#Feelfree: ಮಗಳು ನನ್ನ ಹತ್ರಾನೇ ಬರೋಲ್ಲ, ಏನು ಮಾಡಲಿ?

By Suvarna NewsFirst Published Nov 24, 2020, 2:18 PM IST
Highlights

ಹೆಣ್ಣು ಮಗು ತಾಯಿ ಹತ್ರ ಬರ್ತಾನೇ ಇಲ್ವಂತೆ. ಅದಕ್ಕೇನು ಕಾರಣ, ಏನು ಪರಿಹಾರ?

ಪ್ರಶ್ನೆ: ನನ್ನ ವಯಸ್ಸು ಮೂವತ್ತೆರಡು ವರ್ಷ. ಮದುವೆಯಾಗಿ ಐದು ವರ್ಷವಾಗಿದೆ. ಒಬ್ಬಳು ಮಗಳಿದ್ದಾಳೆ. ಆಕೆಗೆ ಮೂರು ವರ್ಷ. ನಾನು ವರ್ಕಿಂಗ್ ವುಮನ್. ನನ್ನ ಗಂಡನಿಗೆ ಕೆಲಸವಿತ್ತು. ಕಲೆದ ಒಂದು ವರ್ಷದಿಂದ ಕೆಲಸ ಬಿಟ್ಟು ಹೋಮ್ ಮೇಕರ್ ಆಗಿದ್ದಾರೆ. ಆ ಬಗ್ಗೆ ನಮಗಿಬ್ಬರಿಗೂ ಸಂತೋಷವೇ ಇದೆ. ಆದರೆ ಸಮಸ್ಯೆ ಆಗಿರುವುದು ಮಗಳದ್ದು. ಇತ್ತೀಚೆಗೆ ಮಗಳು ನನ್ನ ಹತ್ತಿರವೇ ಬರುತ್ತಿಲ್ಲ. ಯಾವಾಗಲೂ ಅಪ್ಪನ ಜೊತೆಗೇ ಇರುತ್ತಾಳೆ. ಸ್ನಾನ ಮಾಡಿಸೋಕೆ, ಬಟ್ಟೆ ಬದಲಿಸೋಕೆ, ಊಟ ಮಾಡಿಸೋಕೆ- ಹೀಗೆ ಎಲ್ಲದಕ್ಕೂ ಅಪ್ಪನೇ ಇರಬೇಕು ಎಂದು ಅಪೇಕ್ಷಿಸುತ್ತಾಳೆ. ವಾರಕ್ಕೊಮ್ಮೆ ರಜೆಯಲ್ಲಿ ನಾನು ಮಗಳ ಈ ಕೆಲಸಗಳನ್ನು ಮಾಡಲು ಹೋದರೂ ಆಕೆ ನನ್ನನ್ನು ಹತ್ತಿರ ಸೇರಿಸುವುದೇ ಇಲ್ಲ. ಆದರೆ ಅಪ್ಪನ ಜೊತೆಗೆ ಸದಾ ಕಾಲ ಕಳೆಯಲು ಬಯಸುತ್ತಾಳೆ. ಹೆಣ್ಣು ಮಕ್ಕಳಿಗೆ ಅಪ್ಪ ಇಷ್ಟ ಎಂಬುದು ಗೊತ್ತು. ಆದರೆ ಅಮ್ಮನನ್ನು ತಿರಸ್ಕರಿಸುವಷ್ಟು ಇರುತ್ತದೆಯೇ? ನನಗಂತೂ ತುಂಬ ಸಂಕಟವಾಗುತ್ತಿದೆ. ಗಂಡನಲ್ಲಿ ಕೇಳಿದರೆ, ದೊಡ್ಡವಳಾದ ಮೇಲೆ ಸರಿಹೋಗುತ್ತಾಳೆ ಎನ್ನುತ್ತಾರೆ. ನಮಗೆ ಬೇರೆ ಮಕ್ಕಳಿಲ್ಲ. ಮಾಡಿಕೊಳ್ಳುವ ಆಸಕ್ತಿಯೂ ಇಲ್ಲ. ಏನು ಮಾಡಲಿ?

