ಕಾಗದದಲ್ಲಿ ನಾವೆಂದೋ ಗೀಚಿದ್ದು ಮತ್ತೆಂದೋ ಸಿಕ್ಕಾಗ ಎಂದಿಗೂ ಮರೆಯಲು ಸಾಧ್ಯವಾಗದಷ್ಟು ಸಂತೋಷ ನೀಡುತ್ತೆ ಅಲ್ಲವೇ. ಇಂತಹುದೇ ಘಟನೆ ಈಗ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದೆ. ಅಲ್ಲಿ ಮಾಜಿ ಸೇನಾ ಅಧಿಕಾರಿಯೊಬ್ಬರು ತಮ್ಮ ಗೆಳತಿ ಬರೆದ, ಕೈಬರಹವಿರುವ ಹಳೆಯ ಪ್ರೇಮ ಪತ್ರದ ವಿಡಿಯೋವನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಆ ಪತ್ರಕ್ಕೆ ಸಂಬಂಧಿಸಿದ ಸ್ಮರಣೀಯ ಕಥೆಯನ್ನು ಹಂಚಿಕೊಂಡಿದ್ದಾರೆ, ಅದು ಎಲ್ಲರ ಹೃದಯ ತಟ್ಟಿದೆ.
ಮೊದಲ ಪ್ರೇಮ ಪತ್ರ ಹಂಚಿಕೊಂಡ ಸೇನಾ ಅಧಿಕಾರಿ
ಈ ಮಾಜಿ ಸೇನಾ ಅಧಿಕಾರಿಯ ಹೆಸರು ಕ್ಯಾಪ್ಟನ್ ಧರ್ಮವೀರ್ ಸಿಂಗ್. ಇವರು ಈ ವಿಶೇಷ ಪತ್ರವನ್ನು ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಪತ್ರವನ್ನು ಡಿಸೆಂಬರ್ 10, 2001 ರಂದು ಅವರು ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಗೆ ಸೇರಿದಾಗ ಬರೆಯಲಾಗಿತ್ತಂತೆ. ಇದನ್ನು ಅವರ ಆಗಿನ ಗೆಳತಿ ಬರೆದಿದ್ದರು. ಅಯ್ಯೋ, ಏನಿದು ಅಂದುಕೊಳ್ಳಬೇಡಿ..ಅದೇ ಗೆಳತಿ ಈಗ ಅವರ ಪತ್ನಿ. ಹೆಂಡತಿಯನ್ನ ಪ್ರೀತಿಯಿಂದ 'ಠಾಕುರೈನ್' ಎಂದೇ ಕರೆಯುತ್ತಾರೆ.
ಇದು ಸಾಮಾನ್ಯ ಪತ್ರವಲ್ಲ ಎಂದು ಕ್ಯಾಪ್ಟನ್ ಧರ್ಮವೀರ್ ಸಿಂಗ್ ಹೇಳಿಕೊಂಡಿದ್ದಾರೆ. ಕೊನೆಗೆ ಅಕಾಡೆಮಿಯಲ್ಲಿ ಪತ್ರವನ್ನು ಪಡೆಯಲು ತುಂಬಾ ಶ್ರಮಿಸಬೇಕಾಯಿತಂತೆ. ಹಿರಿಯ ಅಧಿಕಾರಿಗಳು ಪತ್ರವನ್ನು ನೀಡುವ ಮೊದಲು ಅವರನ್ನು 100 ರಿಂದ 500 ಪುಷ್-ಅಪ್‌ಗಳನ್ನು ಮಾಡುವಂತೆ ಒತ್ತಾಯಿಸಿದರಂತೆ. ಪತ್ರವು ಉದ್ದವಾಗಿದ್ದಷ್ಟೂ ಶಿಕ್ಷೆ ಹೆಚ್ಚು ಕಠಿಣವಾಗಿತ್ತು. ಈ ಪತ್ರವು ಸಾಕಷ್ಟು ಉದ್ದವಾಗಿತ್ತು, ಆದ್ದರಿಂದ ಶಿಕ್ಷೆಯೂ ಸಹ ಕಠಿಣವಾಗಿತ್ತು.
