ಮದ್ವೆ ಮಾತುಕತೆ ಮುಗಿದ್ರೂ ಮಾಧುರಿ ದೀಕ್ಷಿತ್​ ಯಾರೆಂದೇ ತಿಳಿದಿರಲಿಲ್ಲ: ಆ ದಿನಗಳ ನೆನೆದ ಪತಿ ಶ್ರೀರಾಮ್​

Published : Oct 13, 2026, 05:46 PM IST
Madhuri Dixit and Shriram Nene

ಸಾರಾಂಶ

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಮತ್ತು ಡಾ. ಶ್ರೀರಾಮ್ ನೇನೆ ಅವರ ವಿವಾಹವಾಗಿ 27 ವರ್ಷಗಳಾಗಿವೆ. ಮದುವೆ ಮಾತುಕತೆ ನಡೆಯುವಾಗ ಶ್ರೀರಾಮ್ ಅವರಿಗೆ ಮಾಧುರಿ ಓರ್ವ ಪ್ರಸಿದ್ಧ ನಟಿ ಎಂಬ ವಿಚಾರವೇ ತಿಳಿದಿರಲಿಲ್ಲ. ಅಲ್ಲದೆ, ಆರತಕ್ಷತೆಯಲ್ಲಿ ಅಮಿತಾಭ್ ಬಚ್ಚನ್ ಹೊರತುಪಡಿಸಿ ಶಾರುಖ್, ಸಲ್ಮಾನ್ ಸೇರಿದಂತೆ ಯಾರ ಪರಿಚಯವೂ ಅವರಿಗಿರಲಿಲ್ಲ ಎಂದು ಅವರು ಹಂಚಿಕೊಂಡಿದ್ದಾರೆ.

ಧಕ್​ ಧಕ್​ ಬೆಡಗಿ ಮಾಧುರಿ ದೀಕ್ಷಿತ್​ ಮತ್ತು ಹೃದಯರೋಗ ಶಸ್ತ್ರಚಿಕಿತ್ಸಕ ಡಾ. ಶ್ರೀರಾಮ್ ನೇನೆ ಅವರ ಮದುವೆಯಾಗಿ 27 ವರ್ಷಗಳಾಗಿವೆ. ಇನ್ನೇನು ಕೆಲವೇ ದಿನಗಳಲ್ಲಿ ಅರ್ಥಾತ್​ ಇದೇ 17ರಂದು ಅವರು 28ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಸೆಲೆಬ್ರಿಟಿಗಳು ಅದರಲ್ಲಿಯೂ ಬಾಲಿವುಡ್​ ನಟ-ನಟಿಯರು ಇಷ್ಟು ಸುದೀರ್ಘ ಅವಧಿಯವರೆಗೆ ಒಬ್ಬರದ್ದೇ ಜೊತೆ ಇರುವುದು ಬಹಳ ಅಪರೂಪ. ಅಂಥ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು ಮಾಧುರಿ ದೀಕ್ಷಿತ್​. ಇವರ ಪತಿ ಶ್ರೀರಾಮ್​ ನೇನೆ ಅವರು ತಮ್ಮ ಮದುವೆ ಮಾತುಕತೆಯ ಕುರಿತು ವಿಶೇಷ ಅನುಭವವನ್ನು ಚೆಫ್ ದಿಲೀಪ್ ಅವರ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಮದುವೆ ಮಾತುಕತೆ ನಡೆಯುತ್ತಿದ್ದಾಗಲೂ ಮಾಧುರಿ ದೀಕ್ಷಿತ್​ ಬಾಲಿವುಡ್​ನ ಫೇಮಸ್​ ನಟಿ ಎನ್ನೋದು ಅವರಿಗೆ ಗೊತ್ತೇ ಇರಲಿಲ್ಲವಂತೆ!