ಉತ್ತರ: ನಿಮ್ಮದೇನೂ ಅತ್ಯಂತ ಅಪರೂಪವಾದ ಸಮಸ್ಯೆ ಏನಲ್ಲ. ಇಂಥ ಸ್ಥಿತಿಯಲ್ಲಿರುವ ಅಪ್ಪ- ಅಮ್ಮಂದಿರು ಇರುತ್ತಾರೆ. ಗಂಡು ಮಕ್ಕಳು ಇರುವಲ್ಲಿ ಈ ಸಮಸ್ಯೆಯ ಇನ್ನೊಂದು ಮುಖ ಕಾಣಿಸುತ್ತದೆ. ಅಲ್ಲಿ ಗಂಡು ಮಕ್ಕಳು ಹಣ ಕೇಳುವುದಕ್ಕಷ್ಟೇ ಅಪ್ಪನೊಂದಿಗೆ ಸಂಬಂಧ ಸೀಮಿತಗೊಳಿಸಿ, ಉಳಿದದ್ದಕ್ಕೆಲ್ಲಾ ಅಮ್ಮನನ್ನು ಅವಲಂಬಿಸಿರುತ್ತಾರೆ. ಅವರೂ ತಂದೆಯ ಜೊತೆಗೆ ಹಾರ್ದಿಕ ಸಂಬಂಧವನ್ನು ಹೊಂದಿರುವುದಿಲ್ಲ. ನಿಮ್ಮ ಮಗಳಿಗೆ ಇನ್ನೂ ಮೂರು ವರ್ಷ ಅಂದಿರಲ್ಲವೇ. ಸಂಬಂಧಗಳ ಅರ್ಥ ಗೊತ್ತಾಗಲು ಇನ್ನೂ ನಾಲ್ಕಾರು ವರ್ಷಗಳು ಆಗಬೇಕು. ಅಮ್ಮ ಹೇಗೆ ಮುಖ್ಯ, ಅಮ್ಮನಿಂದ ತನಗೆ ಆಗುವ ಭಾವನಾತ್ಮಕ ಬೆಳವಣಿಗೆ ಏನು, ಇತ್ಯಾದಿಗಳು ಆ ಕೂಸಿಗೆ ಮುಂದೆ ಗೊತ್ತಾಗಬಹುದು. ಆಗ ಸರಿಹೋಗಬಹುದು.

ಪದೆ ಪದೇ ಲೈಂಗಿಕತೆ ಕನಸು ಬೀಳುತ್ತಿದೆಯೇ? ಇಲ್ಲಿದೆ ಕಾರಣಗಳು ...

ಆದರೆ ಹೀಗಾಗಬೇಕಾದರೆ ನಿಮ್ಮ ಪಾತ್ರವೂ ಇಲ್ಲಿ ಮುಖ್ಯ. ನೀವು ಇಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸುತ್ತಿರಬಹುದು- ಉದ್ಯೋಗಿ, ಗೃಹಿಣಿ, ಮನೆಗೆಲಸದವಳು ಮತ್ತು ಇದೆಲ್ಲದರ ಜೊತೆಗೆ ತಾಯಿ. ಕಚೇರಿ ಕೆಲಸ ಮುಗಿದ ಬಳಿಕ ಅಥವಾ ಕಚೇರಿಗೆ ತೆರಳುವ ಮುನ್ನ ತಾಯಿಯ ಪಾತ್ರ ನಿರ್ವಹಿಸಬೇಕಾದ್ದು ನಿಮ್ಮಲ್ಲಿ ಸಾಕಷ್ಟು ಒತ್ತಡವನ್ನೂ ಸೃಷ್ಟಿಸಿರಬಹುದು. ಆದರೆ ಅದೆಲ್ಲವನ್ನೂ ಮೀರಿ ನೀವು ಈ ಹಂತದಲ್ಲಿ ತಾಯಿಯಾಗಿ ಹೆಚ್ಚಿನ ಹೊಣೆ ನಿರ್ವಹಿಸಬೇಕಿದೆ. ಒಂದರಿಂದ ಆರು ವರ್ಷಗಳ ಅವಧಿಯ ಬಾಲ್ಯವು ಮಕ್ಕಳ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುವಂಥದು. ಆಗ ಮಕ್ಕಳು ರೂಪಿಸಿಕೊಂಡ ಸಂಬಂಧಗಳು, ವರ್ತನೆಗಳು, ಚಿಂತನೆಗಳು ಮುಂದೆ ಜೀವನರ್ಯಂತ ಶಾಶ್ವತವಾಗಿ ಉಳಿಯುತ್ತವೆ. ಹೀಗಾಗಿ ಈಗ ನೀವು ಹೆಚ್ಚು ಹೆಚ್ಚು ಮಗಳ ಜೊತೆಗೆ ಸಮಯ ಕಳೆಯಬೇಕು.

