುವುದು ಗ್ಯಾರಂಟಿ.
''ಅಲ್ಲಿಂದ ಬರಬೇಕಾದ್ರೆ ಲಿಲ್ಲಿ ಹೂವಿನ ಗೆಡ್ಡೆ ತಗೊಬರ್ತಿಯಾ''.
''ಹು ಅಪ್ಪಾಜಿ, ಆದರೆ ವಿಪರೀತ ದುಬಾರಿ ಅದು''.
''ತೊ ತೋ...ಗಿಡ ಮರ ಬೆಳೆಸಕೆ ದುಡ್ಡಿನ ಮುಖ ನೋಡ್ತರೇನವ್ವಾ''.
''ನಿಮಗೊಂದು ಶರ್ಟ್ ತಗೋ ಬಾ ಅಂದಿತ್ತು ಅಮ್ಮ…''
''ಇಡೀ ಬೀರು ತುಂಬ ಶರ್ಟ್ ಇದವಲ್ಲೆ ತಾಯಿ ನಂಗೆ''.

ನಮ್ಮ ಕಾಲದ ಅಪ್ಪಂದಿರೆಲ್ರೂ ಹೀಗೇನಾ ಅಥವಾ ನನ್ ಅಪ್ಪಾಜಿ ಮಾತ್ರ ಹೀಗಾ ಎನಿಸುವಂತ ಕೆಲಸಗಳನ್ನು ಅಪ್ಪ ಮಾಡುತ್ತಲೇ ಇರ್ತಾರೆ. ತೋಟದ ಉಸ್ತುವಾರಿಗೆ ಹಣ ನೀರಿನಂತೆ ಖರ್ಚು ಮಾಡುವ ಅಪ್ಪ ಒಂದು ಜೊತೆ ಚಪ್ಪಲಿ ಮೂರು ವರ್ಷ ಬರದಿದ್ರೆ ಅಂಗಡಿಯವನಿಗೆ ಮೂರು ತಲೆಮಾರಿಗಾಗುವಷ್ಟು ಬೈಗುಳ ತಲುಪಿಸ್ತಾರೆ.

ಎಪ್ಪತ್ತರ ದಶಕದಲ್ಲೇ ಬೆಂಗಳೂರಿನ ಲಾಲ್‌ಬಾಗ್‌ನಿಂದ ಗುಲಾಬಿ ಕ್ರೋಟಾನುಗಳನ್ನು ಖರೀದಿಸಿ ತಂದಿದ್ದು, ತಾಲೂಕಿನಲ್ಲೇ ಮೊದಲ ಬಾರಿಗೆ ರೇಷ್ಮೆ ಬೆಳೆ ಬೆಳೆದು ಯಶಸ್ವಿ ಬೆಳೆಗಾರ ಎನಿಸಿಕೊಂಡಿದ್ದು ನನ್ನ ಅಪ್ಪನಿಂದ ಮಾತ್ರ ಸಾಧ್ಯ. ಒಂದು ಎಲೆ ಹರಿಯುವ ಮುನ್ನ, ಒಂದು ಕಲ್ಲು ಒಗೆಯುವ ಮುನ್ನ ಅಪ್ಪ ಹೇಳಿಕೊಟ್ಟ ಪ್ರಕೃತಿಯ ಪಾಠ ಜೀವಕ್ಕೆ ಎಚ್ಚರಿಕೆ ಕೊಡ್ತದೆ. ಮಣ್ಣು, ಮರ, ನದಿ, ಗಾಳಿ, ಬೆಳಕು ಎಲ್ಲವೂ ದೇವರೇ ಎನ್ನುವ ಅಪ್ಪನೆತ್ತರಕ್ಕೆ ನಾ ಬೆಳೆಯಬೇಕು ಎನ್ನುವ ಸತ್ಯ ಅರಿವಾಗ್ತದೆ.

