ದೂರದರ್ಶನದಲ್ಲಿ ಪ್ರಸಾರವಾಗೋ ರಾಮಾಯಣ, ಬಾಲ್ಯದ ನೆನಪಿನ ಬುತ್ತಿ

By Suvarna NewsFirst Published Apr 21, 2020, 1:21 PM IST
Highlights

ಆಗಿನ್ನು ಎಲ್ಲರ ಮನೆಯಲ್ಲಿ ಮೂರ್ಖರ ಪೆಟ್ಟಿಗೆ ಇರಲಿಲ್ಲ. ಎಲ್ಲೊ 2-3 ಕಿ.ಮೀ. ದೂರುವಿರುವ ಒಬ್ಬರ ಮನೆಗೆ ರಾಮಾಯಣ ನೋಡಲು ಊರಿನ ಸುತ್ತಮುತ್ತಲಿನ ಮಂದಿ ಹೋಗುತ್ತಿದ್ದರು. ಒಳ್ಳೊಳ್ಳೆ ಘಟನೆಗಳು ಸಂಭವಿಸಿದಾಗ ಆ ಮನೆಯ ಹಿರಿಯರು ಟಿವಿಗೇ ಪೂಜೆಯನ್ನೂ ಮಾಡುತ್ತಿದ್ದರು. ಮನುಷ್ಯನ ಮುಗ್ಧತೆ, ಅದ್ಭುತ ರಾಮಾಯಣದ ಕಥೆ ಜೀವನದಲ್ಲಿ ಖುಷಿ ತರುತ್ತಿತ್ತು. ಮತ್ತೆ ರಾಮಾಯಣ ಮರು ಪ್ರಸಾರವಾಗುತ್ತಿರುವ ಈ ಸಂದರ್ಭದಲ್ಲಿ ಬಾಲ್ಯದ ನೆನಪು ಹಂಚಿ ಕೊಂಡಿದ್ದು ಹೀಗೆ...

ವಾಲ್ಮಿಕಿ ರಾಮಾಯಣವೊಂದೇ ಅಲ್ಲ. ತುಳಸಿ ರಾಮಾಯಣ, ಜನಪದ ರಾಮಾಯಣ ಹೀಗೆ ಹಲವು ರಾಮಾಯಣದ ನಡುವೆ ಇದು ಹೊಸತು, ಆಯಿ ರಾಮಾಯಣ!
ಗೃಹಬಂಧಿಯಾಗಿ ಟಿವಿಯಲ್ಲಿ ರಾಮಾಯಣ ನೊಡುವಾಗ ಈ ಆಯಿ(ಅಮ್ಮ)ಯ ರಾಮಾಯಣ ನೆನೆಪಿಗೆ ಬಂತು. 

ರಾಮಾಯಣವೆ ಹಾಗೆ, ಅಬಾಲ ವೃದ್ಧರಾದಿಯಾಗಿ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಅಂದು ಹಾಗೂ ಇಂದು ದೂರದರ್ಶನಕ್ಕೆ ಅತ್ಯಧಿಕ ಟಿಆರ್‌ಪಿ  ತಂದು ಕೊಟ್ಟ ಈ ರಾಮಾಯಣವನ್ನು ಅಂದು ಹೈಸ್ಕೂಲಿನ ದಿನಗಳಲ್ಲಿ ನೊಡಿದ್ದೆ. ಟಿವಿ ಇಲ್ಲದ ಆ‌ ದಿನಗಳಲ್ಲಿ ‌2-3 ಕಿ.ಮೀ ನಡೆದುಕೊಂಡು ಹೋಗಿಯೇ ನೊಡಿದ್ದೆ‌. ಈಗ ಮಗಳು ಹೈಸ್ಕೂಲಿಗೆ ಹೋಗುವ ಸಂದರ್ಭದಲ್ಲೆ ರಾಮಾಯಣ ಮರು ಪ್ರಸಾರಗೊಳ್ಳುತ್ತಿದೆ. ಮಗಳೊಂದಿಗೆ ರಾಮಾಯಣ ನೋಡುವ ಸಂದರ್ಭದಲ್ಲಿ ಆಯಿ ರಾಮಾಯಣ ನೆನಪಿಗೆ ಬಂತು.