ಕ್ಯಾಪ್ಟನ್ ಸಿಂಗ್ ಇದು ಅವರ ಅಕಾಡೆಮಿ ಜೀವನದ ಮೊದಲ ಪತ್ರ ಎಂದು ಹೇಳಿದ್ದಾರೆ. ಆ ಸಮಯದಲ್ಲಿ ಪತ್ರಗಳನ್ನು ಬರೆಯುವಾಗ ಮತ್ತು ಓದುವಾಗ ಇದ್ದ ಭಾವನೆಗಳು ಅವರ ಹೃದಯದಲ್ಲಿ ಇನ್ನೂ ತಾಜಾವಾಗಿವೆ. ಅವರೇ ಹೇಳುವಂತೆ, "ಅವು ಪತ್ರಗಳ ಸುವರ್ಣ ದಿನಗಳು, ಜನರು ತಮ್ಮ ಹೃದಯದಿಂದ ಬರೆಯುತ್ತಿದ್ದರು ಮತ್ತು ಭಾವನೆಗಳು ಅಷ್ಟೇ ಆಳವಾಗಿದ್ದವು. ಹಳೆಯ ಪತ್ರವು ಇಂದಿಗೂ ಇಷ್ಟೊಂದು ಹೇಳುತ್ತದೆ ಎಂಬುದು ಆಶ್ಚರ್ಯಕರವಲ್ಲವೇ? ಬಹುಶಃ ಅದಕ್ಕಾಗಿಯೇ ಕೆಲವು ಸಂಬಂಧಗಳು ಅಕ್ಷರಗಳಲ್ಲಿ ಶಾಶ್ವತವಾಗಿ ಅಮರವಾಗಿ ಉಳಿದಿವೆ".
ಪೋಸ್ಟ್ ಬಗ್ಗೆ ಜನರ ಕಾಮೆಂಟ್ಸ್
ಅಧಿಕಾರಿಯ ಈ ಪೋಸ್ಟ್ ಅನ್ನು ಇಲ್ಲಿಯವರೆಗೆ 12 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಈ ಪೋಸ್ಟ್‌ಗೆ ಅನೇಕ ಜನರಿಂದ ಕಾಮೆಂಟ್‌ಗಳು ಬಂದಿವೆ, ಅಲ್ಲಿ ಜನರು ಈ ಸುಂದರ ಕಥೆಯ ಬಗ್ಗೆ ಸಾಕಷ್ಟು ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಬಳಕೆದಾರರು "ಈ ಪತ್ರವು ಕೇವಲ ಪದಗಳಿಂದ ತುಂಬಿಲ್ಲ, ಪ್ರೀತಿ, ಭಾವನೆಗಳು ಮತ್ತು ಪರಸ್ಪರರ ಪ್ರತಿ ಕ್ಷಣದ ಆಲೋಚನೆಗಳಿಂದ ಕೂಡಿದೆ." ಎಂದರೆ ಮತ್ತೆ ಕೆಲವು ಬಳಕೆದಾರರು "ಪತ್ರದ ಒಂದು ಸಾಲನ್ನು ನೆನಪಿಸಿಕೊಂಡಿದ್ದಾರೆ ಅದರಲ್ಲಿ ಠಾಕುರೈನ್ "ನನ್ನ ಪತ್ರಗಳಿಂದಾಗಿ ನೀವು ಶಿಕ್ಷೆಗೊಳಗಾಗುತ್ತಿದ್ದೀರಿ ಎಂದು ಯೋಚಿಸಲು ನನಗೆ ಇಷ್ಟವಿಲ್ಲ." ಎಂದಿದ್ದಾರೆ. ಜನರು ಈ ಸಾಲನ್ನು ತುಂಬಾ ಇಷ್ಟಪಟ್ಟಿದ್ದಾರೆ.
ಬಾಲಕನ ನಡವಳಿಕೆಗೆ ಫಿದಾ ಆದ ಜನ್ರು
ಇಂತಹ ಅನೇಕ ಮುದ್ದಾದ ಘಟನೆಗಳು ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾನೆ ಇರ್ತವೆ. ಇಂತಹುದೇ ಒಂದು ವಿಡಿಯೋ ಇತ್ತೀಚೆಗೆ ಕಾಣಿಸಿಕೊಂಡಿದ್ದು, ಎಲ್ಲರ ಗಮನ ಸೆಳೆದಿತ್ತು. ವಿಡಿಯೋದಲ್ಲಿ ಎಲ್ಲರಿಗೂ ಇಷ್ಟವಾಗುತ್ತಿರುವುದು ಬಾಲಕನ ಮುಗ್ಧತೆ. ಇದು ಎಲ್ಲರ ಹೃದಯ ಗೆದ್ದಿದೆ. ನಿಮ್ಮಲ್ಲಿ ಉತ್ತಮ ಮೌಲ್ಯಗಳಿದ್ದರೆ ನಿಮ್ಮ ವ್ಯಕ್ತಿತ್ವವನ್ನು ಯಾರಿಗೂ ಪರಿಚಯಿಸುವ ಅಗತ್ಯವಿಲ್ಲ ಎಂದು ಬಾಲಕ ತೋರಿಸಿದ್ದಾನೆ. ಇದು ನಡವಳಿಕೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.
