ಲಾಕ್‍ಡೌನ್ ಪರಿಣಾಮವಾಗಿ ಕೆಲವು ಕಡೆ ಪತಿ-ಪತ್ನಿ ಕೂಡ ಬೇರೆ ಬೇರೆ ಊರುಗಳಲ್ಲಿ ಲಾಕ್ ಆಗಿದ್ದಾರೆ. ಇದರಿಂದ ವಿರಹದ ಜೊತೆಗೆ ಸಹಜವಾಗಿಯೇ ಬೇಸರ, ಒತ್ತಡವೂ ಸೃಷ್ಟಿಯಾಗುತ್ತೆ. ಇಂಥ ಸಂದರ್ಭವನ್ನು ಹ್ಯಾಂಡಲ್ ಮಾಡೋದು ಹೇಗೆ?
ಕೊರೋನಾ ತಂದಿಟ್ಟ ಸಂಕಟಗಳು ಒಂದೆರಡಲ್ಲ. ಲಾಕ್‍ಡೌನ್ ಪರಿಣಾಮವಾಗಿ ಪತಿ-ಪತ್ನಿ ದೂರವಾಗಬೇಕಾದಂತಹ ಪ್ರಸಂಗಗಳು ಕೂಡ ನಡೆದಿವೆ. ಆಫೀಸ್ ಕೆಲಸದ ಮೇಲೆ ಅಥವಾ ಯಾವುದೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮತ್ತೊಂದು ಊರಿಗೆ ಹೋದವರು ಊರಿಗೆ ಮರಳಲು ಸಾಧ್ಯವಾಗದೆ ಅಲ್ಲೇ ಬಂಧಿಯಾಗಿದ್ದಾರೆ. ಪರಿಣಾಮ ನಾನೊಂದು ತೀರ, ನೀನೊಂದು ತೀರ ಎಂದು ಹಾಡಿಕೊಳ್ಳುವ ಸರದಿ ಕೆಲವು ಪತಿ-ಪತ್ನಿಯರದ್ದು. ಈ ರೀತಿ ಲಾಕ್‍ಡೌನ್‍ನಿಂದ ದೂರವಾಗಿರುವ ದಂಪತಿಗೆ ಈಗ ಮಗದೊಮ್ಮೆ ಪರಸ್ಪರ ಪ್ರೀತಿ ಹುಟ್ಟುವ, ವಿರಹ ಕಾಡುವ ಸಮಯ. ನಿಶ್ಚಿತಾರ್ಥ ಹಾಗೂ ಮದುವೆ ನಡುವಿನ ಸಮಯದಲ್ಲಿ ಇಬ್ಬರು ಫೋನ್ ಕಾಲ್, ಚಾಟಿಂಗ್ ಮೂಲಕ ಹೇಗೆ ಪ್ರೀತಿ ವಿನಿಮಯ ಮಾಡಿಕೊಳ್ಳುತ್ತಿದ್ದರು ಆ ಗೋಲ್ಡನ್ ಮೂಮೆಂಟ್ ಕೆಲವರ ಬಾಳಿನಲ್ಲಿ ಮತ್ತೆ ಮರುಕಳಿಸಿದೆ. ಆದ್ರೆ ಪತಿ-ಪತ್ನಿ ಇಬ್ಬರೂ ಪರಸ್ಪರ ಒಬ್ಬರ ಮೇಲೆ ಒಬ್ಬರು ಅವಲಂಬಿತರಾಗಿರುವ ಕಾರಣ ಆಚಾನಕಾಗಿ ತುಂಬಾ ದಿನಗಳ ಕಾಲ ದೂರವಿರೋದ್ರಿಂದ ಕಿರಿಕಿರಿ, ಒತ್ತಡ ಹೆಚ್ಚುವ ಜೊತೆಗೆ ನೆಮ್ಮದಿ ಹಾಳಾಗುವ ಸಾಧ್ಯತೆಯೂ ಇದೆ. ಅದರಲ್ಲೂ ಮಕ್ಕಳಿದರಂತೂ ಒಬ್ಬರಿಗೇ ಅವರನ್ನು ನಿಭಾಯಿಸೋದು ನಿಜಕ್ಕೂ ಸವಾಲಿನ ಕೆಲಸವೇ ಸರಿ. ಪ್ರಸಕ್ತ ಸನ್ನಿವೇಶದಲ್ಲಿ ಬೇರೆಯವರ ನೆರವು ಪಡೆಯಲು ಕೂಡ ಸಾಧ್ಯವಾಗೋದಿಲ್ಲ. ಹಾಗಾದ್ರೆ ಈ ಪರಿಸ್ಥಿತಿಯನ್ನು ನಿಭಾಯಿಸೋದು ಹೇಗೆ?