ಸಲ್ಮಾನ್​, ಶಾರುಖ್​ ಕೂಡ ಗೊತ್ತಿರಲಿಲ್ಲ

ಅಷ್ಟೇ ಅಲ್ಲದೇ, 1999ರಲ್ಲಿ ನಡೆದ ತಮ್ಮ ವಿವಾಹ ಆರತಕ್ಷತೆ ಸಮಯದಲ್ಲಿ ತಮ್ಮ ಪತ್ನಿಯೊಂದಿಗೆ ಆಗಾಗ್ಗೆ ಕೆಲಸ ಮಾಡುತ್ತಿದ್ದ ಶಾರುಖ್ ಖಾನ್ ಅಥವಾ ಸಲ್ಮಾನ್ ಖಾನ್ ಕೂಡ ಗೊತ್ತಿರಲಿಲ್ಲ. ಅಮಿತಾಭ್​ ಬಚ್ಚನ್ ಮಾತ್ರ ಗೊತ್ತಿತ್ತು ಎಂದಿದ್ದಾರೆ. ಅವರನ್ನು ಮಾತ್ರ ಗುರುತಿಸಲು ಸಾಧ್ಯವಾಗಿತ್ತು ಎಂದಿದ್ದಾರೆ. ಮದುವೆಯ ಮಾತುಕತೆ ನಡೆಯುತ್ತಿದ್ದ ಸಂದರ್ಭದಲ್ಲಿ, ತಮಗೆ ಹಿಂದಿ ಮಾತನಾಡಲು ಬರುತ್ತಿರಲಿಲ್ಲ ಮತ್ತು ತಾವು ಲಾಸ್ ಏಂಜಲೀಸ್‌ನಲ್ಲಿ ವಾಸಿಸುತ್ತಿದ್ದೆವು ಎಂದು ಬಹಿರಂಗಪಡಿಸಿದರು. ಫರಾಹ್ ಅವರು ಈ ವಿಷಯ ಕೇಳಿ ಆಶ್ಚರ್ಯ ವ್ಯಕ್ತಪಡಿಸಿದಾಗ, 'ಏಕೆಂದರೆ ನಾನು ಸ್ಟೀವನ್ ಸ್ಪೀಲ್‌ಬರ್ಗ್, ಜಾರ್ಜ್ ಲುಕಾಸ್ ಮತ್ತು 'ಸ್ಟಾರ್ ವಾರ್ಸ್' ಚಿತ್ರಗಳ ಪ್ರಭಾವದೊಂದಿಗೆ ಬೆಳೆದವನು. ನಾನು ಹಿಂದಿ ಚಿತ್ರಗಳನ್ನು ನೋಡುತ್ತಿರಲಿಲ್ಲ. ನಂತರ ನಾವು ಭೇಟಿಯಾದೆವು ಮತ್ತು ಮೂರು ತಿಂಗಳ ಕಾಲ ಡೇಟಿಂಗ್ ಮಾಡಿದೆವು. ನಮ್ಮಿಬ್ಬರ ನಡುವೆ ಉತ್ತಮ ಹೊಂದಾಣಿಕೆ ಮೂಡಿತು, ಮತ್ತು ಮೂರು ತಿಂಗಳ ನಂತರ ನಾನು ಅವರಿಗೆ ಪ್ರೇಮ ನಿವೇದನೆ ಮಾಡಿದೆ' ಎಂದರು.

ಸುಮ್ಮನೇ ಎಲ್ಲರತ್ತ ಕೈಬೀಸುತ್ತಿದ್ದೆ

ಡಾ. ನೇನೆ ಅವರು ಚಿತ್ರರಂಗದವರಿಗಾಗಿ ಏರ್ಪಡಿಸಿದ್ದ ಭವ್ಯವಾದ ಆರತಕ್ಷತೆ ಸಮಾರಂಭವನ್ನು ನಡೆಸಿದ್ದರು. ಅದರ ಬಗ್ಗೆ ಪ್ರಶ್ನೆ ಕೇಳಿದಾಗ ಶ್ರೀರಾಮ್​ ಅವರು, 'ನನಗೆ ಅಲ್ಲಿ ಯಾರೂ ಪರಿಚಯವಿರಲಿಲ್ಲ. ಅದು 'ಪ್ರೋಮ್ ಕಿಂಗ್' ಆಗಿದ್ದಂತೆಯೇ ಇತ್ತು; ನೀವು ಎಲ್ಲರಿಗೂ ಕೈಬೀಸುತ್ತೀರಿ ಮತ್ತು ನಂತರ ಮದುವೆಯ ಆಲ್ಬಮ್ ನೋಡುತ್ತೀರಿ, ಏಕೆಂದರೆ ನಿಮಗೆ ಅಲ್ಲಿ ಯಾರೂ ತಿಳಿದಿರುವುದಿಲ್ಲ. ನನಗೆ ಪರಿಚಯವಿದ್ದ ಏಕೈಕ ವ್ಯಕ್ತಿ ಅಮಿತಾಭ್​ ಬಚ್ಚನ್ ಮಾತ್ರ, ಏಕೆಂದರೆ ನಾನು 'ಅಮರ್ ಅಕ್ಬರ್ ಆಂಟನಿ' ಚಿತ್ರವನ್ನು ನೋಡಿದ್ದೆ' ಎಂದು ತಿಳಿಸಿದರು.

ವಿವಾಹದ ನಂತರ, ಮಾಧುರಿ ಅಮೆರಿಕಕ್ಕೆ ತೆರಳಿ, ಕೌಟುಂಬಿಕ ಜೀವನದತ್ತ ಗಮನಹರಿಸಲು ತಮ್ಮ ನಟನಾ ವೃತ್ತಿಯಿಂದ ವಿರಾಮ ಪಡೆದರು. ಈ ದಂಪತಿಗೆ 2003ರಲ್ಲಿ ಮೊದಲ ಮಗ 'ಅರಿನ್' ಮತ್ತು 2005ರಲ್ಲಿ ಎರಡನೇ ಮಗ 'ರಯಾನ್' ಜನಿಸಿದರು. 2011ರಲ್ಲಿ ಅವರು ಭಾರತಕ್ಕೆ ಮರಳಿದರು; ನಂತರ ಮಾಧುರಿ ಕ್ರಮೇಣ ಚಲನಚಿತ್ರ ಮತ್ತು ದೂರದರ್ಶನದಲ್ಲಿ ಮತ್ತೆ ಕೆಲಸ ಮಾಡಲು ಪ್ರಾರಂಭಿಸಿದರು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Karna Serial ನಲ್ಲೂ ಜೋಗಮ್ಮ ಎಂಟ್ರಿ! ಧಾರಾವಾಹಿಗಳಲ್ಲಿ ಜೋಗತ್ತಿಯರಿಗೆ ಏಕಿಷ್ಟು ಡಿಮಾಂಡ್​
Bigg Boss ಮನೆಯಿಂದ ಜೀವಂತ ಬಂದ್ರೆ ಸಾಕಿತ್ತು: ಆಘಾತದಲ್ಲಿ ನಟ ಸುದರ್ಶನ್​- ಸಂಗೀತಾ ಭಟ್​ ಹೇಳಿದ್ದೇನು