
ಸಿರಿಯಾದ ಅಂತರ್ ಯುದ್ಧದ ಸಂಗತಿ ಬಹಳಷ್ಟು ಮಂದಿಗೆ ತಿಳಿದಿದೆ. ಆದರೆ ದೂರದಲ್ಲಿ ಸುರಕ್ಷಿತ ಅಂತರದಲ್ಲಿ ಇದನ್ನೆಲ್ಲ ಓದುವ ನಮಗೆ ಜಗತ್ತಿನ ಅಲ್ಲಲ್ಲಿ ನಡೆಯುವ ಇತರ ಅಂತರ್ ಯುದ್ಧಗಳಂತೆ ಇದೂ ಒಂದು. ಜಸ್ಟ್ ಸುದ್ದಿಯಷ್ಟೇ. ಈ ಯುದ್ಧದಿಂದ ಕಂಗೆಟ್ಟಿರುವ ಸಾಮಾನ್ಯ ಜನರ ಬದುಕಿನ ಚಿತ್ರಣ ಸಿಗುವುದು ಕಡಿಮೆ. ತನ್ನ ನೆಲದ ಜನರನ್ನು ತಾನೇ ರಾಸಾಯನಿಕ ಬಳಸಿ ಹತ್ಯೆ ಮಾಡುವ ಸರ್ಕಾರ, ಅದಕ್ಕೆ ರಷ್ಯಾದಂಥಾ ಶಕ್ತಿಶಾಲಿ ರಾಷ್ಟ್ರದ ಬೆಂಬಲ. ಇದನ್ನು ವಿರೋಧಿಸುವ ಇನ್ನೊಂದು ಪಂಗಡ, ಅದಕ್ಕೆ ಶಸ್ತ್ರಾಸ್ತ್ರ ಪೂರೈಸಿ ಮೋಜು ನೋಡುತ್ತಿರುವ ಅಮೆರಿಕ. ಬೆಳಗಾದರೆ ಅಬ್ಬಾ, ನಿನ್ನೆ ಮನೆಗೆ ಬಾಂಬ್ ಬೀಳಲಿಲ್ಲ. ನಾವೆಲ್ಲ ಬದುಕಿ ಉಳಿದಿದ್ದೇವೆ ಎಂಬ ನಿಟ್ಟುಸಿರಿನಲ್ಲಿ ದಿನದ ಬೆಳಗು ಆರಂಭಿಸುತ್ತಾರೆ ಜನಸಾಮಾನ್ಯರು. ಸಿರಿಯಾದ ನಗರಗಳು, ಪಟ್ಟಣದಂಥಾ ಪ್ರದೇಶಗಳು ಮಾತ್ರವಲ್ಲ. ಸಣ್ಣಪುಟ್ಟ ಹಳ್ಳಿಗಳಲ್ಲೂ ಜನ ಎಲ್ಲಿಲ್ಲದ ಭಯದಲ್ಲಿ ದಿನ ದೂಡುತ್ತಿದ್ದಾರೆ.
ಸಿರಿಯಾದ ಇಡ್ಲಿಬ್ ಅಂಥದ್ದೇ ಒಂದು ಹಳ್ಳಿ. ಸಿರಿಯಾದ ವಾಯುವ್ಯ ಭಾಗದಲ್ಲಿ ಟರ್ಕಿಶ್ ಬಾರ್ಡರ್‌ನಲ್ಲಿ ಬರುವ ಗ್ರಾಮವಿದು. ಕಳೆದ ಕೆಲವು ವಾರಗಳಿಂದ ಈ ಜಾಗದಲ್ಲಿ ಅವ್ಯಾಹತವಾಗಿ ಬಾಂಬ್ ದಾಳಿ ನಡೆಯುತ್ತಿದೆ. ರಾಷ್ಯಾದವರ ನೆರವಿನೊಂದಿಗೆ ಸಿರಿಯಾದ ಏರ್ ಫೋರ್ಸ್, ಪ್ರತಿಭಟನಾ ನಿರತ ನಾಗರಿಕರ ಮೇಲೆ ಬ್ಯಾಂಬ್ ಅಟ್ಯಾಕ್ ಮಾಡಿ ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದೆ. ಸುಮಾರು ಇಪ್ಪತ್ತೊಂದಕ್ಕೂ ಅಧಿಕ ನಾಗರಿಕರು ಈ ಬಾಂಬ್ ದಾಳಿಯಲ್ಲಿ ಮೃತಪಟ್ಟಿದ್ದಾರೆ.