ಕಾಮಾಟಿಪುರದ ವೇಶ್ಯೆಯರು ಈಗೇನು ಮಾಡುತ್ತಿದ್ದಾರೆ!
ಆಗಾಗ ಕಾಲ್ ಮಾಡಿ
ಈಗಂತೂ ದೂರವಿದ್ರೂ ಮಾತಿಗೆ ಬರವಿಲ್ಲ. ಮೊಬೈಲ್ ಇದೆಯಲ್ಲ ಎಷ್ಟು ಬೇಕಾದ್ರೂ ಮಾತನಾಡಬಹುದು. ಸೋ, ಪತಿ ಅಥವಾ ಪತ್ನಿಗೆ ಏನೋ ಹೇಳಬೇಕು ಅಥವಾ ಮಾತನಾಡಬೇಕು ಅನಿಸಿದಾಗಲೆಲ್ಲ ಕಾಲ್ ಮಾಡಿ ಮಾತನಾಡಿ. ಅವರಿರುವ ಸ್ಥಳದಲ್ಲಿ ಪರಿಸ್ಥಿತಿ ಹೇಗಿದೆ ಎಂಬ ಮಾಹಿತಿ ಪಡೆಯಿರಿ. ಪತ್ನಿ ಮತ್ತು ಮಕ್ಕಳು ಮಾತ್ರ ಮನೆಯಲ್ಲಿದ್ದರೆ, ತುರ್ತು ಸಂದರ್ಭಗಳಲ್ಲಿ ಯಾರಿಗೆ ಕರೆ ಮಾಡಬೇಕು ಎಂಬ ಬಗ್ಗೆ ಮಾಹಿತಿ ನೀಡಿ. ಅಗತ್ಯ ವಸ್ತುಗಳನ್ನು ಹೊರಹೋಗಿ ಖರೀದಿಸಲು ಸಾಧ್ಯವಾಗದ ಸಂದರ್ಭಗಳಲ್ಲಿ ಆನ್‍ಲೈನ್‍ನಲ್ಲಿ ಆರ್ಡರ್ ಮಾಡಬಹುದಾ ಅಥವಾ ಯಾರದಾದ್ರೂ ನೆರವು ಪಡೆಯಬಹುದಾ ಎಂಬ ಬಗ್ಗೆಯೂ ಇಬ್ಬರೂ ಮಾತನಾಡಿ ಒಂದು ನಿರ್ಧಾರಕ್ಕೆ ಬನ್ನಿ.
ದಿನದಲ್ಲಿ ಒಮ್ಮೆಯಾದ್ರೂ ವಿಡಿಯೋ ಕಾಲ್ ಮಾಡಿ
ದೂರವಾದಾಗಲೇ ಪ್ರೀತಿಯ ಆಳ-ಅಗಲದ ಪರಿಚಯವಾಗೋದು. ಪತಿ ಅಥವಾ ಪತ್ನಿ ದೂರವಿದ್ದಾಗ ಅವರನ್ನು ಪದೇಪದೆ ನೋಡಬೇಕು, ಮಾತನಾಡಬೇಕು ಎಂಬ ಬಯಕೆ ಮೂಡೋದು ಸಹಜ. ನಿಮಗೂ ಹೀಗೆ ಆಗುತ್ತಿದ್ರೆ ವಿಡಿಯೋ ಕಾಲ್ ಮಾಡಿ ಮಾತನಾಡಿ. ಅದರಲ್ಲೂ ಮಕ್ಕಳು ಅಪ್ಪ ಅಥವಾ ಅಮ್ಮನಿಂದ ದೂರವಿದ್ದಾಗ ಅವರೊಂದಿಗೆ ಮಾತನಾಡಬೇಕು ಎಂದು ಹಟ ಹಿಡಿಯುತ್ತಾರೆ. ಇಂಥ ಸಮಯದಲ್ಲಿ ವಿಡಿಯೋ ಕಾಲ್ ಮಾಡಿ ಮಾತನಾಡಿಸಿದ್ರೆ ಮಕ್ಕಳಿಗೂ ಖುಷಿ ಆಗುತ್ತೆ.
ಪೋಷಕರು-ಮಕ್ಕಳ ಸಂಬಂಧ ಹೇಗಿರಬೇಕು ಗೊತ್ತಾ?