-----------------

ಅಪ್ಪಾ ಎಂದರೆ ದಿವ್ಯ ತೇಜಸ್ಸು

-ದಿಶಾ ರಮೇಶ್‌, ನಟಿ, ಗಾಯಕಿ

ಪ್ಪಾ ಎಂದರೆ ತೇಜಸ್ಸು. ಅಪ್ಪ ಎಂದರೆ ಪ್ರೀತಿ, ಅಪ್ಪ ಎಂದರೆ ಗೌರವ, ಅಪ್ಪ ಎಂದರೆ ಪಾಸಿಟಿವ್‌ ಮನಸ್ಸು ನನ್ನಪ್ಪ ಯಾವುದೇ ಕ್ಷಣದಲ್ಲೂ ಧೃತಿಗೆಡದೆ ನಡೆದವರು. ಎಂಥಾ ತೊಂದರೆ ಎದುರಾದರೂ ಎದುರಿಸಿ ಮುಂದೆ ನಡೆದವರು. ತೊಂದರೆಗಳು ಬರುವುದೇ ಎದುರಿಸಲಿಕ್ಕೆ ಎಂದು ನಂಬಿಕೊಂಡವರು.

ಬೇರೆ ಪೋಷಕರು ನಮ್ಮ ಕಷ್ಟ ಮಕ್ಕಳಿಗೆ ಗೊತ್ತಾಗಬಾರದು ಎಂದುಕೊಂಡರೆ ನನ್ನಪ್ಪ ಮಾತ್ರ ನನ್ನೆಲ್ಲಾ ಕಷ್ಟಗಳಿಗೆ ಗೊತ್ತಾಗಲಿ, ಅದರಿಂದ ಅವಳು ಕಲಿಯಲಿ ಎಂದು ಹೇಳಿದರು. ಚಿಕ್ಕಂದಿನಿಂದಲೇ ಜಾತಿ, ಧರ್ಮ ಮೀರಿ ನಡೆಯುವಂತೆ ತಿಳಿಸಿದರು. ಮನುಷ್ಯತ್ವದೊಡ್ಡದು ಎಂಬುದನ್ನು ಕಲಿಸಿಕೊಟ್ಟರು. ಅವರು ತೋರಿಸಿದ ದಾರಿಯಲ್ಲೇ ನಡೆಯುತ್ತಿದ್ದೇನೆ.

ನನ್ನಪ್ಪ ನನಗೆ ಎಡವಲು ಬಿಟ್ಟರು: ತಪ್ಪು ಮಾಡಲು ಅವಕಾಶ ಕೊಟ್ಟರು. ಮತ್ತದೇ ತಪ್ಪು ಮಾಡಿ ನೋಯದಿರುವ ಮಾರ್ಗ ತೋರಿಸಿದರು. ಪ್ರತೀ ಕ್ಷಣ ಅವರು ತಮ್ಮ ಸುತ್ತಲಿನ ವಾತಾವರಣವನ್ನು ಖುಷಿಯಿಂದ ಇರುವಂತೆ ನೋಡಿಕೊಳ್ಳುತ್ತಾರೆ, ಜನರ ಜೊತೆ ಬೆರೆತು ಸಂತೋಷ

ಹಂಚುತ್ತಾರೆ. ಖಷಿಯನ್ನು, ಕಲೆ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ದಾಟಿಸಲು ನಟನೆ ಶಾಲೆಯನ್ನು ಕಟ್ಟಿದರು. ಅದಕ್ಕೆ ತಮ್ಮ ಸರ್ವಸ್ವವನ್ನೂ ಧಾರೆ ಎರೆದರು. 'ನಟನ' ಎಂದರೆ ಅವರ ಕಣ್ಣು, ಉಸಿರು ಎಂಬಂತೆ ನಡೆದುಕೊಂಡರು. ಯಾರು ಏನೇ ಕೇಳಿದರೂ ಇಲ್ಲ ಎಂದವರಲ್ಲ. ಮನಸಿನಿಂದ ಕೊಡುವವರು ನಾವು ಕೊಡದವರಾಗಿರಬೇಕೇ ಹೊರತು ಪಡೆದುಕೊಳ್ಳುವ ಥರ ಇರಬಾರದು ಎಂಬ ಮನಸುಳ್ಳವರು.

ಅವನ ಉತ್ಸಾಹ ಯಾವತ್ತೂ ಬತ್ತಲಾರದ್ದು, ಅವರಿಗಿರುವ ಹುಮ್ಮಸ್ಸು ಅವರ ವಯಸ್ಸಲ್ಲಿ ನನಗೂ ಇರಲಿ ಎಂಬುದೇ ನನ್ನ ಹಂಬಲ, ಅವರ ಎಲ್ಲಾ ಕನಸು ನನಸಾಗಲಿ ಅನುವುದೇ ನನ್ನ ಪ್ರಾರ್ಥನೆ.

click me!