ಇನ್ನೂ ಮದುವೆ ಆಗಿಲ್ವಾ? ನೀವೋಬ್ಬರೇ ಅಲ್ಲ ಭಾರತದಲ್ಲಿ ಏರಿಕೆಯಾಗ್ತಿದೆ ಅವಿವಾಹಿತರ ಸಂಖ್ಯೆ, ಕಾರಣ ಇಲ್ಲಿದೆ

Published : Aug 01, 2026, 10:51 AM IST
Unmarried Population India

ಸಾರಾಂಶ

Unmarried Population India : ಭಾರತದಲ್ಲಿ ಅವಿವಾಹಿತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗ್ತಿದೆ. ಯಾವ ರಾಜ್ಯದಲ್ಲಿ ಅವಿವಾಹಿತರ  ಸಂಖ್ಯೆ ಹೆಚ್ಚಿದೆ, ಕಾರಣ ಏನು ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಅವಿವಾಹಿತರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ. ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ಪ್ರಕಟಿಸಿರುವ "ಯೂತ್ ಇನ್ ಇಂಡಿಯಾ" ವರದಿಯ ಪ್ರಕಾರ, 15 ರಿಂದ 29 ವರ್ಷದೊಳಗಿನ ಸುಮಾರು ಶೇಕಡಾ 23 ರಷ್ಟು ಯುವಕರು ಇನ್ನೂ ಮದುವೆಯಾಗಿಲ್ಲ. 2011ರಲ್ಲಿ ಈ ಪ್ರಮಾಣ ಶೇಕಡಾ 17.2 ರಷ್ಟಿತ್ತು.

ಅವಿವಾಹಿತರ ಸಂಖ್ಯೆಯಲ್ಲಿ ಹೆಚ್ಚಳ 

ಪುರುಷರಲ್ಲಿ ಈ ಪ್ರಮಾಣ ಶೇಕಡಾ 20.8 ರಿಂದ ಶೇಕಡಾ 26.1 ಕ್ಕೆ ಏರಿದೆ. ಮಹಿಳೆಯರಲ್ಲಿ ಶೇಕಡಾ 13.5 ರಿಂದ ಶೇಕಡಾ 19.9 ಕ್ಕೆ ಹೆಚ್ಚಾಗಿದೆ. ಇದು ಸಮಾಜದಲ್ಲಿ ನಡೆಯುತ್ತಿರುವ ಬದಲಾವಣೆಗಳ ಸ್ಪಷ್ಟ ಸೂಚನೆಯಾಗಿದೆ.

ಯಾವ ರಾಜ್ಯದಲ್ಲಿ ಎಷ್ಟು?

 ಅಂಕಿ ಅಂಶಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ ಮದುವೆಯಾಗದ ಯುವಕರ ಪ್ರಮಾಣ ಅತಿ ಹೆಚ್ಚಿದೆ. ಅಲ್ಲಿ ಶೇಕಡಾ 29.1 ರಷ್ಟು ಪುರುಷರು ಮದುವೆ ಆಗಿಲ್ಲ. ಉತ್ತರ ಪ್ರದೇಶದಲ್ಲಿ ಶೇಕಡಾ 26.7 ರಷ್ಟು, ದೆಹಲಿಯಲ್ಲಿ ಶೇಕಡಾ 26.5 ರಷ್ಟು ಮತ್ತು ಪಂಜಾಬ್ನಲ್ಲಿ ಶೇಕಡಾ 25ರಷ್ಟು ಯುವಕರು ಅವಿವಾಹಿತರಾಗಿದ್ದಾರೆ.