ಮುಂಜಾಗ್ರತೆ ವಹಿಸಲು ಹೇಳಿ
ಪ್ರಸಕ್ತ ಸನ್ನಿವೇಶದಲ್ಲಿ ದೂರದಲ್ಲಿರುವ ಕುಟುಂಬ ಸದಸ್ಯರು, ಆತ್ಮೀಯರ ಸುರಕ್ಷತೆಯ ಬಗ್ಗೆ ಆತಂಕ ಮೂಡುವುದು ಸಹಜ. ಹಾಗಂತ ಭಯಪಡುತ್ತ ಅನಗತ್ಯವಾಗಿ ಒತ್ತಡ ಹೆಚ್ಚಿಸಿಕೊಳ್ಳುವ ಅಗತ್ಯವಿಲ್ಲ. ಕೊರೋನಾ ಬಾರದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅವರಿಗೆ ತಿಳಿದಿದ್ದರೂ ಒಂದಿಷ್ಟು ಟಿಪ್ಸ್ ನೀಡೋದ್ರಲ್ಲಿ ತಪ್ಪಿಲ್ಲ. ಇದ್ರಿಂದ ನಿಮ್ಮ ಮನಸ್ಸಿಗೂ ನೆಮ್ಮದಿ ಸಿಗುತ್ತದೆ.
ಧ್ಯಾನ ಮಾಡಿ
ಲಾಕ್‍ಡೌನ್, ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳಿಂದ ಮನಸ್ಸಿನಲ್ಲಿ ಆತಂಕ, ಭವಿಷ್ಯದ ಕುರಿತು ಚಿಂತೆ ಮೂಡೋದು ಸಹಜ. ರಾತ್ರಿ ಇದೇ ಯೋಚನೆಯಲ್ಲಿ ನಿದ್ರೆ ದೂರವಾಗಬಹುದು. ನೆಮ್ಮದಿ ಹಾಳಾಗಬಹುದು. ಇವೆಲ್ಲ ಮುಂದೆ ಅಧಿಕ ರಕ್ತದೊತ್ತಡ, ಶುಗರ್ ಸೇರಿದಂತೆ ಅನಾರೋಗ್ಯಕ್ಕೂ ಕಾರಣವಾಗಬಲ್ಲವು. ಆದಕಾರಣ ರಾತ್ರಿ ಮಲಗುವ ಮುನ್ನ ಹಾಗೂ ಬೆಳಗ್ಗೆ ಎದ್ದ ತಕ್ಷಣ ಸ್ವಲ್ಪ ಹೊತ್ತು ಧ್ಯಾನ ಇಲ್ಲವೆ ಪ್ರಾಣಾಯಾಮ ಮಾಡಿ. ಇದರಿಂದ ಮನಸ್ಸು ರಿಲ್ಯಾಕ್ಸ್ ಆಗುತ್ತೆ.
ಪರ್ಫೆಕ್ಟ್ ಸಂಬಂಧ ಎಂಬುದು ಇಲ್ಲ, ಅದು ಬೇಕಾಗಿಯೂ ಇಲ್ಲ
ಮಕ್ಕಳಿಗೂ ಪರಿಸ್ಥಿತಿ ವಿವರಿಸಿ
ಅಮ್ಮ ಇಲ್ಲವೆ ಅಪ್ಪನಿಂದ ದೂರವಿರೋದು ಮಕ್ಕಳಿಗೆ ಕಷ್ಟವಾಗುತ್ತೆ. ಅವರು ಪದೇಪದೆ ಅಮ್ಮ ಇಲ್ಲವೆ ಅಪ್ಪ ಬೇಕೆಂದು ಹಟ ಮಾಡಬಹುದು. ಇಂಥ ಸಮಯದಲ್ಲಿ ಅವರಿಗೆ ತಿಳಿ ಹೇಳಲು ಪ್ರಯತ್ನಿಸಿ. ಸದ್ಯ ಪರಿಸ್ಥಿತಿ ಹೇಗಿದೆ, ಅದಕ್ಕೇನು ಕಾರಣ ಎಂಬುದನ್ನು ಅವರಿಗೆ ಅರ್ಥವಾಗುವಂತೆ ವಿವರಿಸಿ. ಅಲ್ಲದೆ, ಸ್ವಲ್ಪ ದಿನಗಳಲ್ಲಿ ಅಪ್ಪ ಹಿಂತಿರುಗಿ ಬರುತ್ತಾರೆ ಎಂದು ತಿಳಿಸಿ.
ಅನಗತ್ಯವಾಗಿ ಭಯಪಡಬೇಡಿ
ನಾಳೆ ಏನಾಗುತ್ತದೋ, ದೂರದಲ್ಲಿರುವವರು ಹೇಗಿದ್ದಾರೋ, ಮುಂಜಾಗ್ರತೆ ವಹಿಸುತ್ತಾರೋ ಇಲ್ಲವೋ ಎಂಬ ಸಂಶಯಗಳು ನಿಮ್ಮನ್ನು ಕಾಡಬಹುದು. ಆದ್ರೆ, ಅನಗತ್ಯವಾಗಿ ಭಯಪಡುವ ಅಗತ್ಯವಿಲ್ಲ. ಹಾಗೆ ಭಯಪಡುವುದರಿಂದ ಯಾವುದೇ ಪ್ರಯೋಜನವಿಲ್ಲ.