ನಿಜ ಜೀವನದಲ್ಲಿ ರಾವಣನ ಭಕ್ತ ರಾಮನ ಪಾತ್ರಧಾರಿ

ಅಮ್ಮನ ರಾಮಾಯಣ
ದಿನಾಲೂ ಸಂಜೆ ಆಯಿ ಮಕ್ಕಳಿಗೆ ರಾಮಾಯಣ ಕಥೆ ಹೇಳುವ ಪರಿಯೇ ಚೆಂದ. ಎಲ್ಲರಂತೆ ನಮಗೂ, ಬಲು ಇಷ್ಟ ಕಾಣೆ ಆಯಿ ಕತೆಯ ಹೇಳುವ ರೀತಿ. ಕಥೆ ಕೇಳುವದಕ್ಕಾಗಿ ಮುಸ್ಸಂಜೆಯಾಗುವುದೆ ತಡ, ಬಾಯಿಪಾಠವನ್ನೆಲ್ಲ ಹೇಳಿ ಮುಗಿಸಿ, ನಾವು ಮೂವರು ಮಕ್ಕಳು ಕಾಯುತ್ತಿದ್ದೆವು. ಆಯಿ ಕೆಲಸವನ್ನೆಲ್ಲ ಮುಗಿಸಿಕೊಂಡು ದೇವರಿಗೆ ದೀಪ ಹಚ್ಚಿ  ಕತೆ ಹೇಳಲು ಪ್ರಾರಭಿಸುತ್ತಿದ್ದಳು. ಕಥೆ ಹೇಳುವಾಗ ಯಾರೂ ನಡು ನಡುವೆ ಮಾತನಾಡಬಾರದಿತ್ತು. ಕಥೆ ಎಲ್ಲಿ ನಿಲ್ಲುತ್ತದೆ ಎಂದರೆ,  ಕುತೂಹಲ ಘಟ್ಟ ತಲುಪುವಾಗಲೇ ಅಂದಿನ ಕಥಾನಕ ಸ್ಟಾಪ್. ಹೇಗೆ ರಾಮಾಯಣ ಧಾರಾವಾಹಿಯಲ್ಲಿ ಏನು ಈಗ ರಾಕ್ಷಸನ ಅಂತ್ಯವಾಗುತ್ತದೆ ಎನ್ನುವಾಗಲೇ ಮಂಗಳ ಹಾಡು ಬರುವಂತೆ. ಆಯಿಯ ರಾಮಾಯಣವೂ ಕತೂಹಲ ಘಟ್ಟದಲ್ಲಿರುವಾಗಲೇ ಮುಗಿಯುತ್ತಿತ್ತು. ಮರುದಿನವೂ ಅಷ್ಟೇ ಕುತೂಹಲದಿಂದ ಕಾದು ಕುಳಿತುಕೊಳ್ಳುವ ಪಾಳಿ ನಮ್ಮದಾಗಿರುತ್ತಿತ್ತು.

ಕಿತ್ತಾಟ ನಡೆಸಿದರೆ ರಾಮಾಯಣ ಇಲ್ಲ
ಒಮ್ಮೆ ಏನೊ ಒಂದು ವಿಷಯಕ್ಕೆ ನಾವಿಬ್ಬರೂ ಅಣ್ಣ ತಮ್ಮಂದಿರು ಕಿತ್ತಾಟ ಶುರು ಹಚ್ಚಿಕೊಂಡಿದ್ದೆವು. ಕಿತ್ತಾಟ ಪರಾಕಾಷ್ಠೆ ತಲುಪುತ್ತದ್ದಂತೇ ಆಯಿ ಮಾಡಿದ ಉಪಾಯ, 'ನೀವು ಹೀಗೆ ಕಿತ್ತಾಟ ಮಾಡಿದ್ರೆ ಇಂದು ರಾಮಾಯಣ ಕಥೆ ಇಲ್ಲ' ಎಂದು ಹೆದರಿಸಿದಳು. ಕಿತ್ತಾಟ ಅಲ್ಲಿಗೇ ಸ್ಟಾಪ್. ಏನೇನೋ ಹೇಳಿ ಆಯಿಗೆ ಸಮಾಧಾನ ಮಾಡಲು ಸುಸ್ತೊ ಸುಸ್ತು.

ಅಷ್ಟಕ್ಕೂ ಕುಂಭಕರ್ಣ ಏಕೆ ಸದಾ ನಿದ್ರಿಸುತ್ತಿರುತ್ತಾನೆ?