ಇನ್ನೊಂದೆಡೆ, ಕೇರಳದಲ್ಲಿ ಈ ಪ್ರಮಾಣ ಅತಿ ಕಡಿಮೆ ಇದೆ. ಶೇಕಡಾ 18.3 ರಷ್ಟು ಜನರು ಅವಿವಾಹಿತರು. ನಂತರದ ಸ್ಥಾನದಲ್ಲಿ ತಮಿಳುನಾಡಿದೆ. ತಮಿಳುನಾಡಿನಲ್ಲಿ ಶೇಕಡಾ 20.2 ರಷ್ಟು ಮಂದಿ ಅವಿವಾಹಿತರಿದ್ದಾರೆ. ಆಂಧ್ರ ಪ್ರದೇಶದಲ್ಲಿ ಶೇಕಡಾ 20.7 ರಷ್ಟು ಹಾಗೂ ಹಿಮಾಚಲ ಪ್ರದೇಶ ಶೇಕಡಾ 20.8 ರಷ್ಟು ಅವಿವಾಹಿತರಿದ್ದಾರೆ.

ಮದುವೆ ಮುಂದೂಡಲು ಕಾರಣ ಏನು?

ತಜ್ಞರ ಪ್ರಕಾರ, ಹೆಚ್ಚಿನ ಶಿಕ್ಷಣ, ಉತ್ತಮ ಉದ್ಯೋಗದ ಹುಡುಕಾಟ, ಆರ್ಥಿಕ ಸ್ಥಿರತೆಗೆ ಆದ್ಯತೆ ಹಾಗೂ ವೃತ್ತಿಜೀವನದ ಮೇಲೆ ಗಮನವೇ ಪ್ರಮುಖ ಕಾರಣಗಳಾಗಿವೆ. ಜೊತೆಗೆ ಬಾಲ್ಯವಿವಾಹಗಳ ಪ್ರಮಾಣವೂ ಗಣನೀಯವಾಗಿ ಕಡಿಮೆಯಾಗಿರುವುದು ಈ ಬದಲಾವಣೆಗೆ ಕಾರಣವಾಗಿದೆ.

ಕೆಲವು ರಾಜ್ಯಗಳಲ್ಲಿ ಮಹಿಳೆಯರಿಗಿಂತ ಪುರುಷರ ಸಂಖ್ಯೆ ಹೆಚ್ಚಿರುವುದರಿಂದ ಜೀವನ ಸಂಗಾತಿಯನ್ನು ಹುಡುಕುವುದು ಕಷ್ಟವಾಗುತ್ತಿದೆ. ಇದೂ ಮದುವೆ ತಡವಾಗಲು ಒಂದು ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ, ನಗರ ಪ್ರದೇಶಗಳಲ್ಲಿ ಸಾಮಾಜಿಕ ಮನೋಭಾವವೂ ಬದಲಾಗುತ್ತಿದೆ. ಮದುವೆಯೇ ಜೀವನದ ಏಕೈಕ ಗುರಿ ಎನ್ನುವ ಕಲ್ಪನೆಯಿಂದ ಹೊರಬಂದು, ವೈಯಕ್ತಿಕ ಆಯ್ಕೆ, ವೃತ್ತಿ, ಸ್ವಾತಂತ್ರ್ಯ ಮತ್ತು ಜೀವನಶೈಲಿಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ.

ಇದೇ ಪ್ರವೃತ್ತಿ ಮುಂದುವರಿದರೆ ಭಾರತದಲ್ಲಿ ಮುಂದಿನ ವರ್ಷಗಳಲ್ಲಿ ಮದುವೆಯಾಗುವ ಸರಾಸರಿ ವಯಸ್ಸು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೈಲಲ್ಲಿ ಕಡ್ಲೆಪುರಿ ಮಾರುವ 20 ವರ್ಷ ಚಿಕ್ಕವನ ಜೊತೆ 3 ಮಕ್ಕಳ ಅಮ್ಮನಿಗೆ ಲವ್: ಇಬ್ಬರ ಮದ್ವೆ ಮಾಡಿಸಿದ ಪತಿ
23 ವರ್ಷಗಳ ಸೆರೆಮನೆಗೆ ಮುಕ್ತಿ: ದನಗಳ ಕೊಟ್ಟಿಗೆಯಲ್ಲಿ ಸರಪಳಿಯಿಂದ ಬಂಧಿಯಾಗಿದ್ದ ವ್ಯಕ್ತಿ ಕೊನೆಗೂ ಅಮ್ಮನ ಮಡಿಲಿಗೆ