
ಗಡಿಗಳನ್ನು ದಾಟಿ, ಸಂಸ್ಕೃತಿಯನ್ನು ಮೀರಿ ಬೆಳೆದ ಅಪರೂಪದ ಪ್ರೇಮಕಥೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗುತ್ತಿದೆ. ಬಿಹಾರದ ಭಾಗಲ್ಪುರ ಜಿಲ್ಲೆಯ ಸಣ್ಣ ಹಳ್ಳಿಯೊಂದರ ಯುವಕ ರಾಹುಲ್ ಯಾದವ್ ಮತ್ತು ರಷ್ಯಾದ ಯುವತಿ ಜೂಲಿ ಅವರ ಈ ವಿಶಿಷ್ಟ ಪ್ರೇಮಕಥೆ ಈಗ ದೇಶಾದ್ಯಂತ ನೆಟ್ಟಿಗರ ಚರ್ಚಿತ ವಿಷಯವಾಗಿದೆ.
ಕೆಲಸದ ನಿಮಿತ್ತ ರಷ್ಯಾಕ್ಕೆ ತೆರಳಿದ್ದ ಭಾಗಲ್ಪುರದ ರಾಹುಲ್ ಯಾದವ್ಗೆ ಅಲ್ಲಿ ಜೂಲಿ ಪರಿಚಯವಾಗಿದ್ದಳು. ಆರಂಭದಲ್ಲಿ ಸ್ನೇಹದಿಂದ ಶುರುವಾದ ಇಬ್ಬರ ಬಾಂಧವ್ಯ ಕ್ರಮೇಣ ಗಾಢವಾದ ಪ್ರೀತಿಯಾಗಿ ಬದಲಾಯಿತು. ಹೀಗಾಗಿ ಜೀವಮಾನವಿಡೀ ಪರಸ್ಪರ ಜೊತೆಯಾಗಿ ಬಾಳಲು ಇವರಿಬ್ಬರು ನಿರ್ಧರಿಸಿದರು. ಆದರೆ ಅನಿವಾರ್ಯವಾಗಿ ರಾಹುಲ್ ಭಾರತಕ್ಕೆ ಮರಳಿ ಬರಬೇಕಾಯ್ತು. ಆರು ತಿಂಗಳ ಹಿಂದೆ ರಾಹುಲ್ ಬಿಹಾರಕ್ಕೆ ಬಂದಿದ್ದ, ಆದರೆ ತಮ್ಮ ಸ್ವಗ್ರಾಮಕ್ಕೆ ಮರಳಿದ ನಂತರವೂ ಇಬ್ಬರೂ ತಮ್ಮ ಸಂಬಂಧವನ್ನು ಮುಂದುವರಿಸಿದ್ದರು. ಇಬ್ಬರ ನಡುವೆ ಗಾಢವಾದ ಪ್ರೀತಿ ಭದ್ರವಾಗಿತ್ತು. ತನ್ನ ಪ್ರೀತಿಯನ್ನು ಬಿಟ್ಟಿರಲಾರದ ರಷ್ಯಾ ಯುವತಿ ಪ್ರಿಯಕರನ್ನು ಹುಡುಕಿ ಭಾರತಕ್ಕೆ ಬಂದಿದ್ದರು.
ತನ್ನ ಪ್ರಿಯಕರನಿಂದ ದೂರವಿರಲು ಸಾಧ್ಯವಾಗದ ಜೂಲಿ, ಕೊನೆಗೆ ತಮ್ಮ ಸಂಬಂಧವನ್ನು ವಿವಾಹವೆಂಬ ಅಧಿಕೃತ ಬಂಧಕ್ಕೆ ಬಂಧಿಯಾಗಿಸಲು ನಿರ್ಧರಿಸಿದರು. ಅದರಂತೆ, ತಮ್ಮ ಕುಟುಂಬ ಸಮೇತರಾಗಿ ರಷ್ಯಾದಿಂದ ಭಾರತಕ್ಕೆ ಆಗಮಿಸಿದ ಜೂಲಿ, ಭಾಗಲ್ಪುರದಲ್ಲಿದ್ದ ರಾಹುಲ್ ಅವರ ಮನೆಗೆ ತಲುಪಿದರು.