ತಂಗಿಯೇ ಸೀತೆ
ಆಯಿಯ ರಾಮಾಯಣ ಸೀತಾಪಹರಣದವರೆಗೆ ತಲುಪಿತ್ತು. ರಾವಣ ಸೀತೆಯನ್ನು ಕದ್ದುಕೊಂಡ ಹೋದ ಎಂದು ಹೇಳುವಾಗ ನಮ್ಮೆಲ್ಲರಿಗಿಂತ ಕಿರಿಯವಳು ತಂಗಿಯನ್ನೇ ಎತ್ತಿಕೊಂಡು ಹೋಗಿ ತೋರಿಸಿದ್ದಳು. ಮುಂದೆ ಹನುಮಂತ ಸಂಜೀವಿನಿ ಪರ್ವತ ತರುವುದನ್ನು ಹೇಳುವಾಗ ರಟ್ಟಿನ ಬಾಕ್ಸ್ ಎತ್ತಿಕೊಂಡು ಬಂದು ಹೀಗೆ ಹೊತ್ತು ತಂದ ಎಂದು ತೋರಿಸಿದ್ದಳು.

ಹೀಗೆ ಬಾಲ್ಯದಲ್ಲಿ ನಡೆಯುತ್ತಿದ್ದ  ಘಟನೆಯನ್ನು ಟಿವಿ ರಾಮಾಯಣ ನೆನಪಿನ ಬುತ್ತಿಯ ಸುರುಳಿಯನ್ನು ಬಿಚ್ಚಿಡುವಂತೆ ಮಾಡಿದೆ. ಆದರೆ ಲಾಕ್ಡೌನ್‌ನಿಂದಾಗಿ ಆಯಿ ಈಗ ಬೆಂಗಳೂರಿನ ತಂಗಿಯ ಮನೆಯಲ್ಲೇ  ಬಾಕಿಯಾಗಿದ್ದಾಳೆ. ಇವಿಷ್ಟು ಆಯಿ ರಾಮಾಯಣದ ಕಥೆಯಾದರೆ, ಮುಂದಿನದು ಮೌನಿ ಲಕ್ಷ್ಮಣನ ಕಥೆ.

ಲಕ್ಷ್ಮಣನ ಮೌನ ವೃತ!
ಸೀತೆಯನ್ನು ರಾವಣ ಕದ್ದೊಯ್ದ ಬಳಿಕ ರಾಮ ಪರಿತಪಿಸುತ್ತಾನೆ. ದುಃಖದಿಂದಲೇ ಸೀತೆಯನ್ನು ಅರಸುತ್ತಾ ಕಾಡಿನಲ್ಲಿ  ರಾಮ, ಲಕ್ಷ್ಮಣರು ನಡೆಯುತ್ತಾರೆ. ಹುಡುಕುತ್ತಾ ಹುಡುಕುತ್ತಾ ಪಂಪಾ ಸರೋವರದ ಸಮೀಪ ಬರುತ್ತಾರೆ. ಪಂಪಾ ಸರೋವರದಲ್ಲಿ ಅರಳಿದ್ದ ತಾವರೆ ಹೂವಿನಲ್ಲೇ ಸೀತೆಯನ್ನು ಕಂಡಂತಾಗಿ ದುಃಖದಿಂದ ರಾಮ  ಅಳುತ್ತಾನೆ. ಅಳುವ ಅಣ್ಣನನ್ನು ಕಂಡು ತಮ್ಮ ಲಕ್ಷ್ಮಣ, ರಾಮನನ್ನು ಸಂತೈಸುತ್ತಾನೆ. ಆದರೆ ಈ ಲಕ್ಷ್ಮಣನಿಗೆ ಮಾತ್ರ ಮಾತು ಹೊರಡುವುದೇ ಇಲ್ಲ. ಅದು ಲಕ್ಷ್ಮಣನಿಗೆ ದುಃಖ ಉಮ್ಮಳಿಸಿ  ಮಾತು ಹೊರಡದೇ ಇರುವುದಲ್ಲ. ಯಕ್ಷಗಾನದ ಈ ಲಕ್ಷ್ಮಣನಿಗೆ ಮಾತಾಡಲಿಕ್ಕೇ ತಿಳಿಯಲಿಲ್ಲ. ಲಕ್ಷ್ಮಣ ಈ ಸಂದರ್ಭದಲ್ಲಿ ಭಾಗವತರು ಪದ್ಯ ಹಾಡಿದಾಗ ಆ ಪದ್ಯಕ್ಕೆ ಅರ್ಥ ಹೇಳಬೇಕಿತ್ತು. ತನ್ನ ಪದ್ಯ ಯಾವಾಗ ಬರುತ್ತದೆ ಎಂದು ತಿಳಿಯದೇ ಈ ಲಕ್ಷ್ಮಣ ಮೌನಕ್ಕೆ ಶರಣಾಗಿದ್ದ. ರಾಮನ ಪಾತ್ರಧಾರಿ ಪಾಂಡುರಂಗ ದೇಶಭಂಡಾರಿಯವರು ಚಾಕಚಕ್ಯತೆಯಿಂದ ಕಥಾನಕವನ್ನು ಮುಂದುವರಿಸಿಕೊಂಡು ಹೋಗಿದ್ದರು. 

