ಲಾಕ್‌ಡೌನ್ ಇಲ್ಲದಿದ್ರೆ ಗೆಳೆಯರು ಸಿಗ್ತಿದ್ರೋ ಇಲ್ವೋ ಗೊತ್ತಿಲ್ಲ, ಲಾಕ್‌ಡೌನ್ ಕಾರಣದಿಂದ ಹಳೆಯ, ಹೊಸ ಗೆಳೆಯರ ಭೇಟಿ ಆನ್‌ಲೈನ್ ವಿಡಿಯೋ ಕಾಲ್ ಹಾಗೂ ಚಾಟ್ ಮೂಲಕ ಸಾಧ್ಯವಾಗುತ್ತಿದೆ.
ಹೈಸ್ಕೂಲ್ ಗೆಳೆಯರೆಲ್ಲ ರಿಯೂನಿಯನ್ ಮಾಡಬೇಕೆಂಬ ಯೋಚನೆಯೊಂದು ನಾಲ್ಕು ವರ್ಷಗಳಿಂದ ಚಾಲ್ತಿಯಲ್ಲಿತ್ತು, ಆದರೆ ಕಾರ್ಯರೂಪಕ್ಕಿಳಿದಿರಲಿಲ್ಲ. ಕಸಿನ್ಸ್ ಭೇಟಿಯಾಗಿದ್ದು ಕಳೆದ ವರ್ಷ ಅಣ್ಣನ ಮದುವೆಯಲ್ಲಿ, ಕಾಲೇಜು ಗೆಳೆಯರ ಮುಖ ನೋಡದೆ ವರ್ಷಗಳಾದವು ಎಂಬುವವರೆಲ್ಲ ಈಗ ಲಾಕ್‌ಡೌನ್ ಸಂದರ್ಭದಲ್ಲಿ ರಿಯುನಿಯನ್ ಮಾಡುತ್ತಿದ್ದಾರೆ. ಅರೆ, ಹೇಗಪ್ಪಾ ಎಂದ್ರಾ? ಇದು ವರ್ಚುಯಲ್ ರಿಯುನಿಯನ್.
ಹೌದು, ಎಲ್ಲರೂ ಭೇಟಿಯಾಗಬಹುದು ಎಂದಾಗ ಗ್ರೂಪ್ ವಿಡಿಯೋ ಕಾಲ್‌ಗಳನ್ನು ಬಳಕೆ ಮಾಡುವ ಯೋಚನೆಯೇ ಬರುತ್ತಿರಲಿಲ್ಲ. ಹಾಗಂಥ ಭೇಟಿಯೂ ಒಂದಿಲ್ಲೊಂದು ಕಾರಣಕ್ಕೆ ಮುಂದೆ ಹೋಗುತ್ತಿತ್ತು. ಆದರೆ ಈಗ ಹಾಗಲ್ಲ, ದಿನಕ್ಕೊಂದೊಂದು ಗೆಳೆಯರ ಗುಂಪಿನೊಡನೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದಾರೆ ಹಲವರು. ಅದರಲ್ಲೂ ಎಲ್ಲರೂ ಲಾಕ್‌ಡೌನ್‌ಗೆ ಒಳಗಾಗಿರುವಾಗ ಎಲ್ಲರಿಗೂ ಕಾಮನ್ ಟಾಪಿಕ್‌ಗಳಿರುವುದರಿಂದ ಇಂಥ ಗ್ರೂಪ್ ವಿಡಿಯೋ ಕಾಲ್‌ಗಳಲ್ಲಿ ಬಹುಬೇಗ ಒಬ್ಬರಿಗೊಬ್ಬರು ಕನೆಕ್ಟ್ ಆಗುತ್ತಿದ್ದಾರೆ.
ಮನುಷ್ಯ ಮನೆಯಲ್ಲಿದ್ದರೆ ತಪ್ಪೆಲ್ಲವೂ ತೆಪ್ಪಗಾಗುತ್ತದೆ..