ಬಡ ಕುಟುಂಬದಿಂದ ಬಂದಿರುವ ರಾಹುಲ್ ಅವರ ಮನೆ ತೀರಾ ಸರಳವಾಗಿ, ಶಿಥಿಲಾವಸ್ಥೆಯಲ್ಲಿರುವ ಗುಡಿಸಲಾಗಿದೆ. ರಷ್ಯಾದ ವೈಭವೋಪೇತ ಜೀವನ ಪರಿಸರಕ್ಕೆ ಸಂಪೂರ್ಣವಾಗಿ ಭಿನ್ನವಾದ ಈ ವಾಸ್ತವವನ್ನು ರಾಹುಲ್ ಜೂಲಿಗೆ ವಿವರಿಸಿದ್ದರು. ನನ್ನ ಬಳಿ ವಾಸಿಸಲು ದೊಡ್ಡ ಬಂಗಲೆ ಇಲ್ಲ, ಕೇವಲ ಸರಳವಾದ ಗುಡಿಸಲಿದೆ. ಇದರಲ್ಲಿ ನೀನು ಹೇಗೆ ಇರಲು ಸಾಧ್ಯ? ಎಂದು ರಾಹುಲ್ ಕೇಳಿದಾಗ, ಜೂಲಿ "ನಿನ್ನ ಪ್ರೀತಿಗಾಗಿ ಬಂಗಲೆಯ ಸುಖಭೋಗಗಳನ್ನು ತೊರೆದು ಈ ಗುಡಿಸಲಿನಲ್ಲಿ ಸಂತೋಷದಿಂದ ಬಾಳಲು ನಾನು ಸಿದ್ಧಳಿದ್ದೇನೆ" ಎಂದು ಉತ್ತರಿಸಿ ಎಲ್ಲರ ಮನ ಗೆದ್ದಿದ್ದಾರೆ.
ಇಬ್ಬರ ನಿಷ್ಕಲ್ಮಶ ಪ್ರೀತಿ ಕಂಡ ಎರಡೂ ಕುಟುಂಬಸ್ಥರು ಮದುವೆಗೆ ಸಂಪೂರ್ಣ ಸಮ್ಮತಿ ಸೂಚಿಸಿದ್ದಾರೆ. ಜೂಲಿಯ ಕುಟುಂಬದವರು ರಾಹುಲ್ ಅವರ ಕುಟುಂಬವನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಭಾರತೀಯ ಸಂಪ್ರದಾಯದಂತೆ ನವೆಂಬರ್ ತಿಂಗಳಿನಲ್ಲಿ ಮದುವೆ ಮಾಡಲು ನಿರ್ಧರಿಸಿದ್ದಾರೆ. ಪ್ರಸ್ತುತ ಮದುವೆ ಮತ್ತು ನಿಶ್ಚಿತಾರ್ಥದ ಸಿದ್ಧತೆಗಳು ಬಿರುಸಿನಿಂದ ಸಾಗಿವೆ.
ಈ ಪ್ರೇಮಕಥೆಯು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ನಿಜವಾದ ಪ್ರೀತಿಗೆ ಯಾವುದೇ ಗಡಿ, ದೂರ ಅಥವಾ ಬಡತನ ಅಡ್ಡಿಯಾಗುವುದಿಲ್ಲ. ಯುವತಿ ಪ್ರೀತಿಗಾಗಿ ಎಲ್ಲವನ್ನೂ ತೊರೆದು ಬಂದಿರುವುದು ಆಕೆಯ ನೈಜ ಪ್ರೀತಿಗೆ ಸಾಕ್ಷಿ ಎಂದು ಹಲವರು ಶ್ಲಾಘಿಸಿದ್ದಾರೆ.
ಇನ್ನೊಂದೆಡೆ, ಕೆಲ ಬಳಕೆದಾರರು ಈ ಕುರಿತು ತಮಾಷೆಯ ಹಾಗೂ ಅನುಮಾನಾಸ್ಪದ ಕಾಮೆಂಟ್ಗಳನ್ನು ಮಾಡಿದ್ದಾರೆ. ಇಷ್ಟೊಂದು ಬೇಗ ಯಾರಿಗೂ ಅನುಮಾನ ಬಾರದಂತೆ ಬಂದಿರುವ ರಷ್ಯನ್ ಗೂಢಚಾರಿ ಇರಬಹುದೇ? ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಮತ್ತೊಬ್ಬರು ರಷ್ಯಾ-ಉಕ್ರೇನ್ ಯುದ್ಧಕ್ಕೆ ಭಾರತೀಯರನ್ನು ಸೇರಿಸಿಕೊಳ್ಳಲು ನಡೆಸುತ್ತಿರುವ ಹೊಸ ಮಾದರಿಯ ನೇಮಕಾತಿ ತಂತ್ರವೇ ಇದು? ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.
ಅದೇನೇ ಇರಲಿ, ಪ್ರಸ್ತುತ ಬಿಹಾರದ ಭಾಗಲ್ಪುರದಲ್ಲಿ ಜೂಲಿಯ ಆಗಮನವು ಸ್ಥಳೀಯರಲ್ಲಿ ಹೆಚ್ಚಿನ ಕುತೂಹಲ ಮತ್ತು ಉತ್ಸಾಹವನ್ನು ಉಂಟುಮಾಡಿದ್ದು, ಎಲ್ಲರೂ ಇವರಿಬ್ಬರ ಕಲ್ಯಾಣಕ್ಕೆ ಕಾಯುತ್ತಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.