ವಿಡಿಯೋದಲ್ಲಿ ತೋರಿಸಿರುವ ಪ್ರಕಾರ, ಓರ್ವ ಬಾಲಕ ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವುದನ್ನು ಕಾಣಬಹುದು. ಪ್ರಯಾಣದ ಸಮಯದಲ್ಲಿ ಕೂಲ್ ಡ್ರಿಂಕ್ಸ್ ಬಾಟಲ್ ಇದ್ದಕ್ಕಿದ್ದಂತೆ ಅವನ ಕೈಯಿಂದ ನೆಲದ ಮೇಲೆ ಬೀಳುತ್ತದೆ. ಬಾಟಲಿ ಬಿದ್ದ ತಕ್ಷಣ, ಡ್ರಿಂಕ್ಸ್ ಚೆಲ್ಲುತ್ತದೆ ಮತ್ತು ನೆಲವು ಒದ್ದೆಯಾಗುತ್ತದೆ. ಅಂತಹ ಪರಿಸ್ಥಿತಿ ಬಂದಾಗ ನಮ್ಮ ಮಕ್ಕಳು ಏನು ಮಾಡಬಹುದು ಎಂದು ಯೋಚಿಸಿ. ನಮ್ಮ ಮಕ್ಕಳು ಏನ್ ಮಾಡ್ತಾರೋ ಗೊತ್ತಿಲ್ಲ ಆದ್ರೆ ಆ ಮಗು ಏನು ಮಾಡಿದೆ ಅಂತೀರಾ?. ಸದ್ಯ ಬಾಲಕನ ಆ ನಡವಳಿಕೆಯೇ ಇಂದು ವಿಡಿಯೋ ವೈರಲ್ ಆಗಲು ಕಾರಣವಾಗಿದೆ. ಇದೇ ಕಾರಣಕ್ಕೆ ಜನರು ಇದನ್ನು ಹೆಚ್ಚೆಚ್ಚು ಶೇರ್ ಮಾಡ್ತಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಇನ್ನು ವಿಡಿಯೋದಲ್ಲಿ ಏನಿದೆ ಎಂದು ನೋಡುವುದಾದರೆ ಕೂಲ್ ಡ್ರಿಂಕ್ಸ್ ಬಾಟಲ್ ಕೆಳಗೆ ಬಿದ್ದ ತಕ್ಷಣ, ಬಾಲಕ ತನ್ನ ಬ್ಯಾಗ್‌ನಿಂದ ಟಿಶ್ಯೂ ಪೇಪರ್ ತೆಗೆದು ಚೆಲ್ಲಿದ ಪಾನೀಯವನ್ನು ತನ್ನ ಮನೆ ಎಂಬಂತೆಯೇ ಒರೆಸುತ್ತಾನೆ. ಈ ದೃಶ್ಯವನ್ನು ನೋಡಿ ಅಲ್ಲಿದ್ದ ಇತರ ಪ್ರಯಾಣಿಕರು ಶಾಕ್ ಆಗ್ತಾರೆ. ಯಾಕಂದ್ರೆ ಅಲ್ಲಿ ನರೆದಿದ್ದ ಜನರು ಬಾಲಕನು ಈ ರೀತಿ ನಡೆದುಕೊಳ್ಳುತ್ತಾನೆ ಎಂದು ಊಹಿಸಿರಲಿಲ್ಲ. ಬಹುತೇಕರು ಸಾರ್ವಜನಿಕ ಸ್ಥಳವೆಂದರೆ ಸಾಕು ಕಸ ಹಾಕುವ ಅಥವಾ ನಿರುಪಯುಕ್ತ ವಸ್ತುಗಳನ್ನು ಚೆಲ್ಲಾಡುವ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ಆದರೆ ಈ ಬಾಲಕನ ನಡೆ ಇದೀಗ ಎಲ್ಲರಿಗೂ ದೊಡ್ಡ ಪಾಠವನ್ನು ಕಲಿಸಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.