ಈಗಾಗಲೇ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಗ್ರೂಪ್ ವಿಡಿಯೋ ಕಾಲ್‌ಗಳ ಸಂಖ್ಯೆ ಶೇ.70ರಷ್ಟು ಹೆಚ್ಚಿದೆ ಎಂದು ಸಂಸ್ಥೆ ಹೇಳಿದೆ. ವಾಟ್ಸಾಪ್ ಕೂಡಾ ಜನರ ಬೇಡಿಕೆಗನುಗುಣವಾಗಿ ಇದುವರೆಗೂ ನಾಲ್ಕು ಜನರಿಗೆ ಲಿಮಿಟ್ ಆಗಿದ್ದ ತನ್ನ ವಿಡಿಯೋ ಕಾಲ್‌ನಲ್ಲಿ ಈಗ ಮಿತಿಯನ್ನು 8 ಜನರಿಗೆ ಹೆಚ್ಚಿಸಿದೆ. ಗೂಗಲ್ ಡುವೋ, ಝೂಮ್, ಸ್ಕೈಪ್ ಮುಂತಾದ ಆ್ಯಪ್‌ಗಳಲ್ಲಿ ಕೂಡಾ ಗ್ರೂಪ್ ವಿಡಿಯೋ ಕಾಲ್‌ಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಕಚೇರಿ ಕೆಲಸದ ನಿಮಿತ್ತ ಮೀಟಿಂಗ್, ಕಾನ್ಫರೆನ್ಸ್‌ಗಳು ಈಗ ವಿಡಿಯೋ ಮೂಲಕವೇ ಆಗುತ್ತಿದ್ದರೆ, ಮತ್ತೊಂದೆಡೆ ಗೆಳೆಯರು, ನೆಂಟರು, ಕುಟುಂಬ ಎಂದು ಕೂಡಾ ವಿಡಿಯೋ ಕಾಲ್ಸ್ ಸಂಖ್ಯೆ ಹೆಚ್ಚಿದೆ.
ಥೆರಪಿಯಂತೆ
ಹತ್ತಿಪ್ಪತ್ತು ವರ್ಷಗಳ ಹಿಂದಿನ ಗೆಳೆಯರಿಗೆ ವಿಡಿಯೋ ಕಾಲ್ ಮಾಡಿ ಗಂಟೆಗಟ್ಟಲೆ ಮಾತನಾಡುವುದು- ಹಳೆಯ ದಿನಗಳು, ಅಂದಿನ ತುಂಟಾಟಗಳನ್ನು ಮೆಲುಕು ಹಾಕುವುದು ಹಲವರಿಗೆ ಥೆರಪಿಯಂತೆ ಕೆಲಸ ಮಾಡುತ್ತಿದೆ. ಬಾಲ್ಯ ಹಾಗೂ ಕಾಲೇಜು ದಿನಗಳ ನೆನಪಿಗೆ ಅಂಥದೊಂದು ಶಕ್ತಿಯಿದೆ. ಹಳೆ ಗೆಳೆಯರೊಡನೆ ಮತ್ತೆ ಕನೆಕ್ಟ್ ಆಗುವ ಸಂಭ್ರಮ ಕೂಡಾ ಹೇಳತೀರದು.
ಗೆಳೆಯನೊಬ್ಬನ ಹುಟ್ಟುಹಬ್ಬದಂದು ಉಳಿದವರೆಲ್ಲ ಗ್ರೂಪ್ ವಿಡಿಯೋ ಕಾಲ್ ಮಾಡಿ ಆತನಿಗೆ ವಿಶ್ ಮಾಡುವುದು, ಚುಡಾಯಿಸುವುದು, ಗಂಟೆಗಟ್ಟಲೆ ಹರಟುವುದು ದೊಡ್ಡ ಪಾರ್ಟಿಗಿಂತ ಕಡಿಮೆಯೇನಲ್ಲ. ಈ ವರ್ಚುಯಲ್ ಪಾರ್ಟಿ ಕೊಡುವ ಸಂತೋಷವೇ ಬೇರೆ.