ವಿವಾಹಕ್ಕೂ ಮುನ್ನ ನೀವು ಮಾಡಿಸಲೇಬೇಕಾದ 8 ವೈದ್ಯಕೀಯ ಪರೀಕ್ಷೆಗಳಿವು..! ...

ಅದಕ್ಕಾಗಿ ಮಗಳ ಜೊತೆಗೆ ಇರುವ ಸಮಯವನ್ನು ಹೆಚ್ಚಾಗಿ ಸೃಷ್ಟಿಸಿಕೊಳ್ಳಿ. ಪತಿಗೆ ಈ ವಿಷಯವನ್ನು ಸ್ಪಷ್ಟವಾಗಿ ತಿಳಿಸಿ. ನಿಮ್ಮ ಪತಿಯನ್ನು ಇತರ ಕೆಲಸಗಳಿಗಾಗಿ ಮನೆಯಿಂದ ಹೊರಗೆ ಕಳುಹಿಸಿದರೂ ಸರಿ; ಹಾಗಂತ ಅಪ್ಪ- ಮಗಳ ನಡುವೆ ವಿರಸ ತಂದಿಕ್ಕಬೇಕು ಎಂಬುದು ಈ ಮಾತಿನ ಅರ್ಥವಲ್ಲ. ನಿಮ್ಮ ಮಗಲ ಜೊತೆಗೆ ಹೆಚ್ಚಿನ ಸಮಯ ಸೃಷ್ಟಿಸಿಕೊಳ್ಳಲು ನೀವು ಅನೇಕ ಇತರ ವಿಚಾರಗಳನ್ನು ಬಿಡಬೇಕಾದೀತು. ಸಹೋದ್ಯೋಗಿಗಳ ಜೊತೆಗಿನ ಮಾತುಕತೆಯ ಸಮಯ, ಔಟಿಂಗ್ ಇತ್ಯಾದಿ. ಆ ಸಮಯವನ್ನು ಮಗಳೊಂದಿಗೆ ಸದುಪಯೋಗಪಡಿಸಿಕೊಳ್ಳಿ. ಮಗಳಿಗೆ ಬೇಕು ಬೇಕಾದ ಅಡುಗೆ ಮಾಡಿಕೊಡಿ. ನಿತ್ಯವೂ ಮಾಡುವ ತಿಂಡಿಯನ್ನೇ ಬೇರೆ ಬೇರೆ ರುಚಿಯಲ್ಲಿ, ಬೇರೆ ಸ್ವರೂಪದಲ್ಲಿ ಮಾಡಿ ಕೊಟ್ಟರೆ ಮಕ್ಕಳು ಅದರತ್ತ ಆಕರ್ಷಿತರಾಗುತ್ತವೆ. ಜೊತೆಗೆ ಮಗಳಿಗೆ ಕತೆ ಹೇಳಿ, ಓದಿ ಹೇಳಿ. ಆಕೆಯನ್ನು ಸ್ನಾನ ಮಾಡಿಸಿ. ಆಗಾಗಲಾದರೂ ಹೊಸ ಬಟ್ಟೆ ಕೊಡಿಸಿ. ನೀವಿಬ್ಬರೇ ವಾಕಿಂಗ್ ಅಥವಾ ಶಾಪಿಂಗ್ ಹೋಗಿ. ಮಗಳ ಜೊತೆಗೆ ಹೊರ ಊರಿಗೆ ನೀವಿಬ್ಬರೇ ಹೋಗಿಬನ್ನಿ. ಹೀಗೆ ನಿಮ್ಮ ಮಗಳ ಮನಸ್ಸನ್ನು ನಿಮ್ಮ ಕಡೆಗೆ ತಿರುಗಿಸಿಕೊಳ್ಳಬಹುದು. ಅಪ್ಪನಷ್ಟೇ ಅಮ್ಮ ಕೂಡ ಮುಖ್ಯ, ಅಥವಾ ಅಪ್ಪನಿಗಿಂತಲೂ ಅಮ್ಮ ಹೆಚ್ಚು ಮುಖ್ಯ ಎಂಬುದು ಆಕೆಗೆ ಅರ್ಥವಾಗಲಿ.

#Feelfree: ಮದುವೆಯಾಗಿ ವರ್ಷವಾದರೂ ಆಕೆ ಬೆತ್ತಲಾಗಿಲ್ಲ ...

 

click me!