ರಾಮನಿಗೊಬ್ಬಳು ಅಕ್ಕನಿದ್ದಳು ಗೊತ್ತಾ ಯಾರು ಆಕೆ?

ಇಲ್ಲಿ ಮೌನ ವಹಿಸಿದ ಲಕ್ಷ್ಮಣ ಬೇರಾರೂ ಅಲ್ಲ ನಾನೇ ಆಗಿದ್ದೆ. ಚಿಕ್ಕವನಿರುವಾಗ ಊರಲ್ಲಿ ನಡೆದ ಯಕ್ಷಗಾನದ ಪ್ರಸಂಗವದು. ನನಗೆ ಲಕ್ಷ್ಮಣನ ಪಾತ್ರ ಕೊಟ್ಟಿದ್ದರು. ಲಕ್ಷ್ಮಣನ ಹಾಡಿಗೆ ಹೀಗೆ ಅರ್ಥ ಹೇಳಬೇಕು ಎಂದೂ ಸಂಘಟಕರು ಸೂಚಿಸಿದ್ದರು. ಆದರೇನು ಮಾಡೋದು? ರಾತ್ರಿಯ ಆ ಚಳಿಗೊ, ಸಭಾ ಕಂಪನವೋ ಗೊತ್ತಿಲ್ಲ,  ಲಕ್ಷ್ಮಣನ ಹಾಡು ಯಾವಾಗ ಬಂತು, ಯಾವಾಗ ಮುಗಿತು ಎಂಬುದೇ ಗೊತ್ತಾಗದೇ ಸುಮ್ಮನಾಗಿದ್ದೆ. 

ಆ ಘಟನೆ ರಾಮಾಯಣ ಯಕ್ಷಗಾನವನ್ನು ಈಗ ಯಾವಾಗ ನೋಡುತ್ತೇನೊ ಆಗೆಲ್ಲ ನೆನಪಿಗೆ ಬರುತ್ತದೆ. ಮೊನ್ನೆ ಟಿವಿಯಲ್ಲಿ ರಾಮಾಯಣ ನೋಡುವಾಗಲೂ 'ಮೌನಿ ಲಕ್ಷ್ಮಣ'ನ ನೆನಪಾಯಿತು.

ದುಷ್ಟ ರಾವಣ ಹೇಳಿದ ಜೀವನದ ಪಾಠಗಳು

ರಾಮಾಯಣ ವನ್ನು ಇಂದಿನ ಪೀಳಿಗೆಗೆ ಪರಿಚಯಿಸಿದ ದೂರದರ್ಶನಕ್ಕೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆಯೆ. ಶ್ರೀರಾಮನ ಆದರ್ಶ, ಲಕ್ಷ್ಮಣ, ಹನುಮನ ಭಕ್ತಿ, ಭರತನ ತ್ಯಾಗ ಮಾತ್ರ ಮುಂದಿನ ತಲೆಮಾರು ತಲುಪಲಿ, ರಾವಣ ಸಂತತಿ ನಾಶವಾಗಲಿ ಎಂಬ ಆಶಯದೊಂದಿಗೆ ಆಯಿ ರಾಮಾಯಣ ಹಾಗು ಮೌನಿ ಲಕ್ಷ್ಮಣ ನ ಕಥಾನಕಕ್ಕೆ ಮಂಗಳ ಹಾಡುತ್ತಿದ್ದೇನೆ.

- ರಾಘವೇಂದ್ರ ಅಗ್ನಿಹೋತ್ರಿ, ಮಂಗಳೂರು

click me!