ಹೆಂಡ್ತಿಗೆ ಕೊನೆಗೂ ಅಧಿಕೃತವಾಗಿ ವಿಚ್ಚೇದನ ನೀಡಿದ ಮುಖ್ಯಮಂತ್ರಿ, ಪತ್ನಿಗೆ ಸಿಗೋ ಪರಿಹಾರವೆಷ್ಟು? ಕೋರ್ಟ್‌ ಹೇಳಿದ್ದೇನು

Published : Jul 31, 2026, 06:49 PM IST
Omar Abdullah Wife Payal

ಸಾರಾಂಶ

ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಓಮರ್ ಅಬ್ದುಲ್ಲಾ ಮತ್ತು ಅವರ ಪತ್ನಿ ಪಾಯಲ್ ಅಬ್ದುಲ್ಲಾ ಅವರಿಗೆ ಸುಪ್ರೀಂ ಕೋರ್ಟ್ ಅಧಿಕೃತವಾಗಿ ವಿಚ್ಛೇದನ ಮಂಜೂರು ಮಾಡಿದೆ. 17 ವರ್ಷಗಳಿಂದ ಪ್ರತ್ಯೇಕವಾಗಿಯೇ ಈ ಜೋಡಿ ವಾಸ ಮಾಡುತ್ತಿತ್ತು.

ನವದೆಹಲಿ (ಜು.31): ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ (Omar Abdullah) ಹಾಗೂ ಅವರ ಪತ್ನಿ ಪಾಯಲ್ ಅಬ್ದುಲ್ಲಾ ಅವರಿಗೆ ಸುಪ್ರೀಂ ಕೋರ್ಟ್ ಕೊನೆಗೂ ಅಧಿಕೃತ ವಿಚ್ಛೇದನ ಮಂಜೂರು ಮಾಡಿದೆ. ಕಳೆದ 17 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಈ ದಂಪತಿ, ಕೊನೆಗೆ ಪರಸ್ಪರ ಸಮ್ಮತಿಯೊಂದಿಗೆ ಪರಸ್ಪರರ ವಿರುದ್ಧ ದಾಖಲಿಸಿದ್ದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಲು ಒಪ್ಪಿಕೊಂಡ ನಂತರ ನ್ಯಾಯಾಲಯ ಈ ಆದೇಶ ನೀಡಿದೆ.

ಪ್ರಕರಣದ ವಿಚಾರಣೆ ವೇಳೆ ಓಮರ್ ಮತ್ತು ಪಾಯಲ್ ಇಬ್ಬರೂ ಪರಸ್ಪರ ಸಮ್ಮತಿಯಿಂದ ಪ್ರತ್ಯೇಕವಾಗಿ ವಾಸಿಸಲು ನಿರ್ಧರಿಸಿದ್ದಾರೆ ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ನ್ಯಾಯಪೀಠಕ್ಕೆ ತಿಳಿಸಿದರು. ತದನಂತರ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ನರಸಿಂಹ ಮತ್ತು ನ್ಯಾಯಮೂರ್ತಿ ಅಲೋಕ್ ಅರಾಧೆ ಅವರಿದ್ದ ಪೀಠವು ದಂಪತಿಯ ವಿಚ್ಛೇದನವನ್ನು ಮಂಜೂರು ಮಾಡಿದೆ.

ಪತ್ನಿ ಹಾಗೂ ಮಗನಿಗೆ ನೀಡಬೇಕಾದ ಜೀವನಾಂಶ ಎಷ್ಟು?

ವಿಚ್ಛೇದನ ಮಂಜೂರು ಮಾಡುವ ವೇಳೆ ನ್ಯಾಯಾಲಯವು ಜೀವನಾಂಶದ (Alimony) ಮೊತ್ತವನ್ನೂ ನಿಗದಿಪಡಿಸಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಆದೇಶದಂತೆ, ಓಮರ್ ಅಬ್ದುಲ್ಲಾ ಅವರು ತಮ್ಮ ಪತ್ನಿ ಪಾಯಲ್ ಅವರಿಗೆ ಪ್ರತಿ ತಿಂಗಳು 1.5 ಲಕ್ಷ ರೂಪಾಯಿ ಜೀವನಾಂಶ (Alimony/Maintenance) ನೀಡಬೇಕಾಗಿದೆ. ಇದರ ಜೊತೆಗೆ ಮಗನ ಶಿಕ್ಷಣ ಮತ್ತು ನಿರ್ವಹಣಾ ವೆಚ್ಚಕ್ಕಾಗಿ ಪ್ರತಿ ತಿಂಗಳು 60 ಸಾವಿರ ರೂಪಾಯಿ ಪಾವತಿಸುವಂತೆ ಕೋರ್ಟ್ ಸೂಚಿಸಿದೆ.

ಹೋಟೆಲ್‌ನಲ್ಲಿ ಶುರುವಾಗಿದ್ದ ಪ್ರೇಮಕಥೆ ವಿಚ್ಛೇದನದಲ್ಲಿ ಅಂತ್ಯ

ಮಾಧ್ಯಮ ವರದಿಗಳ ಪ್ರಕಾರ, ಓಮರ್ ಅಬ್ದುಲ್ಲಾ ಮತ್ತು ಪಾಯಲ್ ಅವರ ಮೊದಲ ಭೇಟಿ ದೆಹಲಿಯ ಪ್ರಸಿದ್ಧ ಒಬೆರಾಯ್ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ನಡೆದಿತ್ತು. ಅಲ್ಲಿ ಪರಿಚಯವಾಗಿ ಆಪ್ತರಾದ ಬಳಿಕ, ಇಬ್ಬರು ಸೆಪ್ಟೆಂಬರ್ 1994 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ, ವರ್ಷಗಳು ಕಳೆದಂತೆ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿ, ಮನಸ್ತಾಪ ತೀವ್ರಗೊಂಡ ಹಿನ್ನೆಲೆಯಲ್ಲಿ 2009 ರಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು. ತದನಂತರ 2011 ರಲ್ಲಿ ಓಮರ್ ಅಬ್ದುಲ್ಲಾ ತಾವು ಪತ್ನಿಯಿಂದ ಪ್ರತ್ಯೇಕಗೊಳ್ಳುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದರು.

ಫ್ಯಾಮಿಲಿ ಕೋರ್ಟ್ ಮತ್ತು ಹೈಕೋರ್ಟ್‌ನಿಂದ ಹಿನ್ನಡೆ

ಆರಂಭದಲ್ಲಿ ಓಮರ್ ಅಬ್ದುಲ್ಲಾ ಅವರು ಪತ್ನಿಯಿಂದ ಮಾನಸಿಕ ಕಿರುಕುಳ ಅಥವಾ 'ಕ್ರೂರತೆ' ಎದುರಿಸುತ್ತಿರುವುದಾಗಿ ಆರೋಪಿಸಿ ಕುಟುಂಬ ನ್ಯಾಯಾಲಯದಲ್ಲಿ (Family Court) ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಫ್ಯಾಮಿಲಿ ಕೋರ್ಟ್ ಈ ಆರೋಪವನ್ನು ಸಾಬೀತುಪಡಿಸಲು ಓಮರ್ ವಿಫಲರಾಗಿದ್ದಾರೆ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತ್ತು.

ಬಳಿಕ ಓಮರ್ ಅಬ್ದುಲ್ಲಾ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಡಿಸೆಂಬರ್ 2023 ರಲ್ಲಿ ದೆಹಲಿ ಹೈಕೋರ್ಟ್‌ನ ದ್ವಿಪೀಠವೂ ಸಹ ಫ್ಯಾಮಿಲಿ ಕೋರ್ಟ್ ತೀರ್ಪನ್ನು ಎತ್ತಿಹಿಡಿದು ಓಮರ್ ಅವರ ಅರ್ಜಿಯನ್ನು ತಿರಸ್ಕರಿಸಿತ್ತು. ಅಲ್ಲದೆ, ಪಾಯಲ್‌ಗೆ ತಿಂಗಳಿಗೆ 1.5 ಲಕ್ಷ ರೂ. ಜೀವನಾಂಶ ಹಾಗೂ ಮಗನಿಗೆ 60 ಸಾವಿರ ರೂ. ನೀಡುವಂತೆ ಆದೇಶಿಸಿತ್ತು. ಕೊನೆಗೆ ಓಮರ್ ಅಬ್ದುಲ್ಲಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಾಗ, ಇಬ್ಬರೂ ಪರಸ್ಪರ ಸಮ್ಮತಿಯಿಂದ ದಾವೆ ಹಿಂಪಡೆದಿದ್ದರಿಂದ ಸುಪ್ರೀಂ ಕೋರ್ಟ್ ಅಂತಿಮವಾಗಿ ವಿಚ್ಛೇದನವನ್ನು ಎತ್ತಿಹಿಡಿದಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Parenting: ಗಂಡು ಮಕ್ಕಳ ಬಗ್ಗೆ ಪ್ರತಿಯೊಬ್ಬ ಪೋಷಕರು ತಿಳಿದುಕೊಳ್ಳಬೇಕಾದ 5 ಪ್ರಮುಖ ಸತ್ಯಗಳಿವು!
ಕ್ಯಾನ್ಸರ್​ ರೋಗಿಗಳಿಗೆ ಚಿಕಿತ್ಸೆಗಿಂತಲೂ ಹೆಚ್ಚಾಗಿ ಬೇಕಿರೋದು ಏನೆಂದು ತೋರಿಸ್ತಿದೆ Amruthadhaare Serial