ಕುಕಿಂಗ್ ಕಾಲ್
ಇನ್ನು ಕೆಲ ಸ್ನೇಹಿತೆಯರು ಪ್ಲ್ಯಾನ್ ಮಾಡಿ ಎಲ್ಲರೂ ಮನೆಯಲ್ಲಿ ಒಂದೇ ರೆಸಿಪಿ ತಯಾರಿಸಿ, ವಿಡಿಯೋ ಕಾಲ್ ಮಾಡಿಕೊಂಡು ಅಡುಗೆ ಅನುಭವ ಹಂಚಿಕೊಳ್ಳುತ್ತಾ, ಒಟ್ಟಿಗೇ ಕುಳಿತು ತಿನ್ನುತ್ತಾ, ಮೀಟ್ ಆಗಿ ಹೋಟೆಲ್‌ನ ಡಿನ್ನರ್ ಸವಿದಷ್ಟೇ ಎಂಜಾಯ್ ಮಾಡುತ್ತಿದ್ದಾರೆ. ಈ ಐಡಿಯಾ ಒಂಥರಾ ಮಜವಿದೆಯಲ್ಲವೇ? ಇದು ವರ್ಚುಯಲ್ ಡಿನ್ನರ್ ಮೀಟ್ ಅಪ್.
ಉಳಿತಾಯ
ವರ್ಚುಯಲ್ ರಿಯುನಿಯನ್‌ನ ಮತ್ತೊಂದು ಲಾಭವೆಂದರೆ ಹಣ ಹಾಗೂ ಸಮಯದ ಉಳಿತಾಯ. ತಮ್ಮದೇ ಮನೆಯಲ್ಲಿ ಕುಳಿತು ಗೆಳೆಯರು, ಕುಟುಂಬ ಸದಸ್ಯರೊಂದಿಗೆ ಗಂಟೆಗಟ್ಟಲೆ ಹರಟಬಹುದು. ಇದಕ್ಕಾಗಿ ಎಲ್ಲಿಯೋ ಹೋಗಲೇಬೇಕೆಂದಿಲ್ಲ. ಹಾಗಾಗಿ, ಸಮಯವಿಲ್ಲ ಎಂಬ ಕಾರಣ ಇದಕ್ಕೆ ಅಡ್ಡಿಯಾಗದು.
ಏಕತಾನತೆಗೆ ಬ್ರೇಕ್
ಲಾಕ್‌ಡೌನ್‌ನ ಗೃಹಬಂಧನ ಜೀವನದ ಏಕತಾನತೆಗೆ ಬ್ರೇಕ್ ಹಾಕಲು ವರ್ಚುಯಲ್ ವಿಡಿಯೋ ಕಾಲ್‌ಗಳು ನೆರವಾಗುತ್ತಿವೆ. ಬ್ಯಾಚುಲರೇಟ್ ಪಾರ್ಟಿಗಳು, ವಿನೋದ, ಮೂವಿ ಹೋಸ್ಟಿಂಗ್ ಎಂದು ಹಲವು ರೀತಿಯಲ್ಲಿ ಜನರು ಇದನ್ನು ಬಳಸಿಕೊಳ್ಳುತ್ತಿರುವುದರಿಂದ ಜನರನ್ನು ಭೇಟಿಯಾದ ಸಂಭ್ರಮವೇ ಸಿಕ್ಕು ಒಂಟಿತನ, ಏಕತಾನತೆಗಳಿಗೆ ಬ್ರೇಕ್ ಬೀಳುತ್ತಿವೆ. ಇವು ರಿಫ್ರೆಶ್ ಆಗಲು ಸಹಾಯ ಮಾಡುತ್ತಿವೆ.