ಕೇರಳದಲ್ಲಿ ಜೋಡಿಯ ಬೆತ್ತಲೆ ಪೋಟೋ ಶೂಟ್ ಸಿಕ್ಕಾಪಟ್ಟೆ ವೈರಲ್
ಇಂಥ ಸನ್ನಿವೇಶದಲ್ಲಿ ತನ್ನ ಪುಟ್ಟ ಮಗಳಿಗೆ ಭಯ ರಹಿತ ವಾತಾವರಣ ಕಲ್ಪಿಸಲು ತಂದೆಯೊಬ್ಬ ಏನು ಮಾಡಬಹುದು? ಆತ ಮಗುವಿಗಾಗಿ ಮಾಡಿದ 'ನಗುವ ಆಟ' ಈಗ ವಿಶ್ವಾದ್ಯಂತ ಸುದ್ದಿ ಮಾಡುತ್ತಿದೆ. ಬಾಂಬ್ ದಾಳಿ ನಡೆದಾಗ ಮಗುವಿಗೆ ಭಯವಾಗದಿರಲೆಂದು ಈ ಅಪ್ಪ ಪ್ರತೀಸಲ ಬಾಂಬ್ ದಾಳಿಯ ಸದ್ದು ಕೇಳಿದಾಗಲೂ ಒಂದು ಆಟದ ರೀತಿ ಜೋರಾಗಿ ನಗಲು ಕಲಿಸಿದ್ದಾನೆ. ಆ ಅಪ್ಪನ ಹೆಸರು ಅಬ್ದುಲ್ಲಾ, ಮಗಳ ಹೆಸರು ಸೆಲ್ವಾ ಅಂತ.
ಬಾಂಬ್ ದಾಳಿಯ ಸದ್ದಿಗೆ ಅಪ್ಪ ಮಗಳು ಜೋರಾಗಿ ನಗುವ ವೀಡಿಯೋವನ್ನು ಪತ್ರಕರ್ತರೊಬ್ಬರು ಟ್ವಿಟ್ಟರ್ನಲ್ಲಿ ಶೇರ್ ಮಾಡಿದ್ದಾರೆ. 'ವಾಟ್ ಎ ಸ್ಯಾಡ್ ವರ್ಲ್ಡ್ ' ಎಂಬ ಹೆಸರಿನಲ್ಲಿ ಈ ವೀಡಿಯೋ ಇದೆ. ಅಪ್ ಲೋಡ್ ಮಾಡಿದ ಕೆಲವೇ ಕ್ಷಣಗಳಲ್ಲಿ ಈ ಪೋಸ್ಟ್ಗೆ ಭರಪೂರ ಪ್ರತಿಕ್ರಿಯೆ ಬಂದಿದೆ. ಜಗತ್ತಿನಾದ್ಯಂತದ ಜನ ಸಿರಿಯಾ ದಾಳಿಯಿಂದ ಮಕ್ಕಳ ಮನಸ್ಸಿನ ಮೇಲಾಗುತ್ತಿರುವ ಪರಿಣಾಮದ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.
ಭಾರತ ಚೀನಾ ಗಡಿಯಲ್ಲಿದೆ 'ರಹಸ್ಯಮ'ಯ ಕಣಿವೆ
'ಎಂಥಾ ಜಗತ್ತಿನಲ್ಲಿ ನಾವು ಬದುಕುತ್ತಿದ್ದೇವೆ, ಮನುಷ್ಯತ್ವದ ಮೇಲೆ ಅಧಿಕಾರ ಸವಾರಿ ಮಾಡುತ್ತಿದೆ. ಇಂಥ ಎಳೆಯ ಮಕ್ಕಳ ಭಯ ಶಮನಗೊಳಿಸಲು ಈ ಅಪ್ಪ ಅಮ್ಮ ಎಷ್ಟು ಹರಸಾಹಸ ಪಡುತ್ತಿರಬೇಕು, ಈ ಚಿಣ್ಣರಿಗೆ ಬಾಂಬ್ ಮೂಲಕ ಆಟ ಆಡುವುದನ್ನು ಕಲಿಸಲಾಗುತ್ತಿದೆ ಅನ್ನುವದಕ್ಕಿಂತ ದೊಡ್ಡ ದುರಂತ ಇನ್ನೇನಿರಲು ಸಾಧ್ಯ..' ಎಂದು ಮಹಿಳೆಯೊಬ್ಬರು ರೀಟ್ವೀಟ್ ಮಾಡಿದ್ದರೆ, ' ದೇವರೇ ಭಯಾನಕತೆಯಲ್ಲೂ ಆಶಾಭಾವ ಮೂಡಿಸುವ ಬ್ಯೂಟಿಫುಲ್ ಆಟ ಇದು. ಈ ತಂದೆ ಮಗುವಿನ ಸ್ಥಿತಿ ಕಂಡು ಕರುಳು ಚುರುಕ್ ಅನ್ನುತ್ತಿದೆ' ಎಂಬಂಥಾ ಪ್ರತಿಕ್ರಿಯೆಗಳೂ ಬಂದಿವೆ.
ಅಧಿಕಾರದ ಬಯಕೆ ಮನುಷ್ಯನನ್ನು ಯಾವ ಲೆವೆಲ್ ಗೂ ಇಳಿಸಬಲ್ಲದು. ಇಂಥ ಘಟನೆಗಳು ಪ್ರತಿಕ್ರಿಯೆ ನೀಡಲಾರದಷ್ಟು ದಿಗ್ಭ್ರಮೆ ಮೂಡಿಸುತ್ತವೆ. ಆದರೆ ಇಂಥ ಮುಗ್ಧ ಜೀವಗಳ ಕನಸು ಮತ್ತು ಬದುಕನ್ನು ನಾಶ ಮಾಡುವ ಕ್ರೌರ್ಯಕ್ಕೆ ಎಂದೂ ಕ್ಷಮೆ